ಸಿದ್ದಗಂಗಾ ಮಠ ಹಾಗೂ ಮೀರಾಬಾಯಿ ಕೊಪ್ಪಿಕರ್ ಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.

ಮೀರಾಬಾಯಿ ಕೊಪ್ಪಿಕರ್ , ಸಿದ್ದಗಂಗಾ ಮಠ

ಮೀರಾಬಾಯಿ ಕೊಪ್ಪಿಕರ್ , ಸಿದ್ದಗಂಗಾ ಮಠ

  • Share this:
ಚಾಮರಾಜನಗರ (ಸೆ 29)  ಕರ್ನಾಟಕ ಸರ್ಕಾರ ನೀಡುವ ಗಾಂಧಿ ಸೇವಾ ಪ್ರಶಸ್ತಿಗೆ   (mahatma gandhi seva award)   ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಸಿದ್ದಗಂಗಾ ಮಠ (Siddaganga Mutt) ಮತ್ತು ಸ್ವಾತಂತ್ರ್ಯ ಹೋರಾಟಗಾರಾದ ಬಾಗಲಕೋಟೆ ಜಿಲ್ಲೆಯ ಶ್ರೀಮತಿ ಮೀರಾಬಾಯಿ ಕೊಪ್ಪಿಕರ್  (Meerabai Koppikar) ಅವರನ್ನು ಆಯ್ಕೆ ಮಾಡಲಾಗಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ರಾಜ್ಯಾದ್ಯಂತ ಅರ್ಥಪೂರ್ಣವಾಗಿ ಆಚರಿಸಲು  ಗಾಂಧೀ ತತ್ವಾದರ್ಶಗಳನ್ನು ಆಧರಿಸಿಕೊಂಡು ಸಮಾಜದಲ್ಲಿ ಗಣನೀಯ ಸೇವೆ ಮಾಡಿದ ಗಣ್ಯರನ್ನು ಗುರುತಿಸಿ ಗೌರವಿಸಲು ಕರ್ನಾಟಕ ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ-ಕರ್ನಾಟಕ” 2020 ಮತ್ತು 2021 ನೇ ಸಾಲಿಗೆ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ, ಈ ವರ್ಷ ಕೋವಿಡ್ ಪ್ರಕರಣ ಕಡಿಮೆಯಾಗುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಸರ್ಕಾರವು ಗಾಂಧಿ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಲು ಕ್ರಮ ವಹಿಸಿದ್ದು ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ  ಅಶೋಕ್ ಬಂಗಾರೆಪ್ಪ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.

ಆಯ್ಕೆ ಸಮಿತಿಯು 2020 ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ “ಶ್ರೀಮತಿ ಮೀರಾಬಾಯಿ ಕೊಪ್ಪಿಕರ್” ಮತ್ತು 2021 ನೇ ಸಾಲಿಗೆ  “ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠ”ವನ್ನು ಪ್ರಶಸ್ತಿಗೆ ಆಯ್ಕೆಮಾಡಿರುತ್ತದೆ.

ಗಾಂಧಿ ಜಯಂತಿಯಂದು ಪ್ರಶಸ್ತಿ ಪ್ರಧಾನ

ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿಯಂದು ಬೆಂಗಳೂರಿನ ಗಾಂಧಿಭವನದಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ಐದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು.

ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ :
“ನಡೆದಾಡುವ ದೇವರು” ಎಂದೇ ಖ್ಯಾತರಾದ  ಡಾ: ಶಿವಕುಮಾರ ಸ್ವಾಮೀಜಿ ಅವರ ಮಹದಾಶಯದಂತೆ ಸತತವಾಗಿ 80 ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎನಿಸಿದೆ ತುಮಕೂರಿನ‌ ಕ್ಯಾತಸಂದ್ರದಲ್ಲಿರುವ  ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ

ಇದನ್ನು ಓದಿ: ರಾಜ್ಯದ ನಾಲ್ಕು ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್​ ಶಿಕ್ಷಣ; ಸಚಿವ ಅಶ್ವತ್ಥ್​ ನಾರಾಯಣ

ಮೀರಾಬಾಯಿ ಕೊಪ್ಪಿಕರ್:
ಶ್ರೀಮತಿ ಮೀರಾಬಾಯಿ ಕೊಪ್ಪಿಕರ್, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ.  ಸದ್ಯ ಇವರಿಗೆ 96 ವರ್ಷ.  ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.  ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು.  ಈಗ ವಯಸ್ಸಾದ ನಿಮಿತ್ತ ನೇಯ್ಗೆ ಮಾಡುತ್ತಿಲ್ಲ.

ಸ್ವಾತಂತ್ರ್ಯ ಹೋರಾಟಗಾರ್ತಿ

ಗಾಂಧಿವಾದಿಗಳಾಗಿದ್ದ ಶ್ರೀಮತಿ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.  ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.

ಇದನ್ನು ಓದಿ: ಮಡಿಕೇರಿ ದಸರಾಕ್ಕೆ ಒಂದು ಕೋಟಿ ಅನುದಾನ ಘೋಷಿಸಿದ ಸರ್ಕಾರ

ಯಾರಿಂದಲೂ ಏನನ್ನೂ ಅಪೇಕ್ಷೆ ಇಲ್ಲ. ಇವರ ಮೂಲ ಧ್ಯೇಯ “ಸಮಾಜಕ್ಕೆ ಏನನ್ನಾದರೂ ಕೊಡಬೇಕು.  ಏನನ್ನೂ ಬಯಸಬಾರದು” ಎಂಬುದು.  ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ.

“ವಾತ್ಸಲ್ಯ ಧಾಮ” ವಿನೋಬಾ ಭಾವೆಯವರ ತಾಯಿ ಮೂಲ ಜಮಖಂಡಿಯವರಾದ ರುಕ್ಮಿಣಿ ಭಾವೆಯವರದ್ದು.  ಮುಧೋದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಲಾಗಿದೆ. 2008  ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತ್ತು.  ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಸ್ವತಃ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವುಳ್ಳ ರಾಜ್ಯೋತ್ಸವ   ಪ್ರಶಸ್ತಿಯನ್ನು ಇವರಿಗೆ ಪ್ರದಾನ ಮಾಡಿದ್ದರು. ಅವರು ನೀಡಿದ ಚೆಕ್ ಹಣ ಇನ್ನೂ ಬ್ಯಾಂಕ್‍ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ.  ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.
Published by:Seema R
First published: