ಚಾಮರಾಜನಗರ(ಜ.30): ಸೂಪರ್ ಸ್ಟಾರ್ ರಜನೀಕಾಂತ್ ಜಲ ಸಂರಕ್ಷಣೆ ಕುರಿತ ಸಾಕ್ಷ್ಯ ಚಿತ್ರವೊಂದರ ಮೂಲಕ ಮೊಟ್ಟ ಮೊದಲ ಬಾರಿಗೆ ಕಿರುತೆರೆಗೆ ಪ್ರವೇಶಿಸುತ್ತಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸುತ್ತಿರುವ ಈ ಸಾಕ್ಷ್ಯಚಿತ್ರ ನ್ನು ಖ್ಯಾತ ವನ್ಯಜೀವಿ ಸಾಹಸಿ ನಿರ್ದೇಶಕ ಬೇರ್ ಗ್ರಿಲ್ಸ್ ನಿರ್ದೇಶಿಸುತ್ತಿದ್ದಾರೆ.
ಬಂಡೀಪುರ ದೇಶದಲ್ಲೆ ಅತಿ ಹೆಚ್ಚು ಹುಲಿಗಳಿರುವ ತಾಣ. ಎರಡು ಸಾವಿರಕ್ಕೂ ಹೆಚ್ಚು ಆನೆ, ಚಿರತೆ, ಕಾಡೆಮ್ಮೆ ಕರಡಿ, ಜಿಂಕೆ ಸೇರಿದಂತೆ ಅಸಂಖ್ಯಾತ ಪ್ರಾಣಿಗಳಿರುವ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಮುಂಬೈನ ಬೆನಿಜಾಯ್ ಏಷ್ಯಾ ಗ್ರೂಪ್ ನ ಸೆವೆನ್ ಟಾರಸ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಮ್ಯಾನ್ ವರ್ಸಸ್ ವೈಲ್ಡ್ ಎಂಬ ಸಾಕ್ಷ್ಯಚಿತ್ರ ತಯಾರಿಸುತ್ತಿದೆ. ವನ್ಯಸಾಹಸಿ ಬೇರ್ ಗ್ರಿಲ್ಸ್ ಅವರೊಂದಿಗೆ ಸೂಪರ್ ಸ್ಟಾರ್ ರಜನೀಕಾಂತ್ ಹಾಗು ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಸಾಕ್ಷ್ಯ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷವಾಗಿದೆ.
ಜಲಜಾಗೃತಿ ಮೂಡಿಸುವ ಈ ಸಾಕ್ಷ್ಯ ಚಿತ್ರದ ಮೂಲಕ ಸೂಪರ್ ಸ್ಟಾರ್ ರಜನೀಕಾಂತ್ 42 ವರ್ಷಗಳ ತಮ್ಮ ಸಿನಿಮಾ ಜೀವನದಲ್ಲಿ ಇದೆ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಜಿಮ್ ಕಾರ್ಬೆಟ್, ರಣತಂಬೂರ್ ಗಿಂತ ಬಂಡೀಪುರ ಸೂಕ್ತ ಎಂದು ರಜನೀಕಾಂತ್ ತಮ್ಮ ಮೊಟ್ಟ ಮೊದಲ ಕಿರುತೆರೆ ಚಿತ್ರಕ್ಕೆ ಬಂಡೀಪುರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದರ್ ಜೊತೆ ತಮ್ಮ ಅನುಭವ ಹಂಚಿಕೊಂಡಿರುವ ರಜನೀಕಾಂತ್, 40 ವರ್ಷದ ಹಿಂದೆ ಬಂಡೀಪುರದಲ್ಲಿ ನಟ ವಿಷ್ಣುವರ್ಧನ್ ಜೊತೆ 'ಸಹೋದರರ ಸವಾಲ್' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದನ್ನು ಅವರು ಮೆಲಕು ಹಾಕಿದ್ದಾರೆ. ಅಲ್ಲದೆ ಬಂಡೀಪುರ ಅರಣ್ಯ ಸಂರಕ್ಷಣೆ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ
ಅರಣ್ಯ ಸಂರಕ್ಷಣೆ, ಪರಿಸರ, ಹಾಗೂ ನೀರಿನ ಸಂರಕ್ಷಣೆಗಾಗಿ ಸೂಪರ್ ರಜನೀಕಾಂತ್ ಕಿರುತೆರೆಗೆ ಕಾಲಿಟ್ಟಿದ್ದಾರೆ ಎಂದೆ ವಿಶ್ಲೇಷಿಸಲಾಗುತ್ತಿದೆ. ಕಾಡಿನಲ್ಲಿ ಪ್ರಧಾನಿ ಮೋದಿಯೊಂದಿಗೆ ಸುತ್ತಾಡಿ ಅರಣ್ಯ ಹಾಗು ವನ್ಯಜೀವಿ ಬಗ್ಗೆ ಸಂವಾದ ನಡೆಸಿದ ಬೇರ್ ಗ್ರಿಲ್ಸ್ ಅವರ ಶೋ ಗಿಂತ ಇದು ಬೇರೆಯಾದ ರೀತಿಯ ಎಪಿಸೋಡ್ ಆಗಿದೆ ಎಂದು ಅರಣ್ಯಾಧಿಕಾರಿಗಳು ಹೇಳುತ್ತಾರೆ.
ಇದನ್ನೂ ಓದಿ : ಬಂಡೀಪುರ ಅಭಯಾರಣ್ಯದಲ್ಲಿ ನಟ ಅಕ್ಷಯ್ ಕುಮಾರ್ ಆ್ಯಕ್ಷನ್ ಕಟ್- ಯಾಕೆ ಗೊತ್ತಾ?
ಬಂಡೀಪುರದಲ್ಲಿ ಈಗಾಗಲೇ ಸೂಪರ್ ಸ್ಟಾರ್ ರಜನೀಕಾಂತ್, ಚಿತ್ರೀಕರಣ ಮುಗಿಸಿ ವಾಪಸ್ ಆಗಿದ್ದಾರೆ ಇಂದು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ರಜನೀಕಾಂತ್, ಅಕ್ಷಯ್ ಕುಮಾರ್ ಹಾಗೂ ಬೇರ್ ಗ್ರಿಲ್ಸ್ ಈ ಮೂವರು ದಿಗ್ಗಜ್ಜರು ಸೇರಿರುವ ಈ ಸಾಕ್ಷ್ಯ ಚಿತ್ರ ಹೇಗಿರಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
(ವರದಿ : ಎಸ್ ಎಂ.ನಂದೀಶ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ