ಕಲಬುರಗಿ(ಫೆ. 24): ನಮಗೆ ಬೇಕಾಗಿರುವುದು ಡೀಸೆಲ್, ಪೆಟ್ರೋಲ್. ಈ ಬಗ್ಗೆ ತಮ್ಮ ಭಾಷಣದ ವೇಳೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮಾತನಾಡಲಿಲ್ಲ. ಅವರ ಈ ಭೇಟಿಯಿಂದ ನಮಗೆ ಯಾವುದೇ ಲಾಭವಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ನಗರದಲ್ಲಿ ಮಾತನಾಡಿದ ಅವರು, ಭಾರತೀಯ ಉದ್ಯೋಗಿಗಳಿಗೆ ಎಚ್1 ಬಿ ವೀಸಾ ನೀಡುವ ವ್ಯವಸ್ಥೆಯನ್ನು ಸರಳ ಮಾಡುವ ಕುರಿತೂ ಅವರು ಮಾತನಾಡಲಿಲ್ಲ. ಈ ವಿಚಾರದಲ್ಲಿ ಮತ್ತಷ್ಟು ಷರತ್ತು ಹಾಕಿ ಭಾರತೀಯರಿಗೆ ತೊಂದರೆ ಮಾಡಿದ್ದಾರೆ. ಇಂತಹ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು, ವೈಯಕ್ತಿಕ ಸ್ನೇಹಿತರು ಎನ್ನುವ ಕಾರಣಕ್ಕೆ ಬಂದಿದ್ದೇನೆ ಎನ್ನುತ್ತಾರೆ. ವೈಯಕ್ತಿಕ ಸ್ನೇಹಿತರು ಎನ್ನುವದಾದರೆ, ಮನೆಗೆ ಕರೆದುಕೊಂಡು ಹೋಗಬೇಕಿತ್ತು. ಹೀಗೆ ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು ಬರಮಾಡಿಕೊಳ್ಳೋ ಅವಶ್ಯಕತೆ ಇರಲಿಲ್ಲ ಎಂದು ಕಿಡಿಕಾರಿದರು.
ಟ್ರಂಪ್ಗೆ ಅದ್ದೂರಿ ಸ್ವಾಗತ ನೀಡಲು ಸರ್ಕಾರದ ಕೋಟ್ಯಂತರ ರೂ. ಖರ್ಚು ಮಾಡಿದೆ. ಲಕ್ಷಾಂತರ ಜನರಿಗೆ ತೊಂದರೆ ಕೊಟ್ಟು ಸ್ವಾಗತಿಸಲಾಗಿದೆ. ಸ್ಲಂಗಳು ಕಾಣಬಾರದೆಂದು ದೊಡ್ಡ ಗೋಡೆ ನಿರ್ಮಾಣ ಮಾಡಲಾಗಿದೆ. ಇಷ್ಟೊಂದು ದುಬಾರಿ ಭದ್ರತೆ ಈ ಹಿಂದೆ ಎಂದೂ ಆಗಿಲ್ಲ. ಗೋಡೆ ನಿರ್ಮಿಸುವುದರಿಂದ ಬಡತನ ಮುಚ್ಚಿಡಲು ಆಗಲ್ಲ ಎಂದು ಮೋದಿ ಕ್ರಮವನ್ನು ಟೀಕಿಸಿದರು.
ಇದನ್ನು ಓದಿ: Namaste Trump : ಟ್ರಂಪ್ ಔತಣಕೂಟಕ್ಕೆ ಬಿಎಸ್ವೈಗೂ ಆಹ್ವಾನ; ಬಜೆಟ್ ಹಿನ್ನೆಲೆ ಸಿಎಂ ದೆಹಲಿ ಪ್ರವಾಸ ಅನುಮಾನ
ಟ್ರಂಪ್ ಕಾರ್ಯಕ್ರಮ ಗಮನಿಸಿದರೆ ಅಮೆರಿಕಾದ ಚುನಾವಣಾ ಪ್ರಚಾರ ಇಂಡಿಯಾದಲ್ಲಿ ನಡೆಯುತ್ತಿದೆಯೋ ಎಂಬಂತೆ ಬಾಸವಾಗುತ್ತಿದೆ. ಇಲ್ಲಿಂದಲೇ ಟ್ರಂಪ್ ಚುನಾವಣಾ ಪ್ರಚಾರ ಆರಂಭ ಮಾಡಿದ್ದಾರೆ ಎನ್ನಿಸುತ್ತಿದೆ. ಅವರು ನಮ್ಮ ದೇಶಕ್ಕೆ ಬರುವುದು ಬೇಡ ಎಂದು ನಾವು ಹೇಳುತ್ತಿಲ್ಲ. ಈ ಭೇಟಿ ವೇಳೆ ಹಲವು ಪ್ರಮುಖ ಒಪ್ಪಂದಗಳು ನಡೆಯಬೇಕು ಎಂಬುದು ನಮ್ಮ ಇಚ್ಛೆ ಎಂದರು.
ರಾಜ್ಯದ ಅನುದಾನ ಕಡಿತಕ್ಕೆ ಕಿಡಿ
15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ಕರ್ನಾಟಕ ರಾಜ್ಯಕ್ಕೆ ಅನುದಾನ ಕಡಿತಗೊಳಿಸಿದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದಿಂದ ಈಗಾಗಲೇ ಅನ್ಯಾಯವಾಗುತ್ತಿದೆ. ನಮಗೆ ಸಿಗಬೇಕಾದ ಹಣ ಸಿಗುತ್ತಿಲ್ಲ. ರೈಲ್ವೆ ಯೋಜನೆ ಸೇರಿದಂತೆ ಯಾವ ಯೋಜನೆಗೂ ಹಣ ಬಿಡುಗಡೆಯಾಗುತ್ತಿಲ್ಲ. ಕೋಲಾರ ಬೋಗಿ ಫ್ಯಾಕ್ಟರಿ ಮಂಜೂರು ಮಾಡಿಸಿದ್ದೆ, ಆದರೆ ಅದನ್ನೂ ಮುಚ್ಚಿಸಿದ್ದಾರೆ. ಯಾದಗಿರಿ ಜಿಲ್ಲೆ ಸೈದಾಪುರ ಕೋಚ್ ಫ್ಯಾಕ್ಟರಿ ವಿಸ್ತಣೆಯನ್ನೂ ಸ್ಥಗಿತಗೊಳಿಸಲಾಗಿದೆ. 371(ಜೆ) ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚು ಅನುದಾನ ಕೊಡಬೇಕಿತ್ತು, ಅದನ್ನೂ ಮಾಡಿಲ್ಲ. ಅನುದಾನ ಹಂಚಿಕೆಯಲ್ಲಿ ಆಗುತ್ತಿರೋ ಅನ್ಯಾಯ ಸರಿಪಡಿಸಲು ಯತ್ನಿಸಬೇಕು. ಅದನ್ನು ಬಿಟ್ಟು ಬರೀ ಟ್ರಂಪ್ ಜಪ ಮಾಡುತ್ತಾ ಕುಳಿತರೆ ಪ್ರಯೋಜನವಿಲ್ಲ ಎಂದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ