‘ಅಮಿತ್​​ ಶಾಗೆ ನೆರೆ ಸಂತ್ರಸ್ತರಿಗಿಂತ ಪೌರತ್ವ ಕಾಯ್ದೆಯೇ ಮುಖ್ಯವಾಗಿದೆ‘: ಮಲ್ಲಿಕಾರ್ಜುನ್​​ ಖರ್ಗೆ

ದಲಿತ ವಿರೋಧಿಗಳಿಂದಲೇ ಸಿಎಎಗೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಹೇಳಿಕೆ ಅಮಿತ್​ ಶಾ ನೀಡಿದ್ದಾರೆ. ಬಿಜೆಪಿಗೇ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಲು ಹೀಗೆ ಆರೋಪ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ.

ಮಲ್ಲಿಕಾರ್ಜುನ ಖರ್ಗೆ.

 • Share this:
  ಬೆಂಗಳೂರು(ಜ.19): ಪೌರತ್ವ ಕಾಯ್ದೆ ಬಗ್ಗೆ ಮಾತಾಡುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಳಸಾ ಬಂಡೂರಿ ನಾಲೆ ಯೋಜನೆ ಕುರಿತಂತೆ ಯಾಕೇ ಮಾತನಾಡುವುದಿಲ್ಲ? ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಮಲ್ಲಿಕಾರ್ಜುನ್​​ ಖರ್ಗೆ ಪ್ರಶ್ನಿಸಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಮಲ್ಲಿಕಾರ್ಜುನ್​​ ಖರ್ಗೆ, ಹುಬ್ಬಳ್ಳಿಯಲ್ಲಿ ಅಮಿತ್ ಶಾ ಭಾಷಣದ ವೇಳೆ ರಾಜ್ಯಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಬಗ್ಗೆಯೂ ಪ್ರಸ್ತಾಪಿಸಲಿಲ್ಲ. ಪೌರತ್ವ ಕಾಯ್ದೆ ಬದಲಿಗೆ ಕಳಸಾ ಬಂಡೂರಿ ನಾಲೆ ಯೋಜನೆ ಬಗ್ಗೆ ಯಾಕೇ ಮಾತಾಡಲಿಲ್ಲ? ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಅಮಿತ್​​ ಶಾಗೆ ಪ್ರಶ್ನಿಸಲಿ ಎಂದು ಸವಾಲ್ ಹಾಕಿದರು.

  "ಕೇಂದ್ರ ಗೃಹ ಸಚಿವ ಅಮಿತ್​​ ಶಾ ಪೌರತ್ವ ಕಾಯ್ದೆ ಪರ ಪ್ರಚಾರ ಮಾಡಲು ಬಂದಿದ್ದರೆ ಹೊರತು ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅಲ್ಲವೇ ಅಲ್ಲ. ತಮ್ಮ ಬಿಜೆಪಿ ಮತ ಬ್ಯಾಂಕ್ ಉಳಿಸಿಕೊಳ್ಳಲು ಅಮಿತ್​​ ಶಾ ರಾಜ್ಯಕ್ಕೆ ಬಂದಿದ್ದಾರೆ. ಬಿಜೆಪಿಗರಿಗೆ ರಾಜ್ಯದ ಬಡವರು ಮತ್ತು ನೆರೆ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ. ಇವರಿಗೆ ನೆರೆ ಸಂತ್ರಸ್ತರ ಸಮಸ್ಯೆಗಳಿಗಿಂತ ಪೌರತ್ವ ಕಾಯ್ದೆಯೇ ಮುಖ್ಯವಾಗಿದೆ" ಎಂದು ಮಲ್ಲಿಕಾರ್ಜುನ್​​ ಖರ್ಗೆ ಕಿಡಿಕಾರಿದರು.

  ದಲಿತ ವಿರೋಧಿಗಳಿಂದಲೇ ಸಿಎಎಗೆ ವಿರೋಧ ವ್ಯಕ್ತವಾಗುತ್ತಿದೆ ಎಂಬ ಹೇಳಿಕೆ ಅಮಿತ್​ ಶಾ ನೀಡಿದ್ದಾರೆ. ಬಿಜೆಪಿಗೇ ದಲಿತರ ಬಗ್ಗೆ ಕಾಳಜಿ ಇಲ್ಲ. ಸಿಎಎ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಲು ಹೀಗೆ ಆರೋಪ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಇನ್ನು ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಸಂಬಂಧ ಪ್ರತಿಕ್ರಿಯಿಸಿದ ಖರ್ಗೆ, ಹೈಕಮಾಂಡ್​ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಸೋನಿಯಾ ಗಾಂಧಿಯವರು ಏನೇ ತೀರ್ಮಾನ ಮಾಡಲಿ, ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಯಾವಾಗ ತೀರ್ಮಾನ ಮಾಡುತ್ತಾರೇ ಎನ್ನುವುದು ನಮಗಿಂತ ಮಾಧ್ಯಮದವರಿಗೇ ಗೊತ್ತು ಎಂದರು.

  ಇದನ್ನೂ ಓದಿ: ‘ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ‘: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

  ನಿನ್ನೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಸಮಾವೇಶದಲ್ಲಿ ಅಮಿತ್ ಶಾ ಭಾಗಿಯಾಗಿದ್ದರು. ಇಲ್ಲಿನ ವೇದಿಕೆ ಮೇಲೆ ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಅಮಿತ್​​ ಶಾ, ನೆಹರು ಅವರು ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಒಂದು ಮಾತು ಹೇಳಿದ್ಧಾರೆ. ಭಾರತದಿಂದ ಪಾಕಿಸ್ತಾನಕ್ಕೆ ಹೋಗುವ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಜನರಿಗೆ ಉದ್ಯೋಗ ಮತ್ತು ಭದ್ರತೆ ಒದಗಿದುವುದು ಎರಡು ದೇಶಗಳ ಕರ್ತವ್ಯ ಎಂದಿದ್ದರು. ಹಾಗೆಯೇ ಭಾರತ ಇಂದು ನಮ್ಮ ಪಾಲಿನ ಜವಾಬ್ದಾರಿ ಮುಗಿಸಿದೆ ಎಂದಿದ್ದರು.

  ಹಾಗೆಯೇ ನೆರೆ ರಾಷ್ಟ್ರಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಬರುವ ಜನರಿಗೆ ಪೌರತ್ವ ನೀಡುವುದಕ್ಕಾಗಿಯೇ ಈ ಕಾಯ್ದೆ ಜಾರಿಗೊಳಿಸಲಾಗಿದೆ. ಸಿಎಎ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕಾರಣ ಮಾಡುತ್ತಿವೆ. ಮತ ಬ್ಯಾಂಕ್​​ಗಾಗಿ ಜನರಲ್ಲಿ ತಪ್ಪು ಮಾಹಿತಿ ಬಿತ್ತರಿಸುತ್ತಿವೆ. ಕಾಂಗ್ರೆಸ್​ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಸಿಎಎ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
   
  First published: