HOME » NEWS » State » MADIKERI VILLAGERS IMPOSED SELF LOCKDOWN DUE TO COVID CASE RAISING RSK SESR

ಹಳ್ಳಿಗಳಿಗೂ ಹಬ್ಬಿರುವ ಸೋಂಕು: ನಿಯಂತ್ರಣಕ್ಕೆ ಸೆಲ್ಫ್​ ಲಾಕ್‍ಡೌನ್ ಮೊರೆಹೋದ ಗ್ರಾಮಗಳು

ಊರಿನ ಪ್ರವೇಶದಲ್ಲೇ ಹೊರಗಿನ ಯಾರು ಗ್ರಾಮಗಳಿಗೆ ಬರಬಾರದು ಎಂದು ಬೋರ್ಡ್ ಬರೆದು ಹಾಕಲಾಗಿದೆ.

news18-kannada
Updated:May 2, 2021, 8:20 PM IST
ಹಳ್ಳಿಗಳಿಗೂ ಹಬ್ಬಿರುವ ಸೋಂಕು: ನಿಯಂತ್ರಣಕ್ಕೆ ಸೆಲ್ಫ್​ ಲಾಕ್‍ಡೌನ್ ಮೊರೆಹೋದ ಗ್ರಾಮಗಳು
ಊರಿನ ಪ್ರವೇಶದಲ್ಲೇ ಹೊರಗಿನ ಯಾರು ಗ್ರಾಮಗಳಿಗೆ ಬರಬಾರದು ಎಂದು ಬೋರ್ಡ್ ಬರೆದು ಹಾಕಲಾಗಿದೆ.
  • Share this:
ಕೊಡಗು (ಮೇ. 2) : ಕೋವಿಡ್ ಸೋಂಕು ಹಳ್ಳಿ ಹಳ್ಳಿಯಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿಕೊಳ್ಳುತ್ತಿದೆ. ಹಳ್ಳಿ ಹಳ್ಳಿಗೂ ಹಬ್ಬಿರುವ ಈ ಮಹಾಮಾರಿ ಮನೆ ಮನೆಗೂ ಸುತ್ತಿಕೊಳ್ಳುವ ಮೊದಲು ಕೆಲವು ಗ್ರಾಮಗಳು ಎಚ್ಚೆತ್ತುಕೊಂಡು ಸ್ವಯಂ ಲಾಕ್‍ಡೌನ್ ಮಾಡಿಕೊಳ್ಳಲು ಮುಂದಾಗಿವೆ.  ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹಾಕತ್ತೂರು ಗ್ರಾಮ ಪಂಚಾಯಿತಿ ಸ್ವಯಂ ಲಾಕ್ ಡೌನ್ ನ ಮೊರೆ ಹೋಗಿದೆ. ಹಾಕತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಯಾವುದೇ ಹಳ್ಳಿಗೂ ಹೊರಗಿನ ಯಾವುದೇ ವ್ಯಾಪಾರಿ ಅಥವಾ ಹೊರಗಿನ ಯಾರಿಗೂ ಈಗ ಪ್ರವೇಶ ಇಲ್ಲ. ಎಲ್ಲವೂ ಮಧ್ಯಾಹ್ನ 12 ಗಂಟೆಗೆ ಬಂದ ಆಗುತ್ತಿರುವುದರಿಂದ ಜನರು ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ವ್ಯಾಪಾರಿಗಳೇ ಗ್ರಾಮ ಗ್ರಾಮಗಳಿಗೆ ತಮ್ಮ ವಾಹನಗಳಲ್ಲೇ ಹಣ್ಣು, ತರಕಾರಿ, ಹೂವು ಮತ್ತು ಮೀನು ಮಾರಾಟಕ್ಕೆ ಹೋಗುತ್ತಿದ್ದಾರೆ. ಆದರೆ, ಹೀಗೆ ಹಳ್ಳಿ ಹಳ್ಳಿ ಸುತ್ತಿ ಬರವ  ಇವರಿಂದಲೂ ಕೊವಿಡ್ ಹರಡಬಹುದೆಂದು ಯಾವುದೇ ವ್ಯಾಪಾರಿ ಅಥವಾ ಹೊರಗಿನ ಯಾರು ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಬರದಂತೆ ಸ್ವಯಂ ಲಾಕ್‍ಡೌನ್ ಮಾಡಿಕೊಂಡಿದೆ.

ಊರಿನ ಪ್ರವೇಶದಲ್ಲೇ ಹೊರಗಿನ ಯಾರು ಗ್ರಾಮಗಳಿಗೆ ಬರಬಾರದು ಎಂದು ಬೋರ್ಡ್ ಬರೆದು ಹಾಕಲಾಗಿದೆ. ಹಾಕತ್ತೂರು ಪಂಚಾಯಿತಿಯ ತೊಂಭತ್ತು ಒಕ್ಕಲು ಪೈಸಾರಿಯಲ್ಲಿ ಗ್ರಾಮದ ರಸ್ತೆಗೆ ಸೋಗೆ, ಮರದ ಧಿಮ್ಮಿಗಳನ್ನು ಹಾಕಿ ಯಾರು ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಸಮೀಪವೇ ಇಬ್ಬರು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ. ಈ ಪೊಲೀಸರು ಕೂಡ ಅನಾವಶ್ಯಕವಾಗಿ ಓಡಾಡುವ ಸಾರ್ವಜನಿಕರಿಗೆ ಮತ್ತು ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕುತ್ತಿದ್ದಾರೆ. ಇಷ್ಟೇ ಅಲ್ಲ ಗ್ರಾಮಗಳಲ್ಲಿ ಯಾವುದೇ ವ್ಯಕ್ತಿ ಮಾಸ್ಕ್ ಹಾಕದೆ ಮನೆಯಿಂದ ಹೊರಗೆ ಬಂದಲ್ಲಿ ಅಂಥವರ ಪೋಟೋವನ್ನು ಪಂಚಾಯಿತಿಯಿಂದ ಇದಕ್ಕಾಗಿಯೇ ಕ್ರಿಯೇಟ್ ಮಾಡಿರುವ ವಾಟ್ಸಾಪ್ ಗ್ರೂಪಿಗೆ ಹಾಕಲಾಗುತ್ತಿದೆ.

ಇದನ್ನು ಓದಿ: ಗೆಲುವಿಗೆ ಹರಸಾಹಸ ನಡೆಸುತ್ತಿರುವ ಅಣ್ಣಾಮಲೈ ; ಕರ್ನಾಟಕದ ಜನಪ್ರಿಯತೆ ಹಿಡಿಯಲಿಲ್ಲ ಕೈ

ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಬರುವವರ ಮೇಲೆ ನಿಗಾ ಇರಿಸುವುದಕ್ಕೆ ಪ್ರತೀ ಗ್ರಾಮದಲ್ಲಿ ಸ್ವಯಂ ಸೇವಕರ ತಂಡ ಸಿದ್ಧವಾಗಿದೆ. ಈ ಸ್ವಯಂ ಸೇವಕರ ತಂಡ ಮಾಸ್ಕ್ ಇಲ್ಲದೆ ಬರುವವರ ಫೋಟೊಗಳನ್ನು ಪಂಚಾಯಿತಿಯ ವಾಟ್ಸಾಪ್ ಗೆ ಹಾಕಲಿದೆ. ಬಳಿಕ ಪಂಚಾಯಿತಿ ಅಂತಹ ವ್ಯಕ್ತಿಗೆ ದಂಡ ವಿಧಿಸಲಿದೆ. ಅಷ್ಟೇ ಅಲ್ಲ, ಅನಾವಶ್ಯಕವಾಗಿಯೂ ಯಾರೂ ಹೊರಗೆ ತಿರುಗಾಡುವಂತೆಯೂ ಇಲ್ಲ. ಇದೆಲ್ಲವನ್ನೂ ಪರಿಶೀಲಿಸುವುದಕ್ಕಾಗಿ ಪ್ರತೀ ಗ್ರಾಮದಲ್ಲಿ ಸ್ವಯಂ ಸೇವಕರ ತಂಡಗಳು ಕೆಲಸ ಮಾಡುತ್ತಿವೆ.

200 ಕುಟುಂಬಗಳಿರುವ ಹಾಕತ್ತೂರಿನ ತೊಂಬತ್ತು ಒಕ್ಕಲು ಪೈಸಾರಿಯಲ್ಲಿ ಗ್ರಾಮದವರೇ ರಸ್ತೆಗಳಿಗೆ ಸೋಗೆ, ಮರದ ದಿಮ್ಮಿಗಳನ್ನು ಹಾಕಿ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಅಷ್ಟೇ ಅಲ್ಲ ಗ್ರಾಮದ ಎಂಟ್ರಿಯಲ್ಲೇ ಹೊರಗಿನ ಯಾರೂ ಗ್ರಾಮಕ್ಕೆ ಬರದಂತೆ ನಿಷೇಧಿಸಲಾಗಿದೆ ಎಂದು ಬ್ಯಾನರ್ ಬರೆದು ಹಾಕಲಾಗಿದೆ. ಗ್ರಾಮದ ಜನರು ಕೂಡ ಗ್ರಾಮದಿಂದ ಹೊರಗೆ ಕೂಲಿಗೂ ಕೂಡ ಹೋಗದೆ ಗ್ರಾಮ ಪಂಚಾಯಿತಿಯ ತೀರ್ಮಾನಕ್ಕೆ ಬದ್ಧರಾಗಿ ತಮ್ಮೂರನ್ನು ಕೊರೊನಾದಿಂದ ರಕ್ಷಿಸುವುದಕ್ಕೆ ಕಟಿಬದ್ಧರಾಗಿದ್ದಾರೆ.

ಎರಡನೇ ಅಲೆ ಸೋಂಕು ಭೀಕರತೆ ಮನಗಂಡ ಜನರು ಈ ರೀತಿಯ ರಕ್ಷಣ ಕ್ರಮಕ್ಕೆ ಮುಂದಾಗಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಲಾಕ್​ಡೌನ್​ ಘೋಷಿಸಿದ ಬಳಿಕ ರಾಜಧಾನಿ ಸೇರಿದಂತೆ ಹಲವು ನಗರಗಳಲ್ಲಿ ವಾಸಿಸುತ್ತಿದ್ದ ಜನರು ಈಗ ತಮ್ಮಂತಮ್ಮ ಗ್ರಾಮಗಳಿಗೆ ಮರಳುತ್ತಿದ್ದಾರೆ. ಈ ಹಿನ್ನಲೆ ಸೋಂಕು ಈಗ ಗ್ರಾಮಗಳಲ್ಲಿ ವ್ಯಾಪಕವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಎಚ್ಚೆತ್ತಿರುವ ಗ್ರಾಮಸ್ಥರು ಸ್ವಯಂ ನಿಯಂತ್ರಣ ಪಾಲಿಸುವ ಮೂಲಕ ಜವಾಬ್ದಾರಿ ಮೆರೆಯುತ್ತಿದ್ದಾರೆ.
Published by: Seema R
First published: May 2, 2021, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories