ಮದುವೆ ಮನೆಯಲ್ಲಿ ಸಂಭ್ರಮದ ಬದಲು ಸೂತಕದ ಛಾಯೆ; ಕುಡಿಯಬೇಡ ಎಂದಿದ್ದಕ್ಕೆ ಭಾಮೈದನ ಕತ್ತು ಸೀಳಿದ ಭಾವ

ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡಬೇಕಿದ್ದ ಸಂಬಂಧಿಕರೆಲ್ಲ ಇದೀಗ ಆಸ್ಪತ್ರೆ ಮುಂದೆ ನಿಲ್ಲುವಂತಾಗಿದೆ. ಅಕ್ಷತೆ ಹಾಕಬೇಕಿದ್ದ ಭಾವ ಜೈಲಿನಲ್ಲಿದ್ದರೆ, ತಾಳಿ ಕಟ್ಟಬೇಕಿದ್ದ ಭಾಮೈದ ಹಾಸಿಗೆ ಮೇಲೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಹಲ್ಲೆಗೆ ಒಳಗಾದ ಮನೋಜ್​ಕುಮಾರ್ ಮತ್ತು ಹಲ್ಲೆ ಮಾಡಿದ ಕೆಂಡಗಣ್ಣ.

ಹಲ್ಲೆಗೆ ಒಳಗಾದ ಮನೋಜ್​ಕುಮಾರ್ ಮತ್ತು ಹಲ್ಲೆ ಮಾಡಿದ ಕೆಂಡಗಣ್ಣ.

  • Share this:
ಮೈಸೂರು: ಆತ ಹಸೆಮಣೆ ಏರಬೇಕಿದ್ದ ಮದುಮಗ. ಆದರೆ ಆತ ತನ್ನ ಭಾವನಿಗೆ ಕುಡಿಯಬೇಡ ಎಂದು ಬುದ್ದಿ ಹೇಳಿದ ಅನ್ನೋ ಒಂದೇ ಒಂದು ಕಾರಣಕ್ಕೆ ತಾಳಿ ಕಟ್ಟಿ ಹೊಸ ಜೀವನಕ್ಕೆ ಕಾಲಿರಿಸಬೇಕಿದ್ದ ವರ ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.

ಬುದ್ದಿ ಹೇಳಿದ ಅನ್ನೊ ಕಾರಣಕ್ಕೆ ನಿದ್ದೆ ಮಾಡುವ ವೇಳೆ ಬಾಮೈದನ ಕುತ್ತಿಗೆಗೆ ಮಚ್ಚಿನಿಂದ ಕೊಚ್ಚಿದಲ್ಲದೆ, ಬಿಡಿಸಲು ಬಂದ ತನ್ನ ಅತ್ತೆಗೂ ಮಚ್ವಿನಿಂದ ಹಲ್ಲೆ ಮಾಡಿರುವ ಅಳಿಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.  ಮೈಸೂರಿನಲ್ಲಿ ಮದ್ಯವ್ಯಸನಿಯೊಬ್ಬನ ವಿಲಕ್ಷಣ ಭಯಾನಕ ಕೃತ್ಯಕ್ಕೆ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ತನ್ನ ಸ್ವಂತ ಭಾಮೈದ ಮನೋಜ್​ ಕುಮಾರ್​ಗೆ ಮಚ್ಚಿನಿಂದ ಹಲ್ಲೆ ಮಾಡಿದ ಕೆಂಡಗಣ್ಣ ಇದೀಗ ಕಂಬಿ ಎಣಿಸುತ್ತಿದ್ದಾನೆ. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಯರಹಳ್ಳಿ ನಿವಾಸಿಯಾಗಿರುವ ಮನೋಜ್ ಕುಮಾರ್ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡತ್ತೆ ನಡೆದಿದ್ದರೆ ಆತನ ಮನೆಯ ಮುಂದೆ ಇಂದು ಚಪ್ಪರ ಹಾಕಿಸಿ ಮದುವೆ ಮಂಟಪ್ಪಕ್ಕೆ ತೆರಳಬೇಕಿತ್ತು. ಆದರೆ ಮದುವೆ ಮನೆಯಲ್ಲಿ ಓಡಾಡಿಕೊಂಡು ಭಾಮೈದುನನ ಮದುವೆ ಮಾಡಿಸಬೇಕಿದ್ದ ಸ್ವಂತ ಭಾವನೇ ಮನೋಜ್​ ಕತ್ತು ಸೀಳಿ  ಆಸ್ಪತ್ರೆಗೆ ಸೇರಿಸಿದ್ದಾನೆ.

ಕಳೆದ ಹತ್ತು ವರ್ಷಗಳ ಹಿಂದೆ ತನ್ನ ತಂಗಿ ತನುಜಾರನ್ನು ಕೆಂಡಗಣ್ಣನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ತಂಗಿ ತನುಜಾ ಕೂಡ ತುಮಕೂರಿನ ಮಧುಗಿರಿಯಲ್ಲಿ ಗ್ರಾಮ ಲೆಕ್ಕಿಗ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕೆಂಡಗಣ್ಣ ಹತ್ತು ವರ್ಷದಿಂದಲೂ ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದನಂತೆ. ಹೆಂಡತಿಯ ಎಟಿಎಂ ಕಾರ್ಡ್ ಕಿತ್ತುಕೊಂಡು ನಿತ್ಯ ಹಣ ಕೇಳೋದಲ್ಲದೆ ಬಂದ ಸಂಬಳವನ್ನೆಲ್ಲ ತಾನೇ ಪಡೆದುಕೊಳ್ಳುತ್ತಿದ್ದ. ಈ ವಿಚಾರವಾಗಿ ತನುಜಾ ತುಮಕೂರಿನಲ್ಲಿ ದೂರು ಸಹ ದಾಖಲಿಸಿದ್ದಾರೆ. ಪತ್ನಿಗೆ ಹೋಡೆಯೋದು ಬಡಿಯೋದು ಸಹಜವಾಗಿತ್ತು. ಇಂದೋ ನಾಳೆ ಸರಿಯಾಗ್ತಾನೆ ಅಂತ ಸುಮ್ಮನಾಗಿದ್ದರು.  ಆದ್ರೆ ಕೆಂಡಗಣ್ಣ ಮಾತ್ರ ಇತ್ತೀಚೆಗೆ ಹೆಚ್ಚು ಮದ್ಯವ್ಯಸನಿಯಾಗಿದ್ದ. ಇದಕ್ಕೆ ಭಾಮೈದ ಮನೋಜ್​ ಕುಡಿಯಬೇಡಿ ಅಂತ ಬುದ್ದಿವಾದ ಹೇಳಿದ್ದ. ಇಷ್ಟಕ್ಕೆ ದ್ವೇಷ ಸಾಧಿಸುತ್ತಿದ್ದ ಕೆಂಡಗಣ್ಣ ಪತ್ನಿಗೆ ಹಿಂಸೆ ಕೊಟ್ಟಿದ್ದಲ್ಲದೆ  ನಿಮ್ಮ ಮನೆಯವರನ್ನೆಲ್ಲ ಸಾಯಿಸ್ತಿನಿ, ನಿನ್ನ ಅಣ್ಣನ ಮದುವೆ ನಿಲ್ಲಿಸ್ತಿನಿ ಅಂತ ಎಚ್ಚರಿಕೆ ಕೊಟ್ಟಿದ್ದ. ಇವೆಲ್ಲದರ ನಡುವೆ ನಾಳೆ ಮದುವೆ ಇದ್ದ ಕಾರಣ ಯರಹಳ್ಳಿಗೆ  ಬಂದಿದ್ದ ಕೆಂಡಗಣ್ಣ ಎರಡು ದಿನದಿಂದ ತಾಳ್ಮೆಯಿಂದಲೇ ಇದ್ದ.  ಆದರೆ ಇಂದು ಬೆಳಗಿನ ಜಾವ 3 ಗಂಟೆ ವೇಳೆ ಎಲ್ಲರು ಮಲಗಿದ್ದಾಗ ಭಾಮೈದುನನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಅಷ್ಟೆ ಅಲ್ಲದೆ ಇದನ್ನ ತಡೆಯಲು ಹೋದ ಅತ್ತೆ ಹೇಮಲತಾ ಅವರಿಗೂ ಮಚ್ವು ಬೀಸಿದ್ದಾನೆ.  ಹೇಮಲತಾ ಕೂಡ ದಾಳಿಯಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಇದನ್ನು ಓದಿ: ಮತ್ತೆ ಚಿಗುರಿದ ಬಳ್ಳಾರಿ ಏರ್ ಪೋರ್ಟ್ ಕನಸು; ಸ್ನೇಹಿತ ರೆಡ್ಡಿ ಆಸೆ ಈಡೇರಿಸಲು ಮುಂದಾದ ಶ್ರೀರಾಮುಲು

ಸುದ್ದಿ ತಿಳಿದ ತಕ್ಷಣ ಕಾರ್ಯ ಪ್ರವೃತರಾದ ಹೆಚ್.ಡಿ.ಕೋಟೆ ಪೊಲೀಸರು ಕೆಂಡಗಣ್ಣನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ತನಗೆ ಭಾಮೈದ ಕುಡಿಬೇಡ ಅಂತ ಬುದ್ದಿ ಹೇಳ್ತಾ ಇದ್ದ. ಇದರಿಂದ ಕೊಲೆ ಮಾಡಲು ಮುಂದಾದೆ ಅಂತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನಂತೆ. ಇನ್ನು ಆಸ್ಪತ್ರೆಗೆ ದಾಖಲಾಗಿರುವ ಮನೋಜ್ ಕುಮಾರ್  ಸ್ಥಿತಿ ತೀರಾ ಗಂಭೀರವಾಗಿದ್ದು, ಮೂರು ತಾಸು ಆಪರೇಷನ್ ಮಾಡಲಾಗಿದ್ದು, ಇನ್ನು ಎರಡು ದಿನ ಏನನ್ನು ಹೇಳಲು ಸಾಧ್ಯವಿಲ್ಲ ಅಂತ ವೈದ್ಯರು ಹೇಳುತ್ತಿದ್ದಾರೆ.

ಮದುವೆ ಮನೆಯಲ್ಲಿ ಸಂಭ್ರಮದಿಂದ ಓಡಾಡಬೇಕಿದ್ದ ಸಂಬಂಧಿಕರೆಲ್ಲ ಇದೀಗ ಆಸ್ಪತ್ರೆ ಮುಂದೆ ನಿಲ್ಲುವಂತಾಗಿದೆ. ಅಕ್ಷತೆ ಹಾಕಬೇಕಿದ್ದ ಭಾವ ಜೈಲಿನಲ್ಲಿದ್ದರೆ, ತಾಳಿ ಕಟ್ಟಬೇಕಿದ್ದ ಭಾಮೈದ ಹಾಸಿಗೆ ಮೇಲೆ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಘಟನೆ ಸಂಬಂಧ ಹೆಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
First published: