Model GP- ಕಸದ ಸಮಸ್ಯೆಗೆ ಸಮರ್ಪಕ ಪರಿಹಾರ; ಇಡೀ ರಾಜ್ಯಕ್ಕೆ ಮಾದರಿ ಈ ಗ್ರಾ.ಪಂ.

ಗ್ರಾಮಗಳಲ್ಲಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ, ಭೂಮಿಯಲ್ಲಿ ಕರಗುವ ಕಸಗಳನ್ನೆಲ್ಲಾ ತೆಂಗಿನ ತೋಟದ ಬುಡಗಳಿಗೆ ಹಾಕುವ ವ್ಯವಸ್ಥೆ ಮಾಡಿರುವ ಅಲಂಕಾರು ಗ್ರಾ.ಪಂ.ಗೆ ಇದೀಗ ಎಷ್ಟೇ ಕಸ ಸಂಗ್ರಹವಾದರೂ ನಿರ್ವಹಿಸಬಹುದು ಎನ್ನುವ ವಿಶ್ವಾಸವಿದೆ.

ಅಲಂಕಾರು ಗ್ರಾಮ ಪಂಚಾಯತ್

ಅಲಂಕಾರು ಗ್ರಾಮ ಪಂಚಾಯತ್

  • Share this:
ಪುತ್ತೂರು: ಕಸ ಇಂದು ಪ್ರತೀ ಮನೆ ದೊಡ್ಡ ಸಮಸ್ಯೆಯಾಗಿದ್ದು (Garbage a big problem), ಇದನ್ನು ವಿಲೇವಾರಿ ಮಾಡುವ ಸ್ಥಳೀಯಾಡಳಿತಗಳಿಗೆ ಇದೊಂದು ಬೆಟ್ಟದಂತಹ ಸಮಸ್ಯೆ. ಕಸ ವಿಲೇವಾರಿ ಮಾಡಲು ಸಮರ್ಪಕ ಜಾಗದ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆಡೆ ಕಸ ಡಂಪ್ ಮಾಡುವ ಜಾಗದಲ್ಲಿ ಸ್ಥಳೀಯ ಜನರ ವಿರೋಧ ಸ್ಥಳಿಯಾಡಳಿತಗಳಿಗೆ ದೊಡ್ಡ ಸವಾಲಾಗಿಯೂ ಪರಿಣಮಿಸಿದೆ. ಇಂಥಹುದೇ ಸವಾಲನ್ನು ಎದುರಿಸಿದ್ದ ದಕ್ಷಿಣಕನ್ನಡ ಜಿಲ್ಲೆಯ ಈ ಗ್ರಾಮಪಂಚಾಯತ್ ಕಸ ನಿರ್ವಹಣೆಗಾಗಿ ತೆಂಗಿನ ಕೃಷಿಯನ್ನೇ ಪ್ರಾರಂಭಿಸಿದೆ.

ಕಸದ ನಿರ್ವಹಣೆ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಮನೆಯಲ್ಲಿ ಉತ್ಪತ್ತಿಯಾಗುವ ಹಸಿ (Wet waste), ಒಣ (Dry Waste) ಹಾಗೂ ಇತರ ಕಸಗಳು ಮನೆಯಿಂದ ನೇರಾ ರಸ್ತೆಯ ಬದಿಗಳಲ್ಲಿ ರಾಶಿ ಬಿದ್ದಿರೋ ದೃಶ್ಯ ಎಲ್ಲೆಂದರಲ್ಲಿ ಕಾಣೋದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಕೆಲವು ಕಡೆಗಳಲ್ಲಿ ಈ ಕಸಗಳನ್ನು ಸಂಬಂಧಪಟ್ಟ ಸ್ಥಳಿಯಾಡಳಿತಗಳು ವಿಲೇವಾರಿ ಮಾಡಿದರೆ, ಇನ್ನು ಕೆಲವು ಕಡೆಗಳಲ್ಲಿ ರಾಶಿ ಬಿದ್ದ ಕಸಗಳು ಇಲ್ಲೇ ಕೊಳೆತು ನಾರುತ್ತಿರುತ್ತವೆ.

ಕಡಬದ ಅಲಂಕಾರು ಗ್ರಾ.ಪಂ. ಕೈಂಕರ್ಯ (Alankaru Village Panchayath):

ಆಯಾಯ ಗ್ರಾಮಗಳಲ್ಲಿ ಉತ್ಪತ್ತಿಯಾಗುವ ಕಸಗಳನ್ನು ಸಂಬಂಧಪಟ್ಟ ಗ್ರಾಮಪಂಚಾಯತ್, ನಗರಸಭೆ, ನಗರಪಾಲಿಕೆಗಳು ವಿಲೇವಾರಿ ಮಾಡಬೇಕೆಂಬ ಕಾನೂನು ಜಾರಿಗೆ ಬಂದ ಬಳಿಕ ಕಸಗಳನ್ನು ಮನೆ ಮನೆಯಿಂದ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ಬಂದಿದೆ. ಈ ವ್ಯವಸ್ಥೆ ಜಾರಿಯಾದ ಬಳಿಕ ಮನೆಯಲ್ಲಿದ್ದ ಕಸ ಗ್ರಾಮಪಂಚಾಯತ್ ಗಳ ಮಡಿಲಿಗೆ ಸೇರಿದ್ದು, ಹೀಗೆ ಸೇರಿದ ಕಸಗಳನ್ನು ವಿಲೇವಾರಿ ಮಾಡುವುದು ಹೇಗೆ ಎನ್ನುವ ಸಮಸ್ಯೆ ಎಲ್ಲಾ ಸ್ಥಳಿಯಾಡಳಿತದ ಮುಂದಿದೆ. ಇಂಥಹುದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಗ್ರಾಮಪಂಚಾಯತ್ ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದೆ. ಆಲಂಕಾರು ಪೇಟೆ ಹಾಗೂ ಗ್ರಾಮದ ಎಲ್ಲಾ ಮನೆಗಳಿಂದ ಸಂಗ್ರಹಿಸಿದ ಕಸಗಳನ್ನು ಎಲ್ಲಿ ಡಂಪ್ ಮಾಡುವುದು ಎನ್ನುವ ಯೋಚನೆಯಲ್ಲಿ ಬಿದ್ದಿದ್ದ ಈ ಗ್ರಾಮಪಂಚಾಯತ್ ಆಡಳಿತ ಕಸಗಳನ್ನು ಡಂಪ್ ಮಾಡಲೆಂದೇ ತೆಂಗಿನ ತೋಟವೊಂದನ್ನು ಪ್ರಾರಂಭಿಸಿದೆ.

ಎರಡು ಎಕರೆ ಜಾಗದಲ್ಲಿ ಕಸದಿಂದ ತೆಂಗು ಬೆಳೆ:

ಗ್ರಾಮಗಳಲ್ಲಿ ಸಂಗ್ರಹಿಸಿದ ಒಣ ಹಾಗೂ ಹಸಿ ಕಸವನ್ನು ವಿಂಗಡಿಸಿ, ಭೂಮಿಯಲ್ಲಿ ಕರಗುವ ಕಸಗಳನ್ನೆಲ್ಲಾ ತೆಂಗಿನ ತೋಟದ ಮರಗಳ ಬುಡಗಳಿಗೆ ಹಾಕುವ ವ್ಯವಸ್ಥೆ ಮಾಡಿರುವ ಗ್ರಾಮಪಂಚಾಯತ್​ಗೆ ಇದೀಗ ಎಷ್ಟೇ ಕಸ ಸಂಗ್ರಹವಾದರೂ ನಿರ್ವಹಿಸಬಹುದು ಎನ್ನುವ ವಿಶ್ವಾಸವಿದೆ. ಸರಕಾರದ ವಿವಿಧ ಅನುದಾನಗಳನ್ನು ಬಳಸಿಕೊಂಡು ಎರಡು ಎಕರೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಹಾಗೂ 250 ಕ್ಕೂ ಮಿಕ್ಕಿದ ತೆಂಗಿನ ಸಸಿಗಳ ತೋಟ ಮಾಡಲಾಗಿದ್ದು, ಎರಡು ವರ್ಷಗಳಲ್ಲೇ ಎಲ್ಲಾ ತೆಂಗಿನ ಗಿಡಗಳು ಉತ್ತಮ ಬೆಳವಣಿಗೆಯನ್ನು ಕಂಡಿವೆ. ಕಸ ನಿರ್ವಹಣೆಯ ಜೊತೆಗೆ ಮುಂದಿನ ಎರಡು ವರ್ಷಗಳ ಬಳಿಕ ಈ ತೆಂಗಿನ ಸಸಿಗಳಿಂದ ಗ್ರಾಮಪಂಚಾಯತ್​ಗೆ ಆದಾಯವೂ ಬರುವ ನಿರೀಕ್ಷೆಯೂ ಹೆಚ್ಚಾಗಿದೆ ಎನ್ನುತ್ತಾರೆ ಆಲಂಕಾರು ಗ್ರಾಮಪಂಚಾಯತ್ ಪಿಡಿಒ ಜಗನ್ನಾಥ ಶೆಟ್ಟಿ.

ಇದನ್ನೂ ಓದಿ: ಇಲ್ಲದ ದೇವರನ್ನ ಯಾಕೆ ಪೂಜಿಸಬೇಕು? ಮನುಧರ್ಮ ನಾಶ ಆಗಬೇಕು: ನಿಜಗುಣಾನಂದ ಸ್ವಾಮಿ

ಆಲಂಕಾರು ಗ್ರಾಮಪಂಚಾಯತ್​ನ ಈ ಹಿಂದಿನ ಆಡಳಿತ ಮಂಡಳಿಯೇ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಈಗಿನ ಹೊಸ ಆಡಳಿತ ಮಂಡಳಿಯೂ ಈ ತೋಟಗಳ ನಿರ್ವಹಣೆಯನ್ನು ಉತ್ತಮವಾಗಿ ಮಾಡುತ್ತಿದೆ. ಮಣ್ಣಲ್ಲಿ ಕರಗುವ ಎಲ್ಲಾ ರೀತಿಯ ಕಸಗಳೂ ತೆಂಗಿನ ಸಸಿಗಳ ಬುಡಗಳಲ್ಲಿದ್ದು, ತೋಟಕ್ಕೆ ಬೇಕಾಗುವ ನೀರಿನ ವ್ಯವಸ್ಥೆಯನ್ನೂ ಬೋರ್ ವೆಲ್ ಮೂಲಕ ಕಲ್ಪಿಸಲಾಗಿದೆ.

ಎರೆಹುಳು ಗೊಬ್ಬರಕ್ಕೂ ಉಪಯೋಗ:

ಅಲ್ಲದೆ ತೆಂಗಿನ ಸಸಿಗಳಿಗೆ ಹಾಕಿ ಉಳಿದ ಕಸಗಳನ್ನು ತೊಟ್ಟಿಯಲ್ಲಿ ಸಂಗ್ರಹಿಸಿ ಎರೆಹುಳು ಗೊಬ್ಬರ ಘಟಕವನ್ನೂ ಪ್ರಾರಂಭಿಸಲಾಗಿದೆ. ತೋಟದ ತುಂಬಾ ಇಂಗು ಗುಂಡಿಗಳನ್ನೂ ಮಾಡಲಾಗಿದ್ದು, ಮಳೆಗಾಲದ ನೀರೂ ಭೂಮಿಯಲ್ಲಿ ಇಂಗಿಸುವ ಯೋಜನೆಯನ್ನೂ ಹಾಕಿಕೊಳ್ಳಲಾಗಿದೆ. ತೆಂಗು ಸಸಿಗಳ ಜೊತೆಗೆ ಮಲ್ಲಿಗೆ ಗಿಡಗಳನ್ನೂ ಬೆಳೆಸುವ ಮೂಲಕ ಕಸದಲ್ಲೇ ರಸವನ್ನು ತೆಗೆಯುವ ಮುಲಕ ಈ ಪಂಚಾಯತ್ ಯಶಸ್ಸಿನ ನಿರೀಕ್ಷೆಯಲ್ಲಿದೆ ಎನ್ನುವುದು ಆಲಂಕಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಗೌಡರ ವಿಶ್ವಾಸ.

ಕಸದ ಸಮಸ್ಯೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದ್ದು, ಈ ಸಮಸ್ಯೆಯನ್ನು ಈಗಲೇ ಎದುರಿಸಲು ಅಣಿಯಾಗಬೇಕಿದೆ. ಈ ನಿಟ್ಟಿನಲ್ಲಿ ಆಲಂಕಾರು ಗ್ರಾಮಪಂಚಾಯತ್ ಯೋಚನೆ ಶ್ಲಾಘನೀಯವೂ ಆಗಿದೆ.

ವರದಿ: ಅಜಿತ್ ಕುಮಾರ್
Published by:Vijayasarthy SN
First published: