ಬೆಂಗಳೂರು(ಮಾರ್ಚ್ 02): ಮೈಸೂರು ಮೇಯರ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಮಾತನ್ನ ಧಿಕ್ಕರಿಸಿ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಟ್ಟ ಬೆಳವಣಿಗೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಗ್ಗಂಟಾಗಿ ಪರಿಣಮಿಸುವ ಸಾಧ್ಯತೆ ಕಾಣುತ್ತಿದೆ. ಮೈಸೂರು ಮೇಯರ್ ಚುನಾವಣೆ ವಿಚಾರದಲ್ಲಿ ನಡೆದ ಘಟನಾವಳಿಯನ್ನು ಅವಲೋಕಿಸಲು ಎಐಸಿಸಿಯಿಂದ ವೀಕ್ಷಕರಾಗಿ ಬಂದಿರುವ ಮಧು ಯಾಸ್ಕಿ ಗೌಡ್ ಅವರು ಇಂದು ರಾಜಧಾನಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿ ಮಾತನಾಡಿದರು. ಈ ವೇಳೆ ಸಿದ್ದರಾಮಯ್ಯ ಅವರು ತಮಗಾಗಿದ್ದ ಅಸಮಾಧಾನವನ್ನ ವ್ಯಕ್ತಪಡಿಸಿದ್ದು ತಿಳಿದುಬಂದಿದೆ.
ನಾನೇನು ಸಣ್ಣಪುಟ್ಟ ನಾಯಕನಲ್ಲ. ನಾನು ಮುಖ್ಯಮಂತ್ರಿ ಆಗಿದ್ದವನು. ಬಿಜೆಪಿ, ಜೆಡಿಎಸ್ ವಿರುದ್ಧ ರಾಜಕೀಯ ಮಾಡಬೇಕೇ ಹೊರತು ನನ್ನ ಮೇಲೆಯೇ ರಾಜಕೀಯ ಮಾಡುವುದು ಸರಿಯಲ್ಲ ಎಂದು ಮಧು ಯಾಸ್ಕಿ ಅವರ ಬಳಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಧು ಯಾಸ್ಕಿ ಗೌಡ್, ಕಾಂಗ್ರೆಸ್ ಪಕ್ಷ ಅಶಿಸ್ತು ಸಹಿಸಲ್ಲ, ಯಾರೇ ಆದರೂ ಶಿಸ್ತು ರೇಖೆಯನ್ನ ದಾಟಿದರೆ ಕ್ರಮ ಕೈಗೊಳ್ಳುವುದು ನಿಶ್ಚಿತ. ವಿಪಕ್ಷ ನಾಯಕನ ವಿರುದ್ಧ ಘೋಷಣೆ ಕೂಗುವುದನ್ನು ಪಕ್ಷ ಸಹಿಸಲ್ಲ. ಈ ಬೆಳವಣಿಗೆಯಲ್ಲಿ ಯಾವುದೇ ನಾಯಕ ಇರಲಿ ನಾವು ಕ್ರಮ ಕೈಗೊಳ್ಳುತ್ತೇವೆ. ಮೈಸೂರು ಚುನಾವಣೆಯಲ್ಲಿ ನಡೆದ ಎಲ್ಲಾ ವಿಚಾರವನ್ನೂ ತಿಳಿಯುತ್ತೇನೆ. ನಂತರ ಹೈಕಮಾಂಡ್ಗೆ ವರದಿ ನೀಡಲಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಬಾರ್ ಗರ್ಲ್ ಐಸ್ ಕ್ರೀಂ ಕೇಳಿದ್ರೆ ಇಡೀ ಐಸ್ ಕ್ರೀಂ ಪಾರ್ಲರ್ ದೋಚುತ್ತಿದ್ದ ಲವರ್ ಬಾಯ್ ಕಳ್ಳ
ಎಐಸಿಸಿ ಕಾರ್ಯದರ್ಶಿ ಹಾಗೂ ಆಂಧ್ರದ ಮಾಜಿ ಸಂಸದರೂ ಆಗಿರುವ ಮಧು ಯಾಸ್ಕಿ ಗೌಡ್ ಅವರು ಇಂದು ಮೈಸೂರಿಗೆ ತೆರಳಿಲಿದ್ದು, ಅಲ್ಲಿ ತನ್ವೀರ್ ಸೇಠ್, ಮಾಜಿ ಸಂಸದ ಧ್ರುವನಾರಾಯಣ್ ಮೊದಲಾದವರನ್ನು ಭೇಟಿಯಾಗಲಿದ್ಧಾರೆ. ಮೈಸೂರು ಪಾಲಿಕೆ ಮೇಯರ್ ಚುನಾವಣೆ ವೇಳೆ ನಡೆದ ಘಟನಾವಳಿ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಲಿದ್ಧಾರೆ. ಮೇಯರ್ ಹುದ್ದೆಯನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರದ ಹಿಂದೆ ತನ್ವೀರ್ ಸೇಠ್ ಅವರೊಬ್ಬರದ್ದೇ ಪಾತ್ರ ಇದೆಯಾ ಅಥವಾ ಬೇರೆ ನಾಯಕರ ಪ್ರಚೋದನೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತಾ ಎಂಬುದನ್ನು ತಿಳಿದುಕೊಂಡು ನಾಳೆ ಅಥವಾ ನಾಳಿದ್ದು ಹೈಕಮಾಂಡ್ಗೆ ಅವರು ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಇದೇ ವೇಳೆ, ಡಿಕೆ ಶಿವಕುಮಾರ್ ಸಹೋದರ, ಸಂಸದ ಡಿಕೆ ಸುರೇಶ್ ಅವರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ್ಧಾರೆ. ಆದರೆ, ಈ ಪ್ರಕರಣವನ್ನು ತಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಇಂಥದ್ದನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ವೀಕ್ಷಕರು ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ವರದಿ ಸಲ್ಲಿಕೆ ಮಾಡಲಿ. ತನ್ವೀರ್ ಸೇಠ್ ವಿರುದ್ಧ ಶಿಸ್ತುಕ್ರಮ ಆಗಬೇಕು ಎಂದು ಈ ವೇಳೆ ಸಿದ್ದರಾಮ್ಯಯ ಹಠಕ್ಕೆ ಬಿದ್ದರೆನ್ನಲಾಗಿದೆ.
ಇದನ್ನೂ ಓದಿ: ಒಳ್ಳೆಯವನಾದ್ದರಿಂದ ದೇವರು ಬದುಕಿಸಿದ್ದಾನೆ – ಗುಂಡೇಟಿನಿಂದ ಗುಣಮುಖನಾದ ಬಳಿಕ ಮಹಾದೇವ ಭೈರಗೊಂಡ ಹೇಳಿಕೆ
ಮೈಸೂರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಡುವುದರ ಹಿಂದೆ ತನ್ವೀರ್ ಸೇಠ್ ಪಾತ್ರ ಇದೆ. ಆದರೆ, ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಅವರು ಈ ನಿರ್ಧಾರ ಕೈಗೊಂಡರೆಂಬಂತಹ ಊಹಾಪೋಹಗಳು ಇವೆ. ಆದರೆ, ಇದನ್ನು ತಳ್ಳಿಹಾಕಿರುವ ತನ್ವೀರ್ ಸೇಠ್, ಇದು ಲೋಕಲ್ ಪೊಲಿಟಿಕ್ಸ್ ಆದ್ದರಿಂದ ಸ್ಥಳೀಯವಾಗಿ ತೆಗೆದುಕೊಂಡ ನಿರ್ಧಾರವಾಗಿದ್ದು, ಡಿಕೆ ಶಿವಕುಮಾರ್ ಅವರಿಗೂ ಇದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು, ಹಿರಿಯ ಕಾಂಗ್ರೆಸ್ ನಾಯಕರ ಒತ್ತಾಯಕ್ಕೆ ಕಟ್ಟುಬಿದ್ದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮೈಸೂರು ಪಾಲಿಕೆ ಮೇಯರ್ ಚುನಾವಣೆ ಬೆಳವಣಿಗೆ ಬಗ್ಗೆ ಉತ್ತರ ನೀಡುವಂತೆ ತನ್ವೀರ್ ಸೇಠ್ ಅವರಿಗೆ ನೋಟೀಸ್ ಜಾರಿಮಾಡಿದ್ದರು. ಇಂದು ಅವರು ಉತ್ತರ ನೀಡುವ ಸಾಧ್ಯತೆ ಇದೆ.
ವರದಿ: ದಶರಥ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ