ಅಪೆಂಡಿಸ್ ಇಲ್ದಿದ್ರೂ ಮಾಡ್ತಾರಂತೆ ಆಪರೇಷನ್; ಮಂಡ್ಯ ಮಿಮ್ಸ್ ವೈದ್ಯನ ವಿರುದ್ಧ ಆರೋಪ

ಮಂಡ್ಯ ಮಿಮ್ಸ್ ಆಸ್ಪತ್ರೆಯ ವೈದ್ಯನೋರ್ವನ ವಿರುದ್ದ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಡಾ. ಗೋಪಾಲಕೃಷ್ಣ ಎಂಬುವರು ಹಣದಾಸೆಗೆ ಖಾಸಗಿ ಆಸ್ಪತ್ರೆಯ ಪ್ರಯೋಗಾಲಯದ ಜೊತೆ ಕಮಿಷನ್ ದಂಧೆ ನಡೆಸ್ತಿದ್ದಾರೆ. ಅಲ್ಲದೇ, ಅಪೆಂಡಿಸ್ ಇಲ್ಲದಿದ್ದರೂ ರೋಗಿಗಳಿಗೆ ಸುಖಾ ಸುಮ್ಮನೆ ಆಪರೇಷನ್ ಮಾಡಿ ಹಣ ಸುಲಿಗೆ ಮಾಡ್ತಿರೋದಾಗಿ ಮಂಡ್ಯದ ಆರ್ಟಿಐ ಕಾರ್ಯಕರ್ತ ದಾಖಲೆ ಸಮೇತ ಆರೋಪಿಸಿ ಜಿಲ್ಲಾ ಉಸ್ತುವಾರಿ ಸಚಿವ ಸೇರಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.


Updated:September 9, 2018, 7:25 PM IST
ಅಪೆಂಡಿಸ್ ಇಲ್ದಿದ್ರೂ ಮಾಡ್ತಾರಂತೆ ಆಪರೇಷನ್; ಮಂಡ್ಯ ಮಿಮ್ಸ್ ವೈದ್ಯನ ವಿರುದ್ಧ ಆರೋಪ
ಮಂಡ್ಯ ಮಿಮ್ಸ್ ಆವರಣ

Updated: September 9, 2018, 7:25 PM IST
- ರಾಘವೇಂದ್ರ ಗಂಜಾಮ್, ನ್ಯೂಸ್18 ಕನ್ನಡ

ಮಂಡ್ಯ(ಸೆ. 09): ಅಪೆಂಡಿಸ್ ಇಲ್ಲದಿದ್ದರೂ ಆಪರೇಷನ್ ಮಾಡ್ತಾರಂತೆ ಈ ವೈದ್ಯ ಭೂಪ... ಮಂಡ್ಯದ ಮಿಮ್ಸ್ ವೈದ್ಯ ಡಾ. ಗೋಪಾಲಕೃಷ್ಣ ವಿರುದ್ದ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮಂಡ್ಯದ ಹಲ್ಲೆಗೆರೆಯ ಸಾಮಾಜಿಕ ಹೋರಾಟಗಾರ ಕೇಶವಮೂರ್ತಿ ಈ ಗಂಭೀರ ಆರೋಪ ಮಾಡಿದ್ದು ತಾನು‌ ನಡೆಸಿದ ಕುಟುಕು ಕಾರ್ಯಾಚರಣೆಯ ವಿಡಿಯೋ ದಾಖಲೆಯಲ್ಲಿ ಆ ವೈದ್ಯನ ಮುಖವಾಡ ಕಳಚಿದ್ದಾರೆ. ಈ ವೈದ್ಯನ ಬಳಿ ತಾನೇ ರೋಗಿಯಂತೆ ತೆರಳಿ ಹೊಟ್ಟೆನೋವೆಂದು ಹೇಳಿಕೊಂಡಿದ್ದಾನೆ. ಈ ವೇಳೆ ಡಾ. ಗೋಪಾಲಕೃಷ್ಣ ಇವ್ರನ್ನು ಪರೀಕ್ಷೆಯ ನೆಪದಲ್ಲಿ ಮಂಡ್ಯದ ಶ್ರೀನಿವಾಸ ಮತ್ತು ಬಾಲಾಕಿ ಖಾಸಗಿ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ್ದಾರೆ. ಪರೀಕ್ಷೆಯಲ್ಲಿ ಏನೂ ಇಲ್ಲವೆಂದು ತಿಳಿದು ಬಂದರೂ, ತನಗೆ ಭಯ ಹುಟ್ಟಿಸಿ ಆಪರೇಶಷನ್ ಮಾಡಿಸಲೇಬೇಕು ಎಂದು‌ ಹೇಳಿ ಆಪರೇಶನ್ ಖರ್ಚಿಗೆ 5 ಸಾವಿರ ಆಗಲಿದ್ದು, 1,500 ಸಾವಿರ ರೂ ಮುಂಗಡ  ಪಡೆದಿದ್ದಾರೆ. ಈ ದೃಶ್ಯ ಕೂಡ ಮೊಬೈಲ್​ನಲ್ಲಿ ಸೆರೆಯಾಗಿದೆ.

ಈ ಎಲ್ಲಾ ಸಾಕ್ಷ್ಯಾಧಾರಗಳೊಂದಿಗೆ ಇದೀಗ ಸಾಮಾಜಿಕ ಕಾರ್ಯಕರ್ತ ಕೇಶವ ಮೂರ್ತಿ ಅವರು ಜಿಲ್ಲಾ ಉಸ್ತುವಾರಿ ಸಚಿವ ಸೇರಿ ವೈದ್ಯಕೀಯ ಸಚಿವರು ಹಾಗೂ ಮಿಮ್ಸ್ ನಿರ್ದೇಶಕರಿಗೆ ದೂರು ನೀಡಿದ್ದು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೇ ತನಗೆ ಅಪೆಂಡಿಸೈಟಿಸ್ ಇದ್ದದ್ದೇ ಆದರೆ ಮಾಧ್ಯಮಗೆಳೆದುರೇ ತನಗೆ ಆ ವೈದ್ಯರು ಬಹಿರಂಗವಾಗಿ ಆಪರೇಷನ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಇನ್ನು, ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದ ಈ ರೀತಿಯ ಕಮೀಷನ್ ದಂಧೆ ಇದೀಗ ಸರ್ಕಾರಿ ಆಸ್ಪತ್ರೆಗೆ ಕಾಲಿಟ್ಟಿದೆ. ಇದರಿಂದ ಬಡ ರೋಗಿಗಳ ಪಾಡು ಚಿಂತಾಜನಕವಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯಗಳಿದ್ದರೂ ಇಲ್ಲಿನ ವೈದ್ಯರು ಹಣದಾಸೆಗೆ ಈ ರೀತಿ‌ ಭ್ರಷ್ಟಾಚಾರ ನಡೆಸ್ತಿದ್ದಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಖಾಸಗಿ ಪ್ರಯೋಗಾಲಯ ಮತ್ತು ಮೆಡಿಕಲ್ಸ್ ಸ್ಟೋರ್​ನಲ್ಲಿ ವೈದ್ಯರು ಕಮೀಷನ್ ದಂಧೆ ನಡೆಸ್ತಿದ್ದಾರೆ. ಅಲ್ಲದೇ, ರೋಗಿಗಳಿಗೆ  ಭಯ ಹುಟ್ಟಿಸಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗಳ ಬಳಿ ಕೂಡ ಹಣ ಕೀಳುವ ದಂಧೆ ನಡೆಸ್ತಿದ್ದಾರೆ. ಇದ್ರಿಂದ ರೋಗಿಗಳ ಜೀವದ ಜೊತೆ ಇಂತಹ ಭ್ರಷ್ಟ ವೈದ್ಯರು ಚೆಲ್ಲಾಟವಾಡ್ತಿದ್ದು, ಇಂತಹವರಿಗೆ ತಕ್ಕ ಪಾಠ ಕಲಿಸಿಬೇಕಿದೆ. ಈ ವೈದ್ಯನನ್ನು ಅಮಾನತ್ತು‌ ಮಾಡಿ ಕ್ರಮ ಜರುಗಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.

ಒಟ್ಟಾರೆ, ಮಂಡ್ಯದ ಮಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಗೋಪಾಲಕೃಷ್ಣನ ವಿರುದ್ದ ಕೇಳಿ ಬಂದಿರುವ ಈ  ಗಂಭೀರ ಆರೋಪ ಇದೀಗ ಮಿಮ್ಸ್ ಆಸ್ಪತ್ರೆಯ ಆಡಳಿತದ ಬುಡವನ್ನು ಅಲುಗಾಡಿಸಿದೆ. ವೈದ್ಯನ ಲಂಚಾವತಾರದ ರಹಸ್ಯ ವಿಡಿಯೋದ ಸಾಕ್ಷ್ಯದ ಮೂಲಕ ಕ್ರಮ ಜರುಗಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಡಳಿತವು ರೋಗಿಗಳ ಹಿತ ಕಾಪಾಡುತ್ತಾ ಅನ್ನೋದ್ನ ಕಾದು ನೋಡಬೇಕಿದೆ.
First published:September 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ