Kodagu: ಮನೆ ಕೊಡಿ ಅಥವಾ ದಯಾಮರಣಕ್ಕೆ ಅವಕಾಶ ಕೊಡಿ- ಮಂಗಳಮುಖಿಯ ಮನವಿ!

ಮಂಗಳಮುಖಿ ವಿಚಾರದಲ್ಲಿ ಎಷ್ಟೇ ಜಾಗೃತಿ, ಅರಿವು ಮೂಡಿಸಿದರೂ ಜನ ಮಾತ್ರ ಯೋಚಿಸುವ ರೀತಿ ಬದಲಾಗಿಲ್ಲ. ಅತ್ತ ಜನಸಾಮಾನ್ಯರ ರೀತಿ ಬದುಕಲೂ ಆಗದೇ ಇತ್ತ ಸಾಯಲು ಆಗದೇ ಪರದಾಡುತ್ತಿದ್ದಾರೆ. ಇದಕ್ಕೆ ಕೊಡಗಿನ ಮಡಿಕೇರಿಯಲ್ಲಿ ನಡೆದಿರುವ ಘಟನೆ ಸಾಕ್ಷಿ.

ಕೊಡಗಿನಲ್ಲಿ ದಯಾಮರಣಕ್ಕೆ ಮಂಗಳಮುಖಿ ಅರ್ಜಿ

ಕೊಡಗಿನಲ್ಲಿ ದಯಾಮರಣಕ್ಕೆ ಮಂಗಳಮುಖಿ ಅರ್ಜಿ

  • Share this:
ಆಧುನಿಕತೆ ಎಷ್ಟೇ ಬೆಳೆದರೂ, ವಿಜ್ಞಾನ (Science) ತಂತ್ರಜ್ಞಾನ (Technology) ಕ್ಷೇತ್ರದಲ್ಲಿ ಎಷ್ಟೇ ಉನ್ನತಿ ಸಾಧಿಸಿದರೂ ನಮ್ಮ ಜನರಿಗೆ ಕೆಲವು ವಿಷಯಗಳಲ್ಲಿ ಇರುವ ತಪ್ಪು ನಂಬಿಕೆಗಳು (Wrong Thinking) ಮಾತ್ರ ಇಂದಿಗೂ ಹಾಗೆಯೇ ಉಳಿದಿವೆ. ಮಂಗಳಮುಖಿ (Transgender) ವಿಚಾರದಲ್ಲಿ ಎಷ್ಟೇ ಜಾಗೃತಿ, ಅರಿವು (Awareness) ಮೂಡಿಸಿದರೂ ಜನ ಮಾತ್ರ ಯೋಚಿಸುವ ರೀತಿ ಬದಲಾಗಿಲ್ಲ. ಅತ್ತ ಜನಸಾಮಾನ್ಯರ ರೀತಿ ಬದುಕಲೂ ಆಗದೇ ಇತ್ತ ಸಾಯಲು ಆಗದೇ ಪರದಾಡುತ್ತಿದ್ದಾರೆ. ಇದಕ್ಕೆ ಕೊಡಗಿನ (Kodagu)ಮಡಿಕೇರಿಯಲ್ಲಿ ನಡೆದಿರುವ ಘಟನೆ ಸಾಕ್ಷಿ. ಮಡಿಕೇರಿಯಲ್ಲೇ ಹುಟ್ಟಿ ಬೆಳೆದ ಮಂಗಳಮುಖಿ ರಿಹಾನ ಅಂತಹ ಅಮಾನವೀಯ ಘಟನೆಗೆ ಸಾಕ್ಷಿಯಾಗಿದ್ದಾರೆ. ಈಗ ರಿಹಾನ ದಯಾಮರಣ ಕೊಡಿ ಅಂತಾ ಮನವಿ ಮಾಡ್ತಿದ್ದಾರೆ.

ಮಂಗಳಮುಖಿಯರ ಜೀವನ ಎಷ್ಟು ಕಷ್ಟ ಅಂತಾ ಎಲ್ಲರಿಗೂ ಗೊತ್ತಿರುತ್ತೆ. ಹೋದ-ಬಂದ ಕಡೆಯಲ್ಲೆಲ್ಲಾ ಮೂದಲಿಕೆ ಇದ್ದೇ ಇರುತ್ತೆ. ಮಂಗಳಮುಖಿಯರಂದ್ರೆ ನೋಡುಗರ ದೃಷ್ಟಿ ಕೂಡ ಬದಲಾಗಿರುತ್ತೆ. ಮಡಿಕೇರಿಯಲ್ಲೂ ಮಂಗಳಮುಖಿಯೊಬ್ಬರು ದಯಾಮರಣಕ್ಕೆ ಮನವಿ ಮಾಡಿದ್ದಾರೆ.

ಮನೆ ಬಾಡಿಗೆಗೂ ಸಿಗ್ತಿಲ್ಲ, ಮನೆಯೂ ಇಲ್ಲ

ರಿಹಾನ ಸೂರು ಇಲ್ಲದೇ ಪರಿತಪಿಸ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಮನೆಯನ್ನು ಬಾಡಿಗೆಗೂ ಕೊಡುತ್ತಿಲ್ಲ. ಜಿಲ್ಲಾಡಳಿತ ಕೂಡ ಇವರಿಗೆ ಒಂದು ಸೂರು ಕಲ್ಪಿಸಿಲ್ಲ. ಹೀಗಾಗಿ ವ್ಯವಸ್ಥೆ ವಿರುದ್ಧ ರಿಹಾನ ಆಕ್ರೋಶ, ನೋವು, ಅಳಲನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: ಹಠ ಮಾಡುತ್ತಿದ್ದ ಮಗುವಿಗೆ ಬರೆ ಹಾಕಿದ‌ ತಾಯಿ, ಮತ್ತೊಂದೆಡೆ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿದ ಪತಿ!

ಮನೆ ಕೊಡಿ ಇಲ್ಲಾಂದ್ರೆ ದಯಾಮರಣ ಕೊಡಿ

ನನಗೆ ಬದುಕುವುದಕ್ಕೆ ಒಂದು ಮನೆ ಕೊಡಿ. ಅಥವಾ ದಯಾಮರಣವನ್ನಾದರೂ ಕಲ್ಪಿಸಿ ಎಂದು ರಿಹಾನ ಒತ್ತಾಯಿಸಿದ್ದಾರೆ. ನಾನು ಮಂಗಳಮುಖಿ ಎನ್ನುವ ಒಂದೇ ಕಾರಣಕ್ಕೆ ನನಗೆ ಯಾರು ಮನೆಯನ್ನು ಬಾಡಿಗೆ ಕೊಡುತ್ತಿಲ್ಲ. ಹೀಗಾಗಿ ನನಗೆ ವಾಸಿಸುವುದಕ್ಕೆ ಒಂದು ಮನೆ ಇಲ್ಲ. ನಾನು ಸಾಯುವುದಕ್ಕೆ ದಯಾಮರಣಕ್ಕೆ ಅವಕಾಶ ನೀಡಿ ಎಂದು ಕೊಡಗು ಜಿಲ್ಲಾಧಿಕಾರಿಗೆ ಮಾಡಿದ್ದೇನೆ ಅಂದ್ರು.

Mangalmukhi appeals to Kodagu District Collector to give space or euthanasia
ದಯಾಮರಣಕ್ಕೆ ರಿಹಾನ ಅರ್ಜಿ


ವಿಡಿಯೋ ಮಾಡಿ ರಿಹಾನ ಆಕ್ರೋಶ

ಜಿಲ್ಲಾಧಿಕಾರಿಗೆ ಪತ್ರ ಬರೆದ ಬಳಿಕ ಜಿಲ್ಲಾಧಿಕಾರಿ ಅವರ ಪ್ರತಿಕ್ರಿಯೆಯಿಂದ ರಿಹಾನ ಆಕ್ರೋಶ ಹೊರಹಾಕಿದ್ದಾರೆ. ವಿಡಿಯೋ ಒಂದನ್ನು ಮಾಡಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: ಮಕ್ಕಳು ಅಸ್ವಸ್ಥರಾಗಿದ್ದಕ್ಕೆ ಶಾಲೆಯ ಆಡಳಿತ ಮಂಡಳಿ ಹಿಂಗಾ ಹೇಳೋದು! ಪೋಷಕರ ಆಕ್ರೋಶ

ಬದುಕು ಸಾಕಾಗಿ ಹೋಗಿದೆ

ಮಂಗಳಮುಖಿ ಎಂದು ನಮ್ಮ ಮನೆಯವರು ನನ್ನನ್ನು ಗೌರವದಿಂದ ನೋಡುತ್ತಿಲ್ಲ. ಹೀಗಾಗಿ ನಾನು ನಮ್ಮ ಮನೆಯಿಂದಲೂ ಹೊರಗೆ ಉಳಿದಿದ್ದೇನೆ. ಇತ್ತ ಮಡಿಕೇರಿಯಲ್ಲೂ ಎಷ್ಟು ಹುಡುಕಿ ಯಾರನ್ನು ಅಂಗಲಾಚಿ ಬೇಡಿಕೊಂಡರೂ ನನಗೆ ಮನೆಯನ್ನು ಬಾಡಿಗೆ ನೀಡುತ್ತಿಲ್ಲ. ಭಿಕ್ಷೆ ಬೇಡಿ ಬದುಕುತ್ತಿರುವ ನನಗೆ ಬದುಕು ಸಾಕಾಗಿ ಹೋಗಿದೆ ಎಂದಿದ್ದಾರೆ.

ಡಿಸಿ ಒಂದು ವ್ಯವಸ್ಥೆ ಕಲ್ಪಿಸಲಿ

ಮಾನ್ಯ ಜಿಲ್ಲಾಧಿಕಾರಿ ಅವರು ನನಗೆ ಒಂದು ಮನೆ ಕೊಡಿಸುವ ವ್ಯವಸ್ಥೆ ಮಾಡಲಿ. ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಲಿ ಎಂದು ರಿಹಾನ ಮನವಿ ಮಾಡಿದ್ದಾರೆ. ಈ ಹಿಂದೆಯೂ ಮನೆ ಕೊಡುವಂತೆ ಜಿಲ್ಲಾಧಿಕಾರಿ ಅವರಿಗೆ ಐದಾರು ಬಾರಿ ಮನವಿ ಮಾಡಿದ್ದೇನೆ. ಆದರೆ ಇದುವರೆಗೆ ಯಾವುದೇ ಪ್ರತಿಕ್ರಿಯೇ ಸಿಕ್ಕಿರಲಿಲ್ಲ.

ನಾವು ಭಾರತೀಯ ಪ್ರಜೆಗಳಲ್ಲವೇ?

ಇವತ್ತು ಮನೆ ಕೇಳಲು ಪುನಃ ಮನವಿ ಮಾಡಿದರೆ, ಜಿಲ್ಲಾಧಿಕಾರಿಯವರು ಇಂತಹ ಅರ್ಜಿಗಳು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಒಬ್ಬರು ಜಿಲ್ಲಾಧಿಕಾರಿಯವರೇ ಇಂತಹ ಮಾತು ಹೇಳಿದರೆ ನಾವು ಬದುಕುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ನಾವು ಭಾರತೀಯ ಪ್ರಜೆಗಳಲ್ಲವೇ? ನಮಗೆ ಎಲ್ಲಾ ಹಕ್ಕುಗಳಿಲ್ಲವೇ? ಎಂದು ರಿಹಾನ ವ್ಯವಸ್ಥೆಯನ್ನು ಪ್ರಶ್ನೆ ಮಾಡಿದ್ದಾರೆ.

ಒಂದೆಡೆ ಇಡೀ ಸಮಾಜ ನಮ್ಮನ್ನು ತಪ್ಪು ಭಾವನೆಗಳಿಂದ ನೋಡುತ್ತಿದೆ. ಕೊನೆ ಪಕ್ಷ ಕಾನೂನಿನಲ್ಲಿ ನಮಗೆ ನೆಮ್ಮದಿ ಬದುಕು ನಡೆಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಬಳಿ ಹೋದೆ. ಆದರೆ  ಜಿಲ್ಲಾಧಿಕಾರಿಯವರೇ ನಮಗೊಂದು ಮನೆ ಕೊಡಲು ಸಾಧ್ಯವಿಲ್ಲ ಎಂದ ಮೇಲೆ ನನಗೆ ಬದುಕು ಬೇಡ ಎನಿಸುವಂತಾಗಿದೆ. ದಯಮಾಡಿ ಮನೆ ಕೊಡಿ ಇಲ್ಲ, ದಯಾಮರಣಕ್ಕೆ ಅವಕಾಶ ನೀಡಿ ಎಂದು ರಿಹಾನ ಮನವಿ ಜೊತೆಗೆ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
Published by:Thara Kemmara
First published: