news18-kannada Updated:January 21, 2021, 6:06 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು; ಆತ ಒಂದೊಮ್ಮೆ ನೇಪಾಳ ದೇಶದಲ್ಲಿ ಪೊಲೀಸ್ ಆಧಿಕಾರಿಯಾಗಿದ್ದ ವ್ಯಕ್ತಿ. ಪೊಲೀಸ್ ಅಧಿಕಾರಿಯಾಗಿ ಕಳ್ಳಕಾಕರು, ಖದೀಮರು ಸಮಾಜಘಾತುಕರನ್ನ ಮಟ್ಟ ಹಾಕಬೇಕಿದ್ದ ಆತ ಕೇಸ್ ವೊಂದರಲ್ಲಿ ಸಿಲುಕಿ ಇಲಾಖೆಯಿಂದ ಅಮಾನತ್ತಾಗಿದ್ದ. ಆನಂತರ ಉದ್ಯೋಗ ಅರಸಿ ದೂರದ ನೇಪಾಳ ದೇಶದಿಂದ ಬೆಂಗಳೂರಿನತ್ತ ಬಂದ ಅಸಾಮಿ ಇಲ್ಲಿ ಮಾಡಬಾರದ ಕೆಲಸಕ್ಕೆ ಕೈ ಹಾಕಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಚಾಮರಾಜಪೇಟೆ ಪೊಲೀಸರು ಈ ಬಾರಿ ವಿಶೇಷ ಕಾರ್ಯಾಚರಣೆಯೊಂದನ್ನ ನಡೆಸಿದ್ದಾರೆ. ಇಷ್ಟು ದಿನ ಮನೆಗಳ್ಳರು, ಕನ್ನ ಹಾಕುವ ಖದೀಮರು, ದರೋಡೆಕೋರರ ಬೆನ್ನು ಬಿದ್ದಿದ್ದ ಪೊಲೀಸರು ಈ ಬಾರಿ ಪೊಲೀಸ್ ಆಧಿಕಾರಿಯೊಬ್ಬನ ಬೆನ್ನು ಬಿದ್ದು ಅರೆಸ್ಟ್ ಮಾಡಿದ್ದಾರೆ. ನೇಪಾಳದಲ್ಲಿ ಒಂದೊಮ್ಮೆ ಪೊಲೀಸ್ ಆಗಿದ್ದ ತಾಪ ಸೂರ್ಯ ಬಹದ್ದೂರ್ ಎಂಬಾತನನ್ನ ಚಾಮರಾಜಪೇಟೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾಪ ಸೂರ್ಯ ಬಹದ್ದೂರ್ ನಗರದ ಮನೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನಂತೆ. ಈ ವೇಳೆ ಮನೆ ಮಾಲೀಕರಿಗೆ ಮಕ್ಮಲ್ ಟೋಪಿ ಹಾಕಿ ಅಸಾಮಿ ಅವರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಎಸ್ಕೇಪ್ ಆಗಿದ್ದನಂತೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿತನಿಂದ 62 ಲಕ್ಷ ಮೌಲ್ಯದ 1192 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.
ಆರೋಪಿ ತಾಪ ಸೂರ್ಯ ಬಹದ್ದೂರ್ ನೇಪಾಳದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದನಂತೆ. ಬಳಿಕ ಆರೋಪಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಆತನ ವಿರುದ್ಧ ಕೇಸ್ ಸಹ ದಾಖಲಾಗಿದ್ದು ನಂತರ ಇಲಾಖೆಯಿಂದ ಅಮಾನತ್ತು ಮಾಡಲಾಗಿತ್ತು. ನೇಪಾಳದಿಂದ ಬೆಂಗಳೂರಿಗೆ ಬಂದು ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದ ಅಸಾಮಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ಚಿನ್ನ ಕದ್ದು ಪರಾರಿಯಾಗಿದ್ದ. ನಂತರ ನೇಪಾಳದ ಕಠ್ಮಂಡುವಿನ ರಾಮೇಛಾಪ್ ಪೊಲೀಸರ ಬಲೆಗೆ ಬಿದ್ದ ಅಸಾಮಿ ಅಲ್ಲಿ ಅರೆಸ್ಟ್ ಆಗಿದ್ದ.
ಇದನ್ನು ಓದಿ: ಖಾತೆ ಹಂಚಿಕೆ ಅಂತಿಮ, ನಾಳೆ ಬೆಳಗ್ಗೆ 8 ಗಂಟೆಯೊಳಗೆ ಪಟ್ಟಿ ಪ್ರಕಟಿಸುತ್ತೇನೆ ಎಂದ ಸಿಎಂ ಯಡಿಯೂರಪ್ಪ
ತಾಪ ಸೂರ್ಯ ಬಹದ್ದೂರ್ ಅರೆಸ್ಟ್ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬೆಂಗಳೂರು ಪೊಲೀಸರು ನೇಪಾಳ ರಾಯಭಾರ ಕಚೇರಿಯೊಂದಿಗೆ ಪತ್ರ ವ್ಯವಹಾರ ಮಾಡಿ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಜೊತೆಗೆ ಕದ್ದ ಮಾಲನ್ನು ಸಹ ವಶಕ್ಕೆ ಪಡೆದು ಆರೋಪಿಯ ವಿಚಾರಣೆ ನಡೆಸಿದ್ದಾರೆ. ಇನ್ನೂ ಆರೋಪಿಯ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನೇಪಾಳದಲ್ಲಿ ಭಾಗಿಯಾದ ಕೇಸ್ ಗಳ ವಿವರ ಸಂಗ್ರಹಿಸಲು ಪೊಲೀಸರು ಮುಂದಾಗಿದ್ದಾರೆ.
ಇನ್ನೂ ಮತ್ತೊಂದು ಪ್ರಕರಣದಲ್ಲಿ ರೆಪ್ಕೋ ಬ್ಯಾಂಕ್ ನಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿಯನ್ನ ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್ ಉದ್ಯೋಗಿ ರಾಹುಲ್ ರೆಡ್ಡಿಯನ್ನ ಬಂಧಿಸಿ ಆತನಿಂದ 29 ಲಕ್ಷ ಮೌಲ್ಯದ 594 ಗ್ರಾಂ ಜಪ್ತಿ ಮಾಡಿದ್ದಾರೆ. ಆರೋಪಿ ಚಿನ್ನ ಕಳ್ಳತನ ಮಾಡಿ ಖಾಸಗಿ ಫೈನಾನ್ಸ್ ನಲ್ಲಿ ಅಡವಿಟ್ಟಿದ್ದನಂತೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.
Published by:
HR Ramesh
First published:
January 21, 2021, 6:06 AM IST