ರಾಮನಗರ: ಮಾಗಡಿ ಮಾಜಿ ಶಾಸಕ ಹೆಚ್.ಸಿ. ಬಾಲಕೃಷ್ಣ ವಿರುದ್ಧ ಹಾಲಿ ಶಾಸಕ ಎ. ಮಂಜು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಬಿಡದಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಎ. ಮಂಜು, ಮಾಜಿ ಕಾಂಗ್ರೆಸ್ ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಅವನು… ಇವನು... ಅಂತಾ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ಮಾಗಡಿ ಅಭಿವೃದ್ಧಿ ವಿಚಾರದಲ್ಲಿ ನಿನ್ನ ಕೊಡುಗೆ ಏನೂ ಎಂದು ಬಾಲಕೃಷ್ಣಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದರು. ಬಾಲಕೃಷ್ಣನಿಗೆ ಮತಿ ಭ್ರಮಣೆಯಾಗಿದೆ, ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾನೆ. ಬ್ರೈನ್ಗೂ ನಾಲಿಗೆಗೆ ಕನೆಕ್ಷನ್ ತಪ್ಪಿದೆ, ಹಾಗಾಗಿ ಬಳಾಂಗ್ ಬಿಡ್ತಿದ್ದಾನೆಂದ್ರು.
ಮಂಜು ಕಾಂಗ್ರೆಸ್ ಸೇರುತ್ತಾರೆ. ಡಿ.ಕೆ.ಶಿವಕುಮಾರ್ ಜೊತೆಗೆ ಮಾತುಕತೆ ಮಾಡಿದ್ದಾರೆ ಎಂಬ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ನಾನು ಯಾವ ನಾಯಕರನ್ನೂ ಭೇಟಿ ಮಾಡಿಲ್ಲ. ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ನಾನು ಡಿ.ಕೆ.ಶಿವಕುಮಾರ್ ಅವರ ಬಳಿ ಪಕ್ಷಕ್ಕೆ ಸೇರುವ ಸಂಬಂಧ ಭೇಟಿ ಮಾಡಿ ಮಾತುಕತೆ ಮಾಡಿರುವ ಸಾಕ್ಷಿ ಇದ್ದರೆ ಬಿಡುಗಡೆ ಮಾಡಲಿ. ಹಾಗೆ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ನೀನೇನು ಮಾಡ್ತೀಯಾ ಹೇಳು ಎಂದು ಬಾಲಕೃಷ್ಣಗೆ ಬಹಿರಂಗವಾಗಿ ಪ್ರಶ್ನೆ ಹಾಕಿದರು.
ಇದನ್ನೂ ಓದಿ: Nurse Roopa - ತುಂಬು ಗರ್ಭಿಣಿಯಾದರೂ ಕೆಲಸ ಮಾಡುವ ಶಿವಮೊಗ್ಗದ ನರ್ಸ್ಗೆ ಸಿಎಂ ಅಭಿನಂದನೆ; ರಜೆ ತೆಗೆದುಕೊಳ್ಳಲು ಸೂಚನೆ
ಡಿ.ಕೆ. ಶಿವಕುಮಾರ್ ಮನೆಗೆ, ಡಿ.ಕೆ. ಸುರೇಶ್ ಮನೆಗೆ ಕದ್ದುಮುಚ್ಚಿ ಹೋಗಬೇಕಾ. ನಾನು ಅವರಿಗಾಗಿ ದುಡಿದಿದ್ದೇನೆ, ನನಗೆ ಕೆಲಸ ಮಾಡಿಕೊಡಿ ಎಂದು ಕೇಳ್ತೇನೆ. ಆದರೆ ನೀನು ಎಂಪಿ ಚುನಾವಣೆಯಲ್ಲಿ ಡಿ.ಕೆ. ಸುರೇಶ್ಗೆ ಮತಹಾಕಿಸದೇ ಬಿಜೆಪಿಗೆ ಸಪೋರ್ಟ್ ಮಾಡಿದೆ. ಅದಕ್ಕಾಗಿ ನಿನಗೆ ಅವರ ಬಳಿ ಹೋಗಲು ತಾಕತ್ತಿಲ್ಲ. ನೀನು 4 ಬಾರಿ ಶಾಸಕನಾಗಿದ್ದೀಯ. ಸ್ವಲ್ಪ ಗಂಭೀರವಾಗಿರು. ಸುಮ್ಮನೆ ನಮ್ಮಿಂದ ಯಾಕೆ ಮಾತು ಕೇಳ್ತೀಯಾ ಮಾಗಡಿ ಶಾಸಕರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಈಗ ನಿನಗೆ ಕರುಣೆ ಬಂದಿದೆ. 15 ವರ್ಷ ಈ ಕ್ಷೇತ್ರದ ಶಾಸಕನಾಗಿದ್ದಲ್ಲಪ್ಪ ಆವಾಗ ಎಲ್ಲಿದ್ದೆ ಬಾಲಕೃಷ್ಣ ಎಂದು ಕಿಚಾಯಿಸಿದರು.
9.600 ಎಕರೆ ಪ್ರದೇಶದಲ್ಲಿ KIADB ಸಂಸ್ಥೆಯವರು 1200 ಎಕರೆ ಪ್ರದೇಶವನ್ನ ಯಾಕೆ ಡಿನೋಟಿಫೈ ಮಾಡಿದ್ದಾರೆಂದು ಬಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ. ಆದರೆ ಆ ಸಂಬಂಧಪಟ್ಟ ಜಾಗದವರು ಶುಗರ್ ಮಿಲ್ ಪ್ರಾರಂಭ ಮಾಡಲು ಹೊರಟ್ಟಿದ್ದರು. ಇದಕ್ಕಾಗಿ ಸರ್ಕಾರದಿಂದ ಸಾಲ ಪಡೆದಿದ್ದರು. ಆದರೆ ಅದು ಸಕ್ಸಸ್ ಆಗದ ಕಾರಣ ಅವರು ಸಾಲ ತೀರಿಸಲು ಆಗಲಿಲ್ಲ. ಹಾಗಾಗಿ ಸರ್ಕಾರ ಅವರ ಭೂಮಿಯನ್ನ ವಶಕ್ಕೆ ಪಡೆದು ಸಾಲದ ಹಣಕ್ಕೆ ಜಮಾ ಮಾಡಲು ತೀರ್ಮಾನಿಸಿದೆ. ಹಾಗೇ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯನವರೇ ಈ ತೀರ್ಮಾನ ಮಾಡಿದ್ದಾರೆ. ಬಾಲಕೃಷ್ಣಗೆ ತಾಕತ್ತಿದ್ದರೆ ಸಿದ್ದರಾಮಯ್ಯ ಹತ್ತಿರ ಹೋಗಿ ಪ್ರಶ್ನೆ ಮಾಡಲಿ ಎಂದೂ ಹೆಚ್.ಸಿ. ಬಾಲಕೃಷ್ಣಗೆ ಎ. ಮಂಜು ಸವಾಲೆಸೆದರು.
ಇದನ್ನೂ ಓದಿ: ಜನರೇ ಎಚ್ಚರ; ರಾಜ್ಯದಲ್ಲಿ ರೋಗಲಕ್ಷಣಗಳೇ ಇಲ್ಲದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ
ಬಿಡದಿ ಟೌನ್ ಶಿಪ್ ವಿಚಾರದಲ್ಲಿ ನಾನು ಸೇರಿ ಹೆಚ್.ಡಿ. ಕುಮಾರಸ್ವಾಮಿಯವರು ರೈತರ ಪರವಾಗಿದ್ದೇವೆ. ಈಗ ಡಿನೋಟಿಫೈ ಆಗಿರುವ ಜಾಗದಲ್ಲಿ ಕೆಲ ರೈತರು ಇದ್ದಾರೆ. ಆದರೆ ಅವರ ಒಪ್ಪಿಗೆ ಪಡೆಯದೇ ಯಾರು ಸಹ ಅವರ ಜಾಗವನ್ನ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಈ ಸಂಬಂಧ ನಾನು ಸಂಬಂಧಪಟ್ಟ ಸಚಿವರಿಗೆ ಪತ್ರ ಕೂಡ ಬರೆದಿದ್ದೇನೆ ಎಂದು ದಾಖಲೆ ಕೂಡ ಬಿಡುಗಡೆ ಮಾಡಿದರು.
ಮುಂದೆ ಈ ಭಾಗದ ರೈತರಿಗೆ ನ್ಯಾಯ ಕೊಡಿಸೋದು ಇದೇ ಎ. ಮಂಜು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರೇ. ನಿನ್ನ ಬಳಿ ನನ್ನ ವಿರುದ್ಧವಾದ ದಾಖಲೆ ಇದ್ರೆ ಮಾತಾಡು, ಇಲ್ಲಾಂದ್ರೆ ಸುಮ್ಮನಿರು. ಅದನ್ನು ಬಿಟ್ಟು ಬಳಾಂಗ್ ಬಿಡಬೇಡ ಕಣಪ್ಪ ಬಾಲಕೃಷ್ಣ. 5 ವರ್ಷ ಮನೆಯಲ್ಲಿರು ಎಂದು ಜನ ಕಳಿಸಿದ್ದಾರೆ. ಹಾಗಾಗಿ ಮನೆಯಲ್ಲೇ ಇರು ನೀನು. ಸುಮ್ಮನೆ ಜನರೆದುರು ಗೌರವ ಕೊಳ್ಕೋಬೇಡ ಎಂದು ಎ. ಮಂಜು ತೀಕ್ಷ್ಣವಾಗಿ ಹೇಳಿದರು.
ವರದಿ: ಎ.ಟಿ. ವೆಂಕಟೇಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ