ಸುಪ್ರೀಂಕೋರ್ಟ್​ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೃಷಿ ಪ್ರೀತಿಗೆ ಬೆರಗಾದ ಜನರು

ಕೃಷಿ ನನ್ನ ರಕ್ತದಿಂದಲೇ ಬಂದಿರುವ ಕಾರಣ, ಮಣ್ಣಿನ ಋಣ ನನ್ನ ಮೇಲೆಯೂ ಇರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎನ್ನುತ್ತಿದ್ದಾರೆ ಕೆ.ಎಂ.ನಟರಾಜ್  ಅವರು

ಕೆ.ಎಂ.ನಟರಾಜ್

ಕೆ.ಎಂ.ನಟರಾಜ್

  • Share this:
 ಪುತ್ತೂರು (ಜೂ. 10): ಲಾಕ್​ಡೌನ್​ನಿಂದಾಗಿ ಊರಿಗೆ ಮರಳಿರುವ ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಸಿಟರ್ ತಮ್ಮ ಮನೆಯ ಕೃಷಿ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ  ಮೂಲಕ ಎಲ್ಲರ ಗಮನಸೆಳೆದಿದ್ದಾರೆ.  ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಇವರು ಸಾಮಾನ್ಯ ಕೃಷಿಕನಂತೆ ಕೆಸರಲ್ಲಿ ಉಳುಮೆ ಮಾಡುತ್ತಿದ್ದು, ಕೃಷಿಯನ್ನು ತ್ಯಜಿಸಿ ನಗರ ಜೀವನಕ್ಕೆ ಒಗ್ಗಿಕೊಂಡ ಯುವಕರಿಗೆ ಇವರ ಈ ಕೃಷಿ ಪ್ರೇಮ ಮಾದರಿಯೂ ಆಗಿದೆ.  ಸುಪ್ರೀಂಕೋರ್ಟ್ ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಇದೀಗ ಮನೆಯಿಂದಲೇ ಕಛೇರಿ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನನ್ನು ಬೆಳೆಸಿದ ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರಮಂಗಲದ ನಿವಾಸಿಯಾಗಿರುವ ಕೆ.ಎಂ. ನಟರಾಜ್ ಕೃಷಿ ಕುಟುಂಬದಿಂದ ಬಂದವರು. ಇವರ ಇಡೀ ಕುಟುಂಬವೇ ಕೃಷಿಯನ್ನೇ ನೆಚ್ಚಿಕೊಂಡು ಬಂದಿದ್ದು, ಈ ಕೃಷಿ ಪ್ರೇಮ ನಟರಾಜ್ ಅವರನ್ನು ಇಂದಿಗೂ ಬಿಟ್ಟಿಲ್ಲ.

ದೆಹಲಿಯಲ್ಲಿ ಸುಪ್ರೀಂಕೋರ್ಟ್ ನ ಕಲಾಪಗಳಲ್ಲಿ ವರ್ಷಪೂರ್ತಿ ಬ್ಯುಸಿಯಾಗಿರುವ ನಟರಾಜ್ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದರೂ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅವಕಾಶ ಅವರಿಗೆ ಸಿಗುತ್ತಿರಲಿಲ್ಲ. ಆದರೆ, ಈ ಬಾರಿ ಕೊರೋನಾ ಲಾಕ್ ಡೌನ್ ದೇಶದೆಲ್ಲೆಡೆ ಹೇರಿಕೆಯಾದ ಕಾರಣ, ನಟರಾಜ್ ದೆಹಲಿಯಿಂದ ನೇರವಾಗಿ ಊರಿಗೆ ಬಂದಿದ್ದಾರೆ. ಮನೆಯಿಂದಲೇ ಸುಪ್ರೀಂಕೋರ್ಟ್ ನಲ್ಲಿನ ತಮ್ಮ ಕೆಲಸವನ್ನು ನಿರ್ವಹಿಸುತ್ತಿರುವ ಇವರು ತನ್ನ ಬಿಡುವಿನ ವೇಳೆಯನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹಿರಿಯರ ಕಾಲದಿಂದಲೂ ನಟರಾಜ್ ಮನೆಯಲ್ಲಿ ಭತ್ತದ ಬೇಸಾಯವನ್ನು ಮಾಡುತ್ತಿದ್ದು, ಈ ಬಾರಿ ನಟರಾಜ್ ಅವರಿಗೆ ಬೇಸಾಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಅವಕಾಶ ದೊರೆತಿದೆ.

ಇದನ್ನು ಓದಿ: 11 ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆ; ವೀಕೆಂಡ್​​ ಕರ್ಫ್ಯೂ ಜಾರಿ

ಸಿಕ್ಕಿದ ಅವಕಾಶವನ್ನು ಭರಪೂರವಾಗಿ ಬಳಸಿಕೊಂಡಿರುವ ಇವರು ತಮ್ಮ ಗದ್ದೆಯನ್ನು ಟ್ಯಾಕ್ಟರ್ ಹಾಗೂ ಟಿಲ್ಲರ್ ಮೂಲಕ ಸಂಪೂರ್ಣ ಹದ ಮಾಡಿದ್ದಾರೆ. ದಿನಪೂರ್ತಿ ಹವಾನಿಯಂತ್ರಿತ ಕೊಠಡಿಯೊಳಗೇ ಇರುವ ಇವರು ತಮ್ಮ ಮನೆಯಲ್ಲಿ ಪಕ್ಕಾ ಕೃಷಿಕನಾಗಿ ಕಂಡು ಬಂದಿದ್ದಾರೆ. ಕೃಷಿ ಚಟುವಟಿಕೆಗೆ ಬಳಸುವ ಹಳೆಯ ಶರ್ಟು, ಲುಂಗಿ ಹಾಕಿಕೊಂಡು ಟ್ಯಾಕ್ಟರ್ ಹಾಗೂ ಟಿಲ್ಲರ್ ಚಲಾಯಿಸುತ್ತಿರುವ ದೃಶ್ಯಗಳನ್ನು ಮನೆ ಮಂದಿ ಸೆರೆ ಹಿಡಿದಿದ್ದು, ಇವರ ಕೃಷಿ ಪ್ರೇಮ ಭಾರೀ ಪ್ರಶಂಸೆಗೂ ಪಾತ್ರವಾಗಿದೆ. ಪ್ರಚಾರ ಹಾಗೂ ಮಾಧ್ಯಮದಿಂದ ಸದಾ ದೂರವೇ ಇರುವ ಕೆ.ಎಂ.ನಟರಾಜ್ ಈ ಕುರಿತು ಮಾಧ್ಯಮಗಳ ಮುಂದೆ ಬರಲೂ ಹಿಂಜರಿಯುತ್ತಾರೆ.

ಕೃಷಿ ನನ್ನ ರಕ್ತದಿಂದಲೇ ಬಂದಿರುವ ಕಾರಣ, ಮಣ್ಣಿನ ಋಣ ನನ್ನ ಮೇಲೆಯೂ ಇರುವ ಕಾರಣಕ್ಕಾಗಿ ಸಿಕ್ಕಿದ ಅವಕಾಶವನ್ನು ಬಳಸಿಕೊಂಡಿದ್ದೇನೆ ಎನ್ನುತ್ತಿದ್ದಾರೆ ಕೆ.ಎಂ.ನಟರಾಜ್  ಅವರು. ಅಲ್ಲದೇ ಇದೇ ವೇಳೆ ಯುವಕರೂ ಕೃಷಿಯ ಬಗ್ಗೆ ಆಸಕ್ತಿ ವಹಿಸಿ , ಕೃಷಿಯಲ್ಲಿ ತೊಡಗಿಕೊಳ್ಳುವ ಅನಿವಾರ್ಯತೆಯಿದೆ ಎನ್ನುತ್ತಾರೆ.

ಸುಪ್ರೀಂಕೋರ್ಟ್ ನ ಉನ್ನತ ಹಾಗೂ ಅತ್ಯಂತ ಜವಾಬ್ದಾರಿಯುತ ಹುದ್ದೆಯನ್ನು ಅಲಂಕರಿಸಿರುವ ನಟರಾಜ್ ಅವರ ಕೃಷಿ ಮೇಲಿನ ಪ್ರೀತಿಗೆ ಭಾರೀ ಪ್ರಶಂಸೆಯೂ ವ್ಯಕ್ತವಾಗುತ್ತಿದೆ. ಕೃಷಿಯನ್ನು ತ್ಯಜಿಸಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಕೃಷಿ ಕುಟುಂಬಗಳ ಯುವಕರು ಅಸಿಸ್ಟೆಂಟ್ ಸಾಲಿಟರ್ ಜನರಲ್ ಆಗಿರುವ ನಟರಾಜ್ ಅವರನ್ನು ಅನುಸರಿಸಬೇಕಿದೆ ಎಂದು ನಟರಾಜ್ ಆಪ್ತ ಮಹೇಶ್ ಕಜೆ ತಿಳಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Seema R
First published: