ಸೋನಿಯಾ ಕೈಸೇರಿದ ಮಿಸ್ತ್ರಿ ವರದಿ: ರಾಜ್ಯದ ಕಾಂಗ್ರೆಸ್ ವಿಪಕ್ಷ ನಾಯಕ ಯಾರಾಗ್ತಾರೆ ಎಂಬುದು ಈಗ ಸಸ್ಪೆನ್ಸ್

ಕಾಂಗ್ರೆಸ್ ಪಕ್ಷದೊಳಗೆ ಈಗ ಎರಡು ಬಣಗಳಾಗಿದ್ದು, ಮೂಲ ಕಾಂಗ್ರೆಸ್ಸಿಗರ ಗುಂಪು ವಿಪಕ್ಷ ನಾಯಕ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ದಿನೇಶ್ ಗುಂಡೂರಾವ್ ಅವರನ್ನ ಕೆಳಗಿಳಿಸುವ ಪ್ರಯತ್ನವೂ ನಡೆದಿದೆ.

news18-kannada
Updated:October 9, 2019, 7:10 AM IST
ಸೋನಿಯಾ ಕೈಸೇರಿದ ಮಿಸ್ತ್ರಿ ವರದಿ: ರಾಜ್ಯದ ಕಾಂಗ್ರೆಸ್ ವಿಪಕ್ಷ ನಾಯಕ ಯಾರಾಗ್ತಾರೆ ಎಂಬುದು ಈಗ ಸಸ್ಪೆನ್ಸ್
ಹೆಚ್​ಕೆ ಪಾಟೀಲ್​ ಸಿದ್ದರಾಮಯ್ಯ
  • Share this:
ನವದೆಹಲಿ(ಅ.09): ರಾಜ್ಯದಲ್ಲಿ ಕಾಂಗ್ರೆಸ್ ಪವರ್ ಪಾಲಿಟಿಕ್ಸ್ ಒಂದು ತಾರ್ಕಿಕ ಅಂತ್ಯಕ್ಕೆ ಬರುವ ಸಾಧ್ಯತೆ ಕಾಣುತ್ತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಪಕ್ಷ ನಾಯಕನ ಸ್ಥಾನಗಳು ಯಾರಿಗೆ ಸಿಗಬೇಕು ಎಂದು ವಿವಿಧ ನಾಯಕರ ಅಭಿಪ್ರಾಯ ಸಂಗ್ರಹಣೆ ಮಾಡಿರುವ ಮಧುಸೂದನ್ ಮಿಸ್ತ್ರಿ ಅವರು ತಮ್ಮ ವರದಿಯನ್ನು ಸೋನಿಯಾ ಗಾಂಧಿ ಅವರಿಗೆ ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಆಧ್ಯಕ್ಷರ ಬದಲಾವಣೆ ಬಗ್ಗೆಯೂ ಕೈ ನಾಯಕ ಅಭಿಪ್ರಾಯ ಸಂಗ್ರಹಿಸಿ ತಮ್ಮ ವರದಿಯಲ್ಲಿ ಅವರು ತಿಳಿಸಿದ್ದಾರೆನ್ನಲಾಗಿದೆ. ಈಗ ಮಧುಸೂದನ್ ಮಿಸ್ತ್ರಿ ನೀಡಿದ ವರದಿ ಆಧಾರದ ಮೇಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗೆ ಎರಡು ಪ್ರಬಲ ಗುಂಪುಗಳು ರಚನೆಯಾಗಿವೆ. ಮೂಲ ಕಾಂಗ್ರೆಸ್ಸಿಗರ ಗುಂಪು ಒಂದೆಡೆಯಾದರೆ, ಸಿದ್ದರಾಮಯ್ಯ ನೇತೃತ್ವದ ಗುಂಪು ಇನ್ನೊಂದೆಡೆ ಇದೆ. ಸಿದ್ದರಾಮಯ್ಯ ಅವರು ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ಧಾರೆ. ಆದರೆ, ಸಿದ್ದರಾಮಯ್ಯ ಅವರಿಂದ ಹೇಗಾದರೂ ಮಾಡಿ ವಿಪಕ್ಷ ನಾಯಕನ ಸ್ಥಾನ ತಪ್ಪಿಸಬೇಕೆಂಬುದು ಮೂಲ ಕಾಂಗ್ರೆಸ್ಸಿಗರ ಗುಂಪಿನ ಪ್ರಯತ್ನವಾಗಿದೆ. ಇದಕ್ಕಾಗಿ ಹೈಕಮಾಂಡ್ ಮಟ್ಟದಲ್ಲಿ ಈ ಗುಂಪು ಇನ್ನಿಲ್ಲದ ಲಾಬಿ ಮಾಡುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಬಿ.ಕೆ. ಹರಿಪ್ರಸಾದ್, ರಾಜೀವ್ ಗೌಡ, ಜಿ. ಪರಮೇಶ್ವರ್ ಮೊದಲಾದವರು ಮೂಲ ಕಾಂಗ್ರೆಸ್ಸಿಗರ ಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ. ಈ ಗುಂಪು ಹೆಚ್.ಕೆ. ಪಾಟೀಲ್ ಅವರನ್ನು ವಿಪಕ್ಷ ನಾಯಕನ ಸ್ಥಾನಕ್ಕೆ ಕೂರಿಸಲು ಯತ್ನಿಸುತ್ತಿದೆ.

ಇದನ್ನೂ ಓದಿ: ಅಮಿತ್ ಶಾ, ಜೆ.ಪಿ. ನಡ್ಡಾಗೆ ಯತ್ನಾಳ ಪತ್ರ; ನೆರೆ ಪ್ರವಾಹ ಸಂಬಂಧಿತ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ ವಿಜಯಪುರ ಶಾಸಕ

ಹೆಚ್.ಕೆ. ಪಾಟೀಲ್ ಅವರು ಕೆಲ ದಿನಗಳ ಹಿಂದಷ್ಟೇ ತಾವು ವಿಪಕ್ಷ ನಾಯಕನ ಸ್ಥಾನಕ್ಕೆ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ತಾನು ಹಿಂದೆಯೂ ವಿಪಕ್ಷ ನಾಯಕನಾಗಿ ಕೆಲಸ ಮಾಡಿದ ಅನುಭವ ಇದೆ. ಹೀಗಾಗಿ, ಈ ಜವಾಬ್ದಾರಿ ಹೊರಲು ಸಿದ್ಧನಿದ್ದೇನೆ ಎಂದು ಹೇಳಿಕೆ ನೀಡಿದ್ದರು.

ಹೆಚ್.ಕೆ. ಪಾಟೀಲ್ ಅವರು ವಿಪಕ್ಷ ನಾಯಕನ ಮೇಲೆ ಕಣ್ಣಿಟ್ಟು ಹೇಳಿಕೆ ನೀಡುತ್ತಿದ್ದಂತೆಯೇ ಸಿದ್ದರಾಮಯ್ಯ ಕೂಡ ಎಚ್ಚರಗೊಂಡಿದ್ದಾರೆ. ವಿಪಕ್ಷ ನಾಯಕನ ಸ್ಥಾನ ತನ್ನ ಕೈತಪ್ಪದಂತೆ ಅವರು ತಮ್ಮದೇ ರೀತಿಯಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ಬಲವಾಗಿ ರಮೇಶ್ ಕುಮಾರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್ ಮೊದಲಾದವರು ನಿಂತಿದ್ದಾರೆ.

ಆದರೆ, ರಾಹುಲ್ ಗಾಂಧಿ ಹಿನ್ನೆಲೆಗೆ ಸರಿದು ಸೋನಿಯಾ ಗಾಂಧಿ ಮತ್ತೆ ಅಧ್ಯಕ್ಷ ಗಾದಿಗೆ ಬಂದ ನಂತರ ಕಾಂಗ್ರೆಸ್​​ನೊಳಗಿನ ಸಮೀಕರಣದಲ್ಲಿ ಬದಲಾವಣೆಯಾಗುತ್ತಿದೆ. ರಾಹುಲ್ ಗಾಂಧಿ ಪೋಷಿಸಿದ್ದ ಮತ್ತು ಬೆಂಬಲಿಸಿದ್ದ ಬಹುತೇಕ ನಾಯಕರನ್ನು ಕಾಂಗ್ರೆಸ್​ನಲ್ಲಿ ಕಡೆಗಣಿಸಲಾಗುತ್ತಿದೆ. ರಾಹುಲ್ ಗಾಂಧಿ ಅವರ ಅಭೂತಪೂರ್ವ ಬೆಂಬಲ ಹೊಂದಿದ್ದ ಸಿದ್ದರಾಮಯ್ಯ ಅವರಿಗೂ ಇದೇ ಹಣೆಬರಹ ಆಗಬಹುದು ಎಂಬ ಅಭಿಪ್ರಾಯ ಕೈ ವಲಯದಲ್ಲಿದೆ. ಇದಕ್ಕೆ ಇಂಬು ಕೊಡುವಂತೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಸಿದ್ದರಾಮಯ್ಯ ಮಾಡಿದ ಮೂರ್ನಾಲ್ಕು ಪ್ರಯತ್ನಗಳು ಕೈಗೂಡಲೇ ಇಲ್ಲ. ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿರುವ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯಗೆ ಯಾಕೆ ಸಮಯ ನೀಡುತ್ತಿಲ್ಲ ಎಂಬುದು ಕುತೂಹಲದ ವಿಷಯ.

ಇದನ್ನೂ ಓದಿ: ಮಧ್ಯಂತರ ಚುನಾವಣೆ ನಿರೀಕ್ಷೆಯಲ್ಲಿ ಬಿಜೆಪಿ? ಸ್ವಪಕ್ಷೀಯನಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ಮುಖಂಡನಿಂದ ಜೆಡಿಎಸ್ ಶಾಸಕನಿಗೆ ಆಹ್ವಾನ?ಇನ್ನು, ದಿನೇಶ್ ಗುಂಡೂರಾವ್ ಅವರ ಕೆಪಿಸಿಸಿ ಗಾದಿಗೂ ಕುತ್ತು ಬರುವ ಸಾಧ್ಯತೆ ಇದೆ. ದಿನೇಶ್ ಗುಂಡೂರಾವ್ ಅವರಿಂದಾಗಿಯೇ ತಾವು ರಾಜೀನಾಮೆ ನೀಡಿದ್ದು ಎಂದು ಕಾಂಗ್ರೆಸ್​ನ ಬಹುತೇಕ ಅನರ್ಹ ಶಾಸಕರು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾದರೆ ತಮ್ಮ ಗುಂಪಿನವರಲ್ಲೊಬ್ಬರನ್ನ ಅಲ್ಲಿಗೆ ಕೂರಿಸುವುದು ಮೂಲ ಕಾಂಗ್ರೆಸ್ಸಿಗರ ಪ್ಲಾನ್ ಆಗಿದೆ ಎಂದು ಕೈ ಮೂಲಗಳು ಹೇಳುತ್ತಿವೆ.

ಸೋನಿಯಾ ಗಾಂಧಿ ಸೂಚನೆಯಂತೆ ರಾಜ್ಯಕ್ಕೆ ಬಂದ ಮಧುಸೂದನ್ ಮಿಸ್ತ್ರಿ ಅವರು ಆಯ್ದ 60 ಕಾಂಗ್ರೆಸ್ ನಾಯಕರ ಅಭಿಪ್ರಾಯಗಳನ್ನ ಸಂಗ್ರಹಿಸಿದ್ದಾರೆ. ಸಿಎಲ್​ಪಿ ನಾಯಕ ಮತ್ತು ವಿಪಕ್ಷ ನಾಯಕ ಯಾರಾಗಬೇಕೆಂಬುದು ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಅವರನ್ನ ಮುಂದುವರಿಸಬೇಕೋ ಬೇಡವೋ ಎಂದು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈಗ ಸೋನಿಯಾ ಗಾಂಧಿ ಕೈ ಸೇರಿದ ಮಿಸ್ತ್ರಿ ವರದಿಯಲ್ಲಿ ಏನಿದೆ ಎಂಬ ಕುತೂಹಲ ಕೈ ಪಾಳಯದಲ್ಲಿ ಮನೆ ಮಾಡಿದೆ.

(ವರದಿ: ಧರಣೀಶ್ ಬೂಕನಕೆರೆ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: October 9, 2019, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading