ಮಂಡ್ಯ ರಾಜಕಾರಣಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಪ್ರವೇಶ; ಬದಲಾಗುತ್ತಾ ಬಿಜೆಪಿ ಲಕ್?

ಕೆ.ಆರ್. ಪೇಟೆಯ ಬೂಕನಕೆರೆಯಲ್ಲಿ ಜನಿಸಿದ ಯಡಿಯೂರಪ್ಪ ಅವರಿಗೆ ತಮ್ಮ ತವರು ಮಂಡ್ಯದಲ್ಲಿ ಕಮಲ ಅರಳಿಸಲು ಸಾಧ್ಯವಾಗಿರಲಿಲ್ಲ. ಈಗ ಅವರ ಮಗ ವಿಜಯೇಂದ್ರ ಅವರು ಅಖಾಡಕ್ಕೆ ಇಳಿದಿರುವುದು ಕುತೂಹಲ ಮೂಡಿಸಿದೆ.

Vijayasarthy SN | news18
Updated:February 11, 2019, 1:52 PM IST
ಮಂಡ್ಯ ರಾಜಕಾರಣಕ್ಕೆ ಬಿಎಸ್​ವೈ ಪುತ್ರ ವಿಜಯೇಂದ್ರ ಪ್ರವೇಶ; ಬದಲಾಗುತ್ತಾ ಬಿಜೆಪಿ ಲಕ್?
ಬಿ.ವೈ.ವಿಜಯೇಂದ್ರ
Vijayasarthy SN | news18
Updated: February 11, 2019, 1:52 PM IST
- ರಾಘವೇಂದ್ರ ಗಂಜಾಮ್,

ಮಂಡ್ಯ(ಫೆ. 11): ಸಕ್ಕರೆ ನಾಡಿನ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿ ರಾಜಕಾರಣದಲ್ಲಿ ಬಿಜೆಪಿಗಿರುವ ಸ್ಥಾನ ಅಷ್ಟಕಷ್ಟೇ. ಆಟಕ್ಕುಂಟ ಲೆಕ್ಕಕ್ಕಿಲ್ಲ ಎಂಬುದು ಮಂಡ್ಯ ಬಿಜೆಪಿಯ ಕಥೆ. ಮಂಡ್ಯದಲ್ಲಿ ಕಮಲ ಅರಳಿಸಲು ಎಷ್ಟೇ ಪ್ರಯತ್ನ ಪಟ್ಟರೂ ತೆನೆ ಮತ್ತು ಕೈ ಭದ್ರಕೋಟೆಯಲ್ಲಿ ಬಿಲ ತೋಡಲೂ ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ತಿಕ್ಕಾಟ ಹಾಗೂ ಸುಮಲತಾ ರಂಗ ಪ್ರವೇಶದಿಂದ ಮಂಡ್ಯದ ಬಿಜೆಪಿಗೆ ಹೊಸ ಚಿಗುರಿಸಿದೆ. ಇದೇ ಹೊತ್ತಿನಲ್ಲಿ ಯಡಿಯೂರಪ್ಪ ಅವರ ಕಿರಿಯ ಮಗ ಬಿ.ವೈ. ವಿಜಯೇಂದ್ರ ಅವರು ಮಂಡ್ಯದ ಅಖಾಡಕ್ಕೆ ಇಳಿದಿರುವ ಸುದ್ದಿ ಕೇಳಿಬಂದಿದೆ.

ಮಂಡ್ಯ ನಗರದ ಎಸ್​ಬಿ ಸಮುದಾಯ ಭವನದಲ್ಲಿ ಇಂದು ನಡೆಯಲಿರುವ ಬಿಜೆಪಿ ಸಭೆಯಲ್ಲಿ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಲಿದ್ದಾರೆ. ಲೋಕಸಭೆಯ ಚುನಾವಣಾ ಕಾರ್ಯತಂತ್ರದ ಕುರಿತು ಕಾರ್ಯಕರ್ತರ ಜೊತೆ ವಿಜಯೇಂದ್ರ ಚರ್ಚೆ ನಡೆಸಲಿದ್ದಾರೆ. ಹಾಗೆಯೇ, ರಾಜಕಾರಣಕ್ಕೆ ಧುಮುಕಬೇಕೆಂದಿರುವ ಸುಮಲತಾ ಅಂಬರೀಷ್ ಅವರನ್ನು ಬಿಜೆಪಿಗೆ ಕರೆತರಲು ವಿಜಯೇಂದ್ರ ಯತ್ನಿಸುವ ಸಾಧ್ಯತೆಯೂ ಇದೆ. ಒಂದು ವೇಳೆ, ಸುಮಲತಾ ಅವರನ್ನು ಬಿಜೆಪಿಗೆ ಕರೆತಂದದ್ದೇ ಆದರೆ ಮಂಡ್ಯದಲ್ಲಿ ಕಮಲ ಅರಳಿಸುವ ಕೆಲಸ ತುಸು ಸುಗಮವಾಗಬಹುದೆನ್ನಲಾಗಿದೆ.

ಮಂಡ್ಯ ಜಿಲ್ಲೆಯು ಬಿ.ಎಸ್. ಯಡಿಯೂರಪ್ಪ ಅವರ ತವರು ಕೂಡ ಹೌದು. ಈ ಹಿನ್ನೆಲೆಯಲ್ಲಿ ಅವರ ಮಗ ವಿಜಯೇಂದ್ರ ಅವರು ಮಂಡ್ಯ ರಾಜಕಾರಣಕ್ಕೆ ಕಾಲಿಟ್ಟಿರುವುದು ಕುತೂಹಲ ಮೂಡಿಸಿದೆ. ವಿಜಯೇಂದ್ರ ಅವರು ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೆಲ ದಿನಗಳ ಕಾಲ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಿಕ್ಕ ಅಭೂತಪೂರ್ವ ಸ್ಪಂದನೆಯು ಹಲವರ ಹುಬ್ಬೇರಿಸಿತ್ತು. ಅವರೇ ಅಭ್ಯರ್ಥಿಯಾಗಿ ವರುಣಾದಲ್ಲಿ ನಿಂತು ಗೆಲ್ಲಬಹುದೆಂಬ ನಿರೀಕ್ಷೆಗಳು ಹುಟ್ಟಿದ್ದವು. ಆದರೆ, ಕಾರಣಾಂತರದಿಂದ ಅವರು ಅಭ್ಯರ್ಥಿಯಾಗಲಿಲ್ಲ. ಅದೇನೇ ಆದರೂ ವಿಜಯೇಂದ್ರ ತೋರಿದ ಸಂಘಟನಾತ್ಮಕ ಚಾತುರ್ಯವು ಸಾಕಷ್ಟು ಗಮನ ಸೆಳೆದಿತ್ತು.

ಈಗ ಅದೇ ಮಟ್ಟಿಗಿನ ಪ್ರಭಾವವನ್ನು ವಿಜಯೇಂದ್ರ ಅವರು ಮಂಡ್ಯದಲ್ಲೂ ತೋರುತ್ತಾರಾ ಎಂಬುದು ಪ್ರಶ್ನೆ. ಎಸ್.ಎಂ. ಕೃಷ್ಣ ಅವರ ವರ್ಚಸ್ಸನ್ನು ಬಳಸಿಕೊಂಡು ಅವರು ಮಂಡ್ಯದಲ್ಲಿ ಬಿಜೆಪಿಗೆ ಹೊಸ ಕಾಯಕಲ್ಪ ಕಟ್ಟಿಕೊಡಬಲ್ಲರಾ ಎಂಬ ಕುತೂಹಲವೂ ಇದೆ.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...