ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಪಡೆದರೂ ಸಿಎಂ (CM of Karnataka) ಆಯ್ಕೆ ದೊಡ್ಡ ಕಗ್ಗಂಟಾಗಿ ಮುಂದುವರಿಯುತ್ತಿದೆ. 35 ವರ್ಷಗಳ ನಂತರ ಹೆಚ್ಚು ಸ್ಥಾನಗಳಿಸಿಕೊಂಡಿರುವ ಕಾಂಗ್ರೆಸ್ಗೆ ಸರ್ಕಾರ (Congress Government) ರಚನೆ ಮಾಡುವುದಕ್ಕೆ ಮುನ್ನವೇ ಸಿಎಂ ಆಯ್ಕೆ ತಲೆ ನೋವಾಗಿ ಪರಿಣಿಸಿದೆ. ಚುನಾವಣೆಗೂ (Election) ಮುನ್ನ ಸಿಎಂ ಆಯ್ಕೆ ಹೈಕಮಾಂಡ್ಗೆ ಬಿಟ್ಟಿದ್ದು, ಎಂದು ಹೇಳುತ್ತಿದ್ದ ಕಾಂಗ್ರೆಸ್ ನಾಯಕರು, ಈಗ ತಮಗೇ ಮುಖ್ಯಮಂತ್ರಿ ಪಟ್ಟಕ್ಕಾಗಿ ಮುಸುಕಿನ ಗುದ್ದಾಟ ಆರಂಭಿಸಿದ್ದಾರೆ. ನೂತನ ಸಿಎಂ ಆಯ್ಕೆ ಕುರಿತಂತೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈವೋಲ್ಟೇಜ್ ಮೀಟಿಂಗ್ (High Voltage Meeting) ನಡೆಯುತ್ತಿದೆ. ಮೂಲಗಳ ಪ್ರಕಾರ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (DK Shivakumar) ತಮ್ಮ ಪಟ್ಟು ಸಡಿಲಿಸದೇ ಹೈಕಮಾಂಡ್ ಮುಂದೆ ತಾವೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದಾರೆ.
ಶಾಸಕಾಂಗ ಪಕ್ಷದ ಸಭೆಯಂತೆ ನಿರ್ಧಾರ ತೆಗೆದುಕೊಳ್ಳಿ ಎಂದ ಸಿದ್ದು
ಇನ್ನು ಎಐಸಿಸಿ ಅಧ್ಯಕ್ಷರ ಜೊತೆ ಚರ್ಚೆ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಆಯ್ಕೆ ಸ್ಥಾನವನ್ನು ಶಾಸಕಾಂಗ ಪಕ್ಷದ ಸಭೆಯಂತೆ ನಿರ್ಧಾರ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಶಾಸಕರು ಬೆಂಬಲ ಯಾರ ಪರವಾಗಿ ಹೆಚ್ಚಿದೆ ಅವರನ್ನೇ ಶಾಸಕಾಂಗ ಪಕ್ಷದ ನಾಯಕನಾಗಿ ಘೋಷಣೆ ಮಾಡಿ ಎಂದು ಖರ್ಗೆ ಮುಂದೆ ಸಿದ್ದು ಹೇಳಿದ್ದಾರೆ.
ಬಹುತೇಕ ಶಾಸಕರು ನನ್ನ ಪರ ಇದ್ದಾರೆ
ಖರ್ಗೆ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ಬಹುತೇಕ ಶಾಸಕರು ನನ್ನ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂದರೆ ಅವರೆಲ್ಲರು ನನ್ನ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ ಎಂದೇ ಅರ್ಥ. ಶಾಸಕರ ಅಭಿಪ್ರಾಯವನ್ನು ಗೌರವಿಸುವಂತೆ ಖರ್ಗೆಯವರಿಗೆ ಸಿದ್ದರಾಮಯ್ಯ ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಸಿದ್ದು ಪರ ನಿಂತ ಕುರುಬರ ಸಂಘ
ಡಿಕೆ ಶಿವಕುಮಾರ್ ಸಿಎಂ ಆಗಬೇಕೆಂದು ಒಕ್ಕಲಿಗ ಸಮುದಾಯದ ಸ್ವಾಮೀಜಿಗಳು ಹಾಗೂ ಸಂಘಗಳು ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಹೇರುತ್ತಿರುವ ಬೆನ್ನಲ್ಲೇ ಕುರುಬ ಸಂಘ ಸಿದ್ದರಾಮಯ್ಯ ಪರ ನಿಂತಿವೆ. ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ ವೆಂಕಟೇಶ್ ಮೂರ್ತಿ, ರಾಜ್ಯದ ಸಿಎಂ ಆಗಿ ಇಬ್ಬರು ಸ್ಪರ್ಧೆಯಲ್ಲಿದ್ದಾರೆ. ಆದರೆ ಹಿಂದುಳಿದ ವರ್ಗದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನ ನೀಡಬೇಕು. ಶೇ.80 ರಷ್ಟು ಅಹಿಂದ ಮತದಾರರು ಸಿದ್ದರಾಮಯ್ಯನವರನ್ನು ನೋಡಿ ಕಾಂಗ್ರೆಸ್ಗೆ ಮತ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಹಾಗೂ ಬಡತನ ನಿರ್ನಾಮ ಮಾಡಲು ಸಿದ್ದರಾಮಯ್ಯ ಅವರ ಅಗತ್ಯ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Karnataka CM: ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಲು ಸಾಧ್ಯವೇ ಇಲ್ಲ! ಖರ್ಗೆ ಮುಂದೆ ಡಿಕೆಶಿ ಖಡಕ್ ಮಾತು
ಸಿದ್ದರಾಮಯ್ಯ ವಿರುದ್ಧ ಡಿಕೆ ಶಿವಕುಮಾರ್ ಪರೋಕ್ಷವಾಗಿ ಕಿಡಿ ಕಾರಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಜೊತೆಗಿನ ಮಾತುಕತೆ ವೇಳೆ, ಮುಖ್ಯಮಂತ್ರಿ ಸ್ಥಾನವನ್ನು ಕೆಲವರು ತಮ್ಮ ಪೂರ್ವಜರ ಆಸ್ತಿ ಎಂದು ಭಾವಿಸಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ಅವರ ಜೊತೆ ಅಧಿಕಾರ ಹಂಚಿಕೆ ಇಲ್ಲ ಅಂತ ಖಡಾಖಂಡಿತವಾಗಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗಬೇಕು!
ಶಾಸಕರ ಅಭಿಪ್ರಾಯ ಏನೇ ಇರಲಿ, ಕೆಪಿಸಿಸಿ ಅಧ್ಯಕ್ಷರಾದ ವೇಳೆ ಅವರ ಸಾರಥ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಅವರನ್ನೇ ಸಿಎಂ ಮಾಡುವುದು ಕಾಂಗ್ರೆಸ್ ಸಂಪ್ರದಾಯ ಎಂದಿದ್ದಾರೆ. ಎಸ್.ಎಂ. ಕೃಷ್ದ ಕೆಪಿಸಿಸಿ ಅಧ್ಯಕ್ಷರಾದ ವೇಳೆ ಇದೇ ಮಾದರಿಯನ್ನು ಅನುಸರಿಸಲಾಗಿತ್ತು. ಇದೇ ಮಾದರಿಯನ್ನು ಇಲ್ಲಿಯೂ ಅನುಸರಿಸುವಂತೆ ಡಿಕೆಶಿ ಒತ್ತಡ ಹೇರಿದ್ದಾರೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ