Mandya: ಮೇಲುಕೋಟೆಯಲ್ಲಿ ಶ್ರೀಕೃಷ್ಣ ರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ; 10 ದಿನ ನಡೆಯಲಿದೆ ಆಷಾಢ ಜಾತ್ರೆ

ಪ್ರಮುಖ ದಿನವಾದ ಜುಲೈ 29ರ ರಾತ್ರಿ ಚೆಲುವ ನಾರಾಯಣಸ್ವಾಮಿಗೆ   ಶ್ರೀಕೃಷ್ಣ ರಾಜಮುಡಿ ಕಿರೀಟಧಾರಣ ಮಹೋತ್ಸವ ನೆರವೇರಲಿದ್ದು, ಕೋವಿಡ್ -19 ಮಾರ್ಗಸೂಚಿಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ದೇವಾಲಯದ ಒಳಾಂಗಣದಲ್ಲಿ ಉತ್ಸವ ನಡೆಯಲಿದೆ.

ಶ್ರೀಕೃಷ್ಣ ರಾಜಮುಡಿ ಬ್ರಹ್ಮೋತ್ಸವ

ಶ್ರೀಕೃಷ್ಣ ರಾಜಮುಡಿ ಬ್ರಹ್ಮೋತ್ಸವ

 • Share this:
  ಮಂಡ್ಯ(ಜು.26): ವಿಶ್ವ ವಿಖ್ಯಾತ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿಗೆ ಆಷಾಢ ಜಾತ್ರಾಮಹೋತ್ಸವ ಜು, 24 ರಿಂದ ಆರಂಭವಾಗಿದೆ. ಇದರ  ಅಂಗವಾಗಿ ಭಾನುವಾರ ನಡೆದ ಮಹಾಭಿಷೇಕದ ವೇಳೆ ಹರಿಷಿಣ ಅಲಂಕಾರ ಮಾಡಲಾಗಿತ್ತು.  ಆಚಾರ್ಯರಾಮಾನುಜರು ಮತ್ತು ಉತ್ಸವಮೂರ್ತಿ ಹಾಗೂ ಆಳ್ವಾರರಿಗೂ ಅಭಿಷೇಕ ನೆರವೇರಿಸಲಾಯಿತು.  

  ಇತಿಹಾಸ ಪುರಾಣ ಪ್ರಸಿದ್ದ ಮೇಲುಕೋಟೆ ಯಲ್ಲಿ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ರವರ ಜನ್ಮ ವರ್ಧಂತಿ

  ಮೈಸೂರು ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ರವರ ಜನ್ಮ ವರ್ಧಂತಿ ಶುಭದಿನವಾದ ಭಾನುವಾರ ಮೂಲಮೂರ್ತಿ ಚೆಲುವನಾರಾಯಣಸ್ವಾಮಿಗೆ ವೇದ ಮಂತ್ರಗಳೊಂದಿಗೆ ಮಹಾಭಿಷೇಕ ನೆರವೇರುವುದರೊಂದಿಗೆ ಶ್ರೀಕೃಷ್ಣ ರಾಜಮುಡಿ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು. ಕೋವಿಡ್ 19 ನಿಯಮಪಾಲನೆ ಹಾಗೂ ಧಾರ್ಮಿಕ ಕೈಂಕರ್ಯ ಸುಗಮವಾಗಿ ನಡೆಸುವ ಸಲುವಾಗಿ ಇಡೀ ದಿನ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

  ಬ್ರಹ್ಮದೇವನಿಂದ ಆರಾಧಿಸಲ್ಪಟ್ಟ ದಿವ್ಯ ಮಂಗಳರೂಪನಾದ ಚೆಲುವನಾರಾಯಣನಿಗೆ ವರ್ಷದಲ್ಲಿ ಎರಡು ಸಲ ಮಾತ್ರ ಅಭಿಷೇಕ ನೆರವೇರುವ ಸಂಪ್ರದಾಯವಿದ್ದು, ದ್ವಾದಶಾರಾಧನೆಯೊಂದಿಗೆ ವಿವಿಧ ಹಾಲು, ಮೊಸರು, ಜೇನು, ಶುದ್ಧೋದಕ, ಎಳನೀರು ಮುಂತಾದ ಮಂಗಳ ದ್ರವ್ಯಗಳಿಂದ ವೇದ. ಘೋಷದೊಂದಿಗೆ ಅಭಿಷೇಕ ನೆರವೇರಿಸಿ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ನಂತರ ಅರಿಷಿಣ ಅಲಂಕಾರ ಮಾಡಲಾಯಿತು.

  ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ

  ಪರಿಚಾರಕ ಪಾರ್ಥಸಾರಥಿ ಮಹಾಕುಂಬವನ್ನು ವೇದ ಮಂತ್ರಗಳ ಪಾರಾಯಣದೊಂದಿಗೆ ಒಳ ಪ್ರಾಕಾರದಲ್ಲಿ ಮೆರವಣಿಗೆಯಲ್ಲಿ ತಂದ ನಂತರ ಮಹಾ ಕುಂಬಾಭಿಷೇಕಷೇಕ ಪೂರ್ಣಗೊಳಿಸಲಾಯಿತು. ಅರ್ಚಕ ವರದರಾಜಭಟ್ ಹೋಮ, ಯಾಗಶಾಲೆ ಸೇರಿದಂತೆ ಆಗಮೋಕ್ತ ವಿಧಿವಿಧಾನಗಳನ್ನು ನೆರವೇರಿಸಿದರು. ಸ್ಥಾನೀಕರಾದ ಕರಗಂ ನಾರಾಯಣಯ್ಯಂಗಾರ್, ಶ್ರೀ ನಿವಾಸ ನರಸಿಂಹನ್ ಗುರೂಜಿ, ಮುಕುಂದನ್, ಪ್ರಸನ್ನ. ಕರಗಂ ರಂಗಪ್ರಿಯ, ಮಹಾಭಿಷೇಕದ ಕೈಂಕರ್ಯಗಳನ್ನು ನೆರವೇರಿಸಿದರು. ಅಮ್ಮನವರ ಸನ್ನಿಧಿಯಲ್ಲಿ ಮಹಾಲಕ್ಷ್ಮಿಗೆ ಅರ್ಚಕ ನಾರಾಯಣ ಭಟ್ಟರ್, ಸ್ಥಾನೀಕ ತಿರುನಾರಾಯಣ ಅಯ್ಯಂಗಾರ್ ಮಹಾಭಿಷೇಕದ ವಿಧಿವಿಧಾನ ನೆರವೇರಿಸಿದರು. ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಗಳಮ್ಮ ಹಾಜರಿದ್ದರು.

  ಮಹಾರಾಜರ ಭಕ್ತ ವಿಗ್ರಹಕ್ಕೆ ವಿಶೇಷ ಪೂಜೆ

  ಜನ್ಮ ವರ್ಧಂತಿಯ ನಿಮ್ಮಿತ್ತ ದೇವಾಲಯದ ಪಾತಾಳಾಂಕಣದಲ್ಲಿರುವ ಮೈಸೂರು ಮಹಾರಾಜರಾಗಿದ್ದ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಮತ್ತು ನಾಲ್ವರು ರಾಣಿಯರ ಭಕ್ತ ವಿಗ್ರಹಗಳನ್ನು ವಿಶೇಷವಾಗಿ ಅಲಂಕಾರ ಮಾಡಿ ಗೌರವ ಅರ್ಪಿಸಿದ ನಂತರ ಸ್ವಾಮಿಯ ಕಲ್ಯಾಣೋತ್ಸವ ಕೈಂಕರ್ಯಗಳನ್ನು ಆರಂಭಿಸಲಾಯಿತು. ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ವಜ್ರ ಖಚಿತ ಕೃಷ್ಣರಾಜಮುಡಿ ಕಿರೀಟ ಕೊಡುಗೆ ನೀಡಿ ಆಷಾಡ ಜಾತ್ರಾಮಹೋತ್ಸವ ಆರಂಭಿಸುವ ಜೊತೆಗೆ ಕಲ್ಯಾಣಿಯ ಸಮುಚ್ಚಯದಲ್ಲಿ 64 ವಿದ್ಯೆಗಳನ್ನು ಬಿಂಬಿಸುವ 16 ಮಂಟಪಗಳ ಭವ್ಯವಾದ ಭುವನೇಶ್ವರಿ ಮಂಟಪವನ್ನು ನಿರ್ಮಿಸಿರುವುದನ್ನು ಸ್ಮರಿಸಿ ರಾಜಾಶೀರ್ವಾದ ನೆರವೇರಿಸಲಾಯಿತು.

  ಇದನ್ನೂ ಓದಿ:BS Yediyurappa Resigns: ಬಿಎಸ್​ವೈ ಈಗ ಹಂಗಾಮಿ ಸಿಎಂ; ಹಂಗಾಮಿ ಮುಖ್ಯಮಂತ್ರಿಗೆ ಏನೆಲ್ಲಾ ಅಧಿಕಾರ ಇರುತ್ತೆ?

  ಶ್ರೀಕೃಷ್ಣರಾಜಮುಡಿ ಉತ್ಸವ

  ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಆರಂಭಿಸಿರುವ ಬ್ರಹ್ಮೋತ್ಸವ ಜು.24ರ ಅಂಕುರಾರಗಪಣೆಯೊಂದಿಗೆ ಪ್ರಾರಂಭವಾಗಿದೆ. ಆಗಸ್ಟ್ ನಾಲ್ಕರ ಪುಷ್ಪ ಯಾಗದ ವರೆಗೆ 10 ದಿನಗಳ ಕಾಲ ನೆರವೇರಲಿದೆ. ಹತ್ತು ದಿನಗಳ ಕಾಲದ ಬ್ರಹ್ಮೋತ್ಸವ ದಲ್ಲಿ ಇಂದು ನಡೆದ ಮಹಾಭಿಷೇಕ ಮತ್ತು ಕಲ್ಯಾಣೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಇನ್ನು ಪ್ರಮುಖ ದಿನವಾದ ಜುಲೈ 29ರ ರಾತ್ರಿ ಚೆಲುವ ನಾರಾಯಣಸ್ವಾಮಿಗೆ   ಶ್ರೀಕೃಷ್ಣ ರಾಜಮುಡಿ ಕಿರೀಟಧಾರಣ ಮಹೋತ್ಸವ ನೆರವೇರಲಿದ್ದು, ಕೋವಿಡ್ -19 ಮಾರ್ಗಸೂಚಿಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ದೇವಾಲಯದ ಒಳಾಂಗಣದಲ್ಲಿ ಉತ್ಸವ ನಡೆಯಲಿದೆ.

  (ವರದಿ: ಸುನಿಲ್ ಕುಮಾರ್)
  Published by:Latha CG
  First published: