ಮಂಡ್ಯದಲ್ಲಿ ಹೆದ್ದಾರಿ ದರೋಡೆಕೋರರ ಬಂಧನ ಪ್ರಕರಣ; ಪೊಲೀಸ್ ಪೇದೆಯ ಮಗನ ರಕ್ಷಣೆಗೆ ಪ್ಲಾನ್?

ನಾಪತ್ತೆಯಾಗಿರುವ ಕಾರ್ತಿಕ್ ಮದ್ದೂರು ಗುಪ್ತಚರ ಇಲಾಖೆ ಪೊಲೀಸ್ ಮುಖ್ಯಪೇದೆ ಭುಜಂಗಯ್ಯನವರ ಮಗನಾಗಿದ್ದು, ಈತನ ರಕ್ಷಣೆಗೆ ಪೊಲೀಸರು ಪ್ರಯತ್ನ ನಡೆಸಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ.

news18-kannada
Updated:February 15, 2020, 11:17 AM IST
ಮಂಡ್ಯದಲ್ಲಿ ಹೆದ್ದಾರಿ ದರೋಡೆಕೋರರ ಬಂಧನ ಪ್ರಕರಣ; ಪೊಲೀಸ್ ಪೇದೆಯ ಮಗನ ರಕ್ಷಣೆಗೆ ಪ್ಲಾನ್?
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ (ಫೆ. 15): ಹೆದ್ದಾರಿಯಲ್ಲಿ ಹೋಗುವ ವಾಹನಗಳನ್ನು ಅಡ್ಡಹಾಕಿ ದರೋಡೆ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ಈ ಗುಂಪಿನಲ್ಲಿದ್ದ ಪೊಲೀಸ್ ಪೇದೆಯೊಬ್ಬರ ಮಗ ಪರಾರಿಯಾಗಿದ್ದ. ಈ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಆ ಆರೋಪಿಯ ನಾಪತ್ತೆ ಹಿಂದೆ ಪೊಲೀಸರ ಕೈವಾಡವಿದೆಯೇ? ಎಂಬ ಅನುಮಾನ ಶುರುವಾಗಿದೆ.

ಬೆಂಗಳೂರಿನ ಪದ್ಮನಾಭನಗರದ ಓಂಪ್ರಕಾಶ್, ಉತ್ತರಹಳ್ಳಿ ಸುರೇಶ್, ಮದ್ದೂರಿನ ಸಂಜಯ್ ಹಾಗೂ ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮದ್ದೂರಿನ ಕಾರ್ತಿಕ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕಾರ್ತಿಕ್ ಪೊಲೀಸ್ ಪೇದೆಯ ಮಗನಾಗಿದ್ದು, ಈ ದರೋಡೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಪೊಲೀಸ್ ಪೇದೆಯ ಮಗನ ರಕ್ಷಣೆಗೆ ನಿಂತಿದ್ದಾರಾ? ಎಂಬ ಅನುಮಾನ ವ್ಯಕ್ತವಾಗಿದೆ. ಮೊದಲು ಆರೋಪಿ ಕಾರ್ತಿಕ್​ನನ್ನು ಕೂಡ ಬಂಧಿಸಲಾಗಿತ್ತು. ಆದರೆ, ಎಫ್​ಐಆರ್​ನಲ್ಲಿ ಆತನ ಹೆಸರನ್ನು ಮಾತ್ರ ದಾಖಲಿಸಲಾಗಿದ್ದು, ವಯಸ್ಸು ಮತ್ತು ತಂದೆಯ ಹೆಸರನ್ನು ನಮೂದಿಸಿಲ್ಲ. ನಂತರ ಆತನನ್ನು ಬಿಟ್ಟು ಕಳುಹಿಸಿ, ನಾಲ್ವರನ್ನು ಮಾತ್ರ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೆ, ಸಿಕ್ಕಿಬಿದ್ದ ಆರೋಪಿ ಕಾರ್ತಿಕ್ ನಾಪತ್ತೆಯಾಗಿದ್ದಾನೆ ಎಂದು ದಾಖಲಿಸಲಾಗಿದೆ.

ಇದನ್ನೂ ಓದಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್, ಟೇಕಾಫ್​ ವಿಳಂಬ; ಪ್ರಯಾಣಿಕರ ಪರದಾಟ

ಮದ್ದೂರಿನ ಪೊಲೀಸರ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಾಪತ್ತೆಯಾಗಿರುವ ಕಾರ್ತಿಕ್ ಮದ್ದೂರು ಗುಪ್ತಚರ ಇಲಾಖೆ ಪೊಲೀಸ್ ಮುಖ್ಯಪೇದೆ ಭುಜಂಗಯ್ಯನವರ ಮಗ ಎಂದು ತಿಳಿದುಬಂದಿದೆ. ಪೇದೆಯ ಮಗನ ರಕ್ಷಣೆ ಸಲುವಾಗಿ ಆರೋಪಿಯ ವಿಳಾಸ ವಯಸ್ಸು ನಮೂದಿಸದೆ ಎಫ್​ಐಆರ್​ ದಾಖಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಉಳಿದ ನಾಲ್ವರ ಹೆಸರು, ವಯಸ್ಸು, ವಿಳಾಸ, ತಂದೆಯ ಹೆಸರನ್ನು ನಮೂದಿಸಿ ಎಫ್​ಐಆರ್ ದಾಖಲಿಸಲಾಗಿದೆ.

ಪೊಲೀಸ್ ಪೇದೆಯ ಮಗನ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಪ್ರಕರಣದಲ್ಲಿ ಸೇರಿಸಲು ಪೊಲೀಸ್ ಅಧಿಕಾರಿಗಳು ಪ್ಲಾನ್ ಮಾಡಿದ್ದಾರಾ? ಎಂಬ ಅನುಮಾನವೂ ವ್ಯಕ್ತವಾಗಿದೆ. ಸಿಕ್ಕಿಬಿದ್ದ ಆರೋಪಿಗಳು ಪ್ರಭಾವಿಗಳು ಎಂಬ ಕಾರಣಕ್ಕೆ ಸಣ್ಣಪುಟ್ಟ ಕೇಸ್ ದಾಖಲಿಸಿ ಪೊಲೀಸರು ರಕ್ಷಣೆಗೆ ನಿಂತಿದ್ದಾರಾ? ಎಂಬ ಬಗ್ಗೆಯೂ ಅನುಮಾನ ಮೂಡಿದೆ.

ಇದನ್ನೂ ಓದಿ: ಮೋಜು-ಮಸ್ತಿಗಾಗಿ ಹೆದ್ದಾರಿಯಲ್ಲಿ ದರೋಡೆ; ನಾಲ್ವರ ಬಂಧನ, ಪೊಲೀಸ್ ಪೇದೆ ಮಗ ಎಸ್ಕೇಪ್

ಈ ರೀತಿಯ ಅನುಮಾನಕ್ಕೆ ಪುಷ್ಠಿ ನೀಡುತ್ತಿವೆ ಮದ್ದೂರು ಪೊಲೀಸರ ಈ ವರ್ತನೆ. ಅನುಮಾನಕ್ಕೆ ಕಾರಣವಾಗಿರುವ ಅಂಶಗಳೆಂದರೆ, 3 ದಿನಗಳ ಹಿಂದೆ ಕಾರು ಸಮೇತ ಐವರು ಆರೋಪಿಗಳನ್ನು ಹಿಡಿದು, ಸ್ಥಳೀಯರು ಪೊಲೀಸರ ವಶಕ್ಕೆ ನೀಡಿದ್ದರು. ಆದರೆ, 3 ದಿನಗಳಾದ ನಂತರ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ.ವಶಕ್ಕೆ ಪಡೆದ ಕಾರು ನಕಲಿ ನೋಂದಣಿ ಸಂಖ್ಯೆಯದ್ದಾಗಿದ್ದು, ಅಸಲಿ ನೋಂದಣಿ ಸಂಖ್ಯೆಯ ಕಾರೇ ಬೇರೆ ಆಗಿದೆ. ಆ ದಿನ ಸ್ಥಳೀಯರು ಆರೋಪಿಗಳನ್ನು ಹಿಡಿದು ಕೊಟ್ಟಾಗ ಕಾರಿನಲ್ಲಿ ಗನ್ , ಚಾಕು, ಲಾಂಗ್ ಸೇರಿದಂತೆ ಇನ್ನಿತರ ಮಾರಕಾಸ್ತ್ರ ಇದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಆನೇಕಲ್​​ನಲ್ಲಿ ಸಿನಿಮೀಯ ರೀತಿಯಲ್ಲಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನ ಬರ್ಬರ ಕೊಲೆ 

ಕಾರು ಠಾಣೆಯ ವಶದಲ್ಲಿದ್ದರೂ ಕಾರಿನ ಹಿಂಬದಿ ಗ್ಲಾಸ್ ಒಡೆದಿದ್ದು ಯಾರು ಮತ್ತು ಯಾಕೆ? ಎಂಬ ಅನುಮಾನ ವ್ಯಕ್ತವಾಗಿದೆ. ಬಂಧಿತರನ್ನು 3 ದಿನಗಳ ಹಿಂದೆ ವಶಕ್ಕೆ ಪಡೆದರೂ ವಿಚಾರಣೆ ನೆಪದಲ್ಲಿ ಎಫ್​ಐಆರ್ ದಾಖಲಿಸಲು ತಡ ಮಾಡಿದ್ದು ಯಾಕೆ?

ಐವರನ್ನು ಕರೆತಂದರೂ ಪೊಲೀಸ್ ಪೇದೆಯ ಮಗನನ್ನು ನಾಪತ್ತೆ ಎಂದು ತೋರಿಸಿದ್ದು ಏಕೆ? ಆ ದಿನವೇ ಕಾರ್ತಿಕ್ ಓಡಿ ಹೋದ ಎಂದು ತೋರಿಸಿ ಆತನ ರಕ್ಷಣೆಗೆ ಮಾಡಿದ ಪ್ಲ್ಯಾನಾ? ಬಂಧಿತರ ಚಲನವಲನ ನೋಡಿದರೆ ವೃತ್ತಿಪರ ದರೋಡೆಕೋರರಂತೆ ಕಂಡುಬಂದರೂ ಕೇವಲ ದರೋಡೆ ಯತ್ನ ಪ್ರಕರಣವಷ್ಟೆ ದಾಖಲಿಸಿದ್ದು ಏಕೆ? ಎಂಬ ಪ್ರಶ್ನೆಗಳು ಪೊಲೀಸರ ಮೇಲೆ ಅನುಮಾನ ಮೂಡಲು ಕಾರಣವಾಗಿವೆ.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ