ಜಿಎಸ್‌ಟಿ ಪಾಲಿಗೆ ಒತ್ತಾಯಿಸಿ ಮೋದಿಗೆ ಪತ್ರ ಬರೆದ ಮಮತಾ ಬ್ಯಾನರ್ಜಿ, ಸಾಲ ಪಡೆಯಲು ಸಿದ್ದರಾದ ಯಡಿಯೂರಪ್ಪ

ಕೇಂದ್ರ ಸರ್ಕಾರದ ಈ ನೀತಿಯನ್ನು ತೀವ್ರವಾಗಿ ಟೀಕಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದಿರುವ ಮಮತಾ ಬ್ಯಾನರ್ಜಿ, ಇದು ಏಕಪಕ್ಷೀಯ ಆಯ್ಕೆಗಳಾಗಿವೆ. ರಾಜ್ಯಗಳು ನಮ್ಮದೇ ಹಣವನ್ನು ಜಿಎಸ್ಟಿ ರೂಪದಲ್ಲಿ ಕೇಂದ್ರಕ್ಕೆ ನೀಡಿ ಈಗ ಲಕ್ಷ ಕೋಟಿ ರೂಗಳ ಲೆಕ್ಕದಲ್ಲಿ ಸಾಲ ಪಡೆಯಬೇಕೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

  • Share this:
ಕೋಲ್ಕತ್ತಾ (ಆಗಸ್ಟ್ 03); ಕೇಂದ್ರ ಸರ್ಕಾರ ನಿಯಮದಂತೆ ರಾಜ್ಯಗಳಿಗೆ ನೀಡಬೇಕಾಗಿರುವ ನ್ಯಾಯಯುತವಾದ ಜಿಎಸ್‌ಟಿ ಪರಿಹಾರ ಹಣವನ್ನು ನೀಡಲು ಹಿಂದೇಟು ಹಾಕುವುದು ಸರಿಯಲ್ಲ. ಇದು ನಮ್ಮ ರಾಷ್ಟ್ರದ ’ಫೆಡರಲಿಸ್ಟ್’‌ ನೀತಿಗೆ ಅಸಹನೀಯ ಹೊಡೆತ. ಹೀಗಾಗಿ ರಾಜ್ಯಗಳಿಗೆ ಸಾಲ ನೀಡುವ ಬದಲು ಕೇಂದ್ರ ಸರ್ಕಾರವೇ ಸಾಲ ಪಡೆದು ನಮ್ಮ ಪಾಲಿನ ಪಾಲನ್ನು ನೀಡಲಿ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಜಿಎಸ್‌ಟಿ ಕೊರತೆಗೆ ರಾಜ್ಯಗಳಿಗೆ ಪರಿಹಾರ ನೀಡುವುದು ಕೇಂದ್ರದ ಜವಾಬ್ದಾರಿಯಲ್ಲ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಕಾನೂನು ಅಭಿಪ್ರಾಯ ನೀಡಿದ್ದರು. ನರೇಂದ್ರ ಮೋದಿಗೆ ಸಿಎಂ ಮಮತಾ ಬ್ಯಾನರ್ಜಿ ಬರೆದಿರುವ ಪತ್ರದಲ್ಲಿ ಕೆ.ಕೆ. ವೇಣುಗೋಪಾಲ್ ಅವರ ಅಭಿಪ್ರಾಯವನ್ನು ಉಲ್ಲೇಖಿಸಿ, "ಇದು ಕುತಂತ್ರದ ಕೃತ್ಯವೆಂದು ತೋರುತ್ತದೆ" ಎಂದು ದೂರಲಾಗಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಕಳೆದ ಆಗಸ್ಟ್ 27 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಗಳು ಎದುರಿಸುತ್ತಿರುವ ಬಿಕ್ಕಟ್ಟು ತೀರಾ ಅನಿರೀಕ್ಷಿತ ಎಂದಿದ್ದರು. ಅಲ್ಲದೆ, ಕೊರೋನಾ ವೈರಸ್ ಅನ್ನು ಉಲ್ಲೇಖಿಸಿ ಇದು “ದೇವರ ಕಾರ್ಯ” ಎಂದು ಅಭಿಪ್ರಾಯಪಟ್ಟಿದ್ದರು.

ಅಲ್ಲದೆ, "ಈ ವಿತ್ತೀಯ ವರ್ಷದಲ್ಲಿ ಜಿಎಸ್‌ಟಿ ಸಂಗ್ರಹ 2.35 ಲಕ್ಷ ಕೋಟಿ ಕೊರತೆ ಬೀಳುವ ಕಾರಣ ರಾಜ್ಯಗಳಿಗೆ ಪಾಲು ನೀಡಲು ಹಣದ ಕೊರತೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರಗಳಿಗೆ ಜಿಎಸ್‌ಟಿ ಪರಿಹಾರದ ಪಾಲನ್ನು ನೀಡುವುದು ಸಾಧ್ಯವಿಲ್ಲ. ಆದರೆ, ಈ ಕೊರತೆಯನ್ನು ನೀಗಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಎರಡು ಆಯ್ಕೆಗಳನ್ನು ನೀಡಲಿದೆ. ಮೊದಲ ಆಯ್ಕೆಯಾಗಿ ಆರ್‌ಬಿಐನಿಂದ 97,000 ಕೋಟಿ ರೂ. ಸಾಲ ಪಡೆಯಬಹುದು ಮತ್ತು ಎರಡನೇ ಆಯ್ಕೆಯಾಗಿ ಹೊರಗಿನಿಂದ 2.35 ಲಕ್ಷ ಕೋಟಿ ಸಾಲ ಪಡೆಯಬಹುದೆಂಬ ಮತ್ತು ಅದನ್ನು 2022 ರ ನಂತರ ಕೇಂದ್ರ ಸರ್ಕಾರ ಭಾಗಶಃ ತೀರಿಸುತ್ತದೆ" ಎಂದು ರಾಜ್ಯದ ಎದುರು ಎರಡು ಆಯ್ಕೆಗಳನ್ನು ಮುಂದಿಟ್ಟಿದ್ದರು.

ಕೇಂದ್ರ ಸರ್ಕಾರದ ಈ ನೀತಿಯನ್ನು ತೀವ್ರವಾಗಿ ಟೀಕಿಸಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರಬರೆದಿರುವ ಮಮತಾ ಬ್ಯಾನರ್ಜಿ, "ಇದು ಏಕಪಕ್ಷೀಯ ಆಯ್ಕೆಗಳಾಗಿವೆ. ರಾಜ್ಯಗಳು ನಮ್ಮದೇ ಹಣವನ್ನು ಜಿಎಸ್ಟಿ ರೂಪದಲ್ಲಿ ಕೇಂದ್ರಕ್ಕೆ ನೀಡಿ ಈಗ ಲಕ್ಷ ಕೋಟಿ ರೂಗಳ ಲೆಕ್ಕದಲ್ಲಿ ಸಾಲ ಪಡೆಯಬೇಕೆ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಕೊರೋನಾ ವೈರಸ್ ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಹಲವು ರಾಜ್ಯಗಳು ತಮ್ಮ ಪಾಲಿನ ಹಣಕ್ಕಾಗಿ ಒತ್ತಾಯಿಸುತ್ತಿವೆ. ಆದರೆ, ಕೇಂದ್ರ ಸರ್ಕಾರವೇ ರಾಜ್ಯಗಳ ಬಳಿ ತನ್ನ ಕಷ್ಟ ತೋಡಿಕೊಂಡಿದ್ದು ರಾಜ್ಯಗಳನ್ನು ಇದೀಗ ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಸರಕು ಮತ್ತು ಸೇವಾ ತೆರಿಗೆ ಅಸ್ತವ್ಯಸ್ತವಾಗಿರುವುದು ನನಗೆ ತೀವ್ರ ದುಃಖವಾಗಿದೆ. ಇದು ರಾಜ್ಯ ಸರ್ಕಾರಗಳ ಬಗ್ಗೆ ಭಾರತ ಸರ್ಕಾರದ ನಂಬಿಕೆ ಮತ್ತು ನೈತಿಕ ಹೊಣೆಗಾರಿಕೆಯನ್ನು ಪ್ರಶ್ನೆ ಮಾಡುವಂತಿದ್ದು ದ್ರೋಹಕ್ಕೆ ಸಮಾನವಾಗಿದೆ. ಒಕ್ಕೂಟ ವ್ಯವಸ್ಥೆಯ ಮೇಲಿನ ನಂಬಿಕೆಯೇ ಇದೀಗ ಒಡೆದುಹೋಗಿದೆ.

ರಾಜ್ಯಗಳು ಕೇಂದ್ರಕ್ಕೆ ಸಂಪೂರ್ಣ ವ್ಯಾಟ್ ವಿಧಿಸುವ ಅಧಿಕಾರವನ್ನು ಒಳಗೊಂಡಂತೆ ಶೇ.70 ರಷ್ಟು ಅಧಿಕಾರವನ್ನು ಬಿಟ್ಟುಕೊಟ್ಟಿವೆ. ಆದರೂ ನಮ್ಮ ಪಾಲಿನ ತೆರಿಗೆ ಹಣ ಮಾತ್ರ ನಮಗಿಲ್ಲ ಎಂದರೆ ಏನರ್ಥ?. ಹೀಗಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯ ಅತ್ಯುತ್ತಮ ಉದಾಹರಣೆಯೆಂದು ಜಾಗತಿಕವಾಗಿ ಪ್ರಶಂಸಿಸಲ್ಪಟ್ಟ ಜಿಎಸ್‌ಟಿ ವಿಷಯಗಳ ಬಗ್ಗೆ ರಾಜ್ಯಗಳು ಮತ್ತು ಕೇಂದ್ರದ ನಡುವಿನ ನಂಬಿಕೆಯನ್ನು ಯಾರೂ ನಂಬದಂತಹ ಸ್ಥಿತಿ ಎದುರಾಗಿದೆ" ಎಂದು ಮಮತಾ ಬ್ಯಾನರ್ಜಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಅಲ್ಲದೆ, "ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯಗಳಿಗೆ ಪರಿಹಾರ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ. ಹೀಗಾಗಿ ಕೊರತೆಯನ್ನು ಪೂರೈಸಲು ಕೇಂದ್ರ ಸಾಲ ಪಡೆಯಬೇಕು. ಇದಲ್ಲದೆ, ಭಾರತ ಸರ್ಕಾರವು ತನ್ನ ಸಾಲವನ್ನು ಪೂರೈಸಲು ಸಂಪನ್ಮೂಲಗಳನ್ನು ಸಂಗ್ರಹಿಸಬಹುದು, ಆದರೆ ರಾಜ್ಯಗಳು ತಮ್ಮ ಹಣಕಾಸು ಕುಸಿತದ ಅಂಚಿನಲ್ಲಿರುವಾಗ ಹೆಚ್ಚಿನ ಹೆಚ್ಚುವರಿ ಸಾಲಗಳನ್ನು ಪೂರೈಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇತ್ತ ಕೇರಳ ಮತ್ತು ಛತ್ತೀಸ್‌ ಗಢ ಸರ್ಕಾರಗಳು ಸಹ ಕೇಂದ್ರ ಸರ್ಕಾರ ಸಾಲ ಪಡೆದು ಬಾಕಿ ನೀಡುವಂತೆ ಒತ್ತಾಯಿಸಿವೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಪ್ರಧಾನಿ ಮೋದಿಗೆ ಪತ್ರ ಬರೆದು ಈ ಸಮಯದಲ್ಲಿ ಕಾನೂನುಬದ್ಧವಾದ ಮತ್ತು ಸುಸ್ಥಿರ ಆಯ್ಕೆಗಳನ್ನು ಪರಿಗಣಿಸುವಂತೆ ತಿಳಿಸಿದ್ದಾರೆ.

ಸಾಲ ಪಡೆಯಲು ಕರ್ನಾಟಕ ಸಿದ್ಧವೆಂದ ಬಿಎಸ್‌ವೈ:

ಅತ್ತ ಬಿಜೆಪಿಯೇತರ ರಾಜ್ಯಗಳು ತಮ್ಮ ಪಾಲಿನ ಜಿಎಸ್‌ಟಿ ಹಣಕ್ಕಾಗಿ ಕೇಂದ್ರದ ಎದುರು ಹೋರಾಟಕ್ಕಿಳಿದಿದ್ದರೆ, ಇತ್ತ ಕರ್ನಾಟಕ ಕೇಂದ್ರ ಸರ್ಕಾರದಿಂದ ಸಾಲ ಪಡೆಯಲು ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. ಅಲ್ಲದೆ, ತಮ್ಮ ಪಾಲಿನ ಜಿಎಸ್‌ಟಿ ಹಣಬಿಟ್ಟು ಸಾಲಕ್ಕೆ ಮುಂದಾದ ಮೊದಲ ಸಿಎಂ ಎಂದು ಗುರುತಿಸಲ್ಪಟ್ಟಿದ್ದಾರೆ.ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ನೀಡಿರುವ ಎರಡು ಆಯ್ಕೆಗಳಲ್ಲಿ ಮೊದಲನೆಯದನ್ನು ಆಯ್ಕೆ ಮಾಡಿಕೊಂಡಿದೆ. ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪರಿಹಾರದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ ಎರಡು ಆಯ್ಕೆಗಳ ಮೌಲ್ಯಮಾಪನದ ನಂತರ ರಾಜ್ಯ ಸರ್ಕಾರವು ಆಯ್ಕೆ 1ರ ಅಡಿಯಲ್ಲಿ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಆಯ್ಕೆಯನ್ನು ಕರ್ನಾಟಕ ತನ್ನ ಆದ್ಯತೆಯನ್ನಾಗಿ ತೀರ್ಮಾನಿಸಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ" ಎಂದು ತಿಳಿಸಿದ್ದಾರೆ.
Published by:MAshok Kumar
First published: