ಸಿಂಧಿಯಾ ನಿರ್ಧಾರ ಬೆಂಬಲಿಸಿ ವಿಡಿಯೋ ರಿಲೀಸ್; ಬಿಜೆಪಿ ಸೇರಲಿರುವ ಮಧ್ಯಪ್ರದೇಶದ ಅತೃಪ್ತ ಶಾಸಕರು

ದೇವನಹಳ್ಳಿಯ ರೆಸಾರ್ಟ್​ನಲ್ಲಿರುವ ಕಾಂಗ್ರೆಸ್​ನ ಅತೃಪ್ತ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಪರ ವಿಡಿಯೋ ರಿಲೀಸ್ ಮಾಡಿದ್ದಾರೆ. ಸಿಂಧಿಯಾ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

news18-kannada
Updated:March 11, 2020, 3:49 PM IST
ಸಿಂಧಿಯಾ ನಿರ್ಧಾರ ಬೆಂಬಲಿಸಿ ವಿಡಿಯೋ ರಿಲೀಸ್; ಬಿಜೆಪಿ ಸೇರಲಿರುವ ಮಧ್ಯಪ್ರದೇಶದ ಅತೃಪ್ತ ಶಾಸಕರು
ಜ್ಯೋತಿರಾದಿತ್ಯ ಸಿಂಧಿಯಾ
  • Share this:
ಬೆಂಗಳೂರು (ಮಾ. 11): ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ರೆಸಾರ್ಟ್​ನಲ್ಲಿರುವ ಸಿಂಧಿಯಾ ಬೆಂಬಲಿತ ಕಾಂಗ್ರೆಸ್ ಶಾಸಕರು ವಿಡಿಯೋ ಬಿಡುಗಡೆ ಮಾಡಿದ್ದು, ತಮ್ಮ ನಾಯಕ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ರೆಸಾರ್ಟ್​ನಲ್ಲಿರುವ 22 ಅತೃಪ್ತ ಶಾಸಕರು ಕೂಡ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.

ಕರ್ನಾಟಕ ಮಾದರಿಯಲ್ಲೇ ಮಧ್ಯಪ್ರದೇಶದಲ್ಲೂ ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಸರ್ಕಾರದ ಪತನ ಖಚಿತ ಎನ್ನಲಾಗುತ್ತಿದೆ. ದೇವನಹಳ್ಳಿಯ ರೆಸಾರ್ಟ್​ನಲ್ಲಿರುವ ಕಾಂಗ್ರೆಸ್​ನ ಅತೃಪ್ತ ಶಾಸಕರು ಜ್ಯೋತಿರಾದಿತ್ಯ ಸಿಂಧಿಯಾ ಪರ ವಿಡಿಯೋ ರಿಲೀಸ್ ಮಾಡಿದ್ದಾರೆ. ನಾವು ಮಹಾರಾಜ್ ಸಾಬ್ ಜೊತೆಗಿದ್ದೇವೆ, ಸಿಂಧಿಯಾ ಏನೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಿಂಧಿಯಾ ಅವರನ್ನು ಹೇಗೆ ನಡೆಸಿಕೊಂಡರು? ಅವರ ಜೊತೆಗಿದ್ದ ನಮ್ಮನ್ನ ಹೇಗೆ ನಡೆಸಿಕೊಳ್ಳಲಾಯಿತು? ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಏನೆಲ್ಲಾ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವು ಸಿಂಧಿಯಾ ಅವರ ಜೊತೆ ಹಿಂದೆಯೂ ಇದ್ದೆವು, ಇಂದಿಗೂ ಇದ್ದೇವೆ, ಮುಂದೆಯೂ ಇರುತ್ತೇವೆ. ಅವರು ಏನೇ ನಿರ್ಧಾರ ಕೈಗೊಂಡರೂ ನಾವು ಬದ್ದರಾಗಿದ್ದೇವೆ. ಅವರ ಹೆಗಲಿಗೆ ಹೆಗಲು ಕೊಟ್ಟು ಮುಂದೆ ಸಾಗುತ್ತೇವೆ ಎಂದು ಹೇಳುವ ಮೂಲಕ ತಾವು ಕೂಡ ಬಿಜೆಪಿ ಸೇರುವ ಸೂಚನೆಯನ್ನು ಅತೃಪ್ತ ಶಾಸಕರು ನೀಡಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ, ನಡ್ಡಾ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದ ಜ್ಯೋತಿರಾಧಿತ್ಯ ಸಿಂಧಿಯಾ

ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಕಮಲನಾಥ್ ಸರ್ಕಾರಕ್ಕೆ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಸಿಂಧಿಯಾ ಬಣದಲ್ಲಿ ಗುರುತಿಸಿಕೊಂಡಿದ್ದ 22 ಶಾಸಕರು ಬೆಂಗಳೂರಿನ ರೆಸಾರ್ಟ್​ನಿಂದಲೇ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದರು. ಇಂದು ಮತ್ತೆ 4ರಿಂದ 5 ಶಾಸಕರು ಮಧ್ಯಪ್ರದೇಶದಿಂದ ಬೆಂಗಳೂರಿನ ರೆಸಾರ್ಟ್​ಗೆ ಆಗಮಿಸಿದ್ದರು.

ಸಿಎಂ ಕಮಲನಾಥ್ ಮೇಲೆ ಮುನಿಸಿಕೊಂಡು ಅವರ ಸರ್ಕಾರದ 19 ಶಾಸಕರು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್​ಶೈರ್ ರೆಸಾರ್ಟ್​ಗೆ ಶಿಫ್ಟ್​ ಆಗಿದ್ದರು. ಅದರ ಬೆನ್ನಲ್ಲೇ ಅತೃಪ್ತ ಶಾಸಕರಿಗೂ ಸಚಿವ ಸ್ಥಾನ ನೀಡುವ ಸಲುವಾಗಿ ಸೋಮವಾರ ರಾತ್ರಿ ಕಮಲನಾಥ್​ ಸಂಪುಟದ 22 ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರು. ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇಂದು ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟು; ಮತ್ತೆ 5 ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್​ಗೆ ಶಿಫ್ಟ್​ಮಧ್ಯಪ್ರದೇಶದ ಶಾಸಕರು ಹಾಗೂ ಸಂಸದರು ನಿನ್ನೆ ಕರ್ನಾಟಕದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದು, ಬೆಂಗಳೂರಿನಲ್ಲಿ ತಂಗಿರುವ ತಮಗೆ ರಕ್ಷಣೆ ನೀಡುವಂತೆ ಕೋರಿದ್ದರು. ‘ಮಧ್ಯಪ್ರದೇಶದ ಶಾಸಕರು ಹಾಗೂ ಸಂಸದರಾದ ನಾವು ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಬಂದಿದ್ದೇವೆ. ಇಲ್ಲಿ ಓಡಾಡಲು ಹಾಗೂ ಉಳಿದುಕೊಳ್ಳಲು ನಮಗೆ ರಕ್ಷಣೆ ಬೇಕಾಗಿದೆ. ನಮ್ಮ ಸುರಕ್ಷತೆಯ ದೃಷ್ಟಿಯಿಂದ ಸ್ಥಳೀಯ ಪೊಲೀಸರಿಂದ ಭದ್ರತೆ ಕೊಡಿಸಬೇಕು’ಎಂದು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.

ಮಧ್ಯಪ್ರದೇಶದ ಶಾಸಕರಾದ ತುಳಸಿ ಸಿಲಾವತ್, ಮಹೇಂದ್ರ ಸಿಂಗ್ ಸಿಸೋಡಿಯಾ, ಪ್ರಭುರಾಮ್ ಚೌಧರಿ, ರಣವೀರ್ ಜಟಾಯು, ಪ್ರಭು ನಾರಾಯಣ ಚೌಧರಿ, ರಾಜವರ್ಧನ್‌ ಸಿಂಗ್, ಕಮಲೇಶ್ ಜಟಾಯು, ಮುನ್ನಾಲಾಲ್ ಗೋಯಲ್, ಜಸ್ವಂತ್, ರಘುರಾಜ್, ಹರ್ಮನ್‌ ಸಿಂಗ್, ಸುರೇಶ್, ಗೋವಿಂದ್‌ಸಿಂಗ್ ರಜಪೂತ್, ಇಮ್ರಾತಿ ದೇವಿ, ಪ್ರದ್ಯುಮ್ನ ಸಿಂಗ್ ತೋಮರ್, ಗೋವಿಂದ್‌ರಾಜ್, ಜೈಪಾಲ್‌ ಸಿಂಗ್ ಬೆಂಗಳೂರಿನ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದಾರೆ.
First published:March 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading