ಮಾಂಡೌಸ್ ಚಂಡಮಾರುತದ (Cyclone Mandous) ಅಬ್ಬರಕ್ಕೆ ತಮಿಳುನಾಡಿನ (Tami; Nadu) ಜನತೆ ತತ್ತರಿಸಿ ಹೋಗಿದ್ದಾರೆ. ಹಲವೆಡೆ ಭೂಕುಸಿತ, ಭಾರೀ ಗಾಳಿ, ಮಳೆಯಿಂದ ಪ್ರಕೃತಿ ವಿಕೋಪಗಳು ಸಂಭವಿಸಿದೆ. ಅಲ್ಲದೇ ಭಾರೀ ಮಳೆಗೆ (Rain) ಈಗಾಗಲೇ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇದೀಗ ತಮಿಳುನಾಡು ಬಳಿಕ ರಾಜಧಾನಿ ಬೆಂಗಳೂರಿಗೂ (Bengaluru) ಮಾಂಡೌಸ್ ಚಂಡಮಾರುತ ಎಫೆಕ್ಟ್ ತಟ್ಟಿದ್ದು, ಬೆಂಗಳೂರಿನಲ್ಲಿ ಇನ್ನು ಮೂರು ದಿನ ಮಳೆಯಾಗುವ ಸಾಧ್ಯತೆಗಳಿದೆ. ಹೀಗಾಗಿ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ, ಬೆಂಗಳೂರಿಗೆ ಹವಾಮಾನ ಇಲಾಖೆ ಅಲರ್ಟ್ ಘೋಷಿಸಿದೆ.
ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆ ಆರ್ಭಟ
ಮಾಂಡೌಸ್ ಚಂಡಮಾರುತ ಹಿನ್ನೆಲೆ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ತುಮಕೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ಮುಂದಿನ 48 ಗಂಟೆಗಳ ಕಾಲ ದಕ್ಷಿಣ ಒಳನಾಡಿನಲ್ಲಿ ಮಳೆರಾಯ ಅಬ್ಬರಿಸಲಿದ್ದಾನೆ.
ಇನ್ನು ಉತ್ತರ ಒಳನಾಡಿಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಕರಾವಳಿ ಭಾಗದಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯ ರಾಜಧಾನಿಯಲ್ಲಿ ಗಾಳಿ ಮಳೆ
ಬೆಂಗಳೂರು ನಗರಕ್ಕೆ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮುಂದಿನ 24 ಗಂಟೆಗಳ ಕಾಲ ಮೋಡ ಕವಿದ ವಾತಾವರಣ, ಜೋರು ಮಳೆಯಾಗಲಿದ್ದು, ಗಾಳಿಯ ಪ್ರಮಾಣ 65 ರಿಂದ 75 ಕೀಮೀ ವೇಗದಲ್ಲಿ ಇರಲಿದೆ.
ಡಿಸೆಂಬರ್ 12 ರವರೆಗೂ ಮಳೆ ಮುಂದುವರೆಯಲಿದ್ದು, ಇನ್ನು ನಗರದಲ್ಲಿ ಕನಿಷ್ಟ ಉಷ್ಣಾಂಶ 18ಡಿಗ್ರಿ ಸೆಲ್ಸಿಯಸ್ ಇದ್ದು ಗರಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇದೆ.
ಮುಂಜಾನೆಯಿಂದಲೂ ಬೆಂಗಳೂರಿನಲ್ಲಿ ಮಂಜು
ಮುಂಜಾನೆಯಿಂದಲೂ ಬೆಂಗಳೂರಿನಲ್ಲಿ ಮಂಜು ಆವರಿಸಿದ್ದು, ನಿರಂತರವಾಗಿ ಎಡೆಬಿಡದೇ ಜಿಟಿಜಿಟಿ ಮಳೆ ಸುರಿಯುತ್ತಿದೆ.
ಮುಂಜಾನೆ ನಗರದ ಕೆಲವು ಭಾಗಗಳಲ್ಲಿ ಮಾತ್ರ ಮಳೆ
ಇಂದು ಮುಂಜಾನೆ ನಗರದ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದ್ದು, ಯಲಹಂಕ, ಹೆಚ್ಎಎಲ್ ,ಹೆಬ್ಬಾಳ ಬಳಿ ಮಂಜು ಮುಸುಕಿದ ವಾತಾವರಣವಿತ್ತು.
ಲಾಲ್ಬಾಗ್, ರಾಜಾಜಿನಗರ, ಮೆಜೆಸ್ಟಿಕ್, ವಿಜಯನಗರ, ಕಬ್ಬನ್ಪಾರ್ಕ್, ಬಸವೇಶ್ವರ ನಗರ, ವಿಧಾನಸೌಧ ಸುತ್ತಾಮುತ್ತಾ ಜಿಟಿಜಿಟಿ ಮಳೆಯೊಂದಿಗೆ ಮಂಜು ಕವಿದಂತಿದೆ ಇನ್ನೂ ಚಳಿ-ಮಳೆ ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Mandous Cyclone | Bengaluru Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾದ ಚಳಿ; ಪೋಷಕರೇ ಎಚ್ಚರ
ಅಸ್ತಮಾ, ಕೆಮ್ಮು, ಡಯಾಬಿಟಿಸ್, ಹೃದ್ರೋಗ, ಸಮಸ್ಯೆ ಇರುವವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ನ್ಯೂಸ್ 18ಗೆ ತಜ್ಞ ವೈದ್ಯ ಡಾ. ಜಗದೀಶ್ ಹಿರೇಮಠ ಮಾಹಿತಿ
ಬಂಗಾಳಕೊಲ್ಲಿಯಲ್ಲಿ ಮಾಂಡೌಸ್ ಚಂಡಮಾರುತ ಬೀಸಿರುವ ಹಿನ್ನೆಲೆ ಬೆಂಗಳೂರಲ್ಲಿ ಮೋಡಕವಿದ ವಾತಾವರಣ, ಚಳಿ ಗಾಳಿ ಬೀಸುತ್ತಿದೆ. ಹೀಗಾಗಿ ಮಕ್ಕಳ ಸುರಕ್ಷತೆ ಕುರಿತು ಚಿಕ್ಕ ಮಕ್ಕಳ ತಜ್ಞ ಡಾ. ಜಗದೀಶ್ ಹಿರೇಮಠ ಅವರು ಕೆಲವೊಂದಷ್ಟು ಮಾಹಿತಿಯನ್ನು ನ್ಯೂಸ್ 18 ವಾಹಿನಿಯೊಂದಿಗೆ ಹಂಚಿಕೊಂಡಿದ್ದಾರೆ.
ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಚಳಿ ಗಾಳಿಯ ಪರಿಣಾಮ ಏನು?
ಮಳೆ ಹಾಗೂ ಚಳಿಯಿಂದ ಮಕ್ಕಳಲ್ಲಿ ಫ್ಲೂ ಆಗುವ ಸಂಭವವಿದೆ. ಆದಷ್ಟು ಈ ಚಳಿಗಾಲದಲ್ಲಿ ಮಕ್ಕಳಿಗೆ ಕುಡಿಯಲು ಬಿಸಿ ನೀರು ಕೊಡುವುದು ಉತ್ತಮ. ಮಕ್ಕಳನ್ನು ಆದಷ್ಟು ಬೆಚ್ಚಗಿರುವಂತೆ ನೋಡಿಕೊಳ್ಳಬೇಕು. ಈ ಬಾರಿ ಬೆಂಗಳೂರಲ್ಲಿ ಹೆಚ್ಚು ಚಳಿ ಇರುವಂತೆ ಕಾಣಿಸುತ್ತಿದೆ. ನ್ಯುಮೋನಿಯಾ ಆಗುವಂಥ ಲಕ್ಷಣಗಳು ಹೆಚ್ಚಾಗಿವೆ. ಮಕ್ಕಳಲ್ಲಿ ಡ್ರೈ ಸ್ಕಿನ್ ಆಗುವ ಸಾಧ್ಯತೆಗಳಿರುತ್ತದೆ. ಮಕ್ಕಳಲ್ಲಿ ಉಂಟಾಗುವ ಶೀತ, ಕೆಮ್ಮು, ನೆಗಡಿ ಉಲ್ಬಣವಾಗಬಹುದು. ಮಕ್ಕಳಿಗೆ ಒಬ್ಬರಿಂದೊಬ್ಬರಿಗೆ ಖಾಯಿಲೆ ಹರಡುವ ಸಾಧ್ಯತೆ ಇದೆ. ಕೆಮ್ಮು, ನೆಗಡಿ, ಜ್ವರ ಇರುವ ಮಕ್ಕಳಿಗೆ ಮಾಸ್ಕ ಬಳಕೆ ಮಾಡುವುದು ಸೂಕ್ತ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ