• Home
  • »
  • News
  • »
  • state
  • »
  • ಮಂಗಳೂರು: ಪ್ರಚಾರ ಗಿಟ್ಟಿಸಿಕೊಳ್ಳಲು ಬಾಂಬ್ ಬೆದರಿಕೆಯ ತಂತ್ರ ಬಳಸಿ ಅಂದರ್ ಆದ ಭೂಪ!

ಮಂಗಳೂರು: ಪ್ರಚಾರ ಗಿಟ್ಟಿಸಿಕೊಳ್ಳಲು ಬಾಂಬ್ ಬೆದರಿಕೆಯ ತಂತ್ರ ಬಳಸಿ ಅಂದರ್ ಆದ ಭೂಪ!

ಮಂಗಳೂರು ವಿಮಾನ ನಿಲ್ದಾಣ

ಮಂಗಳೂರು ವಿಮಾನ ನಿಲ್ದಾಣ

ಆಗಸ್ಟ್ 19 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ಅವರಿಗೆ ಒಂದು ಮೊಬೈಲು ಕರೆ ಬಂದಿತ್ತು. ಈ ಕರೆ ಮಾಡಿದ ವ್ಯಕ್ತಿ ತಾನು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಮಾಹಿತಿ ನೀಡಿದ್ದರು.

  • Share this:

ಮಂಗಳೂರು (ಆಗಸ್ಟ್ 21): ಪ್ರಚಾರ ಗಿಟ್ಟಿಸಿಕೊಳ್ಳಲು ಕೆಲವರು ಯಾವ ಮಟ್ಟಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ತಾಜಾ ಉದಾಹರಣೆ ಮಂಗಳೂರಿನಲ್ಲಿ ಸಿಕ್ಕಿದೆ. ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಮಾಡಿದ ವ್ಯಕ್ತಿ ಕೇವಲ ಪ್ರಚಾರಕ್ಕಾಗಿ ತಾನು ಈ ಕೃತ್ಯ ಎಸಗಿರುವುದಾಗಿ ಪೋಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ತನ್ನ ಪ್ರಚಾರದ ಹುಚ್ಚಿಗೆ ಈತ ಇದೀಗ ಜೈಲಿನ ಕಂಬಿ ಎಣಿಸಲು ಆರಂಭಿಸಿದ್ದಾನೆ.


ಪ್ರಚಾರ ಝೀರೋ ಇದ್ದವನನ್ನು ಕೆಲವೇ ಗಂಟೆಗಳಲ್ಲಿ ಹಿರೋ ಆಗಿ ಮಾಡುತ್ತೆ. ಪ್ರಚಾರ ಸಿಗುತ್ತೆ ಎಂದಾದರೆ ಯಾವ ಮಟ್ಟಕ್ಕೂ ಇಳಿಯಲು ಸಿದ್ಧವಿರುವ ಜನರೂ ನಮ್ಮ ಮುಂದಿದ್ದಾರೆ. ಇಂಥಹುದೇ ಒಂದು ಪ್ರಚಾರದ ಗೀಳಿಗೆ ಜೈಲು ಕಂಬಿ ಎಣಿಸಲು ಮುಂದಾದ ವ್ಯಕ್ತಿಯೋರ್ವನ ಸ್ಟೋರಿಯಿದು.


ಆಗಸ್ಟ್ 19 ರಂದು ಮಧ್ಯಾಹ್ನ ಸುಮಾರು 1 ಗಂಟೆಯ ವೇಳೆಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ಅವರಿಗೆ ಒಂದು ಮೊಬೈಲು ಕರೆ ಬಂದಿತ್ತು. ಈ ಕರೆ ಮಾಡಿದ ವ್ಯಕ್ತಿ ತಾನು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿರುವುದಾಗಿ ಮಾಹಿತಿ ನೀಡಿದ್ದ. ತಕ್ಷಣವೇ ಪ್ರಕರಣದ ಗಂಭೀರತೆಯನ್ನು ಮನವರಿಕೆ ಮಾಡಿಕೊಂಡ ಮಾಜಿ ನಿರ್ದೇಶಕರು ಈ ವಿಚಾರವನ್ನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರ ಗಮನಕ್ಕೆ ತಂದಿದ್ದರು.


ವಿಮಾನ ನಿಲ್ದಾಣದಿಂದ ಮಂಗಳೂರು ಪೋಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿ , ಬಾಂಬ್ ಕರೆಯ ಜಾಡನ್ನು ಪತ್ತೆ ಹಚ್ಚಲು ಪೋಲೀಸರು ಆರಂಭಿಸುತ್ತಾರೆ. ಮೊಬೈಲ್ ಸಂಖೆಯನ್ನು ಬೆನ್ನತ್ತಿ ಹೋದ ಮಂಗಳೂರು ಪೋಲೀಸರಿಗೆ ಈ ಕರೆ ಉಡುಪಿ ಜಿಲ್ಲೆಯ ಮುದ್ರಾಡಿ ಪರಿಸರದಿಂದ ಬಂದಿರುವುದು ತಿಳಿದು ಬರುತ್ತದೆ.


ಮುದ್ರಾಡಿಯ ಪೊಯ್ಯುದಲ್ ಬಲ್ಲಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ (33) ನಿಗೆ ಸೇರಿದ ಮೊಬೈಲ್ ಸಂಖ್ಯೆ ಆಗಿರುವುದನ್ನು ಪತ್ತೆ ಹಚ್ಚಿದ ಪೋಲೀಸರು ಆತನನ್ನು ಬಂಧಿಸಿ ಮಂಗಳೂರಿಗೆ ತಂದು ವಿಚಾರಣೆ ನಡೆಸಿದ್ದರು. ವಿಚಾರಣೆಯ ವೇಳೆಗೆ ಮಂಗಳೂರು ಪೋಲೀಸರೇ ಆರೋಪಿಯ ಹೇಳಿಕೆ ಕೇಳಿ ಬಿಚ್ಚಿ ಬಿದ್ದಿದ್ದಾರೆ. ಹೌದು ಈತ ಈ ಕೃತ್ಯ ಮಾಡಿರುವುದು ಕೇವಲ ಪ್ರಚಾರಕ್ಕಾಗಿ. ಪೋಲೀಸ್ ತನಿಖೆಯ ವೇಳೆ ಈತ ತನ್ನ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದು, ಪ್ರಚಾರ ಗಳಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಹೇಳಿಕೊಂಡಿದ್ದಾನೆ.


ಇದನ್ನೂ ಓದಿ: Phone Tapping: ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ; ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ


ಜನವರಿ ತಿಂಗಳಿನಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಎನ್ನುವ ವ್ಯಕ್ತಿ ಸ್ಫೋಟಕವೊಂದನ್ನು ಇರಿಸಿ ದೇಶ ಹಾಗೂ ವಿದೇಶಗಳಲ್ಲಿ ಒಂದೇ ದಿನದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಇದನ್ನೇ ರೋಲ್ ಮಾಡಲ್ ಆಗಿ ತೆಗೆದುಕೊಂಡ ಆರೋಪಿ ವಸಂತ್, ಗೂಗಲ್ ಮೂಲಕ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಂಬರ್ ಹುಡುಕಿದ್ದಾನೆ. ಕೇವಲ 8 ನೇ ತರಗತಿ ಕಲಿತಿರುವ ಈತನಿಗೆ ಗೂಗಲ್ ನಲ್ಲಿ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕರಾದ ವಾಸುದೇವ್ ರಾವ್ ನಂಬರ್ ಸಿಕ್ಕಿದೆ. ಅವರನ್ನೇ ನಿಲ್ದಾಣದ ನಿರ್ದೇಶಕರು ಎಂದು ತಿಳಿದು ಆತ ಬೆದರಿಕೆಯ ಕರೆ ಮಾಡಿದ್ದಾನೆ.


ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ, ಹಾಗೂ ಇತರ ಸೆಕ್ಷನ್ ಮೂಲಕ ಆರೋಪಿಯನ್ನು ಮಂಗಳೂರು ಪೋಲೀಸರು ಬಂಧಿಸಿದ್ದಾರೆ. ಜಾಮೀನುರಹಿತ ಸೆಕ್ಷನ್ ಮೇಲೆ ಆರೋಪಿಯನ್ನು ಬಂಧಿಸಿರುವ ಪೋಲೀಸರು ಇನ್ನಷ್ಟು ವಿಚಾರಣೆ ನಡೆಸುತ್ತಿದ್ದಾರೆ.

Published by:Rajesh Duggumane
First published: