Malali Mosque: ಮಳಲಿ ಮಸೀದಿ ವಿವಾದ; ಯಾವುದೇ ಆದೇಶ ಹೊರಡಿಸದಂತೆ ಮಂಗಳೂರು ಕೋರ್ಟ್​ಗೆ ಹೈಕೋರ್ಟ್ ಸೂಚನೆ

ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯಕ್ಕೆ ಹೈಕೋರ್ಟ್​ನಿರ್ದೇಶನ ನೀಡಿದೆ.

ಕರ್ನಾಟಕ ಹೈಕೋರ್ಟ್​​

ಕರ್ನಾಟಕ ಹೈಕೋರ್ಟ್​​

  • Share this:
ಬೆಂಗಳೂರು:  ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮಳಲಿ ಮಸೀದಿಯಲ್ಲಿ (Malali Mosque) ದೇವಾಲಯ ಮಾದರಿಯ ರಚನೆ ಪತ್ತೆಯಾಗಿದೆ ಅನ್ನೋ ವಿಚಾರ ಭಾರೀ ಸದ್ದು ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವ ಕುರಿತು ಯಾವುದೇ ಆದೇಶ (Order) ಹೊರಡಿಸದಂತೆ ಹೈಕೋರ್ಟ್‌ (High Court) ಮಂಗಳೂರಿನ ಸಿವಿಲ್‌ ಕೋರ್ಟ್‌ಗೆ (Civil Court) ಇಂದು (ಜೂನ್​ 14) ನಿರ್ದೇಶನ ನೀಡಿದೆ. ಮಂಗಳೂರಿನ ತೆಂಕಳೈಪಡಿ ಗ್ರಾಮದ ಧನಂಜಯ್‌ ಹಾಗೂ ಬಡುಗಳೈಪಡಿ ಗ್ರಾಮದ ಮನೋಜ್‌ ಕುಮಾರ್‌ (Manoj Kumar) ಸಲ್ಲಿಸಿದ್ದ ಅರ್ಜಿ ಕುರಿತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಂ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜುಮ್ಮಾ ಮಸೀದಿಯ ಅಧ್ಯಕ್ಷರಿಗೆ ನೋಟಿಸ್‌ ಜಾರಿ

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಯಾದ ಮಳಲಿ ಪೇಟೆ ಜುಮ್ಮಾ ಮಸೀದಿಯ ಅಧ್ಯಕ್ಷರಿಗೆ ನೋಟಿಸ್‌ ಜಾರಿಗೊಳಿಸಿತು. ಜತೆಗೆ, ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ಅಸಲು ದಾವೆಯ ಸಿಂಧುತ್ವದ ಕುರಿತು ವಾದ-ಪ್ರತಿವಾದ ಆಲಿಸಿದರೂ, ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್‌ 17ಕ್ಕೆ ಮುಂದೂಡಿತು.

ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಕಮಿಷನರ್‌ ನೇಮಕ

ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ವಿವೇಕ್‌ ಸುಬ್ಬಾರೆಡ್ಡಿ, 'ಮಳಲಿ ಮಸೀದಿಯಲ್ಲಿ ಪತ್ತೆಯಾಗಿರುವ ದೇವಾಲಯದ ರಚನೆ ಬಗ್ಗೆ ಮೊದಲು ಪರಿಶೀಲನೆಯಾಗಬೇಕು. ಅದರ ವಸ್ತುಸ್ಥಿತಿ ಪರಿಶೀಲಿಸಲು ಕೋರ್ಟ್‌ ಕಮಿಷನರ್‌ ಒಬ್ಬರನ್ನು ನೇಮಿಸಬೇಕು. ಜ್ಞಾನವಾಪಿ ಮಸೀದಿಯ ಮಾದರಿಯಲ್ಲಿ ಕಮಿಷನರ್‌ ನೇಮಕ ಮಾಡುವ ಕುರಿತು ಪರಿಗಣಿಸಬೇಕಿದೆ. ಆದ್ದರಿಂದ, ಕಮಿಷನರ್‌ ನೇಮಕ ಮಾಡುವ ಕುರಿತು ಮನವಿ ಬಗ್ಗೆ ಸಿವಿಲ್‌ ಕೋರ್ಟ್‌ ಮೊದಲು ವಿಚಾರಣೆ ನಡೆಸಬೇಕಿದೆ' ಎಂದರು.

ಇದನ್ನೂ ಓದಿ: Mysuru: ಟಾಟಾ ತೆಕ್ಕೆಗೆ ಪಾರಂಪರಿಕ ಲಲಿತಮಹಲ್ ಪ್ಯಾಲೇಸ್? ಖಾಸಗಿ ಒಡೆತನಕ್ಕೆ ಪಂಚತಾರಾ ಹೋಟೆಲ್?

ಪ್ರಕರಣ ಸಿವಿಲ್‌ಕೋರ್ಟ್‌ನಲ್ಲಿ ಇದೆ

ಅಲ್ಲದೆ, ಈ ಕುರಿತ ಪ್ರಕರಣ ಸಿವಿಲ್‌ಕೋರ್ಟ್‌ನಲ್ಲಿ ಇದೆ. 1991ರ ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯ ಅನುಸಾರ ದಾವೆಯು ವಿಚಾರಣಾ ಮಾನ್ಯತೆ ಹೊಂದಿಲ್ಲ. ಆದ್ದರಿಂದ ಅದನ್ನು ವಜಾಗೊಳಿಸಬೇಕು ಎಂದು ಮಸೀದಿ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಗಣಿಸಿದ ಸಿವಿಲ್‌ ಕೋರ್ಟ್‌ ಮೊದಲು ದಾವೆಯ ಸಿಂಧುತ್ವದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದೆ. ಆದರೆ, ಪುರಾತನ ಸ್ಮಾರಕಗಳಿಗೆ ಸಾರ್ವಜನಿಕ ಪೂಜಾ ಸ್ಥಳ ಕಾಯಿಧಿದೆ ಅನ್ವಯವಾಗುವುದಿಲ್ಲ' ಎಂದರು.

ದೇವಾಲಯ ಮಾದರಿ ರಚನೆ ಪತ್ತೆ

ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ತೆರವುಗೊಳಿಸದಂತೆ ನಿರ್ಬಂಧ ವಿಧಿಸಲು ಧನಂಜಯ್‌ ಹಾಗೂ ಮನೋಜ್‌ಕುಮಾರ್‌ ಸಿವಿಲ್‌ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ್ದ ಕೋರ್ಟ್‌, ರಚನೆ ತೆರವುಗೊಳಿಸದಂತೆ ಪ್ರತಿಬಂಧಕಾಜ್ಞೆ ಹೊರಡಿಸಿತ್ತು. ಈ ಮಧ್ಯೆ, ಮಸೀದಿಯ ಆಡಳಿತ ಮಂಡಳಿ ಮಧ್ಯಂತರ ಅರ್ಜಿ ಸಲ್ಲಿಸಿ, ವಿವಾದಿತ ಸ್ಥಳ ವಕ್ಫ್ ಆಸ್ತಿಯಾಗಿದೆ. ಜತೆಗೆ, ಸಾರ್ವಜನಿಕ ಪೂಜಾ ಸ್ಥಳ ಕಾಯಿದೆಯಡಿ ಅಸಲು ದಾವೆ ವಿಚಾರಣಾ ಮಾನ್ಯತೆ ಹೊಂದಿಲ್ಲ ಎಂದು ವಾದಿಸಿದ್ದರು.

ಇದನ್ನೂ  ಓದಿ: JP Nadda: ಮೋದಿ ಆಗಮನಕ್ಕೂ ಮುನ್ನ ರಾಜ್ಯಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ; ಕುತೂಹಲ ಕೆರಳಿಸಿದೆ ನಡ್ಡಾ ಭೇಟಿ

ಹೈಕೋರ್ಟ್​ ಮೆಟ್ಟಿಲೇರಿದ ಅರ್ಜಿದಾರರು

ಮತ್ತೊಂದೆಡೆ, ಮೂಲ ದಾವೆದಾರರೂ ಮಧ್ಯಂತರ ಅರ್ಜಿ ಸಲ್ಲಿಸಿ, ಮೊದಲು ಕಮಿಷನರ್‌ ಒಬ್ಬರನ್ನು ನೇಮಕ ಮಾಡಿ ಪರಿಶೀಲನೆ ನಡೆಸುವಂತೆ ಕೋರಿದ್ದರು. ಆದರೆ, ಸಿವಿಲ್‌ ನ್ಯಾಯಾಲಯ ಮೊದಲು ದಾವೆಯ ಸಿಂಧುತ್ವದ ಕುರಿತು ವಿಚಾರಣೆ ನಡೆಸುತ್ತಿದೆ. ಇದರಿಂದ, ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ರು. ಇದೀಗ ಹೈಕೊರ್ಟ್​ ಯಾವುದೇ ಆದೇಶ ಹೊರಡಿಸಬಾರದು ಎಂದು ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಜೂನ್‌ 17ಕ್ಕೆ ಮುಂದೂಡಿತು.
Published by:Pavana HS
First published: