ವಿಜಯಪುರ: ಅಕ್ರಮ ಸಂಬಂಧ (Illegal Relationship) ಹೊಂದಿದ್ದ ಜೋಡಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಮಹಿಳೆಯ ಸಂಬಂಧಿಕರು ಈ ಜೋಡಿಯನ್ನು ಜಮೀನಿನಲ್ಲಿ ಕಟ್ಟಿ ಹಾಕಿ ಥಳಿಸಿದ್ದು, ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ (Vijayapura) ನಡೆದಿದೆ. ಜಿಲ್ಲೆಯ ಬಸವನ ಬಾಗೇವಾಡಿ (Basavana Bagewadi) ತಾ. ಹತ್ತರಕಿಹಾಳ ಗ್ರಾಮದಲ್ಲಿ ಸಂಗಪ್ಪ ಹೂಗಾರ್ ಮತ್ತು ವಿವಾಹಿತ ಮಹಿಳೆ ಏಕಾಂತದಲ್ಲಿ ಇದ್ದಾಗಲೇ ಸಿಕ್ಕಿಬಿದ್ದಿದ್ದಾರೆ. ಈ ಘಟನೆ ಜನವರಿ 19ರಂದು ನಡೆದಿದ್ದು ವಿಡಿಯೋ ವೈರಲ್ ಆದ ನಂತರ ಘಟನೆ ಬೆಳಕಿಗೆ ಬಂದಿದೆ. ಏಕಾಂತದಲ್ಲಿದ್ದಾಗಲೇ ಸಿಕ್ಕಿಬಿದ್ದ ಸಂಗಪ್ಪ ಹೂಗಾರ್ ಹಾಗೂ ವಿವಾಹಿತ ಮಹಿಳೆಯನ್ನು ಆಕೆಯ ಸಂಬಂಧಿಕರು ಪಕ್ಕದ ದೇಗಿನಾಳ ಗ್ರಾಮಕ್ಕೆ ಹೊತ್ತೊಯ್ದು ಕಟ್ಟಿ ಹಾಕಿ ಥಳಿಸಿದ್ದಾರೆ ಎನ್ನಲಾಗಿದೆ.
ಸಂಗಪ್ಪ ಸಾವು
ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಸಂಗಪ್ಪನನ್ನು ಮಲ್ಲಪ್ಪ ಕೊಲಕಾರ್, ಪರಸಪ್ಪ, ಬಸಪ್ಪ, ಪ್ರಭು ನಾಟಿಕರ್ ಎಂಬುವವರು ಕೈಕಾಲು ಕಟ್ಟಿ ಥಳಿಸಿದ್ದಾರೆ. ಖಾಲಿ ಜಮೀನೊಂದರಲ್ಲಿ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಸಂಗಪ್ಪ, ಎರಡು ದಿನಗಳ ನಂತರ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಮೊದಲೇ ನಡೆದಿತ್ತು ನ್ಯಾಯ ಪಂಚಾಯಿತಿ
ಈ ಘಟನೆಗೂ ಮೊದಲೇ ಅಕ್ರಮ ಸಂಬಂಧ ಹೊಂದಿದ್ದ ಸಂಗಪ್ಪ ಹಾಗೂ ಮಹಿಳೆ ವಿಚಾರವಾಗಿ ಊರಿನಲ್ಲಿ ನ್ಯಾಯ ಪಂಚಾಯಿತಿ ನಡೆಸಲಾಗಿತ್ತು. ಪಂಚಾಯಿತಿಯಲ್ಲಿ 2 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಜೊತೆಗೆ ಸಂಗಪ್ಪನ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಸಬ್ ರೆಜಿಸ್ಟರ್ ಕಚೇರಿಗೆ ಹೋಗುವಾಗಲೇ ದಾರಿ ಮಧ್ಯೆ ಸಂಗಪ್ಪ ಸಾವನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Crime News: ಥೂ.. ಇವನೆಂಥಾ ಗಂಡ! ಪತ್ನಿಯನ್ನೇ ಅತ್ಯಾಚಾರ ಮಾಡುವಂತೆ ಸ್ನೇಹಿತನಿಗೆ ಸಹಕರಿಸಿದ ಕಿರಾತಕ
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಇಬ್ಬರು ಹಾಗೂ ಸಹಕರಿಸಿದ ಐದು ಮಂದಿಗೆ ಪೋಕ್ಸೋ ಕಾಯ್ದೆಯಡಿ ಚಾಮರಾಜನಗರದ ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿದೆ. ಚಾಮರಾಜನಗರ ಕ್ರಿಶ್ಚಿಯನ್ ಕಾಲೋನಿಯ ಮಹಮದ್ ಮಿನಾಜ್ ಖಾನ್, ಮಸ್ತಾಖಿಮ್‌ಖಾನ್, ಕೆಪಿ ಮೊಹಲ್ಲಾದ ಸಲ್ಮಾನ್ ಖಾನ್, ಮಂಡ್ಯದ ಶಾರುಖ್‌ಖಾನ್, ಮಹಮದ್ ಅಮೀರ್, ಬೆಂಗಳೂರು ಬೊಮ್ಮನಹಳ್ಳಿಯ ವಹೀದ್ ಅಹಮದ್, ಮೈಸೂರು ಶಾಂತಿ ನಗರದ ಸೈಯದ್ ಉಮರ್ ಎಂಬುವರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಫೋಟೋ ತೆಗೆದುಕೊಂಡು ಬ್ಲಾಕ್ಮೇಲ್
ಅಪ್ರಾಪ್ತ ಬಾಲಕಿಯೊಂದಿಗೆ ಸರಸ ಸಲ್ಲಾಪದ ಫೋಟೋ ತೆಗೆದುಕೊಂಡಿದ್ದ ದುರುಳರು ಬ್ಲಾಕ್ ಮೇಲ್ ಮಾಡಿ, ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರವೆಸಗಿದ್ದರು. ಮಹಮದ್‌ಮಿನಾಜ್ ಖಾನ್, ಕೆಪಿ ಮೊಹಲ್ಲಾದ ಸಲ್ಮಾನ್ ಖಾನ್ ಎಂಬ ಇಬ್ಬರು ಯುವಕರಿಂದ ಈ ಕೃತ್ಯ ಎಸಗಿದ್ದರು. ಇವರಿಗೆ ಐವರು ಆರೋಪಿಗಳ ಸಹಕಾರ ನೀಡಿದ್ದರು. ಇದೀಗ ಕೋರ್ಟ್ ಎಲ್ಲಾ ಏಳು ಮಂದಿ ಆರೋಪಿಗಳಿಗೆ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ನೊಂದ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದಿಂದ 2 ಲಕ್ಷ ರೂ.ಪರಿಹಾರ ನೀಡಲು ಆದೇಶ ನೀಡಿಸಿದೆ.
ವರದಕ್ಷಿಣೆಗೆ ಮಹಿಳೆ ಬಲಿ
ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿ ಟೆಕ್ಕಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಾಧುರಿ (26) ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಗುರುಪ್ರಸಾದ್ ಎಂಬಾತನೊಂದಿಗೆ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಮಾಧುರಿ ಕಳೆದ ಗುರುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.
ಅಕ್ರಮ ಸಂಬಂಧ ಆರೋಪ
ವಿವಾಹವಾದ ಆರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಕೆಲ ವರ್ಷಗಳ ನಂತರ ಇಬ್ಬರ ನಡುವೆ ಜಗಳ ಶುರುವಾಗಿದೆ. ಮದುವೆಯಾದ್ರೂ ಮತ್ತೊಬ್ಬ ಯುವತಿಯ ಜೊತೆ ಪತಿ ಗುರುಪ್ರಸಾದ್ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ವಿಷಯ ಗೊತ್ತಾದ ನಂತರ ಮಾಧುರಿ ಆತನನ್ನ ಪ್ರಶ್ನೆ ಮಾಡಲು ಶುರು ಮಾಡಿದ್ದಾಳೆ. ಈ ವಿಚಾರವಾಗಿ ಆಗಾಗ್ಗೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಪತಿ ವರದಕ್ಷಿಣೆಗಾಗಿ ಮಾಧುರಿಗೆ ಕಿರುಕುಳ ನೀಡುತ್ತಿದ್ದ ಎಂದು ಮಾಧುರಿ ಪೋಷಕರು ಗುರುಪ್ರಸಾದ್ ಮತ್ತು ಕುಟುಂಬಸ್ಥರ ವಿರುದ್ಧ ವರ್ತೂರು ಠಾಣೆಗೆ ದೂರು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ