ಬೆಂಗಳೂರು: ಕೆ.ಆರ್ ಮಾರ್ಕೆಟ್ನ ಫ್ಲೈಓವರ್ (KR Market ) ಮೇಲೆ ನಿಂತು ಹಣವನ್ನು ಎಸೆದು ಹುಚ್ಚಾಟ ಮೆರೆದಿದ್ದ ವ್ಯಕ್ತಿಯ ವಿರುದ್ಧ ದೂರು (Complaint) ದಾಖಲಾಗಿದೆ. ನಗರದಲ್ಲಿ ಸದಾ ಜನಜಂಗುಳಿಯಿಂದಿರುವ ಪ್ರದೇಶದಲ್ಲಿ ಈ ರೀತಿ ಹಣವನ್ನು ಎಸೆದು ಜನರಿಗೆ ಅಪಾಯವನ್ನುಂಟು ಮಾಡುವ ಕೆಲಸ ಮಾಡಿದ್ದಕ್ಕೆ ಹಾಗೂ ಸಂಚಾರ ವ್ಯವಸ್ಥೆಗೆ (Traffic) ಅಡ್ಡಿ ಬಂದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡಿದ್ದರಿಂದ ಅಪರಿಚಿತ ವ್ಯಕ್ತಿ ವಿರುದ್ಧ ಸಿಟಿ ಮಾರ್ಕೆಟ್ (City Market) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವ್ಯಕ್ತಿಯೊಬ್ಬ ಬೆಳಗ್ಗೆ 10:50ರ ಸಂದರ್ಭದಲ್ಲಿ ಬ್ಯಾಗ್ ಒಂದರಲ್ಲಿ 10 ರೂ ನೋಟುಗಳನ್ನು ಫ್ಲೈ ಓವರ್ ಮೇಲಿಂದ ಎಸೆದಿದ್ದನು.
ನೋಟಿಗಾಗಿ ಮುಗಿಬಿದ್ದ ಜನ
ಬೈಕ್ನಲ್ಲಿ ಬಂದಂತಹ ಅಪರಿಚಿತ ವ್ಯಕ್ತಿ ಫ್ಲೈಓವರ್ನ ಮೇಲೆ ನಿಂತು ನೋಟುಗಳನ್ನು ಎಸೆದು, ಆತ ಯಾರು ಅಂತಾ ನೋಡುವಷ್ಟರಲ್ಲಿ ಪರಾರಿಯಾಗಿದ್ದ. ಮೇಲಿಂದ ತೂರಿ ಬರುತ್ತಿರುವುದು ನೋಟುಗಳು ಎಂದು ತಿಳಿದ ಕೂಡಲೇ ಸಾರ್ವಜನಿಕರು ನಾ ಮುಂದು, ತಾ ಮುಂದು ಎಂದು ಆಯ್ದುಕೊಳ್ಳಲು ಮುತ್ತಿಕೊಂಡಿದ್ದಾರೆ. 10 ರೂ ಮುಖಬೆಲೆಯ ಸುಮಾರು ಎರಡರಿಂದ ಮೂರು ಸಾವಿರ ರೂಪಾಯಿಗಳನ್ನು ಆತ ಎಸೆದಿದ್ದ. ಪೊಲೀಸರು ಹಿಂಬಾಲಿಸಿ ಹೋದರಾದರೂ ಟೌನ್ ಹಾಲ್ ಕಡೆಗೆ ಹೋಗಿ ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಅರುಣ್ ಪ್ರಚಾರದ ಹುಚ್ಚಿಗಾಗಿ ಈ ರೀತಿ ಮಾಡಿದ್ದಾನೆ. ಸಾವಿರಾರು ಜನರು ಓಡಾಡುವ ರಸ್ತೆಯಲ್ಲಿ ಈ ರೀತಿ ಮಾಡಿದ್ದಾನೆ. ಆದರೆ ಪಾಪ ಜನರು ದುಡ್ಡನ್ನು ತೆಗೆದುಕೊಳ್ಳಲು ಅಪಾಯವನ್ನು ಲೆಕ್ಕಿಸದೇ ಮುಂದಾಗಿದ್ದಾರೆ. ಈ ವೇಳೆ ಏನಾದರೂ ಅನಾಹುತ ಆದರೆ ಯಾರು ಹೊಣೆ. ಆತನ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಪ್ರಚಾರದ ಗಿಮಿಕ್ಗಾಗಿ ಈ ರೀತಿ ಮಾಡಬಾರದು ಎಂದು ವಂದೇ ಮಾತರಂ ಸಮಾಜಸೇವಾ ಸಂಸ್ಥೆ, ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಹಣದ ಮಳೆ ಸುರಿಸಿದ ಅಸಾಮಿ; ಕೆ.ಆರ್ ಮಾರ್ಕೆಟ್ ಫ್ಲೈ ಓವರ್ನಿಂದ ದುಡ್ಡು ಎಸೆದ ಭೂಪ!
ಅರಣ್ನನ್ನು ವಶಕ್ಕೆ ಪಡೆದು ವಿಚಾರಣೆ
ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ನಿಂತು ಹಣ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರುಣ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅರುಣ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಪೇಟೆ ಎಸಿಪಿ ಗಿರಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮಾರ್ಕೆಟಿಂಗ್ ಮಾಡಲು ಈ ಐಡಿಯಾ
ಅರುಣ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಹಣವನ್ನು ಎಸೆದಿದ್ದೇಕೆ? ಎಷ್ಟು ಹಣವಿತ್ತು? ಉದ್ಧೇಶವೇನು? ಎಂದು ಪ್ರಶ್ನಿಸಿದ್ದಾರೆ. ಮೂಲತಃ ಬಸವೇಶ್ವರ ನಗರ ನಿವಾಸಿಯಾಗಿರುವ ಅರುಣ್ ಮಾರ್ಕೆಟಿಂಗ್ ಕಂಪನಿ ಪ್ರಚಾರಕ್ಕಾಗಿ ಈ ಸ್ಟಾಟರ್ಜಿ ಉಪಯೋಗಿಸಿರುವುದಾಗಿ ತಿಳಿಸಿದ್ದಾನೆ. ಈ ವಿಡಿಯೋವನ್ನು ರೀಲ್ಸ್ ಮಾಡಲು ಮಾಡಿಲ್ಲ, ಬದಲಾಗಿ ತಮ್ಮ ಫೇಸ್ಬುಕ್ ಪೇಜ್ನಲ್ಲಿ ಹಾಕಿಕೊಳ್ಳುವುದಕ್ಕೆ ಮಾಡಿದ್ದೇನೆ. ಇದು ನನ್ನ ಮಾರ್ಕೆಟಿಂಗ್ಗೆ ನೆರವಾಗಲಿ ಎಂದು ಮಾಡಿದೆ. ಇದರಿಂದ ನನ್ನ ಬಿಸಿನೆಸ್ಗೆ ನೆರವಾಗಬಹುದು ಎಂಬ ಉದ್ದೇಶವಿತ್ತೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅರುಣ್ ಬಾಯಿ ಬಿಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ