ಸೋನಿಯಾ ಗಾಂಧಿಗೆ ಬರೆದ ಪತ್ರ ಲೀಕ್ ಆಗಿದ್ದು ಹೇಗೆಂಬ ತನಿಖೆಯಾಗಲಿ; ವೀರಪ್ಪ ಮೊಯ್ಲಿ ಆಗ್ರಹ

ಸೋನಿಯಾ ಗಾಂಧಿಗೆ ಪತ್ರ ಬರೆದ 23 ನಾಯಕರಲ್ಲಿ ನಾನೂ ಒಬ್ಬ. ನಾವು ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದಿಲ್ಲ. ಆ ಪತ್ರ ಲೀಕ್ ಆಗಿದ್ದು ಹೇಗೆಂಬ ಬಗ್ಗೆ ತನಿಖೆಯಾಗಬೇಕು ಎಂದು ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.

ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ

  • Share this:
ಬೆಂಗಳೂರು (ಆ. 25): ಕಾಂಗ್ರೆಸ್​ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆ ತರಬೇಕೆಂದು ಆಗ್ರಹಿಸಿ ಪತ್ರ ಬರೆದವರಲ್ಲಿ ನಾನೂ ಒಬ್ಬ. ಆದರೆ, ಪಕ್ಷದ ನಾಯಕತ್ವವನ್ನು ಪ್ರಶ್ನಿಸಿ ನಾನು ಪತ್ರ ಬರೆದಿರಲಿಲ್ಲ. ಪಕ್ಷ ಸಂಘಟನೆಯಷ್ಟೇ ನಮ್ಮೆಲ್ಲರ ಉದ್ದೇಶವಾಗಿತ್ತು. ನಾವು ನಮ್ಮ ಅಧ್ಯಕ್ಷರಿಗೆ ಬರೆದ ಪತ್ರ ಹೇಗೆ ಲೀಕ್ ಆಯಿತೋ ಗೊತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದ 23 ನಾಯಕರಲ್ಲಿ ತಾವೂ ಒಬ್ಬರು ಎಂದು ವೀರಪ್ಪ ಮೊಯ್ಲಿ ಒಪ್ಪಿಕೊಂಡಿದ್ದಾರೆ. ನಿನ್ನೆ ಕಾಂಗ್ರೆಸ್ ಪಕ್ಷದ ಕಾರ್ಯಕಾರಿಣಿ ಸಭೆ ಆಗಿದೆ. ಪ್ರಮುಖ ಚರ್ಚೆಗಳು ಆಗಿದೆ. 23 ಕಾಂಗ್ರೆಸ್ ನಾಯಕರು ಪಕ್ಷದ ಪುನರ್ ಸಂಘಟನೆ ಬಗ್ಗೆ ಪತ್ರ ಬರೆದಿರುವುದು ನಿಜ. ಅದರಲ್ಲಿ ನಾನು ಕೂಡ ಒಬ್ಬ. ಆದರೆ, ನಾವು ಯಾರೂ ನಾಯಕತ್ವ ಬದಲಾವಣೆ ಬಗ್ಗೆ ಪತ್ರ ಬರೆದಿಲ್ಲ. ಕಾಂಗ್ರೆಸ್ ಈಗ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇದೆ ಎಂದು ರಾಹುಲ್ ಗಾಂಧಿ ಅವರಿಗೆ ಹೇಳಿದೆ. ನಾವು ನಮ್ಮ ಪತ್ರವನ್ನು ಅಧ್ಯಕ್ಷೆಗೆ ಮಾತ್ರ ಬರೆದಿದ್ದು, ಅದು ಹೇಗೆ ಲೀಕ್ ಆಯ್ತು ಎಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಎಲ್ಲಾ ಚಟುವಟಿಕೆಗಳಲ್ಲಿ ನಾವು ಭಾಗಿಯಾದವರು. ನಾವು ಸದುದ್ದೇಶದಿಂದ ಪತ್ರ ಬರೆದಿದ್ದೆವು. ಆ ಪತ್ರದಲ್ಲಿ ನಾನು ಕೂಡ ಸಹಿ ‌ಹಾಕಿದ್ದೆ. ಪಕ್ಷ ಸಂಘಟನೆಗಾಗಿ ನಾವು ತಿಳಿಸಿದ್ದೆವು. ನಾವ್ಯಾರೂ ಪಕ್ಷದ ವಿರುದ್ಧ ಪತ್ರ ಬರೆದವರಲ್ಲ. ಆ ಪತ್ರ ಹೇಗೆ ಲೀಕ್ ಆಯ್ತು? ಇದರ ತನಿಖೆ ಆಗಬೇಕು. ಈ ಬಗ್ಗೆ ನಮ್ಮ ಅಧ್ಯಕ್ಷರು ಕ್ರಮ ತೆಗೆದುಕೊಳ್ಳಬೇಕು ಎಂದು ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಕಗ್ಗಂಟು: ಅಧ್ಯಕ್ಷ ಸ್ಥಾನ ಆಯ್ಕೆಯವರೆಗೂ ಸೋನಿಯಾ ಗಾಂಧಿಯೇ ಹಂಗಾಮಿಯಾಗಿ ಮುಂದುವರಿಕೆ ಸಾಧ್ಯತೆ

ನಾವು ಪ್ರಗತಿಪರ ಧೋರಣೆಯಿಂದ ಕಾಂಗ್ರೆಸ್ ಸೇರಿದ್ದು. ಅಧಿಕಾರದ ಆಸೆಯಿಂದ ನಾವು ಕಾಂಗ್ರೆಸ್ ಸೇರಿದವರಲ್ಲ. ನಾವು ಇಂದಿರಾ ಗಾಂಧಿ ಅವರ ಜೊತೆ ಕೆಲಸ ಮಾಡಿದ್ದೆವು. ದೇವರಾಜ ಅರಸರು ಇಂದಿರಾ ವಿರುದ್ಧ ಹೋಗಿ, ರಾಜೀವ್ ಗಾಂಧಿ ವಿರುದ್ಧವೇ ಪಕ್ಷ ಕಟ್ಟಿದ್ದರು. ಅರಸರು ನಮ್ಮ ಪ್ರೀತಿಪಾತ್ರರಾಗಿದ್ದರು. ಆದರೂ ನಾವು ಅವರ ಹಿಂದೆ ಹೋಗಿರಲಿಲ್ಲ. ಪಕ್ಷದ ನಿಷ್ಟಾವಂತರಾಗಿಯೇ ಇದ್ದ ನಾವು ರಾಜ್ಯದಲ್ಲಿ ಅರಸು ಅವರ ವಿರುದ್ಧ ನಿಂತಿದ್ದೆವು. ಇದು ಹಿಂದಿನ ಇತಿಹಾಸ. ನಾವು ತೊಂದರೆಯಾದರೂ ಪಕ್ಷವನ್ನು ಬಿಡಲಿಲ್ಲ. ಪಕ್ಷಕ್ಕೆ ನಮ್ಮ ನಿಷ್ಟೆ ಹಾಗೆಯೇ ಇರುತ್ತದೆ. ಸಾಯುವವರೆಗೆ ನಾನು ಕಾಂಗ್ರೆಸ್ ಕಟ್ಟಾಳಾಗಿಯೇ ಇರುತ್ತೇನೆ. ಬಿಜೆಪಿಯತ್ತ ನಾವು ಮುಖ ಮಾಡುವವರಲ್ಲ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೋದಿಯನ್ನು ಎದುರಿಸಬಲ್ಲ ಏಕೈಕ ವ್ಯಕ್ತಿ ರಾಹುಲ್ ಗಾಂಧಿ; ಕೆ.ಎಚ್​​. ಮುನಿಯಪ್ಪ ಅಭಿಮತ

ನಾನು ಪಕ್ಷದಲ್ಲಿ ಹಲವು ಸ್ಥಾನಮಾನ ಪಡೆದಿದ್ದೇನೆ. ನಾನು ಕನಸಿನಲ್ಲೂ ಮೋದಿಗೆ ಬೆಂಬಲ ಕೊಡುವನಲ್ಲ. ರಾಷ್ಟ್ರ ಮತ್ತು ಪಕ್ಷದ ಹಿತದೃಷ್ಟಿಯಿಂದ ತಳಮಟ್ಟ, ಬೂತ್ ಮಟ್ಟ, ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆಯಾಗಬೇಕು ಎಂದು ಪತ್ರ ಬರೆದಿದ್ದೆವು. ಕಾಂಗ್ರೆಸ್ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಮುಂದುವರೆದಿರುವುದಕ್ಕೆ ನನ್ನ ಸ್ವಾಗತವಿದೆ. ಪಕ್ಷದ ಘನತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಸೋನಿಯಾ ಮಾಡಿದ್ದಾರೆ. ಪಕ್ಷದ ಮಟ್ಟಿಗೆ ಅವರು ತಾಯಿಯಿದ್ದಂತೆ. ನಮ್ಮ ಬೆಂಬಲ ಎಂದೆಂದಿಗೂ ಮುಂದುವರಿಯಲಿದೆ ಎಂದು ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ನಾವು ಬಿಜೆಪಿ ಜೊತೆ ಕೈಜೋಡಿಸಿ. ಪತ್ರ ಬರೆದಿದ್ದೇವೆ ಎಂಬ ಮಾತು ಕೇಳಿಬಂದಿದೆ. ಈ ಮಾತನ್ನ ಕೇಳಿ ನನಗೆ ತುಂಬಾ ನೋವಾಯ್ತು. ಪಕ್ಷಕ್ಕೆ ಹೊಸ ಜೀವ ಕೊಡಬೇಕು ಎಂಬುದಷ್ಟೇ ನಮ್ಮ ನಿಲುವು. ಪತ್ರದಲ್ಲಿ ಇದನ್ನೇ ನಾವು ಹೇಳಿದ್ದು. ನಾಯಕತ್ವ ಬದಲಾವಣೆ ಬಗ್ಗೆ ನಾವು ಮಾತನಾಡಿಲ್ಲ. ನಿನ್ನೆ ಸಿಡಬ್ಲ್ಯುಸಿ ಸಭೆಯಲ್ಲಿ ಚರ್ಚೆಯಾದ ಪ್ರತಿ ವಿಚಾರವೂ ಸೋರಿಕೆಯಾಗಿದೆ. ಈ ರೀತಿ ಸೋರಿಕೆಯಾಗೋದು ಸರಿಯಲ್ಲ. ನಮ್ಮ ಪತ್ರವೂ ಹಾಗೆಯೇ ಸೋರಿಕೆಯಾಗಿದೆ. ಪತ್ರ ಲೀಕ್ ಮಾಡುವ ಅಗತ್ಯವಿರಲಿಲ್ಲ. ಸಿಡಬ್ಲ್ಯುಸಿ ಸಭೆ ನಡೆಯುವಾಗಲೇ ಈ ಪತ್ರ ಲೀಕ್ ಆಗಿದ್ದು ಹೇಗೆ. ಇದು ದೊಡ್ಡ ಪ್ರಮಾದವೇ ಸರಿ. ಇದರ ಬಗ್ಗೆ ಅಧ್ಯಕ್ಷರು ವಿಚಾರಿಸಬೇಕು ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಒತ್ತಾಯಿಸಿದ್ದಾರೆ.
Published by:Sushma Chakre
First published: