Malali Mosque: ಮಳಲಿ ದರ್ಗಾ ವಿಚಾರವನ್ನು ಶಾಂತಿಯಿಂದ ಮುಗಿಸಲು ನಿರ್ಧಾರ; ಭರತ್ ಶೆಟ್ಟಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಏನಾಯ್ತು?

ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ಅರ್ಜಿ ಸಲ್ಲಿಕೆ ಯಾಗಿದ್ದು, ವಿಎಚ್ ಪಿ ಕಾನೂನು ಹೋರಾಟದ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಿನ್ನಲ್ಲಿ ಮಳಲಿ ದರ್ಗಾ ವಿವಾದ ಶಾಂತಿಯುತವಾಗಿ ಬಗೆ ಹರಿಯಲಿ ಅನ್ನೋದು ಮಳಲಿ ಗ್ರಾಮಸ್ಥರ ಅಭಿಪ್ರಾಯವಾಗಿದೆ..

ಸಭೆ

ಸಭೆ

  • Share this:
Malali Mosque Row: ಮಂಗಳೂರಿನ (Mangaluru Temple Row) ವಿವಾದಿತ ಮಳಲಿ ದರ್ಗಾ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಲು ಶಾಸಕ ಡಾ.ವೈ ಭರತ್ ಶೆಟ್ಟಿ (MLA Bharat Shetty) ಮುಂದಾಗಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ದರ್ಗಾದ ಆಡಳಿತ ಮಂಡಳಿ (Dargah Administration Board) ಮತ್ತು ಹಿಂದೂ ಸಂಘಟನೆಗಳ ಮುಖಂಡರ (Hindu Organization Leaders) ಜೊತೆ ಶಾಸಕ ಭರತ್ ಶೆಟ್ಟಿ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ದರ್ಗಾ ನವೀಕರಣ ತಡೆಗೆ ವಿಎಚ್ ಪಿ (VHP) ಸಲ್ಲಿಸಿದ್ದ ಅರ್ಜಿ ವಜಾಗೆ ಮಸೀದಿ ಆಡಳಿತ ಮಂಡಳಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ಮಂಗಳೂರಿನ ವಿವಾದಿತ ಮಳಿ ದರ್ಗಾ ವಿವಾದ ತಾರಕಕ್ಕೇರಿದೆ. ರಾಜಕೀಯ ಮುಖಂಡರ ಕೆಸರೆರೆಚಾಟದ ನಡುವೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಮುಂದಾಗಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಶಾಸಕ ಭರತ್ ಶೆಟ್ಟಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ,ಭಜರಂಗದಳ ಪ್ರಮುಖರ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.

ಶಾಸಕ ಭರತ್ ಶೆಟ್ಟಿ ಸಮ್ಮುಖದಲ್ಲಿ ಸಭೆ

ಪ್ರಾರಂಭದಲ್ಲಿ ಮಸೀದಿ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ ಶಾಸಕ ಭರತ್ ಶೆಟ್ಟಿ, ಬಳಿಕ ಹಿಂದೂ ಸಂಘಟನೆ ಪ್ರಮುಖರ ಅಭಿಪ್ರಾಯ ಪಡೆದಿದ್ದಾರೆ ಮೂರನೇ ಹಂತದಲ್ಲಿ ಮಸೀದಿ ಆಡಳಿತ ಮಂಡಳಿ, ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಊರಿನ ಪ್ರಮುಖರು, ವಿ.ಎಚ್.ಪಿ, ಬಜರಂಗದಳ ಪ್ರಮುಖರ ಜೊತೆ ಜಂಟಿ ಸಭೆ ಮಾಡಿದ್ದಾರೆ.‌

ಸಭೆಯಲ್ಲಿ ಪ್ರಮುಖರು ತಮ್ಮ ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ. ಸೌಹಾರ್ದಯುತವಾಗಿ ವಿವಾದ ಬಗೆಹರಿಸುವ ಬಗ್ಗೆ ಎಲ್ಲರೂ ಒಮ್ಮತ ವ್ಯಕ್ತಪಡಿಸಿದ್ದು, ಮುಂದಿನ ದಿನದಲ್ಲಿ ಮತ್ತೆ ಸಭೆ ಮಾಡುವ ನಿರ್ಧಾರ ಮಾಡಲಾಗಿದೆ.

ಸೌಹಾರ್ದಯುತವಾಗಿ ಸರಿಯಾಗಬೇಕು

ಸಭೆ ಕುರಿತಂತೆ ಮಾತನಾಡಿದ ಶಾಸಕ ಭರತ್ ಶೆಟ್ಟಿ, ಮಸೀದಿ ಕಮಿಟಿ,ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು, ಹಿಂದೂ ಸಂಘಟನೆ ನಾಯಕರ ಜೊತೆ ಸಭೆ ನಡೆಸಿದ್ದೇವೆ. ಸೌಹಾರ್ದಯುತವಾಗಿ ಈ ವಿವಾದವನ್ನು‌ ಪರಿಹರಿಸಿಕೊಳ್ಳಬೇಕು ಎಂಬ ಚರ್ಚೆ ಮಾಡಿದ್ದೇವೆ. ಮುಂದಿನ‌ ದಿನಗಳಲ್ಲಿ ಎರಡು‌ ಮೂರು‌ ಸುತ್ತಿನ ‌ಮಾತುಕತೆ ಅಗತ್ಯವಿರಬಹುದು. ಎರಡು ಕಡೆಯವರ ಅಭಿಪ್ರಾಯ, ಗೊಂದಲ, ಸಮಸ್ಯೆಗಳನ್ನು ತಿಳಿದುಕೊಂಡಿದ್ದೇನೆ. ಸೌಹಾರ್ದಯುತವಾಗಿ ಇದು ಸರಿಯಾಗಬೇಕೆಂಬುದು ನನ್ನ ಆಸೆ.

ಇದನ್ನೂ ಓದಿ:  Explained: ತಾಂಬೂಲ ಪ್ರಶ್ನೆ ಎಂದರೇನು? ಇದರ ಆಚರಣೆ, ಮಹತ್ವಗಳ ಬಗ್ಗೆ ಇಲ್ಲಿದೆ ಮಾಹಿತಿ

ಶಾಂತಿ ಸುವ್ಯವಸ್ಥೆ ಹಾಳಾಗಬಾರದು

ಮಸೀದಿ ನಿರ್ಮಿಸಲು ಬೇರೆ ಜಾಗದ ವ್ಯವಸ್ಥೆ ಮಾಡುವ ಎಂಬ ಅಭಿಪ್ರಾಯ ಹಿಂದೂ ಸಂಘಟನೆಯವರು ಹೇಳಿದ್ದಾರೆ. ಒಂದು ಎರಡು ದಿನದಲ್ಲಿ ಮಾತುಕತೆ ನಡೆಸಿ ಪರಿಹರಿಸುವಷ್ಟು ಸುಲಭವಿಲ್ಲ. ಗಂಭೀರವಾದ ವಿಷಯವಾದರಿಂದ ಗಮನಕೊಟ್ಟು ಹಂತ ಹಂತವಾಗಿ ಬಗೆಹರಿಸಿಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಾಂತಿ ಸುವ್ಯವಸ್ಥೆ ಹಾಳಾಗಬಾರದು. ಜಾಗದ ಸರ್ವೆ ಮಾಡಬೇಕೆಂಬ ಮನವಿಯನ್ನು ಹಿಂದೂ ಸಂಘಟನೆಯವರು ಇಟ್ಟಿದ್ದಾರೆ ಸರ್ವೆ ಮಾಡಿದ್ರೆ ಪೂರ್ತಿಯಾಗಿ ಸತ್ಯಾಸತ್ಯತೆ ಗೊತ್ತಾಗುತ್ತದೆ.

ಮಸೀದಿಗೆ ಹೇಗೆ ಈ ಜಾಗ ಬಂತು?

ಸರ್ಕಾರದಿಂದ ಮಸೀದಿಗೆ ಹೇಗೆ ಜಾಗ ಬಂತು ಎಂಬ ದಾಖಲೆಗಳಿವೆ. 1928 ರಿಂದ ಮಸೀದಿಗೆ ತಸ್ಥಿಕ್ ಸಿಗುತ್ತಿದೆ ಎಂಬ ವಿಚಾರವಿದೆ. ಆದ್ರೆ ತಸ್ಥಿಕ್ ಸಿಗುತ್ತಿದ್ದ ಮಸೀದಿಯ ಜಾಗ ಅದೇಯಾ ಅಥವಾ ಬೇರೆನಾ ಎಂಬ ಗೊಂದಲವಿದೆ. ಮಸೀದಿಗಿಂತ ಹಿಂದೆ ಏನಾಗಿತ್ತು ಎಂಬ ಬಗ್ಗೆ ಯಾವುದೇ ದಾಖಲೆಯಿದ್ರೆ ಹಿಂದೆ ಅಲ್ಲಿ ಮೂರು ನಾಲ್ಕು ದೇವಸ್ಥಾನಗಳಿರೋದು ಇತಿಹಾಸದಲ್ಲಿ ಉಲ್ಲೇಖವಿದೆ.

ಆ ದೇವಸ್ಥಾನ ಈಗ ಯಾಕೆ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಯಿದೆ. ಇದಕ್ಕೆ ಸರಿಯಾದ ಉತ್ತರ ಸಿಗಬೇಕಾದರೆ ಸರ್ವೆ ಮಾಡಬೇಕು. ಕಾನೂನಾತ್ಮಕ ದೃಷ್ಟಿಯಿಂದ ಇದನ್ನು ನೋಡಬೇಕಾಗಿದೆ. ಮತಾಂಬೂಲ ಪ್ರಶ್ನೆ ಅವರವರ ನಂಬಿಕೆ ಪ್ರಕಾರ ಇಟ್ಟಿದ್ದಾರೆ ಎಂಬ ಅಭಿಪ್ರಾಯವನ್ನು ಮಸೀದಿಯವರು ನೀಡಿದ್ದಾರೆ. ಇದಕ್ಕೆ ನಮ್ಮ ಅಭ್ಯಂತರವೇನಿಲ್ಲ‌ ಎಂದಿದ್ದಾರೆ.

ಈ ವಿಚಾರಗಳಿಗೆ ಮಸೀದಿಯವರು ಯಾವುದೇ ಆಕ್ಷೇಪಗಳನ್ನು ಮಾಡಿಲ್ಲ. ಮಸೀದಿಯವರು ಈ ಬಗ್ಗೆ ಇನ್ನಷ್ಟು ಮಾತುಕತೆ ನಡೆಸುತ್ತಾರೆ. ಮಾತುಕತೆ ಶುರುವಾದರೆ ಅದರಿಂದ ಫಲಿತಾಂಶ ಹೊರಬರುತ್ತದೆ.

SDPI ಮುಖಂಡನ ಹೇಳಿಕೆಗೆ ಕಿಡಿ

ಒಳ್ಳೆಯ ಫಲಿತಾಂಶ ಬರಬಹುದು ಎಂಬ ನಿರೀಕ್ಷೆಯಿದೆ. ಒಮ್ಮೆ ಮಾತುಕತೆ ಶುರುವಾದರೆ ಘರ್ಷಣೆಯಾಗುವ ಸಾಧ್ಯತೆ ಕಡಿಮೆ. ಎಸ್.ಡಿ.ಪಿ.ಐ ನಾಯಕರ ಹೇಳಿಕೆಯ ಬಗ್ಗೆಯು ಸಭೆಯಲ್ಲಿ ಚರ್ಚೆಗೆ ಬಂತು. ಎಸ್.ಡಿ.ಪಿ.ಐ ರಾಜಕೀಯ ಅವಕಾಶಕ್ಕೆ ಈ ರೀತಿ ಹೇಳಿಕೆ ನೀಡುತ್ತಿದೆ. ಉದ್ರೇಕಕಾರಿ ಹೇಳಿಕೆ ನೀಡಿ ಜನರನ್ನು ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಮಳಲಿಯ ಎರಡು ಕಡೆಯ ಜನ ಯಾವುದೇ ಹೇಳಿಕೆ ಕೊಡ್ತಿಲ್ಲ. ಅವರ ಮನಸ್ಸಿನಲ್ಲಿರುವ ವಿಚಾರವನ್ನಷ್ಟೇ ಹೇಳುತ್ತಿದ್ದಾರೆ. ಇದರ ಹೊರತಾಗಿ ಬಡಿತೇವೆ, ನುಗ್ಗುತ್ತೇವೆ ಎಂದು ಹೇಳುತ್ತಿಲ್ಲ. ಆದರೆ ಹೊರಗಿಂದ ಕಾಂಗ್ರೆಸ್, ಎಸ್.ಡಿ.ಪಿ.ಐ ಆಟ ಶುರು ಮಾಡಿದೆ.

ಸ್ಥಳೀಯವಾಗಿ ಯಾವುದೇ ಸಮಸ್ಯೆ ಇಲ್ಲ

ಹೀಗಾಗಿ ನಾವು ಸ್ವಲ್ಪ ಜಾಗರೂಕತೆ ಮಾಡಿಕೊಳ್ಳಬೇಕು. ಸ್ಥಳೀಯವಾಗಿ ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಸೌಹಾರ್ದಯುತವಾಗಿ ಇದನ್ನು ತೆಗೆದುಕೊಂಡು‌ ಹೋಗಲಾಗುತ್ತಿದೆ. ಆದ್ರೆ ಡಿ.ಕೆ.ಶಿವಕುಮಾರ್, ಎಚ್‌.ಡಿ.ಕುಮಾರಸ್ವಾಮಿ, ಎಸ್.ಡಿ.ಪಿ.ಐ ನಾಯಕರು ಪ್ರಚೋದನಾತ್ಮಕ ಹೇಳಿಕೆ‌ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಹಾಳು ಮಾಡುವ ಪ್ರಯತ್ನ ಆಗುತ್ತಿದೆ. ಸ್ಥಳೀಯರ ಸಮಸ್ಯೆ ಬಗ್ಗೆ ಎಲ್ಲಿಯು ಕೂತು ಹಾಳು ಮಾಡಬಾರದು ಅಂತಾ ಶಾಸಕ ಭರತ್ ಶೆಟ್ಟಿ ಹೇಳಿದ್ದಾರೆ.

VHP ಮುಖಂಡ ಶರಣ್ ಪಂಪ್ ವೆಲ್ ಪ್ರತಿಕ್ರಿಯೆ

ಇನ್ನು ಸಭೆಯಲ್ಲಿ ಭಾಗವಹಿಸಿದ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್,ತಾಂಬೂಲ ಪ್ರಶ್ನೆಯಲ್ಲಿ ದೇವರ ಸಾನಿಧ್ಯ ಇತ್ತು ಎಂಬುದು ಗೊತ್ತಾಗಿದೆ. ಇದನ್ನು ಸೌಹಾರ್ದಯುತವಾಗಿ ಬಗೆಹರಿಸುವ ಬಯಕೆ ಇತ್ತು. ಶಾಸಕ ಭರತ್ ಶೆಟ್ಟಿಯವರು ಈ ಬಗ್ಗೆ ಸಭೆ ಕರೆದಿದ್ದರು.

ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ. ನಾವು ನಮ್ಮ‌ ನಿಲುವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಪೂರ್ವಜರು ಆರಾಧನೆ ಮಾಡಿಕೊಂಡು ಬಂದಿದ್ದ ಸಾನಿಧ್ಯ, ದೇವತಾ ಸಾನಿಧ್ಯ ಮರು ನಿರ್ಮಾಣವಾಗಬೇಕು. ಸೌಹಾರ್ದಯುತವಾಗಿ ಜಾಗವನ್ನು ಬಿಟ್ಟುಕೊಡಿ ಎಂದು ಹೇಳಿದ್ದೇವೆ.

ಸಕಾರಾತ್ಮಕವಾಗಿ ಮಸೀದಿಯವರು ಒಳ್ಳೆಯ ಚರ್ಚೆ ಮಾಡಿದ್ದಾರೆ. ಮಸೀದಿಯ ಪ್ರಮುಖರು, ಧಾರ್ಮಿಕ ಮುಖಂಡರ ಜೊತೆ ಕೇಳಬೇಕು ಎಂದು ಹೇಳಿದ್ದಾರೆ. ಎರಡನೇ ಹಂತದಲ್ಲಿ ಹೇಗೆ ಮಾತನಾಡಬಹುದು ಎಂದು ಹೇಳಿದ್ದಾರೆ. ಕಾನೂನು ರೀತಿಯಲ್ಲಿ ಕೊಂಡು ಹೋದರೆ ಯಾವಾಗ ಇದು ಮುಗಿಯುತ್ತೆ ಎಂದು ಗೊತ್ತಿಲ್ಲ.

ಅಷ್ಟಮಂಗಳ ಪ್ರಶ್ನೆ

ಕಾನೂನನ್ನು ಬದಿಗಿಟ್ಟು ಸೌಹಾರ್ದಯುತವಾಗಿ ಬಗೆಹರಿಸುವ ಎಂದು ಮನದಟ್ಟು ಮಾಡಿದ್ದೇವೆ. ಅವರು ಮುಂದೆ ಯಾವ ರೀತಿ ಸ್ಪಂದಿಸುತ್ತಾರೆ ಎಂದು ನೋಡುವ, ಸೌಹಾರ್ದಯುತವಾಗಿ ಮುಗಿಯಬಹುದು ಎಂಬ ವಿಶ್ವಾಸ ನಮಗಿದೆ. ಅಷ್ಟಮಂಗಳ ಪ್ರಶ್ನೆ ಇಡುವುದಕ್ಕಿದೆ ಎಂಬುವುದನ್ನು ಮಸೀದಿಯವರ ಬಳಿ ಹೇಳಿದ್ದೇವೆ. ಇದಕ್ಕಿಂತ ಮೊದಲು ಸೌಹಾರ್ದಯುತವಾಗಿ ಬಗೆಹರಿಸುವ ಎಂದಿದ್ದೇವೆ.

ಇದನ್ನೂ ಓದಿ:  Tambula Prashne: ಮಳಲಿಯಲ್ಲಿ ಇದ್ದಿದ್ದು ಮಂದಿರವೋ, ಮಸೀದಿಯೋ? ತಾಂಬೂಲ ಪ್ರಶ್ನೆಯಲ್ಲಿ ರಹಸ್ಯ ಬಯಲು!

ಅಷ್ಟಮಂಗಳ ಪ್ರಶ್ನೆ ಯಾವಾಗ, ಎಲ್ಲಿ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕು. ಸ್ಥಳೀಯರ ಮೂಲಕ ಕಮಿಟಿ ಮಾಡಿ ಆ ಕಮಿಟಿಯ ಮೂಲಕ ಮಾಡುತ್ತೇವೆ. ಈ ವಿವಾದದಲ್ಲಿ ನಮಗೆ ಸಂಘರ್ಷ ಬೇಡ. ಮಳಲಿ ಮಸೀದಿಯ ಆಡಳಿತ ಕಮಿಟಿಯವರೆ ಮಾತನಾಡಲು ಬಂದಿದ್ದಾರೆ.

ಇವತ್ತಿನ ಸಭೆಯಿಂದ ದೇಶಕ್ಕೆ ಸಂದೇಶ

ಎಸ್.ಡಿ.ಪಿ.ಐನವರ ಮಾನಸಿಕತೆ ಏನು ಮಳಲಿಯ ಮುಸಲ್ಮಾನರ ಮಾನಸಿಕತೆ ಏನು‌ ಎಂದು ಜನರಿಗೆ ಗೊತ್ತಾಗುತ್ತದೆ. ಇವತ್ತಿನ‌ ಸಭೆಯಿಂದ ಇಡೀ ರಾಜ್ಯಕ್ಕೆ, ದೇಶಕ್ಕೆ ಸಂದೇಶ ಹೋಗಿದೆ. ಒಂದು‌ ಹಂತದ ಪ್ರಯತ್ನ ಮಾಡಿದ್ದೇವೆ. ಮುಂದೆ ಏನಾಗುತ್ತೆ ಎಂದು ಕಾದು ನೋಡುತ್ತೇವೆ ಅಂತಾ ವಿ.ಎಚ್.ಪಿ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಇನ್ನೊಂದೆಡೆ ಮಳಲಿ ಮಸೀದಿ ಮಂದಿರ ವಿವಾದ ವಿಚಾರವಾಗಿ, ವಿ.ಎಚ್.ಪಿ ಸಲ್ಲಿಸಿರುವ ಅರ್ಜಿ ವಜಾಗೆ ಮಸೀದಿ ಆಡಳಿತ ಮಂಡಳಿ ಅರ್ಜಿ‌ ಸಲ್ಲಿಸಿದೆ.ವಿ.ಎಚ್.ಪಿ ಅರ್ಜಿ ವಜಾಗೆ ಮಸೀದಿ ಆಡಳಿತ ಸಲ್ಲಿಸಿರುವ ಅರ್ಜಿ ಮಂಗಳೂರು ಕೋರ್ಟ್ ನಲ್ಲಿ  ವಿಚಾರಣೆ ನಡೆಯಲಿದೆ.

ಕಾನೂನು ಹೋರಾಟ

ಮಳಲಿಯ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ಆಡಳಿತದಿಂದ ಅರ್ಜಿ ಸಲ್ಲಿಕೆ ಯಾಗಿದ್ದು, ವಿಎಚ್ ಪಿ ಕಾನೂನು ಹೋರಾಟದ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟಿನ್ನಲ್ಲಿ ಮಳಲಿ ದರ್ಗಾ ವಿವಾದ ಶಾಂತಿಯುತವಾಗಿ ಬಗೆ ಹರಿಯಲಿ ಅನ್ನೋದು ಮಳಲಿ ಗ್ರಾಮಸ್ಥರ ಅಭಿಪ್ರಾಯವಾಗಿದೆ..
Published by:Mahmadrafik K
First published: