• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Tiger Attack: ಕಾಳು ಮೆಣಸು ಕೊಯ್ಯುತ್ತಿದ್ದ ಯುವಕನ ಮೇಲೆ ಹುಲಿ ದಾಳಿ, ಸ್ಥಳದಲ್ಲೇ ಸಾವು

Tiger Attack: ಕಾಳು ಮೆಣಸು ಕೊಯ್ಯುತ್ತಿದ್ದ ಯುವಕನ ಮೇಲೆ ಹುಲಿ ದಾಳಿ, ಸ್ಥಳದಲ್ಲೇ ಸಾವು

ಹುಲಿದಾಳಿಗೆ ಬಲಿಯಾದ ಯುವಕ

ಹುಲಿದಾಳಿಗೆ ಬಲಿಯಾದ ಯುವಕ

ಕಾಫಿ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದ 29 ವರ್ಷದ ಯುವಕ ಗಣೇಶ್ ಮೃತ ವ್ಯಕ್ತಿ. ಬಾಡಗ ಗ್ರಾಮದ ಅಯ್ಯಪ್ಪ ಎಂಬುವರ ಕಾಫಿ ತೋಟದಲ್ಲಿ ಗಣೇಶ್ ಕೆಲಸ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ್ದ ಹುಲಿ ಗಣೇಶ್ ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ.

  • Share this:

ಕೊಡಗು : ಇಷ್ಟು ದಿನ ಜಾನುವಾರುಗಳ ಕೊಂದು ತಿನ್ನುತ್ತಿದ್ದ ಹುಲಿ (tiger) ಇದೀಗ ಮನುಷ್ಯರ ಮೇಲೆ ದಾಳಿ ಮಾಡಿ ವ್ಯಕ್ತಿಯೊಬ್ಬರನ್ನು ಕೊಂದಿರುವ ಘಟನೆ ಕೊಡಗು (Kodagu) ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬಿ ಬಾಡಗ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ ಕಾಳು ಮೆಣಸು (Pepper) ಕೊಯ್ಯುತ್ತಿದ್ದ 29 ವರ್ಷದ ಯುವಕ ಗಣೇಶ್ ಮೃತ ವ್ಯಕ್ತಿ. ಬಾಡಗ ಗ್ರಾಮದ ಅಯ್ಯಪ್ಪ ಎಂಬುವರ ಕಾಫಿ ತೋಟದಲ್ಲಿ (Coffee Plantation) ಗಣೇಶ್ ಕೆಲಸ ಮಾಡುತ್ತಿದ್ದರು. ಈ ವೇಳೆ ದಾಳಿ ನಡೆಸಿದ್ದ ಹುಲಿ ಗಣೇಶ್ (Ganesh) ಅವರನ್ನು ಸ್ಥಳದಲ್ಲಿಯೇ ಕೊಂದು ಹಾಕಿದೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ.


ಒಂದು ವಾರದ ಹಿಂದೆಯಷ್ಟೇ ಇದೇ ಜಾಗದಲ್ಲಿ ಸುಬ್ಬಯ್ಯ ಎಂಬುವರ ಹಸುವನ್ನು ಹುಲಿ ಕೊಂದು ತಂದಿತ್ತು. ಇನ್ನು ಕಳೆದ  ವರ್ಷವಷ್ಟೇ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿಯಲ್ಲಿ ನಿರಂತರ ದಾಳಿ ಮಾಡಿದ್ದ ಹುಲಿ ಮೂವರನ್ನು ಬಲಿ ಪಡೆದಿತ್ತು. ಬಳಿಕ ಸರ್ಕಾರದ ಆದೇಶದಂತೆ ಹುಲಿಯನ್ನು ಶೂಟ್ ಮಾಡಿ ಕೊಲ್ಲಲಾಗಿತ್ತು.


ಯುವಕನ ಸಾವಿನ ನಂತರ ಹೆಚ್ಚಿದ ಜನಾಕ್ರೋಶ


ಇದೀಗ ಅದರ ಸಮೀಪದ ಗ್ರಾಮದಲ್ಲೇ ಹುಲಿ ದಾಳಿ ಮಾಡಿ ಯುವಕನನ್ನು ಕೊಂದು ಹಾಕಿರುವುದು ಜನರು ಮತ್ತೆ ಆತಂಕಕ್ಕೆ ಒಳಗಾಗುವಂತೆ ಆಗಿದೆ. ಹುಲಿ ದಾಳಿಯಿಂದ ಆಕ್ರೋಶಗೊಂಡಿರುವ ಜನರು ಕೂಡಲೇ ಹುಲಿಯನ್ನು ಸೆರೆ ಹಿಡಿಯಬೇಕು. ಇಲ್ಲದಿದ್ದರೆ ನಮಗೆ ಅವಕಾಶ ನೀಡಿ ನಾವೇ ಕೊಂದು ಹಾಕುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.


ದಕ್ಷಿಣ ಕೊಡಗಿನ ಭಾಗದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ದಾಳಿ


ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಅದರಲ್ಲೂ ದಕ್ಷಿಣ ಕೊಡಗಿನ ಭಾಗದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ದಾಳಿಯಿಂದ ಅಮಾಯಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ನಿಮ್ಮ ಇಲಾಖೆ ಏನು ಕ್ರಮ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Chikkamagaluru: ಕಾಡಾನೆಗಳನ್ನು ಕಾಡಿಗಟ್ಟಲು ಮೈಸೂರಿಂದ ಬಂದ್ರು 'ಅರ್ಜುನ', 'ಭೀಮಾ'


ಜಾನುವಾರುಗಳೂ ಬಲಿ


ಹುಲಿ ಜಾನುವಾರುಗಳನ್ನು ನಿತ್ಯ ಕೊಂದು ತಿನ್ನುತ್ತಿತ್ತು. ಆವಾಗಲೇ ನಾವು ಹಲವು ಬಾರಿ ಅದನ್ನು ಹಿಡಿಯುವಂತೆ ಸಾಕಷ್ಟು ಒತ್ತಾಯ ಮಾಡಿದ್ದೆವು. ಆದರೆ ಸೆರೆ ಹಿಡಿಯದೆ ನಿರ್ಲಕ್ಷ್ಯ ವಹಿಸಿ ಕೊನೆಗೆ ಮೂವರ ಪ್ರಾಣ ಹೋಯಿತು. ಆದರೆ ನೀವು ಏನು ಮಾಡಿದಿರಿ. ತೀವ್ರ ಆಕ್ರೋಶದ ಬಳಿಕ ಆ ಹುಲಿಯನ್ನು ಕೊಂದಿರಿ. ಈ ವರ್ಷವೂ ಹಲವು ತಿಂಗಳಿಂದ ಜಾನುವಾರುಗಳನ್ನು ಹುಲಿ ಕೊಲ್ಲುತಿತ್ತು. ಅದನ್ನು ಸೆರೆಹಿಡಿಯುವಂತೆ ಸಾಕಷ್ಟು ಬಾರಿ ಹೇಳಿದ್ದರು ನಿರ್ಲಕ್ಷ್ಯ ವಹಿಸಿದಿರಿ. ಈಗ ಯುವಕನನ್ನು ಬಲಿ ಪಡೆದಿದೆ.


ತಡರಾತ್ರಿವರೆಗೆ ಪ್ರತಿಭಟನೆ


ಅರಣ್ಯ ಇಲಾಖೆ ಏನು ಮಾಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ದಾಳಿಯಿಂದ ಅಸನೀಗಿದ ವ್ಯಕ್ತಿಯ ಮೃತ ದೇಹವನ್ನು ಸ್ಥಳದಿಂದ ತೆಗೆಯಲು ಬಿಡದ ಜನರು ಸೋಮವಾರ ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಕೆಳಹಂತದ ಅಧಿಕಾರಿಗಳು ಬಂದು ಎಷ್ಟೇ ಮನವಿ ಮಾಡಿದರು ಶವವನ್ನು ತೆಗೆಯಲು ಬಿಡಲೇ ಇಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಬರುವವರೆಗೆ ಶವ ತೆಗೆಯಲು ಬಿಡುವುದೇ ಇಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರು.


ಇದನ್ನೂ ಓದಿ: School Text Book: ಟಿಪ್ಪು ಸುಲ್ತಾನ್ ವೈಭವೀಕರಿಸಿರೋ ಅಂಶಗಳನ್ನ ತೆಗೆದುಹಾಕಬಹುದು, ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಶಿಫಾರಸು


ವಿಷಯ ತಿಳಿದು ಸ್ಥಳಕ್ಕೆ ಕೊಡಗು ಎಸ್ಪಿ ಅಯ್ಯಪ್ಪ ಭೇಟಿ ರೈತರ ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ರೈತರು ಮಾತ್ರ ಅದಕ್ಕೆ ಒಪ್ಪದೆ ಪ್ರತಿಭಟನೆ ಮುಂದುವರೆಸಿದ್ದರು.  ಒಟ್ಟಿನಲ್ಲಿ ಕೊಡಗಿನಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇರುವುದು ವಿಪರ್ಯಾಸ.

First published: