Makar Sankranthi 2022: ವರ್ಷದ ಮೊದಲ ಹಬ್ಬಕ್ಕೆ ಖರೀದಿ ಜೋರು - ಮಾರುಕಟ್ಟೆಯಲ್ಲಿ ಏರಿದ ಬೆಲೆಗಳು

Makar Sankranthi 2022: ಜನರು ತಮ್ಮ ಕೆಲಸದ ನಡುವೆ ಮನೆಯಲ್ಲಿ ಎಳ್ಳು-ಬೆಲ್ಲ ಮಾಡಲು ಸಮಯವಿರುವುದಿಲ್ಲ, ಹಾಗಾಗಿ ಅಂಗಡಿಯಿಂದಲೇ ಖರೀದಿ ಮಾಡುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಗ್ಗಿ ಹಬ್ಬ ಎಂದೇ ಪ್ರಸಿದ್ದವಾಗಿರುವ ಮಕರ ಸಂಕ್ರಾಂತಿ ಹಬ್ಬದ ಆಚರಣೆಗೆ ಕೊರೊನಾ ನಡುವೆ ಸಹ ನಾಡಿನ ಜನತೆ ಸಜ್ಜಾಗಿದ್ದು, ಎಲ್ಲೆಡೆ ಸಂಭ್ರಮ ಮನೆ ಮಾಡಿದೆ. ಅಲ್ಲದೇ ಹಬ್ಬಕ್ಕೆ ಖರೀದಿಯೂ ಭರದಿಂದ ಸಾಗಿದ್ದು, ಮಾರುಕಟ್ಟೆಯಲ್ಲಿ ಕಬ್ಬು, ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಹೂ, ಹಣ್ಣು ಖರೀದಿ ಜೋರಾಗಿದೆ. 

ಶನಿವಾರ  ಮಕರ ಸಂಕ್ರಾಂತಿ ಹಬ್ಬವಿದೆ. ಇದು ವರ್ಷದ ಮೊದಲ ಹಬ್ಬ. ಆದರೆ ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಿರುವ ಕಾರಣ ವೀಕೆಂಡ್​ ಕರ್ಫ್ಯೂ ಜಾರಿ ಇದ್ದು ರಜೆಯ ಸಮಯದಲ್ಲಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಹಬ್ಬದ ದಿನವೇ ಕರ್ಫ್ಯೂ ಇರುವುದು ಸ್ವಲ್ಪ ಕಷ್ಟಕರವಾಗಿದೆ. ಕಾರಣ ಕಳೆದ 2 ದಿನಗಳಿಂದ ಮಾರುಕಟ್ಟೆಯಲ್ಲಿ ಜನರು ಬ್ಯುಸಿಯಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಕಾರಣ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ಅವಕಾಶವಿಲ್ಲ. ಹಾಗಾಗಿ ಈ ಬಾರಿ ಮನೆಯಲ್ಲಿಯೇ ಹಬ್ವನ್ನು ಆಚರಿಸಲು ಜನರು ಸಿದ್ಧರಾಗಿದ್ದಾರೆ.

ಏರಿಕೆಯಾದ ಹೂವಿನ ಬೆಲೆ

ಇದನ್ನೂ ಓದಿ: ಸಂಕ್ರಾಂತಿ ಹಬ್ಬದ ದಿನ ಯಾವ ರಾಶಿಯವರು ಏನು ದಾನ ಮಾಡಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ

ಬಸವನಗುಡಿ, ಗಾಂಧಿಬಜಾರ್, ಮಲ್ಲೇಶ್ವರ, ಜಯನಗರ, ಜೆ.ಪಿ.ನಗರ, ಹೆಬ್ಬಾಳ, ಯಶವಂತಪುರ, ಇಂದಿರಾನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಬ್ಬದ ಕಾರಣದಿಂದ ವ್ಯಾಪಾರಿಗಳು ಮಾರಾಟ ಆರಂಭಿಸಿದ್ದು, ಹೂವು ಮತ್ತು ಬಟ್ಟೆಗಳ ವ್ಯಾಪಾರ ಬಿರುಸಿನಿಂದ ಸಾಗಿದೆ. ತಿಂಗಳುಗಳಿಂದ ಜನರಿಲ್ಲದೆ ಭಣ ಭಣವೆನ್ನುತ್ತಿದ್ದ ಬಟ್ಟೆ ಅಂಗಡಿಗಳಲ್ಲಿ ಜನರ ಸಂಖ್ಯೆ ಹೆಚ್ಚಾಗಿದ್ದು, ವ್ಯಾಪಾರ ಏರಿಕೆಯಾಗಿದೆ.

ಇನ್ನು ಹಬ್ಬ ಎಂದ ಮೇಲೆ ಹೂವುಗಳ ಮಾರಾಟ ಸಹ ಹೆಚ್ಚಾಗಿದೆ. ಮಾರಾಟದ ಜೊತೆಗೆ ಬೆಲೆಯೂ ಏರಿಕೆಯಾಗಿದ್ದರೂ ಸಹ ಜನರು ಖರೀದಿ ನಡೆಸುತ್ತಿದ್ಧಾರೆ.

ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆಯಲ್ಲಿ ಸಂಕ್ರಾಂತಿಗಾಗಿ ಟನ್‌ಗಟ್ಟಲೆ ಕಬ್ಬಿನ ಜಲ್ಲೆಗಳು ಬಂದಿದ್ದು ಮಾರಾಟ ಆರಂಭವಾಗಿದೆ. ಯಶವಂತಪುರ, ಗಾಂಧಿ ಬಜಾರ್, ಮಲ್ಲೇಶ್ವರ, ಬಸವನಗುಡಿ, ಜಯನಗರ, ವಿಜಯನಗರ, ಮಡಿವಾಳ, ಕೆ.ಆರ್.ಪುರ, ಯಲಹಂಕ, ಕೆಂಗೇರಿ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲೂ ಕಬ್ಬು, ಕಡಲೆ ಕಾಯಿ, ಅವರೆಕಾಯಿ, ಗೆಣಸು ಮಾರಾಟ ಹೆಚ್ಛಾಗಿದ್ದು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳ ಮಾರಾಟ ಸಹ ಭರದಿಂದ ಸಾಗಿದೆ.

ಜನರು ತಮ್ಮ ಕೆಲಸದ ನಡುವೆ ಮನೆಯಲ್ಲಿ ಎಳ್ಳು-ಬೆಲ್ಲ ಮಾಡಲು ಸಮಯವಿರುವುದಿಲ್ಲ, ಹಾಗಾಗಿ ಅಂಗಡಿಯಿಂದಲೇ ಖರೀದಿ ಮಾಡುತ್ತಿದ್ದಾರೆ.

ಬಿಳಿ ಕಬ್ಬಿನ ಒಂದು ಜಲ್ಲೆಯ ದರ ಮಾರುಕಟ್ಟೆಯಲ್ಲಿ  ₹50ವರೆಗೆ ಇದ್ದು. ಕಪ್ಪು ಬಣ್ಣದ ಕಬ್ಬಿನ ಜಲ್ಲೆ ₹70ರವರೆಗೆ ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ. ಮಾರುಕಟ್ಟೆಯಲ್ಲಿ ಚಿಲ್ಲರೆ ವ್ಯಾಪಾರಿಗಳು ಜಲ್ಲೆಗಳನ್ನು ತುಂಡರಿಸಿ, ಒಂದನ್ನು ₹10ರಿಂದ ₹20ರವರೆಗೆ ಮಾರಾಟ ಮಾಡುತ್ತಿದ್ದಾರೆ. ಅಧಿಕ ಮಳೆಯಿಂದ ಈ ಬಾರಿ ಕಡಲೆಕಾಯಿ, ಅವರೆಕಾಯಿ ಬೆಳೆಗಳು ಹಾನಿಯಾಗಿದ್ದವು, ಈ ಕಾರಣದಿಂದು ಹೆಚ್ಚಿನ ಬೆಳೆ ಸಹ ಇಲ್ಲ, ಇದರ ಜೊತೆಗೆ ಬೆಲೆ ಸಹ ಏರಿಕೆಯಾಗಿದೆ.

ಗಾಂಧಿ ಬಜಾರ್‌ನ ಅಂಗಡಿಗಳಲ್ಲಿ ಎಳ್ಳು– ಬೆಲ್ಲ, ಒಣ ಕೊಬ್ಬರಿ, ಕಡಲೆ ಬೀಜ, ಹುರಿಗಡಲೆ ಮಿಶ್ರಣ, ಸಕ್ಕರೆ ಅಚ್ಚು ಮಿಶ್ರಣದ ಮಾರಾಟ ಹೆಚ್ಚಾಗಿದ್ದು, ಜನರು ಮುಗಿ ಬಿದ್ದು ಖರೀದಿ ಮಾಡುತ್ತಿದ್ದಾರೆ. ಎಳ್ಳು–ಬೆಲ್ಲ ಮಿಶ್ರಣದ 1 ಕೆ.ಜಿ. ಪೊಟ್ಟಣ ₹250ರಿಂದ ₹300ರವರೆಗೆ ಮಾರಾಟವಾಗುತ್ತಿದೆ ಎಂದು ಮಾರಾಟಗಾರರ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮಕರ ಸಂಕ್ರಾಂತಿಯಂದು ಹೀಗೆ ಪೂಜೆ ಮಾಡುವುದರಿಂದ ಸಂಪತ್ತು ಲಭಿಸುತ್ತದೆ

ಹಬ್ಬಕ್ಕೆ ಒಳ್ಳೆಯ ಕಬ್ಬು ಬಂದಿದೆ. ಆದರೆ, ಸಂಕ್ರಾಂತಿಯ ದಿನ ಕರ್ಫ್ಯೂ ಇರುವುದರಿಂದ ವ್ಯಾಪಾರ ನಡೆಯುವುದು ಕಷ್ಟಕರವಾಗಿದೆ. ಈಗ ಸಮಯವಿರುವಾಗಲಾದರೂ ಆದಷ್ಟು ವ್ಯಾಪಾರ ಆಗಲಿ ಎಂದು ಈಗಿನಿಂದಲೇ ಕಬ್ಬಿನ ವ್ಯಾಪಾರ ಆರಂಭಿಸಿದ್ದೇವೆ. ಗ್ರಾಹಕರ ಸಂಖ್ಯೆ ಸದ್ಯ ಕಡಿಮೆ ಇದೆ. ಶುಕ್ರವಾರದ ವೇಳೆಗೆ ವ್ಯಾಪಾರ ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿದೆ’ ಎಂದು ಕೆ.ಆರ್.ಮಾರುಕಟ್ಟೆ ಬಳಿ ಕಬ್ಬು ಮಾರಾಟಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by:Sandhya M
First published: