ಚನ್ನಗಿರಿ, ದಾವಣಗೆರೆ: ಲೋಕಾಯುಕ್ತರಿಗೆ (Lokayukta) ಹೆದರಿ ತಲೆ ಮರೆಸಿಕೊಂಡಿದ್ದ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ (Channagiri assembly constituency) ಬಿಜೆಪಿ ಶಾಸಕ (BJP MLA) ಮಾಡಾಳು ವಿರೂಪಾಕ್ಷಪ್ಪ (Madalu Virupakshappa) ಇಂದು ಮನೆಗೆ ಆದಮಿಸಿದ್ದಾರೆ. ಪುತ್ರ ಮಾಡಾಳು ಪ್ರಶಾಂತ್ (Madalu Prashant) ಕೋಟಿ ಕೋಟಿ ಲಂಚದ ಹಣದೊಂದಿಗೆ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನನ್ನು ಲೋಕಾಯುಕ್ತರು ಬಂಧಿಸಿ, ಎಫ್ಐಆರ್ ದಾಖಲಿಸಿದ್ದರು. ಇದರಲ್ಲಿ ಎ1 ಆರೋಪಿಯಾಗಿ ಮಾಡಾಳು ವಿರೂಪಾಕ್ಷಪ್ಪ ಅವರನ್ನು ಹೆಸರಿಸಲಾಗಿತ್ತು. ಇದಾಗುತ್ತಿದ್ದಂತೆ ಚನ್ನಗಿರಿಯ ಮಾಡಾಳು ಗ್ರಾಮದಿಂದ ಬೆಂಗಳೂರಿಗೆ ಬಂದಿದ್ದ ಮಾಡಾಳು ವಿರೂಪಾಕ್ಷಪ್ಪ, ಸಿಎಂ ಕಚೇರಿಗೆ ತೆರಳಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಾಪತ್ತೆಯಾಗಿದ್ದರು. ಇಂದು ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಮಾಡಾಳು ಗ್ರಾಮದ ಮನೆ ಬಳಿ ಮಾಡಾಳು ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ದಾರೆ. ಇಷ್ಟು ದಿನ ನಾಪತ್ತೆಯಾಗಿ, ಇದೀಗ ಜಾಮೀನು ಪಡೆದು ಬಂದ ಮಾಡಾಳು ವಿರೂಪಾಕ್ಷಪ್ಪಗೆ ಕುಟುಂಬಸ್ಥರು, ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದ್ದಾರೆ!
ಮನೆ ಬಳಿ ಬಂದ ಮಾಡಾಳು ವಿರೂಪಾಕ್ಷಪ್ಪ!
ಬಹುಕೋಟಿ ಲಂಚ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಇದೀಗ ದಿಢೀರ್ ಅಂತ ಪ್ರತ್ಯಕ್ಷರಾಗಿದ್ದಾರೆ. ಬಹುಕೋಟಿ ಲಂಚದ ಸಮೇತ ಪುತ್ರ ಮಾಡಾಳು ಪ್ರಶಾಂತ್ ಲೋಕಾಯುಕ್ತ ಪೊಲೀಸರ ಕೈಯಲ್ಲಿ ಲಾಕ್ ಆಗಿ, ಅರೆಸ್ಟ್ ಆಗಿದ್ದ. ಇದಾದ ಬಳಿಕ ಶಾಸಕ ಮಾಡಾಳು ವಿರೂಪಾಕ್ಷಪ್ಪ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದರು.
ಅಜ್ಞಾತ ಸ್ಥಳದಿಂದಲೇ ಜಾಮೀನು ಅರ್ಜಿ ಸಲ್ಲಿಸಿದ್ದ ಮಾಡಾಳು
ಲೋಕಾಯುಕ್ತ ಪೊಲೀಸರು ಹುಡುಕುತ್ತಿದ್ದರೂ ಎ1 ಆರೋಪಿ ಮಾಡಾಳು ವಿರೂಪಾಕ್ಷಪ್ಪ ಡೋಂಟ್ ಕೇರ್ ಎಂದಿರಲಿಲ್ಲ. ಅಜ್ಞಾತ ಸ್ಥಳದಲ್ಲಿ ಇದ್ದುಕೊಂಡೇ ಜಾಮೀನಿಗಾಗಿ ನಿರಂತರ ಪ್ರಯತ್ನ ನಡೆಸಿದ್ದರು. ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದ ಶಾಸಕನಿಗೆ ಇಂದು ಹೈಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿತ್ತು.
ಇದನ್ನೂ ಓದಿ: Madal Virupakshappa: 6 ದಿನಗಳಿಂದ ತಲೆ ಮರೆಸಿಕೊಂಡಿದ್ದ ಬಿಜೆಪಿ ಶಾಸಕನಿಗೆ ಮಧ್ಯಂತರ ಜಾಮೀನು ಜಾರಿ!
48 ಗಂಟೆಯಲ್ಲಿ ವಿಚಾರಣೆಗೆ ಹಾಜರಾಗಬೇಕು
ಮಧ್ಯಂತರ ಜಾಮೀನು ನೀಡಿದ್ದ ಹೈಕೋರ್ಟ್, ಮಾಡಾಳ್ಗೆ 48 ಗಂಟೆಯೊಳಗೆ ಲೋಕಾಯುಕ್ತರ ಮುಂದೆ ಸರೆಂಡರ್ ಆಗುವಂತೆ ಸೂಚಿಸಿತ್ತು. ಅಲ್ಲದೇ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದೂ ಆದೇಶಿಸಿದೆ. ಅಲ್ಲದೇ ಈ ಕುರಿತಾದ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿತ್ತು.
ಜಾಮೀನು ಪಡೆದು ಮನೆಗೆ ಬಂದ ಮಾಡಾಳು ವಿರೂಪಾಕ್ಷಪ್ಪ
ಹೈಕೋರ್ಟ್ ಮಧ್ಯಂತರ ಜಾಮೀನು ನೀಡುತ್ತಿದ್ದಂತೆ ಮಾಡಾಳು ವಿರೂಪಾಕ್ಷಪ್ಪ ತಮ್ಮ ಮನೆ ಬಳಿ ಪ್ರತ್ಯಕ್ಷರಾಗಿದ್ದಾರೆ. ಲೋಕಾಯುಕ್ತಕ್ಕೆ ಹೆದರಿ 6 ದಿನಗಳಿಂದ ನಾಪತ್ತೆಯಾಗಿದ್ದ ಶಾಸಕ ಮಧ್ಯಂತರ ಜಾಮೀನು ಪಡೆದು ಮನೆಗೆ ಬರುತ್ತಿದ್ದಂತೆ ಕುಟುಂಬಸ್ಥರು ಅದ್ದೂರಿಯಾಗಿ ಸ್ವಾಗತ ಕೋರಿದ್ದಾರೆ. ತೆರೆದೆ ವಾಹನಗಲ್ಲಿ ಬಂದ ಶಾಸಕನಿಗೆ ಮಾಲೆ ಹಾಕಿ, ಪುಷ್ಪ ವೃಷ್ಟಿ ಸುರಿಸಿ, ಜೈಕಾರ ಕೂಗಿ, ಪಟಾಕಿ ಸಿಡಿಸಿ ಅಭಿಮಾನಿಗಳು, ಕಾರ್ಯಕರ್ತರು ಸ್ವಾಗತಿಸಿದ್ದಾರೆ.
“ಕೆಎಸ್‌ಡಿಎಲ್ ಅಧ್ಯಕ್ಷನಾಗಿ ನಾನು ಭ್ರಷ್ಟಾಚಾರ ಮಾಡಿಲ್ಲ”
ಈ ವೇಳೆ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, “ಕೆಎಸ್‌ಡಿಎಲ್ ಅಧ್ಯಕ್ಷನಾಗಿ ನಾನು ಭ್ರಷ್ಟಾಚಾರ ಮಾಡಿಲ್ಲ” ಎಂದ್ರು. ಬಿಜೆಪಿ ನನ್ನ ತಾಯಿ ಇದ್ದಂತೆ. ನಾನು ಬಿಜೆಪಿಗೆ ಎಂದಿಗೂ ದ್ರೋಹ ಮಾಡಿಲ್ಲ. ನನ್ನ ಮನೆಯಲ್ಲಿ ಸಿಕ್ಕಿರುವ ಹಣ ಅಡಿಕೆ ಮಾರಿ, ಸಂಪಾದಿಸಿದ ಹಣ ಅಂತ ಸ್ಪಷ್ಟನೆ ನೀಡಿದ್ದಾರೆ.
“ಚುನಾವಣೆಗೆ ಸ್ಪರ್ಧಿಸುವುದು ಜನರಿಗೆ ಬಿಟ್ಟಿದ್ದು”
ಇನ್ನು ಬಿಜೆಪಿ ಪಕ್ಷದ ವರಿಷ್ಠರು ಹಾಗೂ ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧ ಎಂದಿರುವ ಮಾಡಾಳು ವಿರೂಪಾಕ್ಷಪ್ಪ, ಚುನಾವಣೆಗೆ ಸ್ಪರ್ಧಿಸಬೇಕೋ ಬೇಡವೋ ಎನ್ನುವುದನ್ನು ನಮ್ಮ ಕ್ಷೇತ್ರದ ಜನರು ತೀರ್ಮಾನ ಮಾಡುತ್ತಾರೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ