ಮಹಾ ಮುಖಭಂಗ: ಮಹಾರಾಷ್ಟ್ರ ಪ್ರವಾಹಕ್ಕೆ ಕರ್ನಾಟಕದ ಜಲಾಷಯಗಳು ಕಾರಣವಲ್ಲ: ತಜ್ಞರ ಸಮಿತಿ ಸ್ಪಷ್ಟನೆ

ಈ ವರದಿಯಲ್ಲಿ ಮಹಾರಾಷ್ಚ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಕರ್ನಾಟಕ ಕಾರಣವಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇದರಿಂದಾಗಿ ಈವರೆಗೆ ಮಹಾರಾಷ್ಟ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಜಲಾಷಯ ಮತ್ತು ಹಿಪ್ಪರಗಿ ಬ್ಯಾರೇಜ್ ನಲ್ಲಿ ನೀರು ಸಂಗ್ರಹವೇ ಕಾರಣ ಎಂದು ಆರೋಪಿಸುತ್ತಿದ್ದ ಮಹಾರಾಷ್ಟ್ರಕ್ಕೆ ಅವರದೇ ಸಮಿತಿಯ ವರದಿಯಿಂದಾಗಿ ಮಹಾ ಮುಖಭಂಗವಾಗಿದೆ.

ಆಲಮಟ್ಟಿ ಅಣೆಕಟ್ಟು

ಆಲಮಟ್ಟಿ ಅಣೆಕಟ್ಟು

  • Share this:
ವಿಜಯಪುರ(ಮೇ 30): ಮಹಾರಾಷ್ಟ್ರದಲ್ಲಿ ಮಳೆಗಾಲದಲ್ಲಿ ಉಂಟಾಗುವ ಪ್ರವಾಹಕ್ಕೆ ಕರ್ನಾಟಕ ಕಾರಣ ಎಂದು ಮಹಾರಾಷ್ಚ್ರ ಸರಕಾರಗಳು ಪದೇ ಪದೇ ಆರೋಪ ಮಾಡುತ್ತಲೇ ಇವೆ. ಆದರೆ, ಇದೇ ಮಹಾರಾಷ್ಟ್ರ ಸರಕಾರ ನೇಮಿಸಿದ್ದ ತಜ್ಞರ ಸಮಿತಿ ನೀಡಿರುವ ವರದಿಯಿಂದಾಗಿ ಮಹಾರಾಷ್ಟ್ರ ಸರಕಾರದ ಮುಖಕ್ಕೆ ಮಂಗಳಾರತಿ ಮಾಡುವಂತಾಗಿದೆ.

ಕಳೆದ ವರ್ಷ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದಲ್ಲಿ ಭಾರಿ ಪ್ರವಾಹ ಉಂಟಾಗಿತ್ತು. ಅಷ್ಟೇ ಅಲ್ಲ, ಮಹಾರಾಷ್ಟ್ರದಲ್ಲಿ ಆಗಾಗ ಉಂಟಾಗುವ ಪ್ರವಾಹಕ್ಕೆ ಆಲಮಟ್ಟಿ ಜಲಾಷಯದಲ್ಲಿನ ನೀರು ಸಂಗ್ರಹ ಮತ್ತು ಹಿಪ್ಪರಗಿ ಬ್ಯಾರೇಜಿನಲ್ಲಿ ನೀರು ಸಂಗ್ರಹವೇ ಕಾರಣ ಎಂದು ಅಲ್ಲಿನ ಸರಕಾರಗಳು ಪದೇ ಪದೇ ಆರೋಪಿಸುತ್ತಲೇ ಬಂದಿದ್ದವು. ಆದರೆ, ಈ ಪ್ರವಾಹಕ್ಕೆ ಕರ್ನಾಟಕದಲ್ಲಿ ನೀರು ಸಂಗ್ರಹ ಕಾರಣವಲ್ಲ ಎಂದು ರಾಜ್ಯದ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಲೇ ಇದ್ದರು. ಆದರೂ ಮಹಾರಾಷ್ಟ್ರ ತನ್ನ ಮೊಂಡುತನ ಪ್ರದರ್ಶನ ಮುಂದುವರೆಸಿತ್ತು. ಅದೇ ವಳೆ, ಈ ಪ್ರವಾಹದ ಕುರಿತು ಸಮಗ್ರ ಅಧ್ಯಯನ ನಡೆಸುವಂತೆ ಮಹಾರಾಷ್ಟ್ರ ಸರಕಾರ ನೀರಾವರಿ ತಜ್ಞ ವಡನೇರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ಬುಧವಾರ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅವರಿಗೆ ವರದಿ ಸಲ್ಲಿಸಿದೆ.

ಈ ವರದಿಯಲ್ಲಿ ಮಹಾರಾಷ್ಟ್ರದಲ್ಲಿ ಉಂಟಾಗುವ ಪ್ರವಾಹದ ಪ್ರಮುಖ ಕಾರಣಗಳು ಮತ್ತು ಅದಕ್ಕೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಹಲವಾರು ಸಲಹೆಗಳನ್ನು ನೀಡಿದೆ.  ಈ ಕುರಿತು ಮಹಾರಾಷ್ಟ್ರದ ಮರಾಠಿ ದಿನಪತ್ರಿಕೆಗಳಲ್ಲಿ ವರದಿಗಳು ಪ್ರಕಟವಾಗಿವೆ. ಈಗ ಮಹಾರಾಷ್ಟ್ರ ಸರಕಾರ ರಚಿಸಿದ ಸಮಿತಿಯಿಂದಲೇ ಕರ್ನಾಟಕ ಕಾರಣವಲ್ಲ ಎಂದು ವರದಿ ಸಲ್ಲಿಕೆಯಾಗಿದ್ದು, ಕರ್ನಾಟಕದ ವಾದಕ್ಕೆ ಪುಷ್ಠಿ ನೀಡಿದಂತಾಗಿದೆ.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಸಿಎಂ ಮಾಡಲು ಬಿಜೆಪಿಯ ಒಂದು ಬಣ ಯತ್ನ: ಸತೀಶ್ ಜಾರಕಿಹೊಳಿ ಬಾಂಬ್

ಈ ಸಮಿತಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೃಷ್ಣಾ ನದಿಪಾತ್ರದಲ್ಲಿ ಸುಮಾರು 6 ತಿಂಗಳು ಅಧ್ಯಯನ ನಡೆಸಿದೆ.  ಅಲ್ಲದೇ, ಫೆ. 7 ರಂದು ಆಲಮಟ್ಟಿಗೆ ಭೇಟಿ ನೀಡಿ ಇಲ್ಲಿನ ನೀರು ಸಂಗ್ರಹ ಸೇರಿದಂತೆ ತಾಂತ್ರಿಕ ಅಂಶಗಳ ಕುರಿತು ಆಲಮಟ್ಟಿ ಕೆಬಿಜೆಎನ್ಎಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿಯನ್ನೂ ಸಂಗ್ರಹಿಸಿತ್ತು. ಈಗ ತಾನು ನಡೆಸಿದ ಅಧ್ಯಯನದ ಸಂಪೂರ್ಣ ಮಾಹಿತಿಯ ವರದಿಯನ್ನು ವಡನೇರ ನೇತೃತ್ವದ ಸಮಿತಿ ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅವರಿಗೆ ಸಲ್ಲಿಸಿದೆ.

ಮಹಾರಾಷ್ಟ್ರದಲ್ಲಿ ಉಂಟಾಗುವ ಪ್ರವಾಹಕ್ಕೆ ಕರ್ನಾಟಕ ಕಾರಣವಲ್ಲ. ಬದಲಾಗಿ ಮಹಾರಾಷ್ಟ್ರದಲ್ಲಿ ನದಿಪಾತ್ರದಲ್ಲಿನ ಅತಿಕ್ರಮಣ, ಕಾನೂನು ಬಾಹಿರ ಕಟ್ಟಡಗಳ ನಿರ್ಮಾಣ ಪ್ರಮುಖ ಕಾರಣವಾಗಿವೆ. ಅಲ್ಲದೇ, ಕುಂಭದ್ರೋಣ ಮಳೆಯಿಂದಾಗಿ ಹಳ್ಳ ಕೊಳ್ಳಗಳು ಮತ್ತು ನದಿಯಲ್ಲಿ ಉಂಟಾಗುವ ದಿಢೀರ್ ನೀರಿನ ಹರಿವು ಇಂಥ ಪ್ರವಾಹದ ಪರಿಸ್ಥಿತಿಗೆ ಕಾರಣವಾಗುತ್ತವೆ ಎಂದು ವರದಿಯಲ್ಲಿ ತಾಂತ್ರಿಕ ಅಂಶಗಳ ಉಲ್ಲೇಖಿಸಲಾಗಿದೆ.

ಮಹಾರಾಷ್ಟ್ರದ ಮಳೆಗಾಲದಲ್ಲಿ ಸಾಂಗಲಿ, ಮಿರಜ್, ಕೊಲ್ಹಾಪುರ ಭಾಗದಲ್ಲಿ ಆಗಾಗ ಪ್ರವಾಹ ಉಂಟಾಗುತ್ತಿದೆ. ಈ ರೀತಿ ಪ್ರವಾಹ ಉಂಟಾದಾಗ ಕರ್ನಾಟಕವೇ ಇದಕ್ಕೆ ಕಾರಣ ಎಂದು ಮಹಾರಾಷ್ಟ್ರ ಪದೇ ಪದೇ ಆರೋಪಿಸುತ್ತಿತ್ತು. ಆದರೆ, ವಡನೇರ ನೇತೃತ್ತವದ ಸಮಿತಿ ನೀಡಿರುವ ಈ ವರದಿಯಿಂದಾಗಿ ಮಹಾರಾಷ್ಟ್ರಕ್ಕೆ ಮಹಾ ಮುಖಭಂಗವಾದಂತಾಗಿದೆ. ಈ ಸಮಿತಿಯಲ್ಲಿ ಮಹಾರಾಷ್ಟ್ರದ ನೀರಾವರಿ ತಜ್ಞರಾದ ಸಂಜಯ ಘನೇಕರ, ಆರ್.ಆರ್. ಪವಾರ್, ಪ್ರದೀಪ ಪುರಂದರೆ, ಅತುಲ್ ಕಪೋಲೆ, ಆರ್.ಡಿ. ಮೊಹತೆ, ಎಸ್.ಎಲ್. ದಾಯಾಪುಲೆ, ಎನ್.ಎಸ್. ಖರೆ, ಧೈರ್ಯಶೀಲ್ ಪವಾರ್ ಮುಂತಾದವರು ಸದಸ್ಯರಾಗಿದ್ದರು.

ಇದನ್ನೂ ಓದಿ: ಆನೇಕಲ್​​ನಲ್ಲಿ ದಿಢೀರ್​​ ಹುಲಿ ಪ್ರತ್ಯಕ್ಷ; ಭಾರೀ ಆತಂಕದಲ್ಲಿ ಸ್ಥಳೀಯರು

Maharashtra Vadaner committee
ವಡನೇರ್ ನೇತೃತ್ವದ ಸಮಿತಿಯ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು


ಮಹಾರಾಷ್ಟ್ರ ಸರಕಾರವೇ ನೇಮಿಸಿದ್ದ ಈ ಸಮಿತಿಯಿಂದಲೇ ಪ್ರವಾಹದ ಕಾರಣಗಳು ಬಹಿರಂಗವಾಗಿದ್ದು, ಕರ್ನಾಟಕದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದ್ದ ಮಹಾರಾಷ್ಟ್ರಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಮಹಾರಾಷ್ಟ್ರ ಸರ್ಕಾರ ಪ್ರವಾಹ ವಿಚಾರದಲ್ಲಿ ಇನ್ಮುಂದೆಯಾದರೂ ಕರ್ನಾಟಕವನ್ನು ದೂಷಿಸುವ ಬದಲು ತನ್ನ ಭಾಗದ ನದಿಪಾತ್ರದದಲ್ಲಿನ ಅತಿಕ್ರಮಗಳನ್ನ ತೆರವುಗೊಳಿಸಿ ಸಮಸ್ಯೆಗೆ ಇತಿಶ್ರೀ ಹಾಡಲು ಮುಂದಾಗುತ್ತಾ ನೋಡಬೇಕು.

ವರದಿ: ಮಹೇಶ ವಿ. ಶಟಗಾರ

First published: