ಬೆಳಗಾವಿ(ಡಿಸೆಂಬರ್, 7)- ಮಹಾರಾಷ್ಟ್ರ (Maharashtra) ನೋಂದಣಿಯ ಲಾರಿ ಮೇಲೆ ಹತ್ತಿ ಕನ್ನಡ ಬಾವುಟ ಪ್ರದರ್ಶನ. ಪೊಲೀಸರ ವಾಹನ ಮೇಲೆ ಹತ್ತಿ ನಿಂತ ಮಹಿಳಾ ಹೋರಾಟಗಾರರು. ಮಹಾರಾಷ್ಟ್ರ ನೋಂದಣಿಯ ಲಾರಿಗಳ ಗಾಜು ಒಡೆದು ಆಕ್ರೋಶ ಹೊರಹಾಕಿದ ಕರವೇ ಕಾರ್ಯಕರ್ತರು(Karnataka Rakshana Vedike). ಮಹಾರಾಷ್ಟ್ರದ ವಾಹನಗಳಿಗೆ ಕಪ್ಪು ಮಸಿ ಬಳಿಯುತ್ತಿರುವ ಪ್ರತಿಭಟನಾ ನಿರತರು. ಹೋರಾಟಗಾರರನ್ನು ನಿಯಂತ್ರಿಸಲು ಪರದಾಡುತ್ತಿರುವ ಪೊಲೀಸರು. ಎಲ್ಲಾ ಘಟನೆ ನಡೆದಿದ್ದು, ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಬಳಿ.
ಗಡಿ ವಿಚಾರವಾಗಿ ಮಹಾರಾಷ್ಟ್ರದ ನಿಲುವು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣ ಗೌಡ ಸೇರಿದಂತೆ ಹಲವು ಕಾರ್ಯಕರ್ತರಿಗೆ ಬೆಳಗಾವಿ ಪ್ರವೇಶಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಪೊಲೀಸರ ನಡೆ ವಿರುದ್ಧ ಕರವೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಕಾರು, ಜೀಪ್ ಸೇರಿದಂತೆ 110 ವಾಹನಗಳಲ್ಲಿ 400ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗಾವಿ ಕಡೆಗೆ ಬರುತ್ತಿದ್ದರು. ಈ ವೇಳೆ ಪೊಲೀಸರು ಹಿರೇಬಾಗೇವಾಡಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ತಡೆದರು.
ಇದನ್ನೂ ಓದಿ: Untouchability: ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಟ್ಯಾಂಕ್ ಖಾಲಿ; ಗೋಮೂತ್ರದಿಂದ ಶುದ್ಧಿ!
ಕರವೇ ಅಧ್ಯಕ್ಷ ನಾರಾಯಣಗೌಡ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಕರವೇ ನಡೆ ಬೆಳಗಾವಿ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳಿಂದ ಕರವೇ ಪದಾಧಿಕಾರಿಗಳು ಬೆಳಗ್ಗೆ ಧಾರವಾಡದಲ್ಲಿ ಜಮಾವಣೆಗೊಂಡಿದ್ದರು. ಬಳಿಕ ವಾಹನಗಳಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಬೆಳಗಾವಿ ಕಡೆಗೆ ಆಗಮಿಸಿದರು. ಈ ವೇಳೆ ನಾರಾಯಣಗೌಡರನ್ನು ತಡೆದ ಪೊಲೀಸರು, ಮಹಾರಾಷ್ಟ್ರ ಸಚಿವರಿಗೆ ಗಡಿ ಪ್ರವೇಶಕ್ಕೆ ಅವಕಾಶ ನೀಡಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ನೀವು ನಗರ ಪ್ರವೇಶ ಮಾಡಬೇಡಿ ಎಂದರು.
ಇದನ್ನೂ ಓದಿ: RTI ಅರ್ಜಿ ನಿರಾಕರಿಸಿದರೆ 25,000 ರೂಪಾಯಿ ದಂಡ; ಸರ್ಕಾರದ ಖಡಕ್ ಎಚ್ಚರಿಕೆ
ಇದಕ್ಕೆ ಕರವೇ ಅಧ್ಯಕ್ಷರು ಒಪ್ಪಲಿಲ್ಲ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕರವೇ ಅಧ್ಯಕ್ಷನಾರಾಯಣ ಗೌಡ, ಗಡಿ ವಿವಾದವನ್ನು ಸುಪ್ರೀಂ ಕೋರ್ಟಿಗೆ ತೆಗೆದುಕೊಂಡು ಹೋಗಿದ್ದೇ ಮಹಾರಾಷ್ಟ್ರ. ಅಲ್ಲಿ ನಿರ್ಧಾರವಾಗುವವರೆಗೆ ಬಾಯಿ ಮುಚ್ಚಿಕೊಂಡು, ಬಾಲ ಮುದುರಿಕೊಂಡು ಇರಬೇಕು. ಅದನ್ನು ಬಿಟ್ಟು ಮಹಾರಾಷ್ಟ್ರದ ಹೇಡಿ ಸಚಿವರು ಬೆಳಗಾವಿಗೆ ಬರುವ ಧಮ್ಕಿ ಹಾಕುತ್ತಾರೆ. ಒಕ್ಕೂಟ ವ್ಯವಸ್ಥೆ ಕಪ್ಪುಚುಕ್ಕೆ ತಂದ ದ್ರೋಹಿಗಳು. ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದೆ. ರಾಣಿ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಧ್ವಜಗಳನ್ನು ಹಾರಿಸಿ ಅವರಿಗೆ ತಕ್ಕ ಉತ್ತರ ಕೊಡಲು ಹೊರಟಿದ್ದೇವೆ. ಪ್ರವೇಶ ನಿರ್ಬಂಧ ಇರುವುದು ಮಹಾರಾಷ್ಟ್ರದ ಸಚಿವರಿಗೆ, ನಮಗಲ್ಲ. ನಮ್ಮ ಊರಿಗೆ ನಾವು ಹೋಗಲು ಏಕೆ ತಡೆಯಬೇಕು? ಒಂದು ವೇಳೆ ತಡೆದರೆ ಈ ಹೋರಾಟ ರಾಜ್ಯದಾದ್ಯಂತ ಮುಂದುವರಿಯುತ್ತದೆ ಎಂದು ಎಚ್ಛರಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ