news18-kannada Updated:August 13, 2020, 9:42 AM IST
ಗೆದ್ದು ಬೀಗಿದ ಜೆಡಿಎಸ್ ಸದಸ್ಯರು
ಮಂಡ್ಯ : ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಜಿಲ್ಲಾ ಪಂಚಾಯತ್ ನ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆ ಸುಸೂತ್ರವಾಗಿ ಮುಕ್ತಾಯವಾಗಿದೆ. ಅತೀ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಮೂಲಕ ಜೆಡಿಎಸ್ ಮಂಡ್ಯ ಜಿಪಂನಲ್ಲಿ ಮತ್ತೆ ಮೇಲುಗೈ ಸಾಧಿಸಿದ್ರೆ, ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.
ಹೌದು! ಮಂಡ್ಯ ಜಿಲ್ಲಾ ಪಂಚಾಯತ್ನ 5 ವಿವಿಧ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿತ್ತು. ಒಟ್ಟು 33 ಸ್ಥಾನಗಳಿಗೆ ನಿನ್ನೆ ಚುನಾವಣೆ ನಿಗದಿಯಾಗಿತ್ತು. ಒಟ್ಟು 33 ಸ್ಥಾನಗಳಿಗೆ ಜೆಡಿಎಸ್ ನ 33 ಹಾಗೂ ಬಿಜೆಪಿ ಬೆಂಬಲಿತ ಕಾಂಗ್ರೆಸ್, ಪಕ್ಷೇತರ ಸದಸ್ಯರು ಸೇರಿ 33 ಮಂದಿ ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಡೆದ ಗೌಪ್ಯ ಮತದಾನದಲ್ಲಿ 32 ಮಂದಿ ಜೆಡಿಎಸ್ ಸದಸ್ಯರು ಭರ್ಜರಿ ಗೆಲುವು ಸಾಧಿಸಿದ್ರೆ, ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಮಾತ್ರ ಗೆಲುವು ಸಾಧಿಸಲಷ್ಟೇ ಸಾಧ್ಯವಾಯಿತು.
ಇನ್ನು ಮಂಡ್ಯ ಜಿ. ಪಂ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನ ಗಳಿಗೆ ಚುನಾವಣೆ ನಡೆದಿತ್ತು. ಇಲ್ಲಿವರೆಗೂ ಪ್ರತಿ ಸಲವೂ ನಡೆದ ಸ್ಥಾಯಿ ಸಮಿತಿ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು. ಆಡಳಿತ ರೂಢ ಪಕ್ಷದ ಅಧ್ಯಕ್ಷೆ ಮತ್ತು ಸದಸ್ಯರ ನಡುವಿನ ಪ್ರತಿಷ್ಠೆಯಿಂದಾಗಿ ಈ ಸಲ ಚುನಾವಣೆ ನಡೆಸಬೇಕಾಗಿ ಬಂದಿತ್ತು.
ನಾಗರತ್ನ ಸ್ವಾಮಿ ಆಡಳಿತರೂಢ ಜೆಡಿಎಸ್ ಪಕ್ಷದಿಂದ ಚುನಾಯಿತರಾಗಿ ಅಧ್ಯಕ್ಷೆ ಸ್ಥಾನ ಅಲಂಕರಿಸಿದ್ದರು. ಒಪ್ಪಂದದಂತೆ ಎಲ್ಲವೂ ನಡೆದಿದ್ದರೆ ಅಧ್ಯಕ್ಷೆ ನಾಗರತ್ನ ಸ್ವಾಮಿ ಈಗಾಗಲೇ ತಮ್ಮ ಅಧ್ಯಕ್ಷ ಗಾದಿಗೆ ರಾಜೀನಾಮೆ ನೀಡಬೇಕಿತ್ತು. ಆದ್ರೆ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಅಧ್ಯಕ್ಷೆ ನಾಗರತ್ನರ ಪತಿ ಎಸ್.ಪಿ.ಸ್ವಾಮಿ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ರು.
ಪತಿ ಸ್ವಾಮಿ ಬಿಜೆಪಿ ಸೇರಿದಾಗಿಂದಲೂ ನಾಗರತ್ನರ ರಾಜೀನಾಮೆಗೆ ಪಕ್ಷದ ವರಿಷ್ಠರು ಹಾಗೂ ಸದಸ್ಯರು ಪಟ್ಟು ಹಿಡಿದಿದ್ದರು. ಆದ್ರೆ ಪಕ್ಷದ ವರಿಷ್ಟರು ಮತ್ತು ಸದಸ್ಯರಿಗೆ ಬೆಲೆ ಕೊಡದೆ ನಾಗರತ್ನ ಅಧಿಕಾರದಲ್ಲಿ ಮುಂದುವರಿದಿದ್ದರು. ಇದಕ್ಕಾಗಿ ಸಮಯ ಕಾಯ್ತಿದ್ದ ಜೆಡಿಎಸ್ ಸದಸ್ಯರು ಇದೀಗ 32ಸ್ಥಾನ ಗೆದ್ದು ತಿರುಗೇಟು ನೀಡಿದ್ದಾರೆ.
ಮತದಾನದ ಹಕ್ಕುಳ್ಳ ಜಿಲ್ಲೆಯ ಶಾಸಕರು, ಸಚಿವರು, ಸಂಸದರು ಹಾಗೂ ಪರಿಷತ್ ಸದಸ್ಯರು , ತಾ.ಪಂ. ಅಧ್ಯಕ್ಷರು ಕೂಡ ಇದೇ ಮೊದಲ ಬಾರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದರು. ಜೆಡಿಎಸ್ ಬಿಟ್ಟು ಬಿಜೆಪಿ ಸೇರಿರುವ ಅಧ್ಯಕ್ಷೆ ಪತಿ ಸ್ವಾಮಿ, ಸಚಿವ ನಾರಾಯಣಗೌಡ, ಸಂಸದೆ ಸುಮಲತಾ ಅಂಬರೀಶ್ ಹಾಗೂ ಕಾಂಗ್ರೆಸ್ ಸದಸ್ಯರ ಬೆಂಬಲ ಪಡೆದು ಆಪರೇಷನ್ ಕಮಲಕ್ಕೆ ಕೈ ಹಾಕಿದ್ರು. ಆದ್ರೆ ಸ್ವಾಮಿ ಅವರ ಅದೃಷ್ಟ ಕೈ ಸರಿ ಇಲ್ಲವೋ ಅಥವಾ ಜೆಡಿಎಸ್ ಲಕ್ ಚೆನ್ನಾಗಿತ್ತೋ ಗೊತ್ತಿಲ್ಲ. ಅಂತಿಮವಾಗಿ ಜೆಡಿಎಸ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ಬಿಜೆಪಿ ಯತ್ನ ವಿಫಲವಾಯಿತು.
ಒಟ್ಟಾರೆ ಜಿಲ್ಲೆಯಲ್ಲಿ ಜೆಡಿಎಸ್ ಮಣಿಸಲು BJP ಸಚಿವ, ಸಂಸದೆ, ಜಿ.ಪಂ.ಅಧ್ಯಕ್ಷೆ, ಕಾಂಗ್ರೆಸ್ ಎಲ್ಲರೂ ಒಂದಾದರೂ ಜಿ.ಪಂ.ನಲ್ಲಿ ಹೀನಾಯ ಸೋಲು ಕಂಡಿದೆ. ಈ ಮೂಲಕ ಜಿ.ಪಂ.ನಲ್ಲಿ ಪ್ರಾಬಲ್ಯ ಸಾಧಿಸಲು ಹೊರಟ ಬಿಜೆಪಿಗೆ ತೀವ್ರ ಮುಖಭಂಗವಾಗಿದ್ದಂತೂ ಸುಳ್ಳಲ್ಲ.
Published by:
Latha CG
First published:
August 13, 2020, 7:46 AM IST