MB Patil- ಎಂ.ಬಿ. ಪಾಟೀಲ್ ಸೊಕ್ಕು ಮುರಿಯಲು ಮಾದಿಗ ಸಂಘಟನೆ ಸಂಕಲ್ಪ

Madiga Mahasabha Anger against MB Patil- ಮಾದಿಗ ಸಮುದಾಯದ ನಾಯಕರನ್ನ ತುಳಿಯುತ್ತಿರುವ ಎಂಬಿ ಪಾಟೀಲ್ ಅವರಿಗೆ ಬುದ್ಧಿ ಕಲಿಸಬೇಕು. ಪರಿಷತ್ ಚುನಾವಣೆಯಲ್ಲಿ ಅವರ ಸಹೋದರನನ್ನು ಸೋಲಿಸಬೇಕು ಎಂದು ಸಮುದಾಯದ ಸಂಘಟನೆ ಕರೆ ಕೊಟ್ಟಿದೆ.

ಮಾದಿಗ ಮಹಾಸಭಾ ಮುಖಂಡರು

ಮಾದಿಗ ಮಹಾಸಭಾ ಮುಖಂಡರು

 • Share this:
  ಬಾಗಲಕೋಟ: ದಲಿತ ಸಮುದಾಯದವರಲ್ಲಿ ಸಾಮರಸ್ಯ ಹದಗೆಡಿಸಿ ಪರಸ್ಪರರನ್ನು ಎತ್ತಿ ಕಟ್ಟುತ್ತಾ ಮಾಜಿ ಸಚಿವ ಎಂ. ಬಿ. ಪಾಟೀಲ್ ಅವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಎಂ. ಬಿ. ಪಾಟೀಲ್ ಅವರ ಸೊಕ್ಕು ಮುರಿಯಲು ವಿಧಾನ ಪರಿಷತ್ ಚುನಾವಣೆಯಲ್ಲಿ ಅವಕಾಶ ಇದೆ ಎಂದು ರಾಜ್ಯ ಮಾದಿಗ ಮಹಾಸಭಾ ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದೆ.

  ಬಾಗಲಕೋಟೆಯಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯ ಮಾದಿಗ ಮಹಾಸಭಾ ಅಧ್ಯಕ್ಷ ಮುತ್ತಣ್ಣ ಬೆನ್ನೂರು, ಎಂ.ಬಿ. ಪಾಟೀಲ ಅವರನ್ನು ಕಾಂಗ್ರೆಸ್ ರಾಜಕಾರಣದ ಮೊಗಸಾಲೆಯಿಂದ ಹಿಂದೆ ಸರಿಸಲು ಇದೊಂದು ಒಳ್ಳೆಯ ಅವಕಾಶ ಸಿಕ್ಕಿದೆ. ಎಂ.ಬಿ. ಸಹೋದರ ಸುನೀಲಗೌಡ ಪಾಟೀಲರನ್ನು ಸೋಲಿಸಲು ವಿಜಯಪುರ-ಬಾಗಲಕೋಟ ಜಿಲ್ಲೆಯಲ್ಲಿರುವ ಸಮಸ್ತ ಮಾದಿಗ ಸಮುದಾಯದ ಸ್ಥಳೀಯ ಸಂಸ್ಥೆಗಳ ಸದಸ್ಯರು ಒಗ್ಗೂಡಬೇಕು. ಮಾದಿಗರ ಅಸ್ಮಿತೆಗಾಗಿ ಸುನೀಲಗೌಡ ಅವರ ವಿರುದ್ಧ ಮತದಾನ ಮಾಡಬೇಕೆಂದು ಎಂದು ಕರೆ ನೀಡಿದ್ದಾರೆ.

  ಎಂಬಿಪಿ ಹಗೆತನ:

  ಇನ್ನು, ಅವಳಿ ಜಿಲ್ಲೆಯಲ್ಲಿರುವ ಮೀಸಲು ವಿಧಾನಸಭಾ ಕ್ಷೇತ್ರಗಳಾದ ಮುಧೋಳದಲ್ಲಿ ಆರ್.ಬಿ. ತಿಮ್ಮಾಪೂರ ಅವರಿಗೆ ಹಾಗೂ ನಾಗಠಾಣದಲ್ಲಿ ರಾಜು ಆಲಗೂರ ಅವರಿಗೆ ಕಾಂಗ್ರೆಸ್ಸಿನಿಂದ ಟಿಕೆಟ್ ತಪ್ಪಿಸಿ ಅಸ್ಪಶ್ಯರ ರಾಜಕೀಯ ಅಸ್ತಿತ್ವಕ್ಕೆ ಪೆಟ್ಟು ನೀಡಿ ಹಗೆತನ ಸಾಧಿಸುತ್ತಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದರು.

  ಇದನ್ನೂ ಓದಿ: Rain Effects: ರಾಜ್ಯದ ಹಲವೆಡೆ ವರುಣನ ಆರ್ಭಟ- ಮಳೆರಾಯನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತ

  ನರ್ಸ್ ಕಸ್ತೂರಿ ವಿರುದ್ಧ ಅಪಪ್ರಚಾರ:

  ಅವಳಿ ಜಿಲ್ಲೆಯಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದರೂ ಅದನ್ನು ಚರ್ಚಿಸದೇ, ಅಸ್ಪೃಶ್ಯ ಜಾತಿಯ ಮಾದಿಗ ಸಮುದಾಯಕ್ಕೆ ಸೇರಿದ ರಾಜ್ಯ ಪ್ರಶಸ್ತಿ ವಿಜೇತೆ ನರ್ಸ್ ಕಸ್ತೂರಿ ನಡುವಿಮನಿ ಅವರ ವಿರುದ್ಧ ಶಿಶು ಮಾರಾಟದ ಆರೋಪ ಮಾಡಿ ಮೂರು ತಿಂಗಳ ಹಿಂದೆ ನಡೆದ ಅಧಿವೇಶನದಲ್ಲಿ ಅಪಪ್ರಚಾರ ಮಾಡಿದ್ದಾರೆ. ಪ್ರಕರಣದಲ್ಲಿ ನರ್ಸ್ ನಿರಪರಾಧಿಯಾಗಿದ್ದರೂ ಆರೋಪ ಮಾಡುವ ಮೂಲಕ ಜನಾಂಗೀಯ ನಿಂದನೆಯ ಮಾತನಾಡಿದ್ದಾರೆ ಎಂದು ಮುತ್ತಣ್ಣ ಬೆನ್ನೂರ ಅವರು ಆರೋಪಿಸಿದರು.

  ಕ್ಷಮೆ ಕೋರದ ಎಂಬಿಪಿ:

  ನರ್ಸ್ ನಡುವಿನಮನಿ ಅವರು ನಿರಪರಾಧಿಯಾಗಿದ್ದು, ಜಿಲ್ಲಾಡಳಿತ ಅವರನ್ನು ಪುನರ್‌ ಸೇವೆಗೆ ಸೇರಿಸಿಕೊಂಡಿದೆ. ಸದನದಲ್ಲಿ ಅಪವಾದ ಮಾತನಾಡಿದ್ದಕ್ಕೆ ಇಲ್ಲಿಯವರೆಗೆ ಎಂ.ಬಿ. ಪಾಟೀಲ ಕ್ಷಮೆ ಕೋರಿಲ್ಲ. ಮಾದಿಗ ಸಮುದಾಯದ ದುರ್ಬಲ ರಾಜಕಾರಣವನ್ನು ಇನ್ನಷ್ಟು ದುರ್ಬಲಗೊಳಿಸುವಲ್ಲಿ ತುಂಬಾ ನಿಸ್ಸೀಮರಾಗಿದ್ದಾರೆ ಎಂದು ಟೀಕಿಸಿದರು.

  ಇದನ್ನೂ ಓದಿ: Bus Accident: ತೆಲಂಗಾಣದ ನಾರಾಯಣಪೇಟೆ ಬಳಿ ಕರ್ನಾಟಕದ ಈಶಾನ್ಯ ಸಾರಿಗೆ ಬಸ್ ಅಪಘಾತ- 15 ಪ್ರಯಾಣಿಕರಿಗೆ ಗಾಯ

  ಮಾದಿಗ ನಾಯಕರ ವಿರುದ್ಧ ಸಿದ್ದರಾಮಯ್ಯ ಮೂಲಕ ಹೇಳಿಕೆ:

  ಅದಕ್ಕಾಗಿಯೇ ಮೊನ್ನೆ ನಡೆದ ಸಿಂದಗಿ ಉಪಚುನಾವಣೆಯಲ್ಲಿ ಸಮುದಾಯದ ವೇದಿಕೆಯಲ್ಲಿ ಜನಾಂಗದ ರಾಜಕಾರಣಿಗಳ ವಿರುದ್ಧವೇ ಸಿದ್ದರಾಮಯ್ಯ ಅವರ ಮೂಲಕ ಮಾತನಾಡಿಸಿದ್ದಾರೆ. ಇತ್ತ ಕುದರಿ ಸಾಲವಾಡಗಿಯಲ್ಲಿ ಮಾದಿಗ ಸಮುದಾಯದ ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ಅತ್ಯಾಚಾರ ದೌರ್ಜನ್ಯ ಎಸಗಿ ಕೊಲೆಯಾಗಿರುವದರ ಹಿಂದೆ ಎಂ.ಬಿ. ಪಾಟೀಲರ ಬೆಂಗಾವಲಿಗರಿದ್ದು, ಆ ಕೃತ್ಯವನ್ನು ಮುಚ್ಚಿ ಹಾಕಿ ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಾರೆ ಎಂದು ರಾಜ್ಯ ಮಾದಿಕ ಮಹಾಸಭಾ ಅಧ್ಯಕ್ಷರಾದ ಅವರು ಆಪಾದಿಸಿದರು.

  ಅಸ್ಪೃಶ್ಯರನ್ನ ತುಳಿಯಲು ಎಂಬಿಪಿ ಪಾತ್ರ:

  ಉತ್ತರ ಕರ್ನಾಟಕದ ಭಾಗದಲ್ಲಿ ಪ್ರಮುಖ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟ ಪ್ರದೇಶಗಳಲ್ಲಿ ಅಸ್ಪೃಶ್ಯ ಸಮುದಾಯದ ಸಾಮಾಜಿಕ ನ್ಯಾಯದ ಪರವಾಗಿ ಯಾರು ಧ್ವನಿ ಎತ್ತುತ್ತಾರೋ ಅಂತವರನ್ನು ಹತ್ತಿಕ್ಕುವಲ್ಲಿ ಎಂ.ಬಿ. ಪಾಟೀಲ ಅವರ ಪಾತ್ರ ಇದೆ.  ಆಗ ಆರ್.ಬಿ. ತಿಮ್ಮಾಪೂರ, ರಾಜು ಆಲಗೂರ ಮತ್ತು ಈಗ ಎಸ್.ಆರ್. ಪಾಟೀಲ ಇವರೆಲ್ಲರಿಗೂ ಟಿಕೆಟ್ ತಪ್ಪಿಸುವ ಮೂಲಕ ಕಾಂಗ್ರೆಸ್ ಪಕ್ಷದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಇಂತಹ ರಾಜಕೀಯ ಮೋಸಗಾರನಾದ ಹಾಗೂ ಮಾದಿಗ ಸಮುದಾಯದ ಹಿತಶತ್ರುವಾದ ಎಂ.ಬಿ. ಪಾಟೀಲರ ರಾಜಕೀಯ ಹಗೆತನದ ವಿರುದ್ಧ ಸಮುದಾಯ, ನಮ್ಮ ಅಸ್ಮಿತೆಗಾಗಿ ಸುನೀಲಗೌಡರ ವಿರುದ್ಧ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲುಣಿಸಿ ಎಂ.ಬಿ.ಪಿ ಅವರ ರಾಜಕಾರಣ ಸೊಕ್ಕನ್ನು ಮುರಿಯಬೇಕು ಎಂದು ಮುತ್ತಣ್ಣ ಬೆನ್ನೂರು ಅವರು ತಿಳಿಸಿದ್ದಾರೆ.

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: