ತಾಲಿಬಾನಿಗಳ ಅಟ್ಟಹಾಸಕ್ಕೆ ಇಲ್ಲಿ ತಲ್ಲಣ.. ಮಂಗಳೂರು ಪೊಲೀಸರ ಮೊರೆ ಹೋದ ಅಫ್ಘನ್ ಪ್ರಜೆಗಳು

ಕುಟುಂಬಸ್ಥರು, ಸಂಬಂಧಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮನೆಯವರು ಫೋನ್ ರಿಸೀವ್ ಮಾಡದಿದ್ದರೆ ತುಂಬಾ ಆತಂಕವಾಗುತ್ತದೆ. ಯಾವ ಕ್ಷಣದಲ್ಲಿ ಏನು ಆಗುತ್ತದೆ ಅನ್ನೋದನ್ನು ಹೇಳೋಕೆ ಆಗಲ್ಲ.

ಅಫ್ಘನ್​​ ಪ್ರಜೆಗಳು

ಅಫ್ಘನ್​​ ಪ್ರಜೆಗಳು

  • Share this:
ಮಂಗಳೂರು: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆಯುತ್ತಿದ್ದಾರೆ. ತಾಲಿಬಾನಿಗಳ ಕೈ ಸಿಕ್ಕ ಅಫ್ಘನ್ನರು ನರಳಾಡುತ್ತಿದ್ದು, ಬದುಕುಳಿದರೆ ಭಿಕ್ಷೆ ಬೇಡಿಯಾದರೂ ಜೀವನ ಮಾಡ್ತೇವೆ ಅಂತಾ ರಾತ್ರೋ ರಾತ್ರಿ ದೇಶ ಬಿಟ್ಟು ಪರಾರಿಯಾಗುತ್ತಿದ್ದಾರೆ. ಅಫ್ಘಾನ್ ನಲ್ಲಿ ಸಿಲುಕಿರುವ ವಿವಿಧ ರಾಷ್ಟ್ರ ಗಳ ಪ್ರಜೆಗಳನ್ನು ಆಯಾ ದೇಶ  ರಕ್ಷಣೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಣೆ ಮಾಡುವ ಕೆಲಸವನ್ನು ಭಾರತ ಸರ್ಕಾರ ಮತ್ತು ಭಾರತೀಯ ವಾಯು ಸೇನೆ ಮಾಡುತ್ತಿದೆ. ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಭಾರತೀಯರ ಬಗ್ಗೆ ಭಾರತದಲ್ಲಿರುವ ಕುಟುಂಬಗಳು ಆತಂಕದಲ್ಲಿದ್ದರೆ,ಇತ್ತ ಭಾರತದಲ್ಲಿ ನೆಲೆಸಿರುವ ಅಫ್ಘಾನಿಸ್ತಾನದ ಕುಟುಂಬಗಳಿಗೆ ತಮ್ಮ ದೇಶದಲ್ಲಿ ಆಗುತ್ತಿರುವ ರಾಕ್ಷಸರ ಆಡಳಿತದ ಬಗ್ಗೆಯೇ ಚಿಂತೆ ಕಾಡಲಾರಂಭಿಸಿದೆ.

ಅಫ್ಘಾನ್‌ನಲ್ಲಿ ತಾಲಿಬಾನ್‌ಗಳ ಅಟ್ಟಹಾಸಕ್ಕೆ ಮಂಗಳೂರಿನಲ್ಲಿ ನೆಲೆಸಿರುವ ಅಫ್ಘಾನ್ನರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕುಟುಂಬಸ್ಥರ ಬಗ್ಗೆ ಹಾಗೂ ದೇಶದ ಬಗೆಗಿನ ಆತಂಕದಿಂದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್‌. ಶಶಿಕುಮಾರ್ ರನ್ನು ಭೇಟಿಯಾಗಿದ್ದಾರೆ. ತಮಗಾಗಿರುವ ತೊಂದರೆಗಳನ್ನು ಪರಿಹರಿಸುವಂತೆ ಮನವಿಯನ್ನು ಮಾಡಿಕೊಂಡಿದ್ದಾರೆ.

ಕಡಲ ನಗರಿ ಮಂಗಳೂರಿನಲ್ಲಿ 58 ಜನ ಅಘ್ಘಾನಿ ಪ್ರಜೆಗಳು ನೆಲೆಸಿದ್ದಾರೆ. ಹೆಚ್ಚಿನ ಮಂದಿ ಪದವಿ, ಸ್ನಾತಕೋತ್ತರ, ಪಿ.ಎಚ್.ಡಿಗಾಗಿ ಬಂದಿರುವ ವಿದ್ಯಾರ್ಥಿಗಳೇ ಹೆಚ್ಚು. ಸದ್ಯ ಅಫ್ಘಾನ್ ಪರಿಸ್ಥಿತಿ ಬಗ್ಗೆ ಕಳವಳಗೊಂಡಿರುವ ಈ ಅಘ್ಘಾನಿ ಪ್ರಜೆಗಳು  ಮಂಗಳೂರು ನಗರ ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿದ್ದಾರೆ. ಕಮೀಷನರ್ ಎನ್.ಶಶಿಕುಮಾರ್ ಅವರನ್ನು ಭೇಟಿಯಾಗಿ ತಾಲಿಬಾನ್‌ಗಳು ಅಫ್ಘಾನ್‌ಗೆ ಲಗ್ಗೆಯಿಟ್ಟಿರಿರುವುದರಿಂದ ತಮಗಾಗಿರುವ ಪರಿಣಾಮಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಈ ಸಂದರ್ಭ ಧೈರ್ಯ ತುಂಬಿದ ಕಮೀಷನರ್ ಸಮಸ್ಯೆಗಳನ್ನು ಬಗೆಹರಿಸುವಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮನೆಗಳಿಗೆ ನುಗ್ಗಿ ಅಡುಗೆ ಮಾಡಿಕೊಡುವಂತೆ ತಾಲಿಬಾನಿಗಳ ಟಾರ್ಚರ್.. ಊಟ ರುಚಿಯಿಲ್ಲವೆಂದು ಮಹಿಳೆಗೆ ಬೆಂಕಿ!

ಈ ವೇಳೆ ಮಾತನಾಡಿದ ಅಘ್ಘಾನ್ ವಿದ್ಯಾರ್ಥಿನಿ ಫರ್ಕುಂಡ್, ನಾವು ಭಾರತದಲ್ಲಿ ಸುರಕ್ಷಿತವಾಗಿದ್ದರೂ ಬಹಳ ಆತಂಕ ಕಾಡುತ್ತಿದೆ. ದೇಹ ಭಾರತದಲ್ಲಿ ಇದ್ರೂ ಮನಸ್ಸು ಮಾತ್ರ ಅಫ್ಘಾನಿಸ್ತಾನದಲ್ಲಿದೆ. ಸದಾ ಅಲ್ಲಿ ಏನಾಗುತ್ತಿದೆ ಎಂಬುವುದೇ ಚಿಂತೆ ಕಾಡುತ್ತಿದೆ. ಮನೆಯವರು, ಸಂಬಂಧಿಕರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮನೆಯವರು ಫೋನ್ ರಿಸೀವ್ ಮಾಡದಿದ್ದರೇ, ಮೆಸೇಜ್ ಕಳುಹಿಸದಿದ್ದರೆ ತುಂಬಾ ಆತಂಕವಾಗುತ್ತದೆ. ಸದ್ಯ ಮನೆಯವರು ಸುರಕ್ಷಿತವಾಗಿದ್ದಾರೆ. ಆದರೆ ಯಾವ ಕ್ಷಣದಲ್ಲಿ ಏನು ಆಗುತ್ತದೆ ಅನ್ನೋದನ್ನು ಹೇಳೋಕೆ ಆಗಲ್ಲ  ಅಂತಾ ಫರ್ಕುಂಡ್ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ನೆಲೆಸಿದ್ದ ಒಟ್ಟು 58 ಮಂದಿಯಲ್ಲಿ 11 ಮಂದಿ ಈಗಾಗಲೇ ಅಫ್ಘಾನ್ ತೆರಳಿದ್ದಾರೆ. ಆದ್ರೆ ಇದೀಗ ಅವರಿಗೆ ಮಂಗಳೂರಿನಲ್ಲಿ  ಪರೀಕ್ಷೆಗೆ ಹಾಜರಾಗಬೇಕಿದ್ದು ಅವರಿಗೆ ವಾಪಾಸು ಭಾರತಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಇಲ್ಲಿ ಅಂತಿಮ ವರ್ಷದಲ್ಲಿ ಕಲಿಯುತ್ತಿರುವವರ ವೀಸಾ ಅವಧಿ ಇದೇ ಸೆಪ್ಟೆಂಬರ್ ತಿಂಗಳಿಗೆ ಮುಗಿಯುತ್ತಿದ್ದು ಅವರಿಗೆ ವಾಪಾಸು ಅಫ್ಘಾನ್‌ಗೆ ತೆರಳುವುದಕ್ಕೆ ಸಾಧ್ಯವಾಗುತ್ತಿಲ್ಲ.  ಹೀಗಾಗಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಪ್ರಯತ್ನವನ್ನು ಅಪ್ಘಾನ್ ಪ್ರಜೆಗಳು ಮಾಡಿದ್ದಾರೆ. ಈ ವಿಚಾರವನ್ನು ಸಂಬಂಧಪಟ್ಟ ಪ್ರಾಧಿಕಾರ, ಮೇಲಾಧಿಕಾರಿಗಳಿಗೆ ರವಾನಿಸುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ,ಎನ್.ಶಶಿಕುಮಾರ್ ಹೇಳಿದ್ದಾರೆ.

ಕುಟುಂಬ ಸದಸ್ಯರನ್ನು ಬಿಟ್ಟು ಮಂಗಳೂರಿಗೆ ಬಂದಿರುವ ಅಘ್ಘಾನ್ ಪ್ರಜೆಗಳಿಗೆ ತಮ್ಮ ದೇಶದ ಸ್ಥಿತಿಯನ್ನು ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಕುಟುಂಬ ಸದಸ್ಯರಿಗೆ ಏನು ಆಗದೆ ಇರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: