ಕಳೆದ ವಾರ ಗೂಡ್ಸ್ ವಾಹನ (Goods Vehicle) ತರಲು ಹೋದಾಗ ವೇಷಭೂಷಣ ನೋಡಿ ರೈತನಿಗೆ (Farmer) ಅವಮಾನಿಸಿದ ಪ್ರಕರಣ ಸುಖಾಂತ್ಯವಾಗಿದ್ದು, ಕೊನೆಗೂ ಮಹೀಂದ್ರ ಗೂಡ್ಸ್ ವಾಹನವನ್ನ (Mahindra Goods Vehicle) ರೈತ ಕೆಂಪೇಗೌಡ ಖರೀದಿಸಿದ್ದಾರೆ. ರೈತನಿಗೆ ನೆನ್ನೆ ಗೂಡ್ಸ್ ವಾಹನವನ್ನು ಮಹಿಂದ್ರ ಕಂಪನಿ ಡೆಲಿವರಿ ಮಾಡಿದ್ದು, ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ತುಮಕೂರು ಮಹೀಂದ್ರ ಕಂಪನಿಯ ಸಿಆರ್ ಓ ದೀಪಕ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ರೈತನಿಗೆ ನೆನ್ನೆ ಗೂಡ್ಸ್ ವಾಹನ ಡೆಲಿವರಿ ಮಾಡಿರುವ ಬಗ್ಗೆ ದೂರವಾಣಿ ಮೂಲಕ ಸಿಆರ್ ಓ ದೀಪಕ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಇಷ್ಟೆಲ್ಲಾವಾದರೂ ರೈತ ಕೆಂಪೇಗೌಡ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ರಾಮನ ಪಾಳ್ಯದ ಐದಾರು ಜನ ಸ್ನೇಹಿತರ ಜೊತೆ ಕೆಂಪೇಗೌಡ, ತುಮಕೂರು ನಗರದ ಗುಬ್ಬಿ ಗೇಟ್ ಬಳಿ ಇರುವ ಮಹಿಂದ್ರ ಶೋರೂಮ್ ಗೆ ಗೂಡ್ಸ್ ವಾಹನ ಖರೀದಿ ಮಾಡಲು ಹೋಗಿದ್ದಾರೆ.
ಇದನ್ನೂ ಓದಿ: ದಿಗ್ಗಜರು ಸಿನಿಮಾ ಸ್ಟೈಲ್ ನಲ್ಲಿ ನಡೆಯಿತು ತುಮಕೂರಿನಲ್ಲಿ ಘಟನೆ: ಕಾರು ಖರೀದಿಗೆ ಬಂದ ರೈತನಿಗೆ ಶೋರೂಮ್ ಸಿಬ್ಬಂದಿ ಅವಮಾನ
ಇಲ್ಲಿ ಇವರ ವೇಷಭೂಷಣ ಕಂಡು ಶೋರೂಮ್ ಸಿಬ್ಬಂದಿಯೊಬ್ಬ ವಾಹನ ಕೊಳ್ಳಲು ನಿಮ್ಮಲ್ಲಿ ಯೋಗ್ಯತೆ ಇಲ್ಲ. ಹತ್ತು ರೂಪಾಯಿಗೂ ಗತಿ ಇಲ್ಲದ ವಾಹನ ಖರೀದಿಸಲು ಯಾಕೆ ಬಂದಿದ್ದೀರಾ ಎಂದು ಅವಮಾನ ಮಾಡಿದ್ದಾನೆ. ಶೋರೂಮ್ ಸಿಬ್ಬಂದಿಯ ಅವಮಾನಕ್ಕೆ ರೊಚ್ಚಿಗೆದ್ದ ರೈತ ಮತ್ತು ಆತನ ಸ್ನೇಹಿತರು ಅರ್ಧಗಂಟೆಯಲ್ಲಿ ನಾವು 10 ಲಕ್ಷ ತರುತ್ತೇವೆ ನಮಗೆ ನೀವು ವಾಹನ ಕೊಡಲೇಬೇಕು ಎಂದು ಹೇಳಿ ಅವಾಜ್ ಹಾಕಿ ಕಾರ್ ಶೋರೂಮ್ ನಿಂದ ಹಿಂತಿರುಗಿದ್ದಾರೆ.
ಕೇವಲ ಅರ್ಧಗಂಟೆಯಲ್ಲಿ 10 ಲಕ್ಷದೊಂದಿಗೆ ಮರಳಿದ ರಾಮನ ಪಾಳ್ಯದ ಸ್ನೇಹಿತರು
ಅರ್ಧಗಂಟೆಯಲ್ಲಿ 10 ಲಕ್ಷ ದುಡ್ಡು ತರುವುದಾಗಿ ಹೇಳಿ ಹೋಗಿದ್ದ ರಾಮನ ಪಾಳ್ಯದ ಕೆಂಪೇಗೌಡ ಹಾಗೂ ಸ್ನೇಹಿತರು ಅದಕ್ಕೂ ಮೊದಲೇ ದುಡ್ಡು ತೆಗೆದುಕೊಂಡು ಗುಬ್ಬಿ ಗೇಟ್ ಬಳಿಯಿರುವ ಮಹಿಂದ್ರಾ ಕಾರ್ ಶೋರೂಮ್ ಗೆ ಪ್ರತ್ಯಕ್ಷರಾಗಿದ್ದಾರೆ.
ಹೀಗೆ ಬಂದ ಸ್ನೇಹಿತರು ನಾವು ದುಡ್ಡು ತಂದಿದ್ದೇವೆ ನಮಗೆ ವಾಹನ ನೀಡಿ ಎಂದು ಶೋರೂಂನಲ್ಲಿ ಇದ್ದ ಪ್ರತಿಯೊಬ್ಬ ಸಿಬ್ಬಂದಿಗೂ ಬೆವರಿಳಿಸಿದ್ದಾರೆ. ದುಡ್ಡು ತಂದ್ರೆ ವಾಹನ ಕೊಡುವುದಾಗಿ ಹೇಳಿದರು ನಾವು ದುಡ್ಡು ತಂದಿದ್ದೇವೆ ನಮಗೆ ವಾಹನ ನೀಡಿ ಅಂತ ಸ್ನೇಹಿತರು ಪಟ್ಟು ಹಿಡಿದು ಕುಳಿತಿದ್ದಾರೆ..
2-3 ದಿನದಲ್ಲಿ ವಾಹನ ಕೊಡ್ತೀವಿ ಅಂತ ಶೋರೂಮ್ ಸಿಬ್ಬಂದಿ ಸಬೂಬು
ನಿಮ್ಮಲ್ಲಿ 10 ರೂಪಾಯಿಗೂ ಗತಿ ಇಲ್ಲ ನಿಮಗೆ ವಾಹನ ಕೊಳ್ಳಲು ಆಗುವುದಿಲ್ಲ ಎಂದು ಅವಮಾನ ಮಾಡಿದ ಕಾರು ಶೋರೂಮ್ ಸಿಬ್ಬಂದಿಗೆ ಸರಿಯಾಗಿ ಪಾಠ ಕಲಿಸಲು ಅರ್ಧಗಂಟೆಯಲ್ಲೇ 10 ಲಕ್ಷ ಹೊಂದಿಸಿಕೊಂಡು ಬಂದಿದ್ದ ರಾಮನ ಪಾಳ್ಯದ ಕೆಂಪೇಗೌಡ ಹಾಗೂ ಸ್ನೇಹಿತರಿಗೆ ವಾಹನವನ್ನು ಇನ್ನೂ ಎರಡು ಮೂರು ದಿನದಲ್ಲಿ ಕೊಡ್ತೀವಿ ಎಂದು ಶೋರೂಮ್ ಸಿಬ್ಬಂದಿ ಸಬೂಬು ಹೇಳಲು ಪ್ರಾರಂಭ ಮಾಡಿದ್ದಾರೆ.
ಇದನ್ನೂ ಓದಿ: ಭೂಮಿ ಮೇಲೆ ಇಂಥ ಮಕ್ಕಳೂ ಇರ್ತಾರಾ? ಜಮೀನು ಕೊಟ್ಟಿಲ್ಲ ಅಂತ ಬೆಳೆಗೆ ವಿಷ ಹಾಕಿದ ಅಳಿಯ-ಮಗಳು
ಇದಕ್ಕೆ ಒಪ್ಪದ ರಾಮನ ಪಾಳ್ಯದ ಸ್ನೇಹಿತರು ಕಾರ್ ಶೋರೂಮ್ ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಇಂದೇ ಡೆಲಿವರಿ ಕೊಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ. ಕೊನೆಗೆ ರಾತ್ರಿ 10.30ರವರೆಗೂ ಚರ್ಚೆ ನಡೆಯುತ್ತೆ. ಕೊನೆಗೆ ಗಲಾಟೆ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತೆ. ನಂತರ ಅವಮಾನಿಸಿದ ಸಿಬ್ಬಂದಿಯಿಂದ ಗ್ರಾಹಕನಿಗೆ ತಪ್ಪಾಯಿತು ಎಂದು ಮುಚ್ಚಳಿಕೆ ಬರೆಸೋ ಮೂಲಕ ಪ್ರಕರಣ ಅಂತ್ಯ ಕಂಡಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ