ಮತ್ತೆ ಅಡಿಕೆ ಮೇಲೆ ನಿಷೇಧದ ತೂಗುಗತ್ತಿ; Areca Nut ಆರೋಗ್ಯಕ್ಕೆ ಯಾವ ರೀತಿ ಹಾನಿಕಾರಕ, ಬೆಳೆಗಾರರು ಹೇಳೋದೇನು?

ಅಡಿಕೆಯಲ್ಲಿ ತಯಾರಿಸುವಂತಹ ತಂಬಾಕು ಪದಾರ್ಥಗಳನ್ನು ತಿನ್ನುವುದರಿಂದ ಓರಲ್ ಕ್ಯಾನ್ಸರ್ ಆಗುತ್ತಿದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕಾಗಿ ದೇಶದಾದ್ಯಂತ ಅಡಿಕೆ ನಿಷೇಧಿಸುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶವನ್ನೂ ನೀಡಲಾಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು:  ಅಡಿಕೆ ನಿಷೇಧವೆಂಬ (Areca nut/Betel nut Ban) ತೂಗುಗತ್ತಿ ಮತ್ತೆ ಅಡಿಕೆ ಬೆಳೆಗಾರರನ್ನು ಕಾಡಲಾರಂಭಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (Central Health and Family Welfare Department) ಅಡಿಕೆ ನಿಷೇಧವೆಂಬ ಆದೇಶ ಈವರೆಗೂ ಊರ್ಜಿತದಲ್ಲಿರುವ ಜೊತೆಗೇ ಮತ್ತೆ ಅಡಿಕೆ ವಿಷಕಾರಿ ಎನ್ನುವ ವಿಚಾರ ಚರ್ಚೆಯಲ್ಲಿದೆ. ಜಾರ್ಖಂಡ್ ನ ಸಂಸದ ನಿಶಿಕಾಂತ್ (MP Nishikant ) ಅಡಿಕೆ ವಿಷಕಾರಿಯಾಗಿದ್ದು, ಅಡಿಕೆಯನ್ನು ನಿಷೇಧ ಮಾಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿರುವುದು  ಬೆಳೆಗಾರರ ಈ ಆತಂಕಕ್ಕೆ ಕಾರಣವಾಗಿದೆ.  ಕರಾವಳಿ ಕರ್ನಾಟಕದ ಹಾಗೂ ಶಿವಮೊಗ್ಗ ಜಿಲ್ಲೆಯ ಕೃಷಿಕರ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ನಿಷೇಧದ ತೂಗುಗತ್ತಿಯಿಂದ ತಪ್ಪಿಸಿಕೊಂಡಿಲ್ಲ. ಕರ್ನಾಟಕದಲ್ಲಿ ಅದರಲ್ಲೂ ದಕ್ಷಿಣಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಲಕ್ಷಾಂತರ ಕುಟುಂಬಗಳು ಇದೇ ಬೆಳೆಯನ್ನು ನಂಬಿ ತಮ್ಮ ಜೀವನವನ್ನೂ ಸಾಗಿಸುತ್ತಿದೆ.

ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶ

ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 2012 ರಲ್ಲಿ ಪಾರ್ಲಿಮೆಂಟ್ ನಲ್ಲಿ ಅಡಿಕೆಯನ್ನು ನಿಷೇಧಿಸುವ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಇಲಾಖೆಯ ವರದಿ ಪ್ರಕಾರ ಅಡಿಕೆಯಲ್ಲಿ ತಯಾರಿಸುವಂತಹ ತಂಬಾಕು ಪದಾರ್ಥಗಳನ್ನು ತಿನ್ನುವುದರಿಂದ ಓರಲ್ ಕ್ಯಾನ್ಸರ್ ಆಗುತ್ತಿದೆ ಎನ್ನುವ ಅಂಶವನ್ನೂ ಉಲ್ಲೇಖಿಸಲಾಗಿತ್ತು. ಇದೇ ಕಾರಣಕ್ಕಾಗಿ ದೇಶದಾದ್ಯಂತ ಅಡಿಕೆ ನಿಷೇಧಿಸುವ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು. ಆದರೆ ಇದಕ್ಕೆ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತಂಬಾಕು ರಹಿತ ಅಡಿಕೆಯ ಬಳಕೆಗೆ ಅವಕಾಶವನ್ನೂ ನೀಡಲಾಗಿತ್ತು.

ಗೊಂದಲದಲ್ಲಿ ಅಡಿಕೆ ಬೆಳೆಗಾರರು 

ಆದರೆ ಇದೀಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್.ಡಿ.ಎ ಸರಕಾರವೂ ಕೂಡಾ ಯುಪಿಎ ಸರಕಾರದ ಪ್ರಸ್ತಾವನೆಯನ್ನೇ ಮತ್ತೆ ಲೋಕಸಭೆಯ ಮುಂದಿಟ್ಟಿದೆ. ಈ ಪ್ರಕ್ರಿಯೆಗಳು ಚಾಲ್ತಿರುವಾಗಲೇ ಜಾರ್ಖಂಡ್ ಸಂಸದ ನಿಶಿಕಾಂತ್ ಅಡಿಕೆಯಲ್ಲಿ ವಿಷಕಾರಿ ಅಂಶವಿದ್ದು, ಇದು ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವುದು ಅಡಿಕೆ ಬೆಳೆಗಾರರನ್ನು ಗೊಂದಲಕ್ಕೀಡು ಮಾಡಿದೆ. ಪ್ರತೀ ಬಾರಿಯೂ ಅಡಿಕೆ ನಿxಏಧ ಎನ್ನುವ ಗುಮ್ಮ ಅಡಿಕೆ ಬೆಳೆಗಾರರನ್ನು ಕಾಡುತ್ತಿದ್ದು, ಇದಕ್ಕೆ ಶಾಶ್ವತ ಅಂತ್ಯ ಹಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಅಡಿಕೆ ಬೆಳೆಗಾರರ ಸಂಘವೂ ಒತ್ತಾಯಿಸಲಾರಂಭಿಸಿದೆ.

ಅಡಿಕೆ ಹಾನಿಕಾರಕವಲ್ಲ 

ಅಡಿಕೆಯನ್ನು ಪುರಾತನ ಕಾಲದಿಂದಲೂ ಧಾರ್ಮಿಕ ಸೇರಿದಂತೆ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತಿದ್ದು, ಅಡಿಕೆ ಹಾನಿಕಾರಕವಲ್ಲ, ಅಡಿಕೆಯಿಂದ ತಯಾರು ಮಾಡುವ ಗುಟ್ಕಾ ದಿಂದ ಹಾನಿಕಾರಕವಾಗುತ್ತಿದೆಯೇ ಎನ್ನುವ ವಿಚಾರವನ್ನು ವೈಜ್ಞಾನಿಕವಾಗಿ ತಿಳಿಯಪಡಿಸಬೇಕಿದೆ ಎನ್ನುವುದು ಅಡಿಕೆ ಬೆಳೆಗಾರರ ಸಂಘದ ಒತ್ತಾಸೆಯೂ ಆಗಿದೆ ಎನ್ನುವುದು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಾರ್ಯದರ್ಶಿ  ಮಹೇಶ್ ಪುಚ್ಚಪ್ಪಾಡಿ ಅಭಿಪ್ರಾಯವಾಗಿದೆ.

ಅಡಿಕೆಗೆ ಬಳಸುವ ರಾಸಾಯನಿಕ ಹಾನಿಕಾರಕ 

ಅಡಿಕೆ ಬೆಳೆಯಿಂದ ಹಿಡಿದು, ಅಡಿಕೆ ಸಂಸ್ಕರಿಸುವ ಹಂತದಲ್ಲೂ ಅಡಿಕೆಗೆ ರಾಸಾಯನಿಕಗಳನ್ನು ಬಳಸುತ್ತಿರುವುದು ಇದೀಗ ತೆರೆದಿಟ್ಟ ಪುಸ್ತಕದಂತೆ ಸತ್ಯ ಎನ್ನುವ ವಿಚಾರವೂ ಹರಿದಾಡುತ್ತಿದೆ. ಅಡಿಕೆ ಮರದಲ್ಲಿ ಹಿಂಗಾರ ಉದುರಿ ಬೀಳದಂತೆ ಮೈಲುತುತ್ತು (ಕೊಫರ್ ಸಲ್ಫೇಟ್ ) ಸೇರಿದಂತೆ ವಿವಿಧ ರೀತಿಯ ರಾಸಾಯನಿಕಗಳನ್ನು ಅಡಿಕೆಗೆ ಬೆಳೆಯುವ ಮೊದಲೇ ಬಿಡಲಾಗುತ್ತದೆ. ಅಡಿಕೆಯನ್ನು ಮಾರಾಟ ಮಾಡುವ ಹಂತದಲ್ಲಿ ಅಡಿಕೆಯನ್ನು ಸಂಸ್ಕರಿಸುವ ಗಾರ್ಬಲ್ ಗಳಲ್ಲಿ ಅಡಿಕೆಯನ್ನು ಪಾಲಿಶ್ ಮಾಡುವುದಕ್ಕಾಗಿ ಸಲ್ಫರ್ ಗಳನ್ನು ಬಳಸಲಾಗುತ್ತದೆ. ಅಲ್ಲದೆ ಅಡಿಕೆಯನ್ನು ಶೇಖರಿಸಿಡುವ ಸಂದರ್ಭದಲ್ಲಿ ಅಡಿಕೆಗೆ ಹುಳುಗಳ ಕಾಟ ತಡೆಯಲು ಇನ್ನೊಂದು ರೀತಿಯ ರಾಸಾಯನಿಕವನ್ನು ಬಳಸಲಾಗುತ್ತಿದೆ. ಆ ಬಳಿಕ ಅಡಿಕೆಯನ್ನು ಗುಟ್ಕಾವಾಗಿ ಪರಿವರ್ತಿಸುವ ಸಂದರ್ಭದಲ್ಲೂ ಅಡಿಕೆಗೆ ರಾಸಾಯನಿಕಗಳನ್ನು ಮಿಕ್ಸ್ ಮಾಡಲಾಗುತ್ತದೆ.

ಇದನ್ನೂ ಓದಿ: Boir Goats: ಕೃಷಿ ಮೇಳದಲ್ಲಿ ಎಲ್ಲರ ಚಿತ್ತ ತನ್ನತ್ತ ಸೆಳೆದ 7 ಲಕ್ಷ ರೂ. ಮೌಲ್ಯದ ಮೇಕೆ

ಅಡಿಕೆ ಹಾನಿಕಾರಕ ಎನ್ನುವ ಗುಮ್ಮ ಪ್ರತೀ ಬಾರಿಯೂ ಕೇಳಿ ಬರುತ್ತಿದ್ದು, ಈ ವಿಚಾರಕ್ಕೆ ಅಡಿಕೆ ಬೆಳೆಗಾರರೇ ಉತ್ತರ ನೀಡಬೇಕಿದೆ. ತಮ್ಮ ತೋಟದಲ್ಲಿ ಬೆಳೆಯುವ ಕೆಲವು ಅಡಿಕೆ ಮರಗಳಿಗೆ ಮೈಲುತುತ್ತು ಸೇರಿದಂತೆ ಯಾವುದೇ ರಾಸಾಯನಿಕ ಬಳಸದೆ ಅಡಿಕೆ ಹಾಗೂ ರಾಸಾಯನಿಕ ಬಳಸಿದ ಅಡಿಕೆ ಗಿಡಗಳಿಂದ ಅಡಿಕೆ ಸಂಗ್ರಹಿಸಿ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರೀಕ್ಷೆ ನಡೆಸಿದಲ್ಲಿ, ಯಾವುದು ಹಾನಿಕಾರಕ ಎನ್ನುವುದು ಅಡಿಕೆ ತೋಟದಿಂದಲೇ ತಿಳಿದು ಬರಲಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಲೋಕೇಶ್ ಅಲ್ಮುಡ.

ಅಡಿಕೆ ಕ್ಯಾನ್ಸರ್ ಕಾರಕವಾಗಲು ಅಡಿಕೆ ಸಂಗ್ರಹಕಾರರೇ ಕಾರಣ ಎನ್ನುವ ಆರೋಪವೂ ಇದೆ. ಹೆಚ್ಚಿನ ಬೆಲೆಯ ಆಸೆಗಾಗಿ ರಾಸಾಯನಿಕಗಳನ್ನು ಬಳಸಿ ಅಡಿಕೆಯನ್ನ ದಾಸ್ತಾನು ಇಟ್ಟ ಪರಿಣಾಮವೇ ಅಡಿಕೆ ವಿಷಯುಕ್ತವಾಗಲು ಕಾರಣ ಎನ್ನಲಾಗಿದೆ. ಸರಕಾರ ಇಂಥ ವ್ಯವಸ್ಥೆಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಅಡಿಕೆ ವಿಷಯುಕ್ತವಾಗುವುದನ್ನು ತಡೆಯಲೂ ಸಾಧ್ಯವಿದೆ.
Published by:Kavya V
First published: