ಮಹದಾಯಿ ಸಮಸ್ಯೆ ಕಗ್ಗಂಟಾಗಲು ಏನು ಕಾರಣ? ಸಿಎಂ, ರಾಜ್ಯಪಾಲರು ಮೀನ ಮೇಷ ಎಣಿಸುತ್ತಿರುವುದೇಕೆ?

ನ್ಯಾಯಮಂಡಳಿ ನೀಡಿದ ಈ ಹಂಚಿಕೆ ನ್ಯಾಯವು ಅನುಷ್ಠಾನಕ್ಕೆ ಬರಬೇಕಾದರೆ ಕೇಂದ್ರ ಸರ್ಕಾರವು ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಕಾರಣಾಂತರಗಳಿಂದ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶ್ ಮಾಡುತ್ತಿಲ್ಲ. ಇದು ಮಹದಾಯಿ ಹೋರಾಟಗಾರರನ್ನು ಹತಾಶೆಗೊಳಿಸಿದೆ.

Youtube Video
  • Share this:
ಬೆಂಗಳೂರು(ಅ. 19): ಮಹದಾಯಿ ನದಿ ನೀರು ಯೋಜನೆ ಸಂಬಂಧ ಉತ್ತರ ಕರ್ನಾಟಕದ ನೂರಾರು ರೈತರು ನಗರದಲ್ಲಿ ನಡೆಸುತ್ತಿರುವ ಹೋರಾಟ ಇವತ್ತು 3ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಸ್ವೀಕರಿಸುವ ರೈತರ ಪ್ರಯತ್ನಕ್ಕೆ ಇನ್ನೂ ಯಶಸ್ಸು ಸಿಕ್ಕಿಲ್ಲ. ಮಹದಾಯಿಗಾಗಿ ರಾಜ್ಯದ ರೈತರು ನಡೆಸುತ್ತಿರುವ ಹೋರಾಟ ಇವತ್ತಿನದಲ್ಲ. ವರ್ಷಗಳಿಂದಲೂ ಧಾರವಾಡ ಸೇರಿದಂತೆ ಕೆಲವಡೆ ಇವರು ಪ್ರತಿಭಟನೆ, ಹೋರಾಟ ನಡೆಸುತ್ತಲೇ ಬಂದಿದ್ಧಾರೆ. ಈಗ ಇದಕ್ಕೆ ಒಂದು ತಾರ್ಕಿಕ ಅಂತ್ಯ ಕೊಡಲು ರಾಜಧಾನಿಯ ಅಖಾಡಕ್ಕೆ ಧುಮುಕಿದ್ದಾರೆ. ಮಹದಾಯಿ ನದಿ ನೀರು ಹಂಚಿಕೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂಬುದು ಈಗ ರೈತರ ಒತ್ತಾಯವಾಗಿದೆ.

ಅವರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟರೂ ಯಡಿಯೂರಪ್ಪ ಅವರಾಗಲೀ,  ರಾಜ್ಯಪಾಲರಾಗಲೀ ಒಮ್ಮೆಯೂ ಭೇಟಿ ಮಾಡುವ ಕಾಳಜಿ ತೋರಲಿಲ್ಲ. ಅಧಿಕಾರಕ್ಕೆ ಬಂದರೆ ಮಹದಾಯಿ ಸಮಸ್ಯೆಯನ್ನು ಕ್ಷಣಮಾತ್ರದಲ್ಲಿ ಬಗೆಹರಿಸುತ್ತೇನೆಂದು ಘಂಟಾಘೋಷವಾಗಿ ಹೇಳಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರು ಈಗ ಮುಗುಮ್ಮಾಗಿ ಕೂತಿರುವುದು ಜನಸಾಮಾನ್ಯರಿಗೆ ಅಚ್ಚರಿ ಹುಟ್ಟಿಸಿದೆ, ಮಹದಾಯಿ ಹೋರಾಟಗಾರರಿಗೆ ಆಕ್ರೋಶ ತಂದಿದೆ. ಹಸಿರು ಶಾಲು ಹೊದ್ದ ರೈತ ಹೋರಾಟಗಾರನೆಂದು ಬಿಂಬಿಸಿಕೊಳ್ಳುವ ಯಡಿಯೂರಪ್ಪ ಅವರಿಗೆ ರೈತರ ಸಮಸ್ಯೆ ಆಲಿಸುವಷ್ಟಾದರೂ ಕನಿಕರ ಇಲ್ಲವಾ ಎಂದು ಹೋರಾಟಗಾರರು ಬೇಸರಗೊಂಡಿದ್ದಾರೆ. ನಿನ್ನೆ ದಿನೇಶ್ ಗುಂಡೂರಾವ್ ಹೊರತುಪಡಿಸಿ ವಿಪಕ್ಷ ನಾಯಕರೂ ಕೂಡ ರೈತರ ಬೆಂಬಲಕ್ಕೆ ನಿಲ್ಲದಿದ್ದುದು ರಾಜಕೀಯ ವ್ಯವಸ್ಥೆ ಬಗ್ಗೆಯೇ ಹೋರಾಟಗಾರರಿಗೆ ನಿರಾಶೆ ಮೂಡುವಂತಾಗಿದೆ.

ಇದನ್ನೂ ಓದಿ: 3ನೇ ದಿನಕ್ಕೆ ಕಾಲಿಟ್ಟ ಮಹದಾಯಿ ಪ್ರತಿಭಟನೆ; ರಾಜ್ಯಪಾಲರಿಗೆ 11 ಗಂಟೆವರೆಗೆ ಗಡುವು ನೀಡಿದ ರೈತರು!

ಏನಿದು ಮಹದಾಯಿ ಸಮಸ್ಯೆ?:

ಮಹದಾಯಿ ನದಿ ನೀರು ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ  ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿ ನೀರನ್ನು ನಾಲೆಗಳ ಮುಖಾಂತರ ಸ್ವಲ್ಪ ಭಾಗವನ್ನು ತಿರುಗಿಸಿಕೊಂಡು ಕೆಲ ಜಿಲ್ಲೆಗಳಿಗೆ ಕುಡಿಯಲು ಬಳಕೆ ಮಾಡಿಕೊಳ್ಳುತ್ತೇವೆಂಬುದು ಕರ್ನಾಟಕದ ಒತ್ತಾಯ. ಆದರೆ, ಇದಕ್ಕೆ ಗೋವಾ ರಾಜ್ಯ ಒಪ್ಪುತ್ತಿಲ್ಲ. 2018ರ ಆಗಸ್ಟ್ ತಿಂಗಳಲ್ಲಿ ಮಹದಾಯಿ ನದಿ ನೀರು ವ್ಯಾಜ್ಯ ನ್ಯಾಯಮಂಡಳಿ ಈ ಸಮಸ್ಯೆಗೆ ಒಂದು ಪರಿಹಾರ ಒದಗಿಸಿತು. ಅದರಂತೆ ಮಹದಾಯಿ ನದಿ ನೀರನ್ನು ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಿಗೆ ಹಂಚಿಕೆ ಮಾಡಿ ತೀರ್ಪು ನೀಡಿತು. ಅದರಂತೆ ಗೋವಾಗೆ 24 ಟಿಎಂಸಿ, ಕರ್ನಾಟಕಕ್ಕೆ 13.4 ಟಿಎಂಸಿ ಮತ್ತು ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತು. ಕರ್ನಾಟಕದ ಪಾಲಿಗೆ ಬಂದಿರುವ 13.5 ಟಿಎಂಸಿ ನೀರಿನ ಪೈಕಿ 5.5 ಟಿಎಂಸಿ ನೀರನ್ನು ಕುಡಿಯಲು ಬಳಕೆ ಮಾಡಬೇಕು. 4 ಟಿಎಂಸಿ ಅಡಿ ನೀರನ್ನು ವಿದ್ಯುತ್ ಯೋಜನೆಗೆ ಬಳಕೆ ಮಾಡಬಹುದು. ಕುಡಿಯುವ ನೀರಗೆ ಮಲಪ್ರಭ ಜಲಾಶಯದಿಂದ ಕಳಸಾ ಬಂಡೂರಿ ನಾಲೆಗಳ ಮೂಲಕ 5.5 ಟಿಎಂಸಿ ನೀರನ್ನು ಬರಪೀಡಿತ ಬೆಳಗಾವಿ, ಬಾಗಲಕೋಟೆ, ಗದಗ ಮತ್ತು ಧಾರವಾಡ ಜಿಲ್ಲೆಗಳಿಗೆ ಹರಿಸುವುದು ಯೋಜನೆಯ ಆಶಯ.

ನ್ಯಾಯಮಂಡಳಿ ನೀಡಿದ ಈ ಹಂಚಿಕೆ ನ್ಯಾಯವು ಅನುಷ್ಠಾನಕ್ಕೆ ಬರಬೇಕಾದರೆ ಕೇಂದ್ರ ಸರ್ಕಾರವು ಈ ಸಂಬಂಧ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಆದರೆ, ಕಾರಣಾಂತರಗಳಿಂದ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶ್ ಮಾಡುತ್ತಿಲ್ಲ. ಇದು ಮಹದಾಯಿ ಹೋರಾಟಗಾರರನ್ನು ಹತಾಶೆಗೊಳಿಸಿದೆ. ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಹೆಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರಗಳು ಕೇಂದ್ರದ ಮೇಲೆ ಹೊಣೆ ಹಾಕಿ ಕೈಚೆಲ್ಲಿ ಕೂತಿದ್ದವು. ಆಗ ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದರೆ ಕ್ಷಣಮಾತ್ರದಲ್ಲೇ ಮಹದಾಯಿ ಯೋಜನೆ ಸಮಸ್ಯೆಗೆ ಪರಿಹಾರ ಒದಗಿಸುತ್ತೇನೆಂದು ಅನೇಕ ಬಾರಿ ಹೇಳಿಕೊಂಡಿದ್ದರು. ಈಗ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ನ್ಯಾಯಮಂಡಳಿ ಕೊಟ್ಟಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಕರ್ನಾಟಕಕ್ಕೆ ಅವಕಾಶ ಸಿಗದಂತಾಗಿದೆ.

ಇದನ್ನೂ ಓದಿ: ಚಲುವರಾಯಸ್ವಾಮಿ ದುಡ್ಡಿಗೋಸ್ಕರ ಏನು ಬೇಕಾದರೂ ಮಾಡ್ತಾರೆ, ಆತ ರಾಜಕೀಯ ವ್ಯಭಿಚಾರಿ; ಶಾಸಕ ಸುರೇಶ್​ಗೌಡ ವಾಗ್ದಾಳಿ

ಗೋವಾ ವಿರೋಧ:

ನ್ಯಾಯಮಂಡಳಿ ನೀಡಿದ ತೀರ್ಪಿಗೆ ಗೆಜೆಟ್ ಅಧಿಸೂಚನೆ ಹೊರಡಿಸಲು ಮೂರೂ ರಾಜ್ಯಗಳ ಒಪ್ಪಿಗೆ ಬೇಕು ಎಂಬುದು ಕೇಂದ್ರದ ವಾದ. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಇದಕ್ಕೆ ಒಪ್ಪಿದರೂ ಗೋವಾ ಮಾತ್ರ ತಕರಾರು ಮಾಡುತ್ತಿದೆ. ಮಹದಾಯಿ ನದಿ ನೀರು ನದಿ ಪಾತ್ರ ಬಿಟ್ಟು ಬೇರೆಡೆ ಹೋಗಬಾರದು. ತಮ್ಮ ರಾಜ್ಯದ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತದೆ ಎಂಬುದು ಗೋವಾದ ವಾದ. ಅಲ್ಲಿಯ ಪರಿಸರವಾದಿ ಹೋರಾಟಗಾರರು ದೊಡ್ಡ ಆಂದೋಲನ ಮಾಡುವ ಮಟ್ಟಕ್ಕೆ ಹೋಗಲು ಸಿದ್ಧವಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಈ ಸಂಬಂಧ ಗಟ್ಟಿ ನಿರ್ಧಾರಕ್ಕೆ ಬರುವುದು ಕಷ್ಟಕರವಾಗಿದೆ.

ಯಡಿಯೂರಪ್ಪ ಏನಂತಾರೆ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಮುಗಿದ ಬಳಿಕ ಕೇಂದ್ರ ಸರ್ಕಾರವು ಅಧಿಸೂಚನೆ ಹೊರಡಿಸುತ್ತದೆ. ಅಲ್ಲಿಯವರೆಗೂ ಕಾಯಿರಿ ಎಂಬುದು ಯಡಿಯೂರಪ್ಪ ಅವರ ಮನವಿ. ಆದರೆ, ಕನಿಷ್ಠ ತಮ್ಮ ಮನವಿಯನ್ನಾದರೂ ಸ್ವೀಕರಿಸಿ ಏನಾದರೂ ಉತ್ತರ ಕೊಡಿ ಎಂಬುದು ಮಹದಾಯಿ ಹೋರಾಟಗಾರರ ಒತ್ತಾಯವಾಗಿದೆ. ಮಹಾರಾಷ್ಟ್ರದ ತಾಲೂಕೊಂದಕ್ಕೆ ನೀರು ಕೊಡುತ್ತೇನೆಂದು ಹೇಳುವ ಯಡಿಯೂರಪ್ಪಗೆ ತಮ್ಮದೇ ರಾಜ್ಯದ ಜನರು ನೀರಿಗೆ ತತ್ವಾರ ಪಡುತ್ತಿದ್ದರೂ ಕಿವಿಕೇಳದಂತಿದ್ಧಾರೆ. ರೈತರನ್ನು ಭೇಟಿಯಾಗಿ ಮಾತನಾಡುವ ಕನಿಷ್ಠ ಸೌಜನ್ಯವನ್ನೂ ಅವರು ತೋರುತ್ತಿಲ್ಲ ಎಂದು ಹೋರಾಟದ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಇಂದು ರಾಜ್ಯಪಾಲರೇ ಖುದ್ಧಾಗಿ ತಮ್ಮನ್ನು ಭೇಟಿಯಾಗಿ ಮನವಿ ಸ್ವೀಕರಿಸದೇ ಹೋದರೆ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: