News18 India World Cup 2019

ಕೊಡಗು ಮತ್ತು ಕೇರಳದಲ್ಲಿ ಆಗಿದ್ದು ನಾವೇ ಸೃಷ್ಟಿಸಿಕೊಂಡ ದುರಂತಗಳೇ?


Updated:August 20, 2018, 10:59 PM IST
ಕೊಡಗು ಮತ್ತು ಕೇರಳದಲ್ಲಿ ಆಗಿದ್ದು ನಾವೇ ಸೃಷ್ಟಿಸಿಕೊಂಡ ದುರಂತಗಳೇ?

Updated: August 20, 2018, 10:59 PM IST
- ನ್ಯೂಸ್18 ಕನ್ನಡ

ಬೆಂಗಳೂರು(ಆ. 20): ನಮ್ಮ ಪರಿಸರವನ್ನು ಕಾಪಾಡಿಕೊಳ್ಳದೇ ಹೋದರೆ ಸದ್ಯದಲ್ಲೇ ಪ್ರವಾಹಗಳು, ಭೂಕುಸಿತು, ಮಣ್ಣುಕುಸಿತ ದುರಂತಗಳು ಅಪ್ಪಳಿಸುತ್ತವೆ: ಹೀಗೆಂದು ಏಳು ವರ್ಷಗಳ ಹಿಂದೆಯೇ ಮಾಧವ ಗಾಡ್ಗೀಳ್ ಎಚ್ಚರಿಸಿದ್ದರು. ಯಾರೂ ಕೂಡ ಅವರ ಮಾತನ್ನ ಗಂಭೀರವಾಗಿ ಪರಿಗಣಿಸಲಿಲ್ಲ. ಮಾನವ ತಾನು ತೋಡಿದ ಹಳ್ಳಕ್ಕೆ ತಾನೇ ಬಿದ್ದು ಒದ್ದಾಡುತ್ತಿದ್ದಾನೆ. ಕೇರಳ ಮತ್ತು ಕೊಡಗಿನಲ್ಲಿ ಪ್ರಕೃತಿಯು ಕೋಪದ ಉಗ್ರನರ್ತನ ಮಾಡುತ್ತಿದೆ. ಒಂದು ಮಾಮೂಲಿಯ ಮಳೆಗೆ ಊರಿಗೆ ಊರುಗಳೇ ನೀರಲ್ಲಿ ಮುಳುಗಡೆಯಾಗಿವೆ, ಊರುಗಳೇ ನಾಪತ್ತೆಯಾಗುತ್ತಿವೆ. 2011ರಲ್ಲಿ ಗಾಡ್ಗಿಲ್ ನುಡಿದ ಭವಿಷ್ಯ ಈಗ ನಿಜವಾಗುತ್ತಿದೆ.

ಪಶ್ಚಿಮ ಘಟ್ಟ ಪ್ರದೇಶದ ಸಂರಕ್ಷಣೆಯ ಮಾರ್ಗೋಪಾಯಗಳನ್ನ ತಿಳಿಯಲು ಕೇಂದ್ರ ಸರಕಾರ ರಚಿಸಿದ್ದ ಸಮಿತಿಯ ನೇತೃತ್ವ ವಹಿಸಿದ್ದವರು ಮಾಧವ ಗಾಡ್ಗೀಳ್. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳುದ್ದಕ್ಕೂ ವ್ಯಾಪಿಸಿರುವ ಪಶ್ಚಿಮ ಘಟ್ಟ ಪ್ರದೇಶ ವಿಶ್ವದ ಅಗ್ರ ಎಂಟು ಜೀವವೈವಿಧ್ಯ ತಾಣಗಳಲ್ಲೊಂದೆನಿಸಿದೆ. ಅಭಿವೃದ್ಧಿ ಹೆಸರಿನಲ್ಲಿ ಈ ಪಶ್ಚಿಮ ಘಟ್ಟಕ್ಕೆ ಧಕ್ಕೆ ತರಲಾಗುತ್ತಿದೆ ಎಂಬ ಆತಂಕವನ್ನು ಪರಿಸರವಾದಿಗಳು ನಿರಂತವಾಗಿ ತೋಡಿಕೊಳ್ಳುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧವ ಗಾಡ್ಗೀಲ್ ನೇತೃತ್ವದಲ್ಲಿ ಸಮಿತಿ ರಚಿಸಿ ಅವಲೋಕನ ಮಾಡಿಸಲಾಯಿತು. 2011ರಲ್ಲಿ ಗಾಡ್ಗಿಲ್ ಸಮಿತಿಯು ತನ್ನ ವರದಿ ಸಲ್ಲಿಸಿತು. ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮತೆಯ ಆಧಾರದ ಮೇಲೆ ಮೂರು ವಲಯಗಳನ್ನಾಗಿ ವಿಭಜಿಸಲಾಯಿತು. ಒಂದೊಂದು ವಲಯಕ್ಕೆ ಪರಿಸರ ರಕ್ಷಣೆಯ ಮಾರ್ಗೋಪಾಯಗಳನ್ನ ಸೂಚಿಸಲಾಯಿತು. ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ಗಣಿಗಾರಿಕೆ, ಅಣೆಕಟ್ಟು, ಕ್ವಾರಿ, ದೊಡ್ಡ ಕಟ್ಟಡ ಇತ್ಯಾದಿಗಳಿಗೆ ನಿರ್ಬಂಧ ಹೇರಬೇಕೆಂದು ಸಲಹೆ ನೀಡಿತು.

ಮಾಧವ ಗಾಡ್ಗಿಲ್ ವರದಿಗೆ ಆರೂ ರಾಜ್ಯಗಳಲ್ಲಿ ವಿರೋಧಗಳು ವ್ಯಕ್ತವಾದವು. ಗಾಡ್ಗಿಲ್ ವರದಿ ಜಾರಿಯಾದರೆ ಬುಡಕಟ್ಟು ಸಮುದಾಯಗಳು ಸ್ಥಳಾಂತರವಾಗಬೇಕಾಗುತ್ತದೆ; ಘಟ್ಟದ ವ್ಯಾಪ್ತಿಗೆ ಬರುವ ಸಾವಿರಾರು ಗ್ರಾಮಗಳು ಇತಿಹಾಸ ಸೇರುತ್ತವೆ; ಗ್ರಾಮಗಳಲ್ಲಿ ಆಸ್ಪತ್ರೆ ಕಟ್ಟುವಂತಿಲ್ಲ, ಅಭಿವೃದ್ಧಿ ಮಾಡುವಂತಿಲ್ಲ, ಸಣ್ಣಪುಟ್ಟ ಮರವನ್ನೂ ಕಡಿಯುವಂತಿಲ್ಲ ಎಂಬಿತ್ಯಾದಿ ಕಪೋಲಕಲ್ಪಿತ ಸುದ್ದಿಗಳು ಹಬ್ಬಿದವು. ಜನಸಾಮಾನ್ಯರೂ ದಿಗಿಲುಬಿದ್ದರು. ಆರೂ ರಾಜ್ಯಗಳಲ್ಲಿ ಜನರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪರಿಣಾಮವಾಗಿ ಕೇಂದ್ರ ಸರಕಾರವು ಗಾಡ್ಗಿಲ್ ವರದಿಯ ಅಂಶವನ್ನು ಅವಲೋಕಿಸಿ ಸೂಕ್ತ ಮಾರ್ಪಾಡುಗಳನ್ನು ಮಾಡಲು ಕಸ್ತೂರಿರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿತು. ಈ ಸಮಿತಿಯು ಗಾಡ್ಗಿಲ್ ವರದಿಯ ಕೆಲ ಪ್ರಮುಖ ಅಂಶಗಳನ್ನೇ ಕೈಬಿಟ್ಟು ಅಂತಿಮ ವರದಿ ಸಲ್ಲಿಕೆ ಮಾಡಿತು. ಆದರೆ, ಈ ವರದಿಯನ್ನೂ ಅನುಷ್ಠಾನಗೊಳಿಸಲು ರಾಜ್ಯಗಳು ಮೀನಮೇಷ ಎಣಿಸುತ್ತಿರುವುದು ದುರಂತ.

ಕೇರಳ ರಾಜ್ಯವಂತೂ ಪಟ್ಟುಹಿಡಿದು ಗಾಡ್ಗಿಲ್ ವರದಿಯನ್ನು ಕಸದಬುಟ್ಟಿಗೆ ಹಾಕಿತು. ಕಸ್ತೂರಿರಂಗನ್ ವರದಿಯ ಶಿಫಾರಸುಗಳನ್ನೇ ಇನ್ನಷ್ಟು ಸಡಿಸಿಲಿ ನಿಯಮ ಮಾರ್ಪಾಡು ಮಾಡಿ ಅನುಷ್ಠಾನಗೊಳಿಸಿತು. ಗ್ರಾಮದಿಂದ 50 ಮೀಟರ್ ದೂರದ ಪ್ರದೇಶದಲ್ಲಿ ಕ್ವಾರಿ ನಡೆಸಲು ಅನುಮತಿ ಮಾಡಿಕೊಟ್ಟಿತು. ಅಲ್ಲಿ ನಾಯಿಕೊಡೆಗಳಂತೆ ಕ್ವಾರಿಗಳು ನಡೆದವು. 1,700 ಗ್ರಾನೈಟ್ ಯೂನಿಟ್​ಗಳು ತಲೆ ಎತ್ತಿದವು.

ಕೊಡಗಿನಲ್ಲೂ ಆಗಿದ್ದು ಇದೆಯೇ. ನೈಸರ್ಗಿಕವಾಗಿ ಬೆಳೆದಿದ್ದ ಮರಗಳನ್ನ ಕಡಿದುಹಾಕಿದ್ದರಿಂದಲೇ ಇವತ್ತು ಕೊಡಗಿನಲ್ಲಿ ಇಂಥ ದುರ್ಗತಿ ಬಂದಿದೆ ಎಂದು ಪರಿಸರ ತಜ್ಞರು ನ್ಯೂಸ್18 ಕನ್ನಡಕ್ಕೆ ತಿಳಿಸುತ್ತಾರೆ.
Loading...

1946ರಿಂದ ಶುರುವಾಗಿ 1963ರವರೆಗೆ ಕೊಡಗಿನಲ್ಲಿ ಮರಗಳ ಮಾರಣಹೋಮವೇ ನಡೆಯಿತು. ಆಗ ಮರಗಳನ್ನ ಕಡಿದು ನಿರ್ಮಿಸಲಾದ ಜಾಗದಲ್ಲಿ ಕಾಫಿ ಎಸ್ಟೇಟ್ ಮೊದಲಾದವು ಶುರುವಾದವು ಎಂದು ಇತಿಹಾಸಕಾರ ಬಿ. ಅಪ್ಪಣ್ಣ ಹೇಳುತ್ತಾರೆ.

ಟಿಂಬರ್ ಮಾಫಿಯಾದಿಂದಲೇ ಇಷ್ಟೆಲ್ಲಾ ಅನಾಹುತವಾಗಿದೆ ಎಂದು ವನ್ಯಜೀವಿ ಹೋರಾಟಗಾರ ಕೆ.ಎಂ. ಚಿನ್ನಪ್ಪ ನೇರವಾಗಿ ಆರೋಪಿಸುತ್ತಾರೆ. ಕೊಡಗಿನ ಗ್ರಾಮಗಳ ಪಕ್ಕದಲ್ಲಿ ಇರುವ ಕಾಡನ್ನು ದೇವರ ಕಾಡೆಂದು ಪರಿಗಣಿಸುತ್ತಾರೆ. ಅಂಥ ದೇವರ ಕಾಡಿನ ಮರಗಳಿಗೆ ಹೊರಗಿನವರು ಕನ್ನ ಹಾಕಿದರು. ಜಾಗ ಸಿಕ್ಕಲ್ಲೆಲ್ಲಾ ಮರಗಳನ್ನು ಕಡಿದು ಕಟ್ಟಡ ನಿರ್ಮಿಸಿದರು. ಈಗಲ್ಲದಿದ್ದರೂ ಯಾವತ್ತಾದರೂ ಆಪತ್ತು ಎರಗುತ್ತದೆ ಎಂದು ಆಗಿನಿಂದಲೇ ತಾವು ಎಚ್ಚರಿಸುತ್ತಲೇ ಬಂದಿದ್ದೆವು. ಆದರೆ, ತಮ್ಮನ್ನು ಢೋಂಗಿ ಪರಿಸರವಾದಿಗಳೆಂದು ಅಸಡ್ಡೆ ತೋರಿದರು ಎಂದು ಚಿನ್ನಪ್ಪ ವಿಷಾದಿಸುತ್ತಾರೆ.

ನೈಸರ್ಗಿಕವಾಗಿ ಬೆಳೆದ ಮರಗಳನ್ನು ಕಡಿದರೆ ಆ ಮರ ಹಿಡಿದಿಟ್ಟುಕೊಳ್ಳುವ ಮಣ್ಣು ಸಡಿಲವಾಗುತ್ತದೆ. ಮಳೆಗೆ ಆ ಮಣ್ಣು ಕೊಚ್ಚಿಕೊಂಡುಹೋಗುತ್ತದೆ. ಇದನ್ನೇ ಭೂಸವಕಳಿ ಎನ್ನುತ್ತಾರೆ. ಕ್ವಾರಿಗಳಿಂದ ಮಣ್ಣು ಇನ್ನಷ್ಟು ದುರ್ಬಲಗೊಳ್ಳುತ್ತದೆ. ಇದು ಹಲವು ವರ್ಷ ನಿರಂತರವಾಗಿ ನಡೆದು ಬಂದ ಹಿನ್ನೆಲೆಯಲ್ಲಿ ಈಗ ಒಂದು ವಾರದಿಂದ ಎರಗಿರುವ ದುರಂತ ನಮ್ಮ ಕಣ್ಮುಂದೆ ಇದೆ.

ಮಣ್ಣಿನಲ್ಲಿರುವ ಧಾತುಗಳೇ(ಎಲಿಮೆಂಟ್ಸ್) ನಮ್ಮ ದೇಹದಲ್ಲಿರುವುದು. ಜಲಪ್ರವಾಹಕ್ಕೆ ಮಣ್ಣಿಗೆ ಮಣ್ಣೇ ಕೊಚ್ಚಿಹೋಗುತ್ತಿದೆ. ಅದರಂತೆ ನಾವೂ(ಸಂಸ್ಕೃತಿ) ಕೊಚ್ಚಿಹೋಗುತ್ತಿದ್ದೇವೆ ಎಂದು ಭೂವಿಜ್ಞಾನಿ ಡಾ. ವೆಂಕಟಸ್ವಾಮಿ ಅಭಿಪ್ರಾಯಪಡುತ್ತಾರೆ.

ಏನು ಪರಿಹಾರ?
ನಾವು ಮಾಡುವ ತಪ್ಪನ್ನು ಸುಧಾರಣೆ ಮಾಡಿಕೊಂಡು ಹಳೆಯ ಕೊಡಗನ್ನು ಪುನರ್ನಿರ್ಮಿಸಬೇಕಾದರೆ ನೂರಾರು ವರ್ಷ ಬೇಕಾಗುತ್ತದೆ ಎಂಬುದು ವೆಂಕಟಸ್ವಾಮಿ ಅವರ ಅನಿಸಿಕೆ. ನಾವು ಪ್ರಕೃತಿಯ ಬಗ್ಗೆ ಕಾಳಜಿ ಇಟ್ಟುಕೊಳ್ಳಬೇಕು. ಕೊಡಗಿಗೆ ಕೃತಕ ಅರಣ್ಯ ಬೇಕಾಗಿಲ್ಲ. ನೈಜ ಅರಣ್ಯದ ಅಗತ್ಯವಿದೆ. ವಿಧವಿಧವಾದ ಮರಗಳು, ಗಗನಚುಂಬಿ ಮರಗಳು ಭೂಮಿಯನ್ನು ಒಂದು ಹಂತದಲ್ಲಿ ನಿಯಂತ್ರಣದಲ್ಲಿ ಇಡುತ್ತೆ ಎಂದು ಹಿರಿಯ ಭೂವಿಜ್ಞಾನಿಗಳು ಹೇಳುತ್ತಾರೆ.

ಈಗ ಕೊಡಗು ಮತ್ತು ಕೇರಳ ರಾಜ್ಯಗಳಲ್ಲಿ ಪ್ರಕೃತಿಯ ಉಗ್ರ ನರ್ತನವೇನೋ ನಡೆದಿದೆ. ಮಾಧವ ಗಾಡ್ಗಿಲ್ ಅವರು ಗೋವಾಕ್ಕೂ ಇಂಥದ್ದೇ ದುರ್ಗತಿ ಬರಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಗೋವಾದಲ್ಲಿ ಮಿತಿ ಇಲ್ಲದೆ ಗಣಿಗಾರಿಕೆಗಳು ನಡೆಯುತ್ತಿವೆ. ಅಲ್ಲಿನ ಸರಕಾರ ಮುಕ್ತವಾಗಿ ಲೈಸೆನ್ಸ್ ನೀಡಿ ಮಣ್ಣು ಬಗೆಸುತ್ತಿದೆ. ಇದು ಘೋರ ಪ್ರಕೃತಿ ದುರ್ಘಟನೆಗೆ ರಹದಾರಿಯಾಗಿದೆ ಎಂದು ಮಾಧವ ಗಾಡ್ಗಿಲ್ ಹೇಳಿದ್ದಾರೆ.
First published:August 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...