ಶಿವರಾತ್ರಿ ವಿಶೇಷ: ನೂರಾರು ಬಿಲ್ವಪತ್ರೆ ಮರ ಹೊಂದಿರುವ ಅಪರೂಪದ ವನದಲ್ಲಿದ್ದಾನೆ ಕಲ್ಮುರುಡೇಶ್ವರ!

ಶಿವನ ದೇವಾಲಯದ ಬಳಿ ಸಾಮಾನ್ಯವಾಗಿ ಒಂದೆರೆಡು ಬಿಲ್ವ ಪತ್ರೆ ಮರಗಳನ್ನು ಕಾಣಬಹುದು. ಆದರೆ, ಈ ರೀತಿ ನೂರಾರು ಮರಗಳು ಒಂದೇ ಸ್ಥಳದಲ್ಲಿರುವ ದೇವಾಲಯಗಳು ಕಾಣಸಿಗುವುದು ಅಪರೂಪ. ಇಂತಹ ಅಪರೂಪದ ದೇವಾಲಯಗಳ ಪೈಕಿ ಇಲ್ಲಿನ ಕಲ್ಮುರುಡೇಶ್ವರ ದೇವಾಲಯವೂ ಒಂದು.

news18-kannada
Updated:February 21, 2020, 8:26 AM IST
ಶಿವರಾತ್ರಿ ವಿಶೇಷ: ನೂರಾರು ಬಿಲ್ವಪತ್ರೆ ಮರ ಹೊಂದಿರುವ ಅಪರೂಪದ ವನದಲ್ಲಿದ್ದಾನೆ ಕಲ್ಮುರುಡೇಶ್ವರ!
ಚಿಕ್ಕಮಗಳೂರಿನ ಕಲ್ಮುರುಡೇಶ್ವರ ದೇವಾಲಯ.
  • Share this:
ಚಿಕ್ಕಮಗಳೂರು : ಬಿಲ್ವಪತ್ರೆ ಅಂದ್ರೆ ಶಿವನ ಭಕ್ತರಿಗೆ ಎಲ್ಲಿಲ್ಲದ ಗೌರವ. ಬಿಲ್ವ ಪತ್ರೆಯಲ್ಲೇ ಶಿವನನ್ನ ಪೂಜಿಸ್ಬೇಕು ಅನ್ನೋದು ಶಿವಭಕ್ತರ ಕನಸು. ತಮ್ಮ ಕನಸನ್ನು ಈಡೇರಿಸಿಕೊಳ್ಳಲು ಸಸ್ಯ ರಾಶಿಯಲ್ಲೇ ಅಪರೂಪ ಹಾಗೂ ಆಧ್ಯಾತ್ಮಿಕವಾಗಿ ಪರಮ ಶ್ರೇಷ್ಠವಾಗಿರೋ ಬಿಲ್ವ ಪತ್ರೆಗಾಗಿ ಕಾಡು-ಮೇಡು ಅಲೆಯೋ ಭಕ್ತರೂ ಉಂಟು. ಆದ್ರೆ, ಕಾಫಿನಾಡ ಸಖರಾಯಪಟ್ಟಣದ ಕಲ್ಮುರುಡೇಶ್ವರ ಮಠದ ಆವರಣದಲ್ಲಿ ಸಾವಿರಾರು ಬಿಲ್ವಪತ್ರೆ ಮರಗಳು ತುಂಬಿ ತುಳುಕುತ್ತಿವೆ. ಇಲ್ಲಿರೋ 800ಕ್ಕೂ ಅಧಿಕ ಬಿಲ್ವಪತ್ರೆ ಮರಗಳಲ್ಲಿ ಯಾರೊಬ್ಬರು ಒಂದೇ ಒಂದು ಸಸಿಯನ್ನ ನೆಟ್ಟಿಲ್ಲ ಅನ್ನೋದು ಈ ಜಾಗದ ವೈಶಿಷ್ಠ್ಯ.

ಬಿಲ್ವಪತ್ರೆ.... ಶಿವನಿಗೆ ಪರಮಪ್ರಿಯವಾದ ಹೂ. ಬಿಲ್ವಪತ್ರೆಯಲ್ಲಿ ಶಿವಾರಾಧನೆ ಮಾಡುದ್ರೆ ಶಿವ ಮೆಚ್ಚಿ ಭಕ್ತರ ಬೇಡಿಕೆ ಈಡೇರಿಸ್ತಾನೆ ಅನ್ನೋದು ಭಕ್ತರ ನಂಬಿಕೆ. ಆದ್ರೆ, ಈ ಬಿಲ್ವಪತ್ರೆ ಎಲ್ಲೆಂದರಲ್ಲಿ ಸಿಗೋದಿರೋದೆ ಶಿವಭಕ್ತರ ಕೊರಗು. ಆದ್ರೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಕ್ಕೆ ಹೊಂದಿಕೊಂಡಂತಿರೋ ಕಲ್ಮುರುಡೇಶ್ವರ ಸ್ವಾಮಿ ಮಠದ ಆವರಣದಲ್ಲಿ ಒಂದಲ್ಲ, ಎರಡಲ್ಲ, 1000ಕ್ಕೂ ಅಧಿಕ ಬಿಲ್ವಪತ್ರೆ ಮರಗಳಿವೆ. ದೇಶದಲ್ಲೇ ಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ ಈ ಬಿಲ್ವಪತ್ರೆ ವನದ ಸೊಬಗು ಸವಿಯಲು ರಾಜ್ಯದ ಮೂಲೆ, ಮೂಲೆಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸ್ತಾರೆ. ಮಠಕ್ಕಾಗಮಿಸೋ ನೂರಾರು ಭಕ್ತರು ತಣ್ಣೀರು ಸ್ನಾನ ಮಾಡಿ ಬಿಲ್ವಪತ್ರೆ ಎಲೆ ಕೊಯ್ದು ಭಕ್ತಿಯಿಂದ ಇಲ್ಲಿನ ಕಲ್ಮುರುಡೇಶ್ವರನಿಗೆ ಮುಡಿಸೋದು ವಾಡಿಕೆ. ಹೀಗೆ ಮಾಡೋದ್ರಿಂದ ಭಕ್ತರ ಇಷ್ಟಾರ್ಥಗಳು ನೆರವೇರುತ್ವೆ ಅನ್ನೋದು ಅವ್ರ ನಂಬಿಕೆ.

ಇತ್ತೀಚಿನ ದಿನಗಳಲ್ಲಿ ಅಪರೂಪದಲ್ಲೂ ಅತ್ಯಂತ ವಿರಳವಾಗಿರೋ ಬಿಲ್ವಪತ್ರೆಯ ಒಂದೂ ಮರ ಕಂಡ್ರೆನೆ ಶಿವಭಕ್ತರು ನಾನೇ ಧನ್ಯ ಅಂತಾರೆ. ಅಂತದ್ರ್ರಲ್ಲಿ ನೂರಾರು ಮರಗಳನ್ನ ಇಲ್ಲಿಗೆ ತಂದು ನೆಟ್ಟೋರ್ಯಾರು ಅನ್ನೋ ಪ್ರಶ್ನೆಗೆ ಉತ್ತರವಿಲ್ಲ. ಆದ್ರೆ, ಈ ಪ್ರಶ್ನೆಗೆ ಸ್ಥಳೀಯರು ಹತ್ತಾರು ಪುರಾಣದ ಕಥೆ ಹೇಳ್ತಾರೆ. ನೂರಾರು ವರ್ಷಗಳ ಹಿಂದೆ ಮರುಳಸಿದ್ದೇಶ್ವರನೆಂಬ ಸನ್ಯಾಸಿಯೊಬ್ಬ ಇಲ್ಲಿ ತಪಸ್ಸು ಮಾಡ್ತಿದ್ರಂತೆ. ಆ ವೇಳೆ ಅವ್ರು ರುದ್ದಾಕ್ಷಿಯನ್ನು ಮಠದ ಸುತ್ತಲೂ ಚೆಲ್ಲಿದ್ದರಿಂದ ಈ ಮರಗಳು ಬೆಳೆದಿವೆ, ಮರಗಳನ್ನು ಯಾರು ಬೆಳೆಸಿಲ್ಲ. ಶಿವನ ಶಕ್ತಿಯಿಂದ ನೈಸರ್ಗಿಕವಾಗಿ ಬೆಳೆದು ನಿಂತಿವೆ ಅಂತಾರೆ ಇಲ್ಲಿನ ಹಿರೀಕರು ಹಾಗೂ ಭಕ್ತರು.

ಒಟ್ಟಾರೆ, ಈ ವನದಲ್ಲಿ ಬಿಲ್ವಪತ್ರೆ ಹೊರತುಪಡಿಸಿ ಬೇರ್ಯಾವ ಮರಗಿಡಗಳಿಲ್ಲ. ಸುಮಾರು 2 ಎಕ್ರೆ ಪ್ರದೇಶದಲ್ಲಿ ಎಗ್ಗಿಲ್ಲದ ಬೆಳೆದಿರೋ ಈ ಮರಗಳು ಭಕ್ತರ ಪಾಲಿಗೆ ಸಾಕ್ಷಾತ್ ಶಿವನ ರೂಪ. ಹತ್ತಾರು ಎಕರೆಯಲ್ಲಿದ್ದ ಬಿಲ್ವಪತ್ರೆ ವನ ಸೂಕ್ತ ನಿರ್ವಹಣೆ ಇಲ್ದೆ ಸೊರಗಿದೆ. ಸ್ಥಳೀಯ ದಾನಿಯೊಬ್ಬರ ಸಹಾಯದಿಂದ ಮಠ ನಡೆಯುತ್ತಿದ್ದು, ಸರ್ಕಾರದ ಸಹಕಾರವಿಲ್ಲ. ಮಠಕ್ಕಿರೋ ಅಲ್ಪ ಅದಾಯದಿಂದ ಈ ವನದ ರಕ್ಷಣೆಯಾಗ್ತಿದೆ. ರಾಜ್ಯದಲ್ಲಿ ಬೇರೆಲ್ಲೂ ಸಿಗದ ಈ ಅಪರೂಪದ ಸಸ್ಯ ಸಂಪತ್ತಿನತ್ತ ಸರ್ಕಾರ ಗಮನ ಹರಿಸಬೇಕೆಂಬುದು ಸ್ಥಳಿಯರ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಯುವತಿ
First published: February 21, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading