Chamarajanagar: ಮಾದಪ್ಪನ ಸನ್ನಿಧಿಯಲ್ಲಿ ಕರುಣೆಯೇ ಇಲ್ಲ: ರಾತ್ರೋರಾತ್ರಿ ವಸತಿಗೃಹದಿಂದ ಕುಟುಂಬ ಹೊರಕ್ಕೆ

ಅನುಕಂಪ ಆಧಾರದ ನೌಕರಿ ಹಾಗೂ ಮರಣಾನಂತರದ ಕ್ಲೇಮುಗಳನ್ನು ನೀಡುವಂತೆ ಆಗ್ರಹಿಸಿ ಮೃತ ನೌಕರನ ಕುಟುಂಬದವರು ವಸತಿ ಗೃಹದಲ್ಲೇ ಮುಂದುವರಿಸಿದ್ದರು.

ಬೀದಿಯಲ್ಲಿ ಕುಟುಂಬ

ಬೀದಿಯಲ್ಲಿ ಕುಟುಂಬ

  • Share this:
ಚಾಮರಾಜನಗರ (ಜ.15) ಜಿಲ್ಲೆಯ ಇತಿಹಾಸ ಪ್ರಸಿದ್ದ  ಮಲೈಮಹದೇಶ್ವರ (Male Mahadeshwara) ಬೆಟ್ಟದಲ್ಲಿ ವಿಧವೆಯ ಕುಟುಂಬವೊಂದು ವಸತಿಗೃಹದಿಂದ ರಾತ್ರೋರಾತ್ರಿ ಬೀದಿಗೆ ದಬ್ಬಲ್ಪಟ್ಟಿದೆ. ಇದರಿಂದ ಕೊರೆಯುವ ಚಳಿಯಲ್ಲೇ ವಿಧವೆ ಹಾಗೂ ಆಕೆಯ‌ ಮಗ ರಾತ್ರಿಯಿಡಿ ಬೀದಿಯಲ್ಲೇ ಕಾಲ ಕಳೆದಿದ್ದಾರೆ. 

ಮಲೆ ಮಹದೇಶ್ವರ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ನೌಕರ ಜಯಸ್ವಾಮಿ‌ ಎಂಬುವರು ಮೂರು  ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದರು. ಬೇರೆ ಯಾವುದೇ ಆದಾಯ ಮೂಲ ಇಲ್ಲದ ಮೃತ ನೌಕರನ ಕುಟುಂಬದವರು  ಅನುಕಂಪ ಆಧಾರದ ಮೇಲೆ ನೌಕರಿ ನೀಡುವಂತೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿದ್ದರು.  ಸೇವೆಯಲ್ಲಿರುವಾಗಲೇ ಮೃತಪಟ್ಟ ನೌಕರನಿಗೆ ಸಂಬಂಧಿಸಿದಂತೆ  ಮರಣಜನ್ಯ ಕ್ಲೇಮುಗಳನ್ನು‌ ಸಹ ಮೃತ ನೌಕರನ  ಕುಟುಂಬಕ್ಕೆ ಪ್ರಾಧಿಕಾರ ನೀಡಿರಲಿಲ್ಲ. ಜಯಸ್ವಾಮಿ ಅವರಿಗೆ ನೀಡಿದ್ದ ವಸತಿ ಗೃಹದಲ್ಲೇ  ಮೃತ ನೌಕರನ ಪತ್ನಿ ಹಾಗು ಅವರ ಮಗ ವಾಸವಿದ್ದರು

ಅನುಕಂಪದ ಆಧಾರದ ಮೇಲೆ ನೆಲೆ

ಈ ನಡುವೆ 2019 ರಲ್ಲಿ  ವಸತಿ ಗೃಹ ಖಾಲಿ ಮಾಡುವಂತೆ ಪ್ರಾಧಿಕಾರದಿಂದ  ಈ ಕುಟುಂಬಕ್ಕೆ ನೋಟೀಸ್ ನೀಡಲಾಗಿತ್ತು. ಆದರೆ ಅನುಕಂಪ ಆಧಾರದ ನೌಕರಿ ಹಾಗೂ ಮರಣಾನಂತರದ ಕ್ಲೇಮುಗಳನ್ನು ನೀಡುವಂತೆ ಆಗ್ರಹಿಸಿ ಮೃತ ನೌಕರನ ಕುಟುಂಬದವರು ವಸತಿ ಗೃಹದಲ್ಲೇ ಮುಂದುವರಿದಿದ್ದರು.

ಮೃತ ನೌಕರನ ಮಗ ಶಾಂತಮಲ್ಲೇಶ್ ಕೂಡ ಪ್ರಾಧಿಕಾರದಲ್ಲಿ  ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದು ಕಳೆದ ಒಂದು ವರ್ಷದಿಂದ  ಶಾಂತಮಲ್ಲೇಶ್ ಗೆ ಹೊರಗುತ್ತಿಗೆ ನೌಕರಿಯು ಇಲ್ಲವಾಗಿತ್ತು. ಇದೀಗ ಮನೆ ಖಾಲಿ ಮಾಡುವಂತೆ  ನೋಟೀಸ್ ನೀಡಿದ್ದ ಪ್ರಾಧಿಕಾರ ಅಧಿಕಾರಿಗಳು  ಸೆಕ್ಯುರಿಟಿ ಗಾರ್ಡ್ ಗಳೊಂದಿಗೆ ತೆರಳಿ ನಿನ್ನೆ ರಾತ್ರಿ ಮನೆಯೊಳಗೆ ಇದ್ದವರನ್ನು ಹೊರದಬ್ಬಿ ಬಲವಂತವಾಗಿ ಪಾತ್ರೆಪಗಡ, ಮನೆ ಸಾಮಾನುಗಳನ್ನು ಹೊರಗೆ ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನು ಓದಿ: ನೂರಾರು ವರ್ಷಗಳಿಂದ ಈ ಊರಲ್ಲಿ Sankranti ಸಂಭ್ರಮವಿಲ್ಲ; ದುರ್ಘಟನೆಯಿಂದ ಇನ್ನೂ ಹೊರಬಾರದ ಗ್ರಾಮಸ್ಥರು

ಸಂಕ್ರಾಂತಿ ದಿನವೇ ಬೀದಿಪಾಲು

ಮನೆ ಖಾಲಿ ಮಾಡಿಸಲೇಬೇಕೆಂದಿದ್ದರೆ ಹಗಲಿನ ವೇಳೆ ಬರಬಹುದಿತ್ತು. ತೊಂದರೆ ಕೊಡುವ ಉದ್ದೇಶದಿಂದಲೇ ಸಂಕ್ರಾಂತಿ ಹಬ್ಬದ ಹಿಂದಿನ ದಿನ ಸಂಜೆ ವೇಳೆ ಬಂದು ಮನೆ ಸಾಮಾನುಗಳ ನ್ನು ಹೊರಗೆ ಹಾಕಿ ಬೀಗ ಹಾಕಲಾಗಿದೆ ಎಂದು  ಶಾಂತಮಲ್ಲೇಶ್ ಆರೋಪಿಸಿದ್ದಾರೆ ಉಳಿದುಕೊಳ್ಳಲು ಬೇರೆ ಮನೆ ಇಲ್ಲದ ಕಾರಣ ನಾನು ಮತ್ತು ನನ್ಮ ತಾಯಿ ರಾತ್ರಿಯಿಡಿ ಕೊರೆಯುವ ಚಳಿಯಲ್ಲೇ ಬೀದಿಯಲ್ಲಿ ಕಾಲಕಳೆದಿದ್ದೇವೆ, ನಮ್ಮ ತಂದೆ ದೇವಾಲಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ‌ ಅವರ ಸೇವೆಗೆ ಕೊಡುವ ಬೆಲೆ ಇದೇನಾ ಎಂದು ಅವರು ಪ್ರಶ್ನಿಸಿದ್ದಾರೆ

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯನ್ನು ಸಂಪರ್ಕಿಸಲು ಪ್ರಯತ್ನ ಮಾಡಲಾಯಿತು ಆದರೆ ಅವರ ಸಂಪರ್ಕ ಸಾಧ್ಯವಾಗಲಿಲ್ಲ. ಆದರೆ ಅವರು ನಿನ್ನೆ ರಾತ್ರಿ 10.30 ರ ನಂತರ ಒಂದು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು ಅದರ ಪೂರ್ಣ ಪಾಠ ಹೀಗಿದೆ

ಇದನ್ನು ಓದಿ: 25 ವರ್ಷಗಳ ಹಿಂದೆಯೇ ಹಂದಿ ಹೃದಯವನ್ನು ಮನುಷ್ಯನಿಗೆ ಕಸಿ ಮಾಡಿದ್ದ ಅಸ್ಸಾಂನ ವೈದ್ಯ..! ಮುಂದೇನು ಆಯ್ತು..?

ಅವಧಿ ಮೀರಿ ನೆಲೆಸಿದ್ದ ಆರೋಪ

"ಪ್ರಾಧಿಕಾರದ ನೌಕರರಾಗಿದ್ದ ಶ್ರೀ ಜಯಸ್ವಾಮಿ ಎಂಬುವವರು 2019ರಲ್ಲಿ ನಿಧನ ಹೊಂದಿದ್ದಾರೆ. ಅವರ ವಾರಸುದಾರರು ಪ್ರಾಧಿಕಾರದ ಖಾಯಂ ವಸತಿ ಗೃಹದಲ್ಲಿ ಅವಧಿಗೂ ಮೀರಿ ವಾಸವಿದ್ದ ಪ್ರಯುಕ್ತ 2019ರಲ್ಲೇ Public premises eviction act ಅಡಿಯಲ್ಲಿ ನೋಟೀಸು ನೀಡಿ ವಿಚಾರಣೆ ನಡೆಸಲಾಯಿತು. ನಿಯಮಾನುಸಾರ 45 ದಿನಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿ ವಾರಸ್ಸುದಾರರಿಗೆ ಆಗಸ್ಟ್ 2021ರಲ್ಲಿ ಜಾರಿ ಮಾಡಲಾಗಿತ್ತು. ಆದರೆ 45 ದಿನಗಳೊಳಗೆ ವಾರಸ್ಸುದಾರರು ಅನಧಿಕೃತವಾಗಿ ವಾಸವಿದ್ದ ಪ್ರಾಧಿಕಾರದ ಖಾಯಂ ವಸತಿ ಗೃಹವನ್ನು ತೆರವುಗೊಳಿಸಿರುವುದಿಲ್ಲ. ಇಂದು 14/01/2022ರ ಸಂಜೆ 5.30ರಿಂದ ಅನಧಿಕೃತ ಅಧಿಭೋಗದಾರರನ್ನು ಹೊರಹಾಕುವ ಪ್ರಕ್ರಿಯೆ ಪ್ರಾರಂಭಿಸಲಾಯಿತು. ತೀವ್ರ ಪ್ರತಿರೋಧವನ್ನು ಅನಧಿಕೃತ ಅಧಿಭೋಗದಾರರು ವ್ಯಕ್ತಪಡಿಸಿದ್ದರಿಂದ ಹೆಚ್ಚು ಸಮಯ ಹಿಡಿಯಿತು ಹಾಗೂ ತೆರವುಗೊಳಿಸಲಾಯಿತು. ಆದೇಶ ಹೊರಡಿಸಿ  ಸಾಕಷ್ಟು ಕಾಲಾವಕಾಶ ನೀಡಿದರೂ ಸ್ವಯಂ ತೆರವುಗೊಳಿಸದ ಪ್ರಯುಕ್ತ ಪ್ರಾಧಿಕಾರದ ವತಿಯಿಂದ ತೆರವುಗೊಳಿಸಿ ಬೀಗಮುದ್ರೆ ಹಾಕಲಾಯಿತು‌.

ನಿಧನ ಹೊಂದಿದ ನೌಕರನ ಕುಟುಂಬಕ್ಕೆ ನ್ಯಾಯಯುತವಾಗಿ ದೊರೆಯ ಬೇಕಾದ ಸವಲತ್ತನ್ನು ಪ್ರಾಧಿಕಾರದಿಂದ  ನೀಡಿದ್ದರೆ ಇಷ್ಟೆಲ್ಲಾ ಆಗುತ್ತಿರಲಿಲ್ಲ ಎಂಬುದು ಹೆಸರು ಹೇಳಲು ಇಚ್ಛಿಸದ ನೌಕರರ ಅಭಿಪ್ರಾಯವಾಗಿದೆ. ಮನೆಯಿಂದ ಹೊರದಬ್ಬಲ್ಪಟ್ಟ ಕುಟುಂಬವೀಗ ದಿಕ್ಕು ತೋಚದಂತಾಗಿ ರೋಧಿಸುವಂತಾಗಿದೆ
Published by:Seema R
First published: