ಚಾಮರಾಜನಗರ (ಸೆ.19) ಇನ್ನು ಮುಂದೆ ಮಹದೇಶ್ವರನ ಭಕ್ತರು ದೇವರಿಗೆ ಕಾಣಿಕೆ ಅರ್ಪಿಸಲು ತಮ್ಮ ಜೊತೆ ನಗದ ಹಣವನ್ನು ಒಯ್ಯಬೇಕಾಗಿಲ್ಲ, ಕಾಣಿಕೆಯನ್ನು ಹುಂಡಿಗೆ ಹಾಕಬೇಕೆಂದೇನು ಇಲ್ಲ . ಇದೀಗ ಡಿಜಿಟಲ್ ಪೇಮೆಂಟ್ (Digital Payment) ಮೂಲಕ ಕಾಣಿಕೆಯನ್ನು ಅರ್ಪಿಸಲು ಭಕ್ತರಿಗೆ (Devotees) ಅವಕಾಶ ಒದಗಿಸಲಾಗಿದೆ. ದೇವಾಲಯದ ಆವರಣದಲ್ಲಿ ಕ್ಯೂ ಆರ್ ಕೋಡ್ ಉಳ್ಳ ಫಲಕ ಇಡಲಾಗಿದ್ದು ಭಕ್ತರು ಗೂಗಲ್ ಪೇ (Google Pay), ಫೋನ್ ಪೇ, ಬೀಮ್, ಪೇಟಿಎಂ ಮೂಲಕ ಕಾಣಿಕೆ ಸಲ್ಲಿಸಬಹುದಾಗಿದೆ.
ಕ್ಯೂಆರ್ ಕೋಡ್ ಬಳಸಿ ಕಾಣಿಕೆ ಅರ್ಪಿಸಿ
ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಹಾಗು ಎಸ್‌ಬಿಐ ಸಹಯೋಗದಲ್ಲಿ ಮಾದಪ್ಪನ ಸನ್ನಿಧಿಯಲ್ಲಿ ಇ- ಹುಂಡಿ ಸ್ಥಾಪಿಸಲಾಗಿದ್ದು ಭಕ್ತರು ಕ್ಯೂಆರ್ ಕೋಡ್ ಬಳಕೆ ಮಾಡಿ ದೇವರಿಗೆ ಕಾಣಿಕೆ ಅರ್ಪಿಸಬಹುದಾಗಿದೆ. ಇ-ಹುಂಡಿಗೆ ಸಂಪೂರ್ಣ ಭದ್ರತೆ ವಹಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಇ-ಹುಂಡಿಗಾಗಿ ಬೇಡಿಕೆ ಇತ್ತು.
ಇದನ್ನೂ ಓದಿ: Cabinet Meeting: ಪೌರಕಾರ್ಮಿಕರಿಗೆ ಗುಡ್ ನ್ಯೂಸ್; ಸರ್ಕಾರಿ ನೌಕರರೆಂದು ನೇಮಕಾತಿಗೆ ಸಂಪುಟ ಸೂಚನೆ
ವರ್ಷಕ್ಕೆ ಮೂರು ಬಾರಿ ನಡೆಯವ ಜಾತ್ರೆ ಹಾಗು ಪ್ರತಿ ಅಮಾವಾಸ್ಯೆ ಸೇರಿದಂತೆ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಮಹದೇಶ್ವರನ ಸನ್ನಿಧಿಗೆ ಬರುತ್ತಾರೆ. ದೇವಾಲಯ ಒಳಾಂಗಣದಲ್ಲಿ ಹುಂಡಿಗಳನ್ನು ಇಡಲಾಗಿದ್ದು ಭಕ್ತರು ಹುಂಡಿಗಳಲ್ಲೇ ಹಾಕಿ ತಮ್ಮ ಕಾಣಿಕೆ ಸಲ್ಲಿಸಬೇಕಿತ್ತು. ನೂಕು ನುಗ್ಗಲಿನ ಕಾರಣ ಕಾಣಿಕೆ ಸಲ್ಲಿಸಲು ಸಹ ಹಲವು ರೀತಿಯ ಅಡಚಣೆಗಳು ಎದುರಾಗುತ್ತಿದ್ದವು ಈ ಹಿನ್ನಲೆಯಲ್ಲಿ ಇದೀಗ ಇ-ಹುಂಡಿ ಸ್ಥಾಪನೆ ಮಾಡಲಾಗಿದೆ.
6 ಕಡೆ ಕ್ಯೂಆರ್ ಕೋಡ್ ಫಲಕ
ಭಕ್ತರ ಸರತಿ ಸಾಲು ಸೇರಿದಂತೆ ಆರು ಕಡೆ ಕ್ಯೂಆರ್ ಕೋಡ್ ಫಲಕ ಅಳವಡಿಕೆ ಮಾಡಲಾಗಿದ್ದು, ಸ್ಕ್ಯಾನ್ ಮಾಡಿ ಕಾಣಿಕೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿ ಮಾಡಲಾಗುತ್ತಿದ್ದು ಇದರ ಅಂಗವಾಗಿ ಮಹದೇಶ್ವರನ ಸನ್ನಿಧಿಯಲ್ಲು ಇ-ಹುಂಡಿ ಅಳವಡಿಸಲಾಗಿದೆ
ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಇಂದು ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯು ಆಗಿರುವ ಅಪರ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಚಾಲನೆ ನೀಡಿದರು. "ಮಹದೇಶ್ವರ ಬೆಟ್ಟ ಅರಣ್ಯಪ್ರದೇಶ ವಾಗಿರುವುದರಿಂದ ಸ್ವಲ್ಪ ನೆಟ್‌ವರ್ಕ್ ಸಮಸ್ಯೆ ಇದೆ, ಈ ಹಿನ್ನಲೆಯಲ್ಲಿ ಸೆಪ್ಟೆಂಬರ್ 23 ರಂದು ಸರ್ವೀಸ್ ಪ್ರೊವೈಡರ್‌ಗಳ ಸಭೆ ಕರೆದಿದ್ದು ಸಿಗ್ನಲ್ ಬೂಸ್ಟ್ ಮಾಡಲು ಅಗತ್ಯ ಕ್ರಮ ವಹಿಸುವುದಾಗಿ" ಅವರು ನ್ಯೂಸ್18 ಗೆ ತಿಳಿಸಿದರು
ಪೂರ್ಣ ಹೆಸರನ್ನು ಗಮನಿಸುವುದು ಅತ್ಯಗತ್ಯ
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಭಕ್ತರು ಕಾಣಿಕೆ ಸಲ್ಲಿಕೆಯ ಸಂದರ್ಭದಲ್ಲಿ ಮಹದೇಶ್ವರಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಪೂರ್ಣ ಹೆಸರನ್ನು ಗಮನಿಸುವುದು ಅತ್ಯಗತ್ಯವಾಗಿದೆ. ಅಲ್ಲದೆ ದುರ್ಬಳಕೆ ಕಂಡು ಬಂದಲ್ಲಿ ಪ್ರಾಧಿಕಾರದ ಗಮನಕ್ಕೆ ತರುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: V Munirathna: 50 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ; ಕೆಂಪಣ್ಣ ಸೇರಿ 18 ಜನರಿಗೆ ಮುನಿರತ್ನ ಕೊಟ್ರು ವಾರ್ನಿಂಗ್!
ಮಲೆಮಹದೇಶ್ವರ ಬೆಟ್ಟ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿದ್ದು ಪ್ರತಿನಿತ್ಯ ಬೇರೆ ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ಕೊಡ್ತಾರೆ. ಮಹದೇಶ್ವರನ ದರ್ಶನ ಮಾಡಿ ಹರಕೆ ಹೊತ್ತರೆ ಸಕಲ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ. ಕಡುಬಡವರಿಂದ ಹಿಡಿದು ಆಗರ್ಭ ಶ್ರೀಮಂತರು ಮಹದೇಶ್ವರನ ಭಕ್ತರಾಗಿದ್ದು ದೇಗುಲಕ್ಕೆ ಭೇಟಿ ನೀಡುವ ಭಕ್ತರು ತಮ್ಮ ಶಕ್ತಿಯಾನುಸಾರ ಕಾಣಿಕೆ ಸಲ್ಲಿಸುತ್ತಾರೆ. ಪ್ರತಿ ತಿಂಗಳು ಬಿಗಿ ಭದ್ರತೆಯಲ್ಲಿ ಹುಂಡಿ ಎಣಿಕೆ ನಡೆಯುತ್ತದೆ. ಪ್ರತಿ ತಿಂಗಳು ಒಂದು ಕೋಟಿ ರೂಪಾಯಿಗು ಹೆಚ್ಚು ಕೆಲವೊಮ್ಮೆ ಎರಡು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗುತ್ತದೆ. ಹುಂಡಿ ಎಣಿಕೆಗಾಗಿಯೇ ನೂರಕ್ಕು ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಇದೀಗ ಡಿಜಿಟಲ್ ಪೇಮೆಂಟ್ ಸೌಲಭ್ಯ ನೀಡಲಾಗುತ್ತಿದ್ದು, ದೇಗುಲಕ್ಕೆ ಮತ್ತಷ್ಟು ಕಾಣಿಕೆ ಹರಿದು ಬರುವ ಸಾಧ್ಯತೆ ಇದೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ