ಮದುವೆ ಮಾಡಿಸೋಕೂ ಸೈ, ಕಾಲೇಜಲ್ಲಿ ಕಲಿಯೋಕೂ ಜೈ: ವೇದಾಭ್ಯಾಸ ಪಾರಂಗತ ಯುವತಿ !

ವೇದಾಧ್ಯಯನದಲ್ಲಿ ನುರಿತಳಾಗಿರುವ ಅನಘಾ ತನ್ನ ತಂದೆಯ ಜೊತೆಗೆ ಕೆಲವು ಮದುವೆ ಸಮಾರಂಭಗಳಿಗೆ ತೆರಳಿ ಪೌರೋಹಿತ್ಯವನ್ನೂ ನಡೆಸಿದ್ದಾಳೆ. ದ್ವಿತೀಯ ಪಿಯುಸಿ ಕಲಿಯುತ್ತಿರುವ 17 ವರ್ಷದ ಈ ಯುವತಿ ಆಸಕ್ತಿ ಇದ್ದವರಿಗೆ ಅವಕಾಶ ಸಿಕ್ಕರೆ ಎಂತೆಂಥಾ ಪ್ರತಿಭೆಗಳು ಬೆಳಕಿಗೆ ಬರುತ್ತವೆ ಎನ್ನುವುದಕ್ಕೆ ಸಾಕ್ಷಿ.

ವೇದಾಧ್ಯಯನದಲ್ಲಿ ನಿರತ ಅನಘಾ

ವೇದಾಧ್ಯಯನದಲ್ಲಿ ನಿರತ ಅನಘಾ

  • Share this:
ಬಂಟ್ವಾಳ (ದ.ಕ.): ವೇದಾಧ್ಯಯನ ಹಾಗೂ ಪೌರೋಹಿತ್ಯದಲ್ಲಿ ಹೆಚ್ಚಾಗಿ ಪುರುಷರದ್ದೇ ಪಾರುಪತ್ಯ. ಈ ಕಾರಣಕ್ಕಾಗಿಯೇ ಎಲ್ಲಾ ಸಭೆ-ಸಮಾರಂಭಗಳಲ್ಲಿ ಪುರುಷರೇ ವೇದಾಧ್ಯಯನ ಹಾಗೂ ಪೌರೋಹಿತ್ಯದ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಅಲ್ಲದೆ ಈ ವೇದಾಭ್ಯಾಸ ಮಾಡುವುದು ಪುರುಷರಿಗೇ ಸೀಮಿತ ಎನ್ನುವ ಅಲಿಖಿತ ಕಟ್ಟುಪಾಡನ್ನೂ ಇಂದಿಗೂ ಚಾಚೂ ತಪ್ಪದೆ ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ ಈ ಕಟ್ಟುಪಾಡುಗಳಿಗೆ ಹೆಚ್ಚು ಮಣೆ ಹಾಕದೆ, ಮಹಿಳೆಯರೂ ವೇದಾಧ್ಯಯನ ಹಾಗೂ ಪೌರೋಹಿತ್ಯದಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವ ಸಂದೇಶ ಸಾರುವ ಪ್ರಯತ್ನವೊಂದು ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದೆ. ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯರಾದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ  ಕಶೆಕೋಡಿ ಸೂರ್ಯನಾರಾಯಣ ಭಟ್ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ತನ್ನ ಮನೆಯಲ್ಲಿ ಶಿಷ್ಯರಿಗೆ ವೇದಾಧ್ಯಯನ ಮಾಡುತ್ತಿರುವ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರಲ್ಲಿ ಅವರ ಮಗಳಾದ ಅನಘಾ ತಾನೂ ಯಾಕೆ ವೇದಾಧ್ಯಯನ ಮಾಡಬಾರದು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಕಶೆಕೋಡಿಯವರು ಮಗಳಿಗೆ ವೇದಾಧ್ಯಯನ ವನ್ನು ಕಲಿಸಲು ಆರಂಭಿಸಿದ್ದಾರೆ. ಇದೀಗ ವೇದಾಧ್ಯಯನದಲ್ಲಿ ನುರಿತಳಾಗಿರುವ ಅನಘಾ ತನ್ನ ತಂದೆಯ ಜೊತೆಗೆ ಕೆಲವು ಮದುವೆ ಸಮಾರಂಭಗಳಿಗೆ ತೆರಳಿ ಪೌರೋಹಿತ್ಯವನ್ನೂ ನಡೆಸಿದ್ದಾಳೆ.

ಇದನ್ನೂ ಓದಿ: ಮಗುವಿನ ಒಪ್ಪಿಗೆ ಪಡೆದೇ ಡೈಪರ್ ಚೇಂಜ್ ಮಾಡ್ಬೇಕು; ಆಸ್ಟ್ರೇಲಿಯಾದಲ್ಲಿ ಈ ವಿಚಾರದ ಬಗ್ಗೆ ಭಾರೀ ಚರ್ಚೆ !

ಸ್ವ ಆಸಕ್ತಿಯಿಂದ ತಂದೆ ಜೊತೆ ಮದುವೆ ಸಮಾರಂಭಗಳಲ್ಲಿ ಸಹಾಯಕಳಾಗಿ ಪೌರೋಹಿತ್ಯ ಮಾಡುವಷ್ಟು ಸಮರ್ಥಳಾಗಿ ಗಮನ ಸೆಳೆದಿದ್ದಾಳೆ. ಬಂಟ್ವಾಳ ತಾಲೂಕಿನ ದಾಸಕೋಡಿ ಸಮೀಪ ಕಶೆಕೋಡಿ ಎಂಬಲ್ಲಿರುವ ಪುರೋಹಿತ, ವೈದಿಕ ಮನೆತನದ ಸೂರ್ಯನಾರಾಯಣ ಭಟ್ಟರ ಮನೆಯಲ್ಲಿ ನಿತ್ಯವೂ ವೇದಾಧ್ಯಯನ ನಡೆಯುತ್ತದೆ. ಜೊತೆಗೆ ಸಂಗೀತ, ಗೀತಾಧ್ಯಯನಕ್ಕೂ ಮಕ್ಕಳು ಬರುತ್ತಾರೆ. ವೈದಿಕ ಮನೆತನ ಅನಘಾಗೆ ಪೂರಕ ವಾತಾವರಣವಾಯಿತು. ಅನಘಾಳ ತಮ್ಮ ಆದಿತ್ಯಕೃಷ್ಣ ಈಗಾಗಲೇ ವೇದಾಭ್ಯಾಸ, ಪೌರೋಹಿತ್ಯದಲ್ಲಿ ಸಾಕಷ್ಟು ಆಸಕ್ತಿ ತೋರಿದ್ದು, ಅಭ್ಯಾಸನಿರತ.  ವೇದಾಧ್ಯಯನದಲ್ಲಿ ತೊಡಗಿಕೊಳ್ಳಲು ಮನೆಯ ವಾತಾವರಣವೂ ಒಂದು‌ ಕಡೆಯಲ್ಲಿ ಉಪಯುಕ್ತವಾಯಿತು ಎನ್ನುವ ಅನಘಾ, ವೇದಾಧ್ಯಯನ ಈ ಆಸಕ್ತಿಯನ್ನೂ ಇನ್ನೂ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸುತ್ತಾರೆ. ಅಲ್ಲದೆ ತಾನು‌ ಕಲಿಯುತ್ತಿರುವ ಶಾಲೆಯಲ್ಲೂ ವೇದಾಧ್ಯಯನಕ್ಕೆಂದೇ ಸೀಮಿತ ಅವಧಿಯನ್ನು ಮೀಸಲಿಟ್ಟಿದ್ದು , ಇದರ ಸದುಪಯೋಗವನ್ನೂ ಪಡೆದುಕೊಂಡಿದ್ದೇನೆ ಎನ್ನುತ್ತಾರೆ ಅನಘಾ. ಆರ್.ಎಸ್.ಎಸ್ ಮುಖಂಡ ಪ್ರಭಾಕರ ಭಟ್ ಕಲ್ಲಡ್ಕ ಅನಘಾ ಸಮಾರಂಭವೊಂದರಲ್ಲಿ ಪೌರೋಹಿತ್ಯ ನಡೆಸುತ್ತಿರುವುದನ್ನು ಗಮನಿಸಿ ವೇದಾಧ್ಯಯನದಲ್ಲಿ ಇನ್ನಷ್ಟು ತೊಡಗಿಕೊಳ್ಳುವಂತೆ ಹುರಿದುಂಬಿಸಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ.

ಈ ಕುರಿತು ಮಾತನಾಡಿದ ಕಶೆಕೋಡಿ ಸೂರ್ಯನಾರಾಯಣ ಭಟ್, ವೇದ ಎಂದರೆ ಜ್ಞಾನ. ಇವತ್ತಿನ ಕಾಲಘಟ್ಟದಲ್ಲಿ ವೇದವನ್ನು ಅಧ್ಯಯನ ಮಾಡುವ ಅಗತ್ಯ ಎಲ್ಲರಿಗೂ ಇದೆ ಎನ್ನುತ್ತಾರೆ.  ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿ ಇನ್ನಷ್ಟು ಮುಂದುವರಿಸಲು ಸಲಹೆಯನ್ನು ಹಲವರು ನೀಡಿದ್ದಾರೆ. ಇದು ಅನಘಾಗೆ ಮತ್ತಷ್ಟು ಪ್ರೋತ್ಸಾಹ ದೊರಕಿತು. ಇದು ಆರಂಭವಷ್ಟೇ. ಇನ್ನಷ್ಟು ಅಧ್ಯಯನ ಮಾಡುವ ಆಸಕ್ತಿ ಅವಳಿಗಿದ್ದು, ನಮ್ಮೆಲ್ಲರ ಪ್ರೋತ್ಸಾಹ ಇದ್ದೇ ಇದೆ ಎನ್ನುತ್ತಾರೆ ಅವರ ತಂದೆ ಕಶೆಕೋಡಿ ಸೂರ್ಯನಾರಾಯಣ ಭಟ್. ಅನಘಾ ಪೌರೋಹಿತ್ಯ ದಲ್ಲಿ ತೊಡಗಿಕೊಳ್ಳುತ್ತಿರುವ ಬಗ್ಗೆ ಸಮಾಜದ ಕೆಲವರಲ್ಲಿ ಅಸಾಮಾಧಾನವೂ ಇದ್ದು, ಇದನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗದ ಕೆಲವರು ಅನಘಾಳ ಈ  ಪ್ರಯತ್ನಕ್ಕೆ ಕೊಂಕು ನುಡಿಯಲು ಆರಂಭಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: