ದರೋಡೆಗೆ ಬಂದ ಕಳ್ಳ ಹಾಸಿಗೆಯಲ್ಲಿ ಹಾಯಾಗಿ ನಿದ್ರಿಸಿದ!; ಮಂಗಳೂರಿನಲ್ಲೊಂದು ವಿಚಿತ್ರ ಘಟನೆ!

ಈ ಘಟನೆ ನಡೆದಿದ್ದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೇಟೆಯಲ್ಲೇ ಇರುವ ಸುದರ್ಶನ್ ಎನ್ನುವವರ ಮನೆಯಲ್ಲಿ. ಕಳೆದ ಎರಡು ದಿನಗಳ ಹಿಂದೆ ಈ‌ ಮನೆಗೆ ಕಳ್ಳನೊಬ್ಬ ನುಗ್ಗಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

news18-kannada
Updated:February 28, 2020, 1:13 PM IST
ದರೋಡೆಗೆ ಬಂದ ಕಳ್ಳ ಹಾಸಿಗೆಯಲ್ಲಿ ಹಾಯಾಗಿ ನಿದ್ರಿಸಿದ!; ಮಂಗಳೂರಿನಲ್ಲೊಂದು ವಿಚಿತ್ರ ಘಟನೆ!
ಸಾಂದರ್ಭಿಕ ಚಿತ್ರ
  • Share this:
ಮಂಗಳೂರು: ಎಲ್ಲಾ ವೃತ್ತಿಗೂ ಕೌಶಲ್ಯದ ಅಗತ್ಯವಿದೆ. ಕೌಶಲ್ಯವಿದ್ದರೂ ಕೆಲವೊಮ್ಮೆ ಗ್ರಹಚಾರ ಸರಿಯಿಲ್ಲದಿದ್ದರೆ ಕೆಲಸವೆಲ್ಲಾ ಕೆಟ್ಟು‌ ಹೋಗುವುದು‌ ಗ್ಯಾರಂಟಿ. ನಾವಿಲ್ಲಿ ಹೇಳುತ್ತಿರುವುದು ಕಳ್ಳನ ಕಥೆಯನ್ನ. ದಕ್ಷಿಣಕನ್ನಡ ಉಪ್ಪಿನಂಗಡಿಯಲ್ಲಿ ನಡೆದ ಈ ಘಟನೆಯಲ್ಲಿ ಕಳ್ಳತನಕ್ಕೆಂದು ಬಂದ ಕಳ್ಳ ಮನೆಯಲ್ಲಿ ಹಾಯಾಗಿ ಮಲಗಿದ್ದಾನೆ. ಕಳ್ಳತನ ಮಾಡದಂತೆ ತಡೆದಿರುವುದು ಮನೆ ಮಂದಿ ಆರಾಧಿಸಿಕೊಂಡು ಬಂದ ದೈವಗಳೇ ಎನ್ನುವ ಮಾತುಗಳೂ ಕೇಳಿ ಬಂದಿವೆ.

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪೇಟೆಯಲ್ಲೇ ಇರುವ ಸುದರ್ಶನ್ ಎನ್ನುವವರ ಮನೆ. ಕಳೆದ ಎರಡು ದಿನಗಳ ಹಿಂದೆ ಈ‌ ಮನೆಗೆ ಕಳ್ಳನೊಬ್ಬ ನುಗ್ಗಿದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಹಾರ ಮೂಲದ ಅನಿಲ್ ಸಹಾನಿ ಎನ್ನುವ ಕಳ್ಳ  ಮನೆಯ ಹೆಂಚನ್ನು ತೆಗೆದು ಸುದರ್ಶನ್ ಅವರ ಮನೆಗೆ ನುಗ್ಗಿ ಕಳ್ಳತನಕ್ಕೆ ಎಲ್ಲಾ ಸಿದ್ಧತೆಯನ್ನು ನಡೆಸಿದ್ದ. ಮನೆಯಲ್ಲಿದ್ದ ಕಪಾಟಿನ ಬೀಗದ ಕೈ, ಕಾರುಗಳ ಬೀಗದ ಕೈ ಎಲ್ಲವನ್ನೂ ಪಡೆದುಕೊಂಡ ಈತ ಬಳಿಕ ಬೆಳಿಗ್ಗೆ ಮನೆ ಮಂದಿ ಎದ್ದಾಗ ಮನೆಯ ಹಾಸಿಗೆಯಲ್ಲಿ ಆರಾಮವಾಗಿ ಮಲಗಿದ್ದ.

ಎಲ್ಲಾ ಬೀಗದ ಕೈಗಳೂ ತನ್ನ ಬಳಿಯಲ್ಲಿಟ್ಟು ಯಾವುದೇ ಕಳ್ಳತನ ಮಾಡದೆ, ಮನೆಯ ಹೊರಗೆ ಹೋಗಿ ತಪ್ಪಿಸಿಕೊಳ್ಳಲು ಸುಲಭದ ದಾರಿಯಿದ್ದರೂ ತಪ್ಪಿಸಿಕೊಳ್ಳದೆ, ಮನೆ ಮಂದಿಯ ಕೈಗೆ ಸಿಕ್ಕಿ ಬಿದ್ದಿರುವುದು ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ಮನೆ ಮಂದಿ ಹಾಗೂ ಸ್ಥಳೀಯರ ಪ್ರಕಾರ ಇದು ಮನೆಯಲ್ಲಿ ನೂರಾರು ವರ್ಷಗಳಿಂದ ಆರಾಧಿಸಿಕೊಂಡು ಬರುತ್ತಿರುವ ದೈವಗಳ ಶಕ್ತಿ ಎನ್ನುವುದಾಗಿದೆ.

ಇದನ್ನೂ ಓದಿ:  ಮಂಡ್ಯದಲ್ಲಿ ಒಂದರ ಮೇಲೊಂದು ಪವಾಡ ಸೃಷ್ಟಿಸುತ್ತಿರುವ ಬಸಪ್ಪ; ಸಾಕ್ಷತ್​ ದೈವ ಸ್ವರೂಪಿ ಈ ಕಾಮಧೇನು

ಈ ಘಟನೆಯ ಹತ್ತು ದಿನಗಳ ಹಿಂದೆ ಸುದರ್ಶನ್ ಅವರ ಕುಟುಂಬ ಆರಾಧಿಸಿಕೊಂಡು ಬರುತ್ತಿರುವ , ಅವರ ಮನೆಯ ಪಕ್ಕದಲ್ಲೇ ಇರುವ ದೈವದ ಗುಡಿಗೂ ಒಬ್ಬ ಕಳ್ಳ ನುಗ್ಗಿದ್ದ. ಗುಡಿಗೆ ಭಕ್ತರು ಹಾಕುವ ಕಾಣಿಕೆ ಹಣವನ್ನು ಎಗರಿಸಲು ಗುಡಿಯ ಒಳಗೆ ನುಗ್ಗಿದ ಕಳ್ಳನಿಗೆ ಹೊರಗೆ ಬರಲು ಸಾಧ್ಯವೇ ಆಗಿಲ್ಲ.ಬಳಿಕ ಆತನನ್ನು ಹಿಡಿದು ಉಪ್ಪಿನಂಗಡಿ ಪೋಲೀಸರಿಗೆ ಒಪ್ಪಿಸಲಾಗಿತ್ತು.

ತುಳುನಾಡಿನಲ್ಲಿ ದೈವಗಳ ಆರಾಧನೆಗೆ ಭಾರೀ ಮಹತ್ವವಿದೆ. ದೈವಗಳ ಕಾರ್ಣಿಕ ಹಲವು ಕಡೆಗಳಲ್ಲಿ ತೋರಿಸಿಕೊಟ್ಟ ನಿದರ್ಶನವೂ ತುಳುನಾಡಿನಲ್ಲಿದ್ದು, ಇದಕ್ಕೆ ಇನ್ನೊಂದು ಸೇರ್ಪಡೆ ಉಪ್ಪಿನಂಗಡಿಯ ಈ ಘಟನೆ ಎನ್ನುವುದನ್ನು ಜನ ಮೆಲುಕು ಹಾಕಲಾರಂಭಿಸಿದ್ದಾರೆ. ಭಾರೀ ಕಷ್ಟಪಟ್ಟು ಹೆಂಚು ತೆಗೆದು ಮನೆಗೆ ನುಗ್ಗಿ ಬೀಗದ ಕೈ ಯನ್ನೂ  ಪಡೆದುಕೊಂಡ ಕಳ್ಳನಿಗೆ ಏಕಾಏಕಿ ಮನೆಯೊಳಗೆ ನಿದ್ದೆ ಮಾಡುತ್ತಾನೆಂದಾದರೆ ಇದರಲ್ಲಿ ದೈವದ ಶಕ್ತಿ ಇದೆ ಎನ್ನುವುದು ಸ್ಥಳೀಯರ ನಂಬಿಕೆಯೂ ಆಗಿದೆ.

ಒಟ್ಟಾರೆಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಕಳ್ಳ ಇದೀಗ ಜೈಲು ಸೇರಿದ್ದಾನೆ. ಕಳ್ಳತನಕ್ಕೆ ಬಂದ ಈತ ಮನೆ ಮಂದಿಯೊಂದಿಗೆ ಹಾಯಾಗಿ ನಿದ್ರಿಸಿದ ಪ್ರಕರಣ ಸೋಜಿಗದ ಜೊತೆಗೆ ಹಾಸ್ಯಕ್ಕೂ ಕಾರಣವಾಗಿದೆ.
First published: February 28, 2020, 1:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading