ನವದೆಹಲಿ (ಮಾ. 5): ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಉಂಟಾಗಿರುವ ಬಿರುಕಿನ ಬಗ್ಗೆ ಕಾಂಗ್ರೆಸ್ ನಾಯಕ ಮಧು ಯಾಸ್ಕಿ ಗೌಡ್ ಅವರು ಪಕ್ಷದ ಹೈಕಮಾಂಡಿಗೆ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚಿಗೆ ನಡೆದ ಮೈಸೂರು ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ತನಗೆ ಸಿಗಬೇಕಾದ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿತ್ತು. ಹಿಂದಿನ ಒಪ್ಪಂದದಂತೆ ಮೇಯರ್ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕಿತ್ತು. ಈ ಹಿನ್ನೆಲೆಯಲ್ಲಿ ಮೇಯರ್ ಸ್ಥಾನವನ್ನು ಕಡ್ಡಾಯವಾಗಿ ತೆಗೆದುಕೊಳ್ಳುವಂತೆ ಮೈಸೂರು ಜಿಲ್ಲೆಯವರೇಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದರು. ಆದರೂ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಈ ನಡೆಯನ್ನು 'ಸಿದ್ದರಾಮಯ್ಯ ಅವರಿಗೆ ಮುಜುಗರ ಉಂಟುಮಾಡಲೆಂದು ಡಿ.ಕೆ. ಶಿವಕುಮಾರ್ ಮತ್ತು ಶಾಸಕ ತನ್ವೀರ್ ಸೇಠ್' ಎಣೆದ ತಂತ್ರ ಎಂದು ವ್ಯಾಖ್ಯಾನಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಸಿದ್ದರಾಮಯ್ಯ ಹೈಕಮಾಂಡಿಗೆ ದೂರು ನೀಡಿ ತನಿಖೆ ನಡೆಸುವಂತೆ ಒತ್ತಾಯ ಮಾಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪುತ್ರನ ಮದುವೆಯಲ್ಲಿ ಭೇಟಿಯಾಗಿದ್ದ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ 'ಕೂಡಲೇ ಕ್ರಮ ತೆಗೆದುಕೊಳ್ಳುವಂತೆ' ತಾಖೀತು ಮಾಡಿದ್ದರು. ಸಿದ್ದರಾಮಯ್ಯ ನೀಡಿದ ದೂರನ್ನು ಆಧರಿಸಿ ಇಡೀ ಘಟನೆಯ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಹೈಕಮಾಂಡ್ ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ್ ಅವರನ್ನು ರಾಜ್ಯಕ್ಕೆ ಕಳುಹಿಸಿತ್ತು.
ಹೈಕಮಾಂಡ್ ವತಿಯಿಂದ ರಾಜ್ಯಕ್ಕೆ ಬಂದಿದ್ದ ಮಧು ಯಾಸ್ಕಿ ಗೌಡ್ ಅವರು, ಘಟನೆಗೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ತನ್ವೀರ್ ಸೇಠ್, ಮತ್ತಿತರರಿಂದ ಮಾಹಿತಿ ಸಂಗ್ರಹಿಸಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಸಿಗಬೇಕಿದ್ದ ಮೇಯರ್ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದು ಏಕೆ? ಪಕ್ಷದಲ್ಲಿ ಚರ್ಚಿಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದೇಕೆ? ಇದರಿಂದ ಪಕ್ಷದ ವರ್ಚಸ್ಸಿಗೆ ಆಗಿರುವ ಧಕ್ಕೆ ಎಂತಹುದು? ಎಂಬಿತ್ಯಾದಿ ವಿವರಗಳನ್ನು ಸಂಗ್ರಹಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ