ಬೆಂಗಳೂರು: ಹೊಸ ವರ್ಷದಂದು (New Year Celebration) ಸಣ್ಣ ಇಯರ್ ಫೋನ್ಗಾಗಿ (Headphones) ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ದೊಡ್ಡನಾಗಮಂಗಲದ (Doddanagamangala) ನಿರ್ಮಾಣ ಹಂತದಲ್ಲಿದ್ದ ಬಿಲ್ಡಿಂಗ್ವೊಂದರಲ್ಲಿ ನಡೆದಿದೆ. ಘಟನೆಯಲ್ಲಿ ಕೊಲೆಯಾದ ವ್ಯಕ್ತಿಯನ್ನು 27 ವರ್ಷದ ಕಾರ್ತಿಕ್ ಎಂದು ಗುರುತಿಸಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Parappana Agrahara Police Station) ಘಟನೆ ನಡೆದಿದ್ದು, ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಹೊಸ ವರ್ಷದ ಸಂಭ್ರಮಾಚರಣೆ ವೇಳೆಯೇ ಉತ್ತರಪ್ರದೇಶ ಮೂಲದ ರಜನೀಶ್ ಎಂಬಾತನ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಹೀಗಾಗಿ ನ್ಯೂ ಇಯರ್ ಹಾಗೂ ಬರ್ತ್ ಡೇ ಪಾರ್ಟಿ ಮಾಡಲು ಸ್ನೇಹಿತರನ್ನು ರಜನೀಶ್ ಕರೆಸಿಕೊಂಡಿದ್ದ. ದೊಡ್ಡನಾಗಮಂಗಲದ ಬಳಿಯ ಬಾಲಾಜಿ ಕನ್ಸ್ಟ್ರಕ್ಷನ್ ಸೇರಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಎಲ್ಲರು ಆಗಮಿಸಿದ್ದರು. ಪಾರ್ಟಿ ಆರಂಭ ಮಾಡಿ ಎಲ್ಲರೂ ಮದ್ಯ ಸೇವನೆ ಮಾಡಿ ಎಂಜಾಯ್ ಮಾಡಿದ್ದಾರೆ. ಆದರೆ ಪಾರ್ಟಿ ಮುಗಿಯುತ್ತಿದಂತೆ ಕಟ್ಟಡಲ್ಲೇ ಮಲಗಿಕೊಂಡು ಬೆಳಗ್ಗೆ ಹೋಗಲು ನಿರ್ಧರಿಸಿದ್ದರಂತೆ.
ಕ್ಷುಲಕ ಕಾರಣದಿಂದ ಸ್ನೇಹಿತರಿಂದಲೇ ಕೊಲೆ
ರಜನೀಶ್ಗೆ ಮಲಗುವ ವೇಳೆ ಇಯರ್ ಫೋನ್ ಕಿವಿಗೆ ಹಾಕಿಕೊಂಡು ಮ್ಯೂಸಿಕ್ ಕೇಳುವ ಅಭ್ಯಾಸ ಇತ್ತಂತೆ. ಘಟನೆ ನಡೆದ ರಾತ್ರಿ ಪಾರ್ಟಿ ಮುಗಿದ ಬಳಿಕ ನಂತರ ರಜನೀಶ್ ಬಳಿ ಇದ್ದ ಇಯರ್ ಫೋನ್ ಮಿಸ್ ಆಗಿದ್ದಂತೆ. ಈ ವೇಳೆ ಕುಡಿದ ಮತ್ತಿನಲ್ಲಿ ರಜನೀಶ್ಗೂ ಸ್ನೇಹಿತ ಕಾರ್ತಿಕ್ ನಡುವೆ ಕಿರಿಕ್ ಆಗಿದೆ. ಕಾರ್ತಿಕ್ ಇಯರ್ ಫೋನ್ ತೆಗೆದುಕೊಂಡಿದ್ದಾನೆ ಅಂತ ಜಗಳ ಶುರುವಾಗಿದ್ದು, ಆ ಬಳಿಕ ವಿಕೋಪಕ್ಕೆ ತಲುಪಿದೆ. ಜೊತೆಯಲ್ಲಿದ್ದ ಸ್ನೇಹಿತರೆಲ್ಲರೂ ರಜನೀಶ್ಗೆ ಸಪೋರ್ಟ್ ಮಾಡಿ, ಕಾರ್ತಿಕ್ನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಸ್ನೇಹಿತರೆಲ್ಲರು ಸೇರಿ ಕಾರ್ತಿಕ್ಗೆ ಥಳಿಸಿದ ಕಾರಣ ಹೊಡೆತ ತಾಳಲಾಗದೆ ಆತ ಸಾವನ್ನಪ್ಪಿದ್ದಾನೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡನಾಗಮಂಗಲದ ಬಳಿ ಘಟನೆ ನಡೆದಿದೆ. ಸದ್ಯ ಘಟನೆ ಸಂಬಂಧ ಇಬ್ಬರು ಆರೋಪಿಗಳಾದ ರಜನೀಶ್ ಹಾಗೂ ರವಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಮತ್ತಿಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದು, ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಕುಡಿದ ಮತ್ತಿನಲ್ಲಿ ಶಿವಗಂಗೆ ಬೆಟ್ಟ ಹತ್ತವಾಗ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಕುಡಿದ ಮತ್ತಿನಲ್ಲಿ ಆಯತಪ್ಪಿ ಕೆಳಗೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ನೆಲಮಂಗಲ (Nelamangala) ತಾಲೂಕು ಶಿವಗಂಗೆ ಬೆಟ್ಟದಲ್ಲಿ (Shivagange Mountain Peak) ನಡೆದಿದೆ. ಮೃತ ವ್ಯಕ್ತಿಯನ್ನು ಗುಬ್ಬಿ ತಾಲೂಕಿನ ಬೀರಗೊಂಡನಹಳ್ಳಿಯ ರಾಮಕೃಷ್ಣ (29) ಎಂದು ಗುರುತಿಸಲಾಗಿದೆ.
ದಾಬಸ್ಪೇಟೆ ಸಮೀಪದ ದಕ್ಷಿಣಕಾಶಿ ಶಿವಗಂಗೆ ಬೆಟ್ಟ ಹತ್ತಲು ಮುಂದಾಗಿದ್ದು, ಈ ವೇಳೆ ಆಯಾತಪ್ಪಿ ಜಾರಿ ಬಿದ್ದು ದುರ್ಘಟನೆ ಸಂಭವಿಸಿದೆ. ಇನ್ನು ಘಟನೆಯಲ್ಲಿ ಮತ್ತೋರ್ವ ಕೂಡ ಕಾಲು ಮುರಿದುಕೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ