ದ್ವೇಷ ಇಲ್ಲಿಗೆ ಬಿಟ್ಟುಬಿಡಿ; ರೈತರ ಸಮಸ್ಯೆಗಳಿಗೆ ಜೊತೆಯಾಗಿ ಹೋರಾಡೋಣ: ಸ್ವಾಭಿಮಾನಿ ಸಮಾವೇಶದಲ್ಲಿ ಸುಮಲತಾ ಕರೆ

ನನಗೆ ಮಂಡ್ಯ ಮೊದಲು, ದೆಹಲಿ ನಂತರ. ಮಂಡ್ಯ ಜನರ ಸೇವೆ ಮಾಡುವುದಾಗಿ ಇಲ್ಲಿಯೇ ಈಗ ಪ್ರಮಾಣ ಮಾಡುತ್ತೇನೆ ಎಂದು ಸ್ವಾಭಿಮಾನಿ ಸಮಾವೇಶದಲ್ಲಿ ಸುಮಲತಾ ಅಂಬರೀಶ್ ಕರೆ.

news18
Updated:May 29, 2019, 8:26 PM IST
ದ್ವೇಷ ಇಲ್ಲಿಗೆ ಬಿಟ್ಟುಬಿಡಿ; ರೈತರ ಸಮಸ್ಯೆಗಳಿಗೆ ಜೊತೆಯಾಗಿ ಹೋರಾಡೋಣ: ಸ್ವಾಭಿಮಾನಿ ಸಮಾವೇಶದಲ್ಲಿ ಸುಮಲತಾ ಕರೆ
ಸುಮಲತಾ ಅಂಬರೀಶ್
  • News18
  • Last Updated: May 29, 2019, 8:26 PM IST
  • Share this:
ಮಂಡ್ಯ(ಮೇ 29): ಚುನಾವಣೆ ವೇಳೆ ಜಿದ್ದಾಜಿದ್ದಿ ನಡೆದು ಧ್ವೇಷದ ಮಾತುಗಳನ್ನ ಆಡಿದ್ದಾಗಿದೆ. ಈಗ ಅದೆಲ್ಲವನ್ನೂ ಮುಂದುವರಿಸದೇ ಇಲ್ಲಿಗೇ ಬಿಟ್ಟುಬಿಡಿ. ಮಂಡ್ಯದ ರೈತರ ಮತ್ತು ನೀರಿನ ಸಮಸ್ಯೆಗಳನ್ನ ಎದುರಿಸಲು ನನ್ನ ಜೊತೆಯಾಗಿ ನಿಲ್ಲಿ ಎಂದು ನೂತನ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಅವರು ತಮ್ಮ ವಿರೋಧಿಗಳಿಗೆ ಮನವಿ ಮಾಡಿದರು.

“ನಾನಿನ್ನೂ ಪ್ರಮಾಣ ವಚನ ಸ್ವೀಕರಿಸಿಲ್ಲ, ಆಗಲೇ ಏನೇನೋ ಮಾತನಾಡಲು ಆರಂಭಿಸಿದ್ಧಾರೆ. ಇದು ಅವರು ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ. ಚುನಾವಣೆ ವೇಳೆ ಟೀಕೆ ಮಾಡುವುದು, ನಿಂದನೆ ಮಾಡುವುದು ಮಾಮೂಲಿ. ನಮ್ಮ ಕಡೆಯಿಂದ ದರ್ಶನ್ ಆಗಲೀ, ಯಶ್ ಯಾಗಲೀ, ಅಭಿಷೇಕ್ ಆಗಲೀ ಒಂದೇ ಒಂದು ಕೆಟ್ಟ ಮಾತು ಆಡಿಲ್ಲ. ಈ ಯುದ್ಧದಲ್ಲಿ ನಾವು ಶಾಂತಿಯಿಂದ, ತಾಳ್ಮೆಯಿಂದ ಇದ್ದೆವು…. ಅವರು ಆಡಿರುವ ಮಾತುಗಳಿಗೆ ನಾವು ಉತ್ತರ ಕೊಡಲ್ಲ. ಜನರೇ ಉತ್ತರ ಕೊಡುತ್ತಾರೆ ಎಂದಿದ್ದೆ. ಈಗ ಈ ಉತ್ತರ ಕೊಟ್ಟಿರುವ ನಿಮಗೆ ನನ್ನ ವಂದನೆಗಳು” ಎಂದು ಮಂಡ್ಯ ಮತದಾರರಿಗೆ ಸುಮಲತಾ ಕೃತಜ್ಞತೆ ಸಲ್ಲಿಸಿದರು.

ಅಂಬರೀಶ್ ಅವರ ಹುಟ್ಟುಹಬ್ಬ ಹಾಗೂ ಲೋಕಸಭೆ ಚುನಾವಣೆ ಗೆಲುವಿನ ಹಿನ್ನೆಲೆಯಲ್ಲಿ ಇವತ್ತು ಇಲ್ಲಿ ಆಯೋಜಿಸಲಾಗಿದ್ದ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡುತ್ತಿದ್ದ ಸುಮಲತಾ ಅಂಬರೀಶ್ ಅವರು, ಜನರ ಪರ ಕೆಲಸ ಮಾಡಲು ತಾವು ಸದಾ ಸಿದ್ಧ ಎಂದು ಪಣತೊಟ್ಟರು.

ನಾನೇನು ಕೆಲಸ ಮಾಡಬೇಕೋ ಅದೆಲ್ಲವನ್ನೂ ಮಾಡುತ್ತೇನೆ. ಒಂದೇ ದಿನದಲ್ಲಿ ಎಲ್ಲಾ ಕೆಲಸ ಮಾಡಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ಕೊಡಿ. ಜನರ ಒಂದೊಂದು ಸಮಸ್ಯೆಯನ್ನೂ ಬಗೆಹರಿಸಲು ಯತ್ನಿಸುತ್ತೇನೆ ಎಂದು ಸುಮಲತಾ ಪ್ರಮಾಣ ಮಾಡಿದರು.

ತನಗೆ ಮಂಡ್ಯ ಮೊದಲ, ದಿಲ್ಲಿ ನಂತರ ಎಂದು ಹೇಳಿದ ಅವರು, ಮಂಡ್ಯದಲ್ಲಿ ತಾನು ಮೊದಲು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ದೆಹಲಿಯಲ್ಲಿ ನಂತರ ಪ್ರಮಾಣ ಮಾಡುತ್ತೇನೆ ಎಂದು ಹೇಳಿದರು.

ಸ್ವಾಭಿಮಾನ ಗೆದ್ದಿದೆ; ಮಂಡ್ಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ:

“ಮಂಡ್ಯದಲ್ಲಿ ಹಣ ಅಲ್ಲ, ಸ್ವಾಭಿಮಾನ ಮುಖ್ಯ ಎಂಬುದನ್ನು ನೀವು ತೋರಿಸಿದ್ದೀರ. ನಾನು ಸ್ವಾಭಿಮಾನದ ಭಿಕ್ಷೆಗೆ ಸೆರೆಗೊಡ್ಡಿ ಬೇಡಿದ್ದೆ. ನೀವು ಕೊಟ್ಟಿದ್ದೀರಾ. 52 ವರ್ಷಗಳ ನಂತರ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಗೆದ್ದಿರುವುದು ಈಗ ಮಾತ್ರವೇ… ಅಷ್ಟೇ ಅಲ್ಲ, ಮಂಡ್ಯದಲ್ಲಿ ಮಹಿಳೆಯೊಬ್ಬರು ಗೆದ್ದಿರುವುದು ಇದೇ ಮೊದಲು. ಈ ಚುನಾವಣೆಯಲ್ಲಿ ನೀವು ಇಷ್ಟೊಂದು ಇತಿಹಾಸ ಸೃಷ್ಟಿಸಿದ್ದೀರಿ” ಎಂದು ಮಂಡ್ಯ ಮತದಾರರಿಗೆ ಸುಮಲತಾ ಅಂಬರೀಶ್ ಧನ್ಯವಾದ ಅರ್ಪಿಸಿದರು.“ಮಾರ್ಚ್ 20 ನಾಮಪತ್ರ ಸಲ್ಲಿಸಿದ ದಿನ ಲಕ್ಷಾಂತರ ಜನರು ಇದೇ ವೇದಿಕೆಗೆ ಬಂದಿದ್ದಿರಿ. ಆವತ್ತು ನನ್ನನ್ನ ಮೊದಲ ಬಾರಿಗೆ ಪರಿಚಯ ಮಾಡಿಕೊಂಡಿದ್ದೆ. ನಾನು ಯಾರು ಎಂಬ ಪ್ರಶ್ನೆಯನ್ನ ನಿಮ್ಮ ಮುಂದಿಟ್ಟೆ. ನನ್ನ ಅಸ್ತಿತ್ವವೇನು? ನಾನು ಯಾರು? ನಾನು ಈ ಮಣ್ಣಿನ ಸೊಸೆಯೇ, ಅಂಬರೀಷ್ ಅವರ ಧರ್ಮಪತ್ನಿಯೇ? ಸುಮಲತಾ ಅಂಬರೀಷ್ ಈಗ ಮಂಡ್ಯದ ಲೋಕಸಭೆ ಸಂಸದೆ. ನೀವು ನನ್ನನ್ನ ನಂಬಿ ಜವಾಬ್ದಾರಿ ಕೊಟ್ಟಿದ್ದೀರ” ಎಂದು ಸುಮಲತಾ ಅವರು ನಾಮಪತ್ರ ಸಲ್ಲಿಕೆ ದಿನದ ಸಂದರ್ಭವನ್ನು ನೆನಪಿಸಿಕೊಂಡರು.

ಈ ಗೆಲುವು ನನ್ನದಲ್ಲ….

“ಈ ಗೆಲುವು ನನ್ನದಲ್ಲ, ನಿಮ್ಮ ಅಂಬರೀಷಣ್ಣನದ್ದು. ಈ ಗೆಲುವು ಈ ಜಿಲ್ಲೆಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ ಪ್ರತಿಯೊಬ್ಬ ಕಾರ್ಯಕರ್ತರದ್ದು… ಹೋದ ಕಡೆಯಲ್ಲೆಲ್ಲಾ ಆರತಿ ಎತ್ತಿ ಬರಮಾಡಿಕೊಂಡ ಸ್ವಾಭಿಮಾನಿ ಮಹಿಳೆಯರದ್ದು… ಈ ಗೆಲುವು ಪಕ್ಷ ಬಿಟ್ಟು ಬಂದ ಕಾಂಗ್ರೆಸ್ ಕಾರ್ಯಕರ್ತರದ್ದು… ರೈತರನ್ನು ಒಗ್ಗೂಡಿಸಿದ ರಾಜ್ಯ ರೈತ ಸಂಘದ ಗೆಲುವು… ರಾಜ್ಯದಲ್ಲಿ 27 ಕ್ಷೇತ್ರದಲ್ಲಿ ಅಭ್ಯರ್ಥಿ ನಿಲ್ಲಿಸಿ, ಮಂಡ್ಯದಲ್ಲಿ ಅಭ್ಯರ್ಥಿ ಹಾಕದೇ ನನಗೆ ಬೆಂಬಲ ಕೊಟ್ಟ ಬಿಜೆಪಿಯ ಗೆಲುವು ಇದು…” ಎಂದು ಸುಮಲತಾ ತಮ್ಮ ಗೆಲುವಿಗೆ ಕಾರಣರಾದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಅಂಬಿ ನಡೆದ ದಾರಿಯಲ್ಲೇ ಸಾಗುವೆ..:

ಅಂಬರೀಷ್ ನಡೆದ ದಾರಿಯಲ್ಲೇ ಸಾಗುತ್ತೇನೆ. ಅವರ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲ. ಕಾವೇರಿ ಸಮಸ್ಯೆ ಬಂದಾಗ ರೈತರ ಸಮಸ್ಯೆಗೆ ಸ್ಪಂದಿಸಿ ಕೇಂದ್ರ ಮಂತ್ರಿ ಸ್ಥಾನವನ್ನೇ ಬಿಟ್ಟು ಬಂದಿದ್ದರು. ನಾನೂ ಕೂಡ ಅದೇ ದಾರಿಯಲ್ಲಿ ನಡೆದು ಹೋಗುತ್ತೇನೆ ಎಂದು ಸುಮಲತಾ ಅಂಬರೀಶ್ ಶಪಥ ಮಾಡಿದರು.

ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದ ಹಬ್ಬವಾಗಿಯೇ ಆಚರಿಸುತ್ತಿದ್ದಿರಿ. ಇವತ್ತಿನಿಂದ ಅಂಬರೀಶ್ ಹುಟ್ಟುಹಬ್ಬವನ್ನು ಮಂಡ್ಯದಲ್ಲೇ ಆಚರಿಸುತ್ತೇನೆ ಎಂದು ಸುಮಲತಾ ಪ್ರಮಾಣ ಮಾಡಿದರು.

ಅಭಿಷೇಕ್ ಬೆಳೆಸಲು ಮನವಿ:

ಜೂನ್ 31ರಂದು ಬಿಡುಗಡೆಯಾಗಲಿರುವ ‘ಅಮರ್’ ಸಿನಿಮಾದಲ್ಲಿ ಸ್ಯಾಂಡಲ್​ವುಡ್​ಗೆ ಪದಾರ್ಪಣೆ ಮಾಡುತ್ತಿರುವ ತಮ್ಮ ಮಗ ಅಭಿಷೇಕ್ ಅಂಬರೀಶ್ ಅವರಿಗೆ ಪ್ರೋತ್ಸಾಹ ನೀಡಬೇಕೆಂದು ಇದೇ ವೇಳೆ ಸುಮಲತಾ ಮನವಿ ಮಾಡಿಕೊಂಡರು.

“ಅಭಿಷೇಕ್ ಅವರ ಅಮರ್ ಸಿನಿಮಾ ನೋಡುವುದು ಅಂಬರೀಶ್ ಅವರ ಕೊನೆಯ ಆಸೆಯಾಗಿತ್ತು. ಆ ಸಿನಿಮಾ ನೋಡಬೇಕು ಎಂದು ಸಾಕಷ್ಟು ಹಾತೊರೆಯುತ್ತಿದ್ದರು. ಅಭಿಷೇಕ್​ನ ಸಿನಿಮಾಗೆ ಆಶೀರ್ವದಿಸಿ ನೀವೇ ಆತನನ್ನು ಬೆಳೆಸಬೇಕು. ಅಭಿಷೇಕ್ ನಿಮ್ಮ ಮನೆಯ ಮಗ… ನಿಮ್ಮೆಲ್ಲರಿಗೂ ಪಾದಾಬಿ ವಂದನೆಗಳು” ಎಂದು ಸುಮಲತಾ ಹೇಳಿದರು.

ಈ ಸ್ವಾಭಿಮಾನಿ ಸಮಾವೇಶದಲ್ಲಿ ಸುಮಲತಾ ಅಂಬರೀಶ್ ಅವರ ಜೊತೆ ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ನೆನಪಿರಲಿ ಪ್ರೇಮ್, ದೊಡ್ಡಣ್ಣ, ರಾಕ್​ಲೈನ್ ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.
First published:May 29, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading