ಪ್ರಿಯಾಂಕ್ ಖರ್ಗೆ ನನ್ನ ಮುಂದೆ ಬಚ್ಚಾ: ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಕಿಡಿ

ನನ್ನ ಮುಂದೆ ಪ್ರಿಯಾಂಕ ಖರ್ಗೆ ಬಚ್ಚಾ. ಮಾಲೀಕಯ್ಯ ಮಾಲೀಕಯ್ಯನೇ, ಪ್ರಿಯಾಂಕ್ ಪ್ರಿಯಾಂಕ್ ನೇ. ಪ್ರಿಯಾಂಕ್ ಖರ್ಗೆ ಒಬ್ಬ ದುರಹಂಕಾರಿ ಎಂದು ಮಾಲೀಕಯ್ಯ ಗುತ್ತೆದಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ

ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ

  • Share this:
ಕಲಬುರ್ಗಿ(ನವೆಂಬರ್​. 19): ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೋಡ ಅವರ ಹೆಂಡತಿ ಕಾರು ಸೀಜ್ ಪ್ರಕರಣ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಶಾಸಕರ ಹೆಂಡತಿಯ ಕಾರು ಸೀಜ್ ಗೆ ಸಂಬಂಧಿಸಿದ ಪ್ರಿಯಾಂಕ್ ಖರ್ಗೆ ಟ್ವೀಟ್ ಗೆ ಮಾಲೀಕಯ್ಯ ಗುತ್ತೇದಾರ ವಾರ್ನ್ ಮಾಡಿದ್ದರು. ಇದರ ಬೆನ್ನ ಹಿಂದೆಯೇ ನನಗೆ ವಾರ್ನ್ ಮಾಡಲು ಮಾಲಿಕಯ್ಯ ಯಾರು ಎಂದು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ, ಧೈರ್ಯವಿದ್ದರೆ ಬಿಜೆಪಿ ಹೈಕಮಾಂಡ್ ಗೆ ವಾರ್ನ್ ಮಾಡಲಿ ಎಂದು ಚಾಲೆಂಜ್ ಮಾಡಿದ್ದರು. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಮಾಲಿಕಯ್ಯ ಗುತ್ತೇದಾರ ಕೆಂಡಾಮಂಡಲವಾಗಿದ್ದಾರೆ. ನನಗೆ ವಾರ್ನ್ ಮಾಡುವುದಕೆ ನೀನೇನು ದೊಡ್ಡ ಹುಲೀನಾ ಎಂದು ಪ್ರಶ್ನಿಸಿದ್ದಾರೆ. ಮಾಲೀಕಯ್ಯ ಗುತ್ತೇದಾರ ಮುಂದೆ ನೀನು ಬಚ್ಚಾ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಕಿಡಿಕಾರಿದ್ದಾರೆ.

ತಾಕತ್ತಿದ್ದರೆ ಬಿಜೆಪಿ ಹೈಕಮಾಂಡ್ ಗೆ ವಾರ್ನ್ ಮಾಡಲಿ, ನನಗೆ ವಾರ್ನ್ ಮಾಡಲು ಮಾಲೀಕಯ್ಯ ಗುತ್ತೆದಾರ ಯಾರು ಎಂದು ಪ್ರಿಯಾಂಕ್ ಖರ್ಗೆ ಮಾಲೀಕಯ್ಯಗೆ ಚಾಲೆಂಜ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರವಾಗಿ ಆಸ್ಪತ್ರೆಯಿಂದಲೇ ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮಾಲೀಕಯ್ಯ ಗುತ್ತೇದಾರ, ನನ್ನ ಮುಂದೆ ಪ್ರಿಯಾಂಕ ಖರ್ಗೆ ಬಚ್ಚಾ. ಮಾಲೀಕಯ್ಯ ಮಾಲೀಕಯ್ಯನೇ, ಪ್ರಿಯಾಂಕ್ ಪ್ರಿಯಾಂಕ್ ನೇ. ಪ್ರಿಯಾಂಕ್ ಖರ್ಗೆ ಒಬ್ಬ ದುರಹಂಕಾರಿ. ಕ್ರಿಕೆಟ್ ಬೆಟ್ಟಿಂಗ್ ವಿಷಯದಲ್ಲಿ ಮತ್ತಿಮೋಡ್ ಮಾವನಿಗೆ ನಾನು ಸಮರ್ಥನೆ ಮಾಡಿಕೊಂಡಿಲ್ಲ.

ಎಫ್.ಐ.ಆರ್. ನಲ್ಲಿ ಹೆಸರಿಲ್ಲದಿದ್ದರೂ ಮತ್ತಿಮೋಡ ಅವರ ಹೆಂಡತಿ ಕಾರು ಸೀಜ್ ಮಾಡಿದ್ಯಾಕೆ ಅಂತ ಕೇಳಿದ್ದೇನೆ. ದಾಖಲೆಗಳಿದ್ದರೆ ಇಲ್ಲಿಯೇ ಕೊಡಬಹುದಿತ್ತು. ಬಿಜೆಪಿ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿತ್ತು. ಅದನ್ನು ಬಿಟ್ಟು ಮಹಾರಾಷ್ಟ್ರ ಪೊಲೀಸರನ್ನು ಕರೆತರುವ ಅವಶ್ಯಕತೆ ಇರಲಿಲ್ಲ ಎಂದು ಕಿಡಿಕಾರಿದ್ದಾರೆ.

ನಿಮ್ಮ ತಂದೆ, ಮಲ್ಲಿಕಾರ್ಜುನ ಖರ್ಗೆ ಮತ್ತು ನಾವು ಕುಟುಂಬದ ಸದಸ್ಯರಂತಿದ್ದೆವು. ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಇತರೆ ಸದಸ್ಯರೂ ನನ್ನ ಜೊತೆಗೆ ಸೌಜನ್ಯದಿಂದಲೇ ವರ್ತಿಸುತ್ತಾರೆ. ಆದರೆ, ಇದರಲ್ಲಿ ಹುಳಿ ಹಿಂಡಿದವರೇ ಪ್ರಿಯಾಂಕ್ ಖರ್ಗೆ. ಜಿಲ್ಲಾ ಮಂತ್ರಿಯಾಗಿದ್ದಾಗ ನನ್ನ ಕ್ಷೇತ್ರದಲ್ಲಿಯೇ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದರು. ಅದೇ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಬೇಕಾಯಿತು. ಪ್ರಿಯಾಂಕ್ ಖರ್ಗೆ ದುರಹಂಕಾರದಿಂದಲೇ ರಾಷ್ಟ್ರ ಕಂಡ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಬೇಕಾಯಿತು.

ಈಗಲೂ ಕಾಲ ಮಿಂಚಿಲ್ಲ, ದಾಖಲೆಗಳಿದ್ದರೆ ತೋರಿಸಿ, ಬಹಿರಂಗ ಚರ್ಚೆಗೆ ನಾನು ಸಿದ್ಧ. ನಾನು ಆಸ್ಪತ್ರೆಯಲ್ಲಿದ್ದು ಹೊರಗೆ ಬಂದ ನಂತರ ಬಹಿರಂಗ ಚರ್ಚೆಗೆ ಸಿದ್ಧನಿದ್ದೇನೆ. ನನ್ನನ್ನು ಕೆಣಕಿದ್ರೆ ಸುಮ್ಮನಿರುವುಲ್ಲ ಅಂತೀಯ. ನೀನೇನು ದೊಡ್ಡಾ ಹುಲೀನಾ ಎಂದು ಪ್ರಿಯಾಂಕ್ ಗೆ ಮಾಲೀಕಯ್ಯ ಪ್ರಶ್ನೆ ಮಾಡಿದ್ದಾರೆ. ರಾಜಕೀಯವಾಗಿ ಬೆಳೆಯುವ ಹುಡುಗನಿಗೆ ಇಷ್ಟು ದುರಹಂಕಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ವೈದ್ಯಕೀಯ ಕೋರ್ಸ್ ಪ್ರವೇಶಾತಿ: ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಎನ್.ಎಂ.ಸಿ. ಅನುಮತಿ ಇಲ್ಲ

ನಾವ್ಯಾರೂ ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡಿಲ್ಲ. ಕ್ರಿಕೆಟ್ ಬೆಟ್ಟಿಂಗ್ ಆಗಲಿ, ಡ್ರಗ್ಸ್ ದಂಧೆಯಾಗಲಿ ಯಾವುದೇ ಪಕ್ಷದವರಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಕಮೀಷನರ್ ಗೆ ಹೇಳಿದ್ದೇನೆ. ಯುವಕರ ಬದುಕಿನ ಜೊತೆ ಚೆಲ್ಲಾವಾಡೋರನ್ನು ಯಾರೂ ಸಹಿಸಿಕೊಳ್ಳಲ್ಲ.

ಆದರೆ, ನಿಮ್ಮ ಬಾಡಿಗಾರ್ಡ್ ಖಾನ್ ಏನು ಮಾಡುತ್ತಾನೆ ಎನ್ನುವುದನ್ನು ಮೊದಲು ತಿಳಿದುಕೊ. ಯಾವುದು ಸತ್ಯ, ಯಾವುದು ಸುಳ್ಳು ಅಂತ ಅರಿತುಕೊಳ್ಳಲಿ. ಸೌಜನ್ಯ, ಗಾಂಭೀರತೆ ಬೆಳೆಸಿಕೊಂಡು ಹಿರಿಯರಿಗೆ ಗೌರವ ಕೊಡುವುದನ್ನ ಕಲಿಯಲಿ ಎಂದು ಪ್ರಿಯಾಂಕ್ ಖರ್ಗೆಗೆ ಮಾಲೀಕಯ್ಯ ಗುತ್ತೇದಾರ ತಾಕೀತು ಮಾಡಿದ್ದಾರೆ.
Published by:G Hareeshkumar
First published: