ಮೈಸೂರು: ಯಾವುದೇ ಪಕ್ಷ ಸೇರುವ ವಿಚಾರದಲ್ಲಿ ನಾನು ಈವರೆಗೂ ನ್ಯೂಟ್ರಲ್ ಆಗೇ ಇದ್ದೀನಿ ಎಂದು ಮಂಡ್ಯ (Mandya MP) ಸಂಸದೆ ಸುಮಲತಾ ಅಂಬರೀಷ್ (Sumalatha Ambareesh) ಹೇಳಿದ್ದಾರೆ. ಮೈಸೂರಿಗೆ (Mysuru) ಬಂದಿದ್ದ ವೇಳೆ ಮುಂದಿನ ಚುನಾವಣೆಗೆ ಸ್ಪರ್ಧೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಪಿ ಚುನಾವಣೆ (Lokasabha Election) ಆಕಸ್ಮಿಕವಾಗಿ ನಡೆದಿದೆ. ಎಲ್ಲರೂ ಚುನಾವಣೆಗೆ ನಿಲ್ಲುವಂತೆ ಕೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.
'ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ'
ಇನ್ನು ಅಂಬರೀಷ್ ಬೆಂಬಲಿಗರು ಸಭೆ ನಡೆಸಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಂಬಲಿಗರು ಸಭೆ ನಡೆಸಿರುವ ಬಗ್ಗೆ ಗೊತ್ತಿಲ್ಲ. ಮಂಡ್ಯದ ಎಲ್ಲಾ ಕ್ಷೇತ್ರಗಳಲ್ಲಿ ಚುನಾವಣೆಗೆ ನಿಲ್ಲುವ ಒಲವು ಇದೆ. ಪುತ್ರ ಅಭಿಷೇಕ್ ಅಂಬರೀಷ್ ಚುನಾವಣೆಗೆ ಸ್ಪರ್ಧೆ ಮಾಡುವುದು ಅದು ಅವನಿಗೆ ಬಿಟ್ಟ ವಿಚಾರ. ಆದರೆ ನಾನು ಚುನಾವಣೆಗೆ ಬಂದಿದ್ದೇ ಆಕಸ್ಮಿಕ. ಹಣೆಯ ಬರಹ ಯಾವ ರೀತಿ ಆಗುತ್ತೋ, ಆ ರೀತಿ ಆಗುತ್ತೆ ಎಂದು ಹೇಳಿದರು.
ಇದನ್ನೂ ಓದಿ: Sumalatha Ambareesh: ಬಿಜೆಪಿ ಫ್ಲೆಕ್ಸ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಫೋಟೋ
ಮೈಸೂರಿನ ವಿಜಯನಗರದ ಕಾಳಿದಾಸ ರಸ್ತೆಯಿಂದ ಹೆಬ್ಬಾಳು ರಿಂಗ್ ರಸ್ತೆ ಸಂಪರ್ಕಿಸುವ ನಡುವಿನ 3.5 ಕಿ. ಮೀ ಉದ್ಧದ ರಸ್ತೆಗೆ ಅಂಬರೀಶ್ ರಸ್ತೆ ಎಂದು ನಾಮಕರಣ ಮಾಡಿರುವ ಹಿನ್ನೆಲೆ ನೂತನ ರಸ್ತೆಯ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದ ಸುಮಲತಾ, ಮೈಸೂರಿನ ರಸ್ತೆಯೊಂದಕ್ಕೆ ರೆಬೆಲ್ ಸ್ಟಾರ್ ಅಂಬರೀಷ್ ಅವರ ಹೆಸರು ಇಟ್ಟಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದೆ ಸುಮಲತಾ ಅಂಬರೀಷ್ ಅವರು, ಎದೆ ತುಂಬಿ ಬರುವ ಕ್ಷಣ ಇದು. ಅಂಬರೀಷ್ ಅವರಿಗೆ ಮೈಸೂರು ಇಷ್ಟವಾದ ಸ್ಥಳ. ಅಂಬರೀಷ್ ಅವರ ಕುಟುಂಬ ಮೈಸೂರಿನಲ್ಲಿದ್ದಾರೆ. ಹೀಗಾಗಿ 3.5 ಕಿಮೀ ಉದ್ದದ ರಸ್ತೆಗೆ ಅಂಬರೀಷ್ ಹೆಸರಿಟ್ಟಿದ್ದಾರೆ. ಅಭಿಮಾನಿಗಳ ಬೇಡಿಕೆಯಿಂದ ಈ ರಸ್ತೆಗೆ ಹೆಸರು ಬಂದಿದೆ ಎಂದು ಹೇಳಿದರು.
'ಮೈಸೂರು-ಬೆಂಗಳೂರು ರಸ್ತೆಗೆ ಒಡೆಯರ್ ಹೆಸರಿಡಲಿ'
ಇದೇ ವೇಳೆ ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನಟ ಅಂಬರೀಷ್ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದೆ ಸುಮಲತಾ ಅವರು, ಈ ರಸ್ತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿಡುವಂತೆ ನಾನೇ ಪತ್ರ ಬರೆದಿದ್ದೇನೆ. ಅವರ ಹೆಸರೇ ಸೂಕ್ತ ಎಂದು ಹೇಳಿದರು.
ಇದನ್ನೂ ಓದಿ: Mandya Politics: ಸುಮಲತಾ ಅಂಬರೀಶ್ ಆಪ್ತ ಬಿಜೆಪಿಗೆ ಸೇರ್ಪಡೆ; ಮಂಡ್ಯ ಕೋಟೆಯಲ್ಲಿ ಕಮಲ ಅರಳಿಸಲು ಪ್ಲಾನ್
ರಾಜಕಾರಣದಿಂದಲೇ ಜನಸೇವೆ ಮಾಡ್ಬೇಕಾ?
ಇದೇ ವೇಳೆ ಸುಮಲತಾ ಅಂಬರೀಷ್ ಜೊತೆಗೆ ಬಂದಿದ್ದ ಪುತ್ರ ಅಭಿಷೇಕ್ ಅಂಬರೀಷ್ ಮಾತನಾಡಿ, ನಮ್ಮ ತಂದೆಯ ಹೆಸರು ರಸ್ತೆಗೆ ಇಟ್ಟಿರುವುದು ತುಂಬಾ ಖುಷಿಯಾಗುತ್ತೆ. ಈ ರೀತಿಯ ಕಾರ್ಯಕ್ರಮದಿಂದ ಅಂಬರೀಷ್ ಅವರ ಮೇಲೆ ಜನರು ಎಷ್ಟು ಪ್ರೀತಿ ಇಟ್ಟಿದ್ದಾರೆ ಎಂಬುದು ಗೊತ್ತಾಗುತ್ತೆ ಎಂದರಲ್ಲದೇ, ಜನಸೇವೆ ಮಾಡಲು ಬಂದಿದ್ದೇವೆ. ರಾಜಕಾರಣದಿಂದಲೇ ಜನರ ಸೇವೆ ಮಾಡಬೇಕಾ? ಅಭಿಮಾನಿಗಳಿಂತ ಹೆಚ್ಚು ಪವರ್ ಯಾವುದೂ ಇಲ್ಲ ಎಂದರು.
ಇನ್ನು ಜನರು ಅವಕಾಶ ಕೊಟ್ಟರೆ ಜನಸೇವೆ ಮಾಡುತ್ತೇವೆ ಎಂದ ಅಭಿಷೇಕ್, 2023ರ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಮದ್ದೂರಿನಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ. ಹಲವಾರು ರೀತಿ ಸೇವೆ ಮಾಡಬಹುದು. ಚುನಾವಣೆ ಮೂಲಕವೇ ಮಾಡಬೇಕು ಅಂಥ ಅಲ್ಲ ಎಂದು ಅಭಿಷೇಕ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ