HOME » NEWS » State » MALLESWARAM IN BENGALURU TO GET 25 NURSERY SCHOOLS PROMISES DCM ASHWATH NARAYAN SHTV SKTV

ಮಲ್ಲೇಶ್ವರಂನಲ್ಲಿ 25 ನರ್ಸರಿ ಶಾಲೆ ಆರಂಭ, ಎಲ್ಲ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಡಿಜಿಟಲ್‌ ಕಲಿಕೆಗೆ ಕ್ರಮ

ಮೊದಲು 13 ನರ್ಸರಿಗಳನ್ನು ಶುರು ಮಾಡಲಾಗುವುದು. ತದ ನಂತರ ಉಳಿದ ನರ್ಸರಿ ಶಾಲೆಗಳನ್ನು ತೆರೆಯಲಾಗುವುದು. ಎಲ್ಲ ಕಡೆಯು ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮ ಕೂಡ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಾ ಸಿ ಎನ್ ಅಶ್ವತ್ಥ ನಾರಾಯಣ ಘೋಷಿಸಿದ್ದಾರೆ

news18-kannada
Updated:April 7, 2021, 7:03 AM IST
ಮಲ್ಲೇಶ್ವರಂನಲ್ಲಿ 25 ನರ್ಸರಿ ಶಾಲೆ ಆರಂಭ, ಎಲ್ಲ ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಡಿಜಿಟಲ್‌ ಕಲಿಕೆಗೆ ಕ್ರಮ
ಮಲ್ಲೇಶ್ವರಂನಲ್ಲಿ ಡಿಸಿಎಂ ಡಾ ಸಿ ಎನ್ ಅಶ್ವತ್ಥ ನಾರಾಯಣ
  • Share this:
ಬೆಂಗಳೂರು(ಏಪ್ರಿಲ್ 07): ಮಲ್ಲೇಶ್ವರಂ ಕ್ಷೇತ್ರದ ವ್ಯಾಪ್ತಿಯಲ್ಲಿರುವ 13 ಸರಕಾರಿ ಶಾಲೆಗಳೂ ಸೇರಿದಂತೆ ಒಟ್ಟು  25 ಕಡೆ ನರ್ಸರಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಪ್ರಕಟಿಸಿದರು. ಮಲ್ಲೇಶ್ವರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಮೊದಲು 13 ನರ್ಸರಿಗಳನ್ನು ಶುರು ಮಾಡಲಾಗುವುದು. ತದ ನಂತರ ಉಳಿದ ನರ್ಸರಿ ಶಾಲೆಗಳನ್ನು ತೆರೆಯಲಾಗುವುದು. ಎಲ್ಲ ಕಡೆಯು ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮ ಕೂಡ ಇರುತ್ತದೆ ಎಂದರು. 

ಕ್ಷೇತ್ರದ ಎಲ್ಲ ಶಾಲೆ-ಕಾಲೇಜುಗಳಲ್ಲಿ ಡಿಜಿಟಲ್‌ ಶಿಕ್ಷಣಕ್ಕೆ ಒತ್ತು ನೀಡಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಕ್ಷೇತ್ರದ ಎಲ್ಲ ಪ್ರೌಢಶಾಲೆಯ 8,9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಮಕ್ಕಳಿಗೆ ಉಚಿತವಾಗಿ ಟ್ಯಾಬ್‌ಗಳನ್ನೂ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಶೀಘ್ರದಲ್ಲಿಯೇ ಶಾಲೆ-ಕಾಲೇಜುಗಳ ತರಗತಿಗಳಲ್ಲಿ ಸ್ಮಾರ್ಟ್‌ ಬೋರ್ಡ್‌ ವ್ಯವಸ್ಥೆ ಮಾಡಲಾಗುವುದು ಎಂದರು.

ಕೋವಿಡ್‌ ಸೋಂಕಿತರಿಗೆ ಕ್ಷೇತ್ರದಲ್ಲೇ ಚಿಕಿತ್ಸೆ: ಕೋವಿಡ್‌ ಎರಡನೇ ಅಲೆ ತೀವ್ರವಾಗಿರುವ ಕಾರಣದಿಂದ ಮಲ್ಲೇಶ್ವರ ಕ್ಷೇತ್ರದ ಜನರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಅತ್ಯುತ್ತಮ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕ್ಷೇತ್ರದ ಸೋಂಕಿತರು ಭಯಪಡುವುದು ಬೇಡ ಎಂದರು ಉಪ ಮುಖ್ಯಮಂತ್ರಿ. ಸೋಂಕಿತರಿಗೆ ಪರೀಕ್ಷೆ ಮಾಡುವುದು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕ್ಷೇತ್ರದ ಐದೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಇನ್ನು ಇಪ್ಪತ್ತು ದಿನಗಳಲ್ಲಿ ಎಲ್ಲ ಸೌಲಭ್ಯಗಳು ಸಿಗಲಿವೆ ಎಂದು ಅವರು ನುಡಿದರು.

ಸುರಕ್ಷತೆಗೆ ಅತ್ಯುತ್ತಮ ಸಿಸಿ ಕ್ಯಾಮೆರಾ: ಮಲ್ಲೇಶ್ವರ ಕ್ಷೇತ್ರದ ಜನರ ಸುರಕ್ಷತೆಗಾಗಿ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ 1,300 ಹೈ ಕ್ವಾಲಿಟಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಕತ್ತಲಿನಲ್ಲಿ ಓಡಾಡಿದರೂ ಗುರುತಿಸಬಹುದಾದ ಗುಣಮಟ್ಟದ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ ಎಂದರು.

ದೇಶ ಮೊದಲು ಪಕ್ಷ ನಂತರ ಎಂಬ ಸಿದ್ಧಾಂತ ನಮ್ಮ ಪಕ್ಷದ್ದು. ಎಲ್ಲ ನಾಯಕರು, ಕಾರ್ಯಕರ್ತರು ಇದೇ ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ. ಸಜ್ಜನಿಕೆ ಹಾಗೂ ಉದಾತ್ತ ಮನೋಭಾವದಿಂದ ನಾವೆಲ್ಲರೂ ಪಕ್ಷದ ಕೆಲಸ ಮಾಡೋಣ. ಯಾವ ಕಾರಣಕ್ಕೂ ಮಾತೃರೂಪಿಯಾದ ಪಕ್ಷಕ್ಕೆ ಅಗೌರವ ತೋರುವ, ಹಾನಿ ಉಂಟು ಮಾಡುವ ಕೆಲಸ ಮಾಡಬಾರದು ಎಂದು ಕರೆ ನೀಡಿದರು.

ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಕಂಡ ಕನಸುಗಳು ನನಸಾಗುತ್ತಿದೆ. ಆ ಮಹಾ ಪುರುಷನ ಸಂಕಲ್ಪದಂತೆ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರಕ್ಕಿದ್ದ 370ನೇ ವಿಧಿಯನ್ನು ತೆಗೆದುಹಾಕಿದರಲ್ಲದೆ, ಅಲ್ಲಿನ ಜನರನ್ನು ಭಾರತದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದರು. ಅನೇಕ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿದೆ. ಜತೆಗೆ; ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆ ಆಗುತ್ತಿವೆ ಎಂದರು. ಇದೇ ಸಂದರ್ಭದಲ್ಲಿ ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದಿಂದ ಸೇವೆ ಮಾಡಿದ ಕಾರ್ಯಕರ್ತರನ್ನು ಡಿಸಿಎಂ ಗೌರವಿಸಿ ಸನ್ಮಾನಿಸಿದರು.
ಬೆಂಗಳೂರು ಉತ್ತರ ಭಾಗದ ಬಿಜೆಪಿ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಹಿರಿಯ ಮುಖಂಡ  ಗೋಪಿನಾಥ ರೆಡ್ಡಿ, ವಾಸುದೇವ್‌, ವೆಂಕಟಾಚಲಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Published by: Soumya KN
First published: April 7, 2021, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories